ತಾಲೀಮು| ಹುಲಿಕುಣಿತ| ಚೆಂಡೆಯ ಅಬ್ಬರ| ಡಿಜೆ ಸದ್ದಿಗೆ ಯುವಕರ ಹೆಜ್ಜೆ
ಪುತ್ತೂರು:ಶ್ರೀ ದೇವತಾ ಸಮಿತಿ ವತಿಯಿಂದ ಪುತ್ತೂರಿನ ಕಿಲ್ಲೆ ಮೈದಾನದಲ್ಲಿ 7 ದಿನಗಳಿಂದ ನಡೆಯುತ್ತಿದ್ದ 66ನೇ ವರ್ಷದ ಸಾರ್ವಜನಿಕ ಶ್ರೀ ಮಹಾಗಣೇಶೋತ್ಸವದ ಶೋಭಾಯಾತ್ರೆಯು ವಿಜ್ರಂಭಣೆಯಿಂದ ಸೆ.25ರಂದು ರಾತ್ರಿ ನಡೆಯಿತು.ಸೆ.26ರ ಬೆಳಗ್ಗಿನ ಜಾವ ಮಹಾ ಗಣೇಶನ ಮೂರ್ತಿಯನ್ನು ಮಂಜಲ್ಪಡ್ಪು ಕೆರೆಯಲ್ಲಿ ಜಲಸ್ತಂಭನಗೊಳಿಸುವ ಮೂಲಕ ಮಹಾಗಣೇಶೋತ್ಸವ ಸಂಪನ್ನಗೊಂಡಿತು.ಈ ಬಾರಿ ದೇವತಾ ಸಮಿತಿ ನೇತೃತ್ವ ವಹಿಸಿದ್ದ ಅಭಿಜಿತ್ ಶೆಟ್ಟಿ ನೆಲ್ಲಿಕಟ್ಟೆಯವರುಶ್ರೀ ಮಹಾಗಣೇಶೋತ್ಸವದ ಯಶಸ್ಸಿನ ರೂವಾರಿಯಾಗಿದ್ದ ತನ್ನ ತಂದೆ ದಿ.ಎನ್.ಸುಧಾಕರ್ ಶೆಟ್ಟಿಯವರ ನಡೆಯಂತೆ ಕಾರ್ಯಕ್ರಮವನ್ನು ಎಲ್ಲೂ ಕೊರತೆಯಾಗದಂತೆ ಸಮಿತಿಯ ಪದಾಧಿಕಾರಿಗಳು ಮತ್ತು ಭಕ್ತಾದಿಗಳ ಸಹಕಾರದೊಂದಿಗೆ ಸುಸೂತ್ರವಾಗಿ ನಡೆಸಿದ್ದಾರೆ.
ಕಿಲ್ಲೆ ಶ್ರೀ ಮಹಾಗಣಪತಿಯ ಶೋಭಾಯಾತ್ರೆಯಲ್ಲಿ ಶ್ರೀ ಮಹಾಲಿಂಗೇಶ್ವರ ದೇವರ ದೊಡ್ಡ ಭಾವಚಿತ್ರ ಹೊತ್ತ ವಾಹನ, ತಾಲೀಮು, ಹುಲಿ ಕುಣಿತ, ಗೊಂಬೆ ಕುಣಿತದ ಜೊತೆಗೆ ಚೆಂಡೆ ಸದ್ದು ಶೋಭಾಯಾತ್ರೆಯ ಮೆರುಗನ್ನು ಹೆಚ್ಚಿಸಿತು.ಗಣಪತಿ ಮೂರ್ತಿಯ ಜೊತೆಗೆ ದೈವಗಳು ಸಾಗುತ್ತಿದ್ದರೆ, ಸ್ಯಾಕ್ಸೋಫೋನ್ ಹಾಗೂ ತಾಸೆ ಸದ್ದು ಧಾರ್ಮಿಕ ಟಚ್ ನೀಡಿತು.ಇದರೊಂದಿಗೆ ಡಿಜೆ ಸದ್ದಿಗೆ ಯುವಕರು ಹೆಜ್ಜೆ ಹಾಕಿ ಗಮನ ಸೆಳೆದರು. ಶ್ರೀ ದೇವತಾ ಸಮಿತಿ ಪದಾಧಿಕಾರಿಗಳು ಸೇರಿದಂತೆ ಸಾವಿರಾರು ಮಂದಿ ಶೋಭಾಯಾತ್ರೆಯಲ್ಲಿ ಪಾಲ್ಗೊಂಡಿದ್ದರು.
ಶ್ರೀ ಮಹಾಗಣೇಶೋತ್ಸವದ ಧಾರ್ಮಿಕ ಕಾರ್ಯಕ್ರಮದ ನೇತೃತ್ವವನ್ನು ಪುರೋಹಿತ ಸುಬ್ರಹ್ಮಣ್ಯ ಹೊಳ್ಳ ವಹಿಸಿದ್ದರು.ಸೆ.25ರಂದು ಬೆಳಿಗ್ಗೆ 108 ಕಾಯಿ ಗಣಪತಿ ಹೋಮ, ಮಧ್ಯಾಹ್ನ ದೇವರ ಉತ್ಸವ ನಡೆಯಿತು. ಬಳಿಕ ಬಾರಿಸು ಕನ್ನಡ ಡಿಂಡಿಮವ ತಂಡದಿಂದ ಹಾಡು ಹಾಗೂ ನೃತ್ಯಗಳ ವೈವಿಧ್ಯಮಯ ಕಾರ್ಯಕ್ರಮ ನಡೆಯಿತು.ಸಂಜೆ ರಕ್ತೇಶ್ವರಿ ಹಾಗೂ ಪಂಜುರ್ಲಿ ದೈವಗಳ ಕೋಲದೊಂದಿಗೆ ಗಣಪತಿಯ ವೈಭವದ ಶೋಭಾಯಾತ್ರೆ ರಾತ್ರಿ ಗಂಟೆ 10.30ಕ್ಕೆ ಮೈದಾನದಿಂದ ಹೊರಟಿತು.ನ್ಯಾಯವಾದಿ ತೇಜಸ್ ಅವರು ದೈವಗಳ ಮಧ್ಯಸ್ಥರಾಗಿದ್ದರು.ಶೋಭಾಯಾತ್ರೆಗೆ ಮೊದಲು ಆಕರ್ಷಕ ಸುಡುಮದ್ದು ಪ್ರದರ್ಶನ ನಡೆಯಿತು.
ವೇದಿಕೆಯಲ್ಲಿ ತಂಡದ ಪ್ರದರ್ಶನ: ಶೋಭಾಯಾತ್ರೆಯಲ್ಲಿ ಭಾಗವಹಿಸುವ ಚೆಂಡೆ, ಸರ್ವವಾದ್ಯ, ನೃತ್ಯಗಳು, ಹುಲಿ ಕುಣಿತ ತಂಡಗಳಿಂದ ಶೋಭಾಯಾತ್ರೆ ಆರಂಭದ ಮೊದಲು ನೆಲ್ಲಿಕಟ್ಟೆ ದಿ.ಸುಧಾಕರ್ ಶೆಟ್ಟಿ ವೇದಿಕೆಯಲ್ಲಿ ಪ್ರದರ್ಶನ ನಡೆಯಿತು.ತಾಲೀಮು ಮತ್ತು ನಾಸಿಕ್ ಬ್ಯಾಂಡ್ ಪ್ರದರ್ಶನ ಮೈದಾನದಲ್ಲಿ ನಡೆಯಿತು.
ಮಹಾ ಅನ್ನಸಂತರ್ಪಣೆ: ಕಳೆದ 7 ದಿನಗಳಿಂದ ಕಿಲ್ಲೆ ಮೈದಾನದಲ್ಲಿ ನಡೆದ ಗಣೇಶೋತ್ಸವದಲ್ಲಿ ನಿರಂತರ ಅನ್ನದಾನ ನಡೆದಿದ್ದು ಲಕ್ಷಾಂತರ ಮಂದಿಗೆ ಅನ್ನಸಂತರ್ಪಣೆ ನಡೆಯಿತು.ಶ್ರೀ ದೇವತಾ ಸಮಿತಿಯ ನೇತೃತ್ವದಲ್ಲಿ ತುಳಸಿ ಕೆಟರರ್‍ಸ್‌ನ ಹರೀಶ್ ರಾವ್ ಅವರ ತಂಡ ನಳಪಾಕದ ಸವಿ ಉಣಬಡಿಸಿತು.ಅನ್ನಸಂತರ್ಪಣೆಯಲ್ಲಿ ಪ್ರತಿದಿನವೂ ವೈವಿಧ್ಯಮಯ ಪದಾರ್ಥ ಹಾಗೂ ಪಾಯಸವನ್ನು ಭಕ್ತರಿಗೆ ಉಣಬಡಿಸಲಾಯಿತು.ಅನ್ನಸಂತರ್ಪಣೆಗೆ ಪ್ರತ್ಯೇಕ ಸುಸಜ್ಜಿತ ವ್ಯವಸ್ಥೆಯನ್ನು ಮಾಡಿದ್ದು, ಒಟ್ಟು ವ್ಯವಸ್ಥೆ ಅಚ್ಚುಕಟ್ಟಾಗಿ ಮೂಡಿಬಂದಿತು.
ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮ: 7 ದಿನದ ಗಣೇಶೋತ್ಸವದಲ್ಲಿ ಸಾಂಸ್ಕೃತಿಕ ಹಾಗೂ ಧಾರ್ಮಿಕ ಕಾರ್ಯಕ್ರಮ ವಿಶೇಷ ಗಮನ ಸೆಳೆಯಿತು.ಸರ್ವ ಧರ್ಮ ಸಮ್ಮಿಲನ ಇಲ್ಲಿಯ ಧಾರ್ಮಿಕ ಸಭೆಯ ವೈಶಿಷ್ಟ್ಯತೆ.ಭಜನೆ, ಸ್ಯಾಕ್ಸೋಫೋನ್ ವಾದನ, ಸಂಗೀತ ಕಛೇರಿ, ನೃತ್ಯ ವೈವಿಧ್ಯ, ಯಕ್ಷಗಾನ, ನಾಟಕ, ಪಿಲಿ ನಲಿಕೆ, ಗೊಂಬೆ ಕುಣಿತ ಮೊದಲಾದ ಕಾರ್ಯಕ್ರಮಗಳಿಗೆ ವೇದಿಕೆ ಸಾಕ್ಷಿಯಾಯಿತು.
ಬೃಹತ್ ಮಾಲೆ: ನೆಲ್ಲಿಕಟ್ಟೆ ಮಿತ್ರವೃಂದದಿಂದ ಕಿಲ್ಲೆ ಗಣಪನಿಗೆ ಬೃಹತ್ ಮಾಲೆಯನ್ನು ಅರ್ಪಿಸಲಾಯಿತು.ಸೆ.25ರ ಸಂಜೆ ನೆಲ್ಲಿಕಟ್ಟೆಯಿಂದ ಮೆರವಣಿಗೆ ಮೂಲಕ ಕಿಲ್ಲೆ ಮೈದಾನಕ್ಕೆ ಬೃಹತ್ ಮಾಲೆಯನ್ನು ತಂದು ಮಹಾಗಣಪತಿಗೆ ಅರ್ಪಿಸಲಾಯಿತು.
ಮಂಜಲ್ಪಡ್ಪು ಕೆರೆಯಲ್ಲಿ ಜಲಸ್ಥಂಭನ
ಸೆ.26 ರ ಬೆಳಗ್ಗಿನ ಜಾವ ಮಂಜಲ್ಪಡ್ಪು ಕೆರೆಯಲ್ಲಿ ಶ್ರೀ ಗಣೇಶನ ವಿಗ್ರಹ ಜಲಸ್ಥಂಭನ ಮಾಡುವ ಮೂಲಕ ಗಣೇಶೋತ್ಸವ ಸಂಪನ್ನಗೊಂಡಿತು.