ಪೆರ್ನೆಯಲ್ಲಿ ಮಾಜಿ ಸಚಿವ ರಮನಾಥ ರೈಯವರಿಗೆ ಹುಟ್ಟೂರ ಅಭಿನಂದನೆ-ಶಾಸಕ ಅಶೋಕ್‌ ಕುಮಾರ್‌ ರೈರಿಗೆ ನಾಗರಿಕರ ಸನ್ಮಾನ

0

ಎಲ್ಲರನ್ನೂ ಪ್ರೀತಿಸುವ ಮನೋಧರ್ಮ ನಮ್ಮದಾಗಬೇಕು: ರಮಾನಾಥ ರೈ

ಉಪ್ಪಿನಂಗಡಿ: ಬಡವರಿಗೆ ಸಾಮಾಜಿಕ ನ್ಯಾಯ ಒದಗಿಸಿಕೊಟ್ಟ ಪಕ್ಷವಿದ್ದರೆ ಅದು ಕಾಂಗ್ರೆಸ್ ಮಾತ್ರ. ಜಾತ್ಯಾತೀತಯ ನಿಲುವು, ಸರ್ವರಿಗೂ ಸಮಬಾಳು- ಸರ್ವರಿಗೂ ಸಮಪಾಲು ಎಂಬ ಸಿದ್ಧಾಂತವನ್ನು ಮೈಗೂಡಿಸಿಕೊಂಡು ಹೋಗುವ ಪಕ್ಷ ಕಾಂಗ್ರೆಸ್ ಆಗಿದ್ದು, ಎಲ್ಲಾ ಜಾತಿ, ಧರ್ಮದವರನ್ನು ಸಮಾನವಾಗಿ ಪ್ರೀತಿ ಮಾಡುವವರ ಪಕ್ಷ ಕಾಂಗ್ರೆಸ್ ಆಗಿದೆ. ಹಾಗಾಗಿ ನನ್ನ ಧರ್ಮ ಕೂಡಾ ಕಾಂಗ್ರೆಸ್ ಆಗಿದೆ ಎಂದು ಮಾಜಿ ಸಚಿವ ಬಿ. ರಮಾನಾಥ ರೈ ಹೇಳಿದರು.


ಅಭಿನಂದನಾ ಸಮಿತಿ ಪೆರ್ನೆ- ಬಿಳಿಯೂರು, ವಿಟ್ಲ- ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಸಮಿತಿ ಮತ್ತು ಯುವ ಕಾಂಗ್ರೆಸ್ ಸಮಿತಿ ಇದರ ಸಹಯೋಗದಲ್ಲಿ ವಲಯ ಕಾಂಗ್ರೆಸ್ ಪೆರ್ನೆ- ಬಿಳಿಯೂರು ಇದರ ಆಶ್ರಯದೊಂದಿಗೆ ಮಾಜಿ ಸಚಿವ ಬೆಳ್ಳಿಪ್ಪಾಡಿ ರಮಾನಾಥ ರೈವರ ಹುಟ್ಟು ಹಬ್ಬದಂಗವಾಗಿ ಅವರಿಗೆ ಸೆ.26ರಂದು ಪೆರ್ನೆಯ ಎ.ಎಂ. ಅಡಿಟೋರಿಯಂನಲ್ಲಿ ಹುಟ್ಟೂರ ಅಭಿನಂದನೆ ಹಾಗೂ ಶಾಸಕ ಅಶೋಕ್ ಕುಮಾರ್ ರೈಯವರಿಗೆ ನಡೆದ ಪೆರ್ನೆ- ಬಿಳಿಯೂರು ನಾಗರಿಕ ಸನ್ಮಾನ ಕಾರ್ಯಕ್ರಮದಲ್ಲಿ ಹುಟ್ಟೂರ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡುತ್ತಿದ್ದರು.


ಯಾರು ಹುಟ್ಟುವಾಗ ಅರ್ಜಿ ಹಾಕಿಕೊಂಡು ಹುಟ್ಟಿಲ್ಲ. ದೇವರು ಕೊಟ್ಟ ಜನ್ಮ ನಮ್ಮದಾಗಿದ್ದು, ಇಲ್ಲಿ ನಾವೆಲ್ಲಾ ಒಂದೇ ಅನ್ನುವ, ಎಲ್ಲರನ್ನೂ ಪ್ರೀತಿಸುವ ಮನೋಧರ್ಮ ನಮ್ಮದಾಗಬೇಕು. ಜಾತಿ- ಧರ್ಮದ ಸಂಘರ್ಷ ಬಿಟ್ಟು ಮನುಷ್ಯತ್ವವುಳ್ಳ ಮನುಜ ಧರ್ಮ ನಮ್ಮದಾಗಬೇಕು. ಇದನ್ನೇ ತನ್ನ ಸಿದ್ಧಾಂತದಲ್ಲಿ ಅಳವಡಿಸಿಕೊಂಡು ಅದನ್ನು ಪಾಲಿಸಿಕೊಂಡು ಬರುತ್ತಿರುವ ಪಕ್ಷವೆಂದರೆ ಅದು ಕಾಂಗ್ರೆಸ್ ಮಾತ್ರ ಎಂದ ಅವರು, ಜಮೀನ್ದಾರಿಕೆ ಇದ್ದ ಆ ಹಿಂದಿನ ದಿನಗಳಲ್ಲಿ ಜಾಗದ ಹಕ್ಕುಪತ್ರ ಇದ್ದವರು ಇದ್ದದ್ದು ಕೇವಲ 10ರಿಂದ 15 ಜನ ಮಾತ್ರ. ಆದರೆ ಈಗ ಬಡವನಿಗೂ ಭೂಮಿಯ ಹಕ್ಕು ಸಿಗಬೇಕಾದರೆ, ಅದಕ್ಕೆ ಕಾಂಗ್ರೆಸ್ ಸರಕಾರ ತಂದ ಉಳುವವನೇ ಭೂಮಿಯ ಒಡೆಯ, ಅಕ್ರಮ- ಸಕ್ರಮ ಮಂಜೂರಾತಿ, ನಿವೇಶನ ನೀಡುವ ಯೋಜನೆ, ೯೪ಸಿ ಸೇರಿದಂತೆ ಇತ್ಯಾದಿ ಯೋಜನೆಗಳು. ಯುವಕರು ಇತಿಹಾಸ ತಿಳಿದುಕೊಳ್ಳುವ ಮೂಲಕ ಇದನ್ನು ಅರ್ಥ ಮಾಡಿಕೊಳ್ಳಬೇಕು ಎಂದರಲ್ಲದೆ, ನನಗೆ ಅತೀವ ಪ್ರೀತಿ ಕೊಟ್ಟ ಊರು ಪೆರ್ನೆ. ಆದ್ದರಿಂದ ಹುಟ್ಟೂರಿನ ಅಭಿಮಾನ, ಪ್ರೀತಿ ಯಾವತ್ತೂ ಇರುತ್ತೆ ಎಂದರು.


ಪೆರ್ನೆ- ಬಿಳಿಯೂರು ನಾಗರಿಕರಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈಯವರು, ಕಾಂಗ್ರೆಸ್ ಪಕ್ಷಕ್ಕೆ, ಊರಿನ ಅಭಿವೃದ್ಧಿಗೆ ರಮಾನಾಥ ರೈಯವರು ಕೊಟ್ಟ ಕೊಡುಗೆ ಅಪಾರ. ಹಾಗಾಗಿ ಅವರು ಮಾಸ್ ಲೀಡರ್ ಎನಿಸಿಕೊಂಡಿದ್ದಾರೆ. ಮೈಕ್ ಸಿಗುವಾಗ ಕಿರುಚಾಡಿ, ಮತ್ತೆ ಜನರ ಸಮಸ್ಯೆಗಳನ್ನು ಮರೆಯುವವ ಸಮೂಹದ ನಾಯಕನಾಗಲು ಸಾಧ್ಯವಿಲ್ಲ. ಭ್ರಷ್ಟಾಚಾರ ರಹಿತ ಆಡಳಿತದ ಮೂಲಕ ರಾಜಕೀಯ, ಧರ್ಮ, ಜಾತಿಯ ಬೇಧ ಮಾಡದೇ ಎಲ್ಲರಿಗೂ ಸಮಾನ ನ್ಯಾಯ ಒದಗಿಸಿಕೊಡುವ ಮೂಲಕ ರಾಜಕಾರಣ ಮಾಡಿದ ಇವರು ಎಂದೆಂದಿಗೂ ರಾಜನೇ. ಇವರು ಅರಣ್ಯ ಸಚಿವರಾಗಿದ್ದಾಗ ಕೊಡಿಮರ, ಮರಮಟ್ಟುಗಳನ್ನು ಒದಗಿಸಿಕೊಡುವ ಮೂಲಕ ಅದೆಷ್ಟೋ ದೇವಸ್ಥಾನಗಳ ಜೀರ್ಣೋದ್ಧಾರಕ್ಕೆ ಸಹಕರಿಸಿದ್ದಾರೆ. ಆದರೆ ಇವರು ಮಾಡಿದ ಕೆಲಸಗಳನ್ನು ಹೇಳಿಕೊಳ್ಳುವಲ್ಲಿ ಪಕ್ಷ ಮಾತ್ರ ಸೋತಿದೆ ಎಂದರು.


ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಮಾತನಾಡಿ, ರಮಾನಾಥ ರೈಯವರು ಚುನಾವಣೆಯಲ್ಲಿ ಸೋತಿರಬಹುದು. ಆದರೆ ಜನರ ಮನಸ್ಸಿನಿಂದ ಸೋತಿಲ್ಲ. ಕಾರ್ಯಕರ್ತರನ್ನು ಮರೆತ್ತಿಲ್ಲ. ಎಲ್ಲರನ್ನೂ ಪ್ರೀತಿಸುವ ನಾಯಕ ಇವರು ಎಂದರು.
ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ. ವಿಶ್ವನಾಥ ರೈ ಮಾತನಾಡಿ, ನಮ್ಮ ಶಾಸಕರ ಬಗ್ಗೆ ಜನಾಭಿಪ್ರಾಯ ಒಳ್ಳೆಯದಿದೆ. ಕಳೆದ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ಸಿಗರೇ ಬ್ಯಾಟ್ ಬೀಸಿದ ಕಾರಣ ಸುಮಾರು 20 ಸಾವಿರದಷ್ಟು ಮತ ಕಡಿಮೆಯಾಗಿದೆ. ಈ ಬಗ್ಗೆ ನಾವು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದರು.


ಅಧ್ಯಕ್ಷತೆ ವಹಿಸಿ ಮಾತನಾಡಿದ ವಿಟ್ಲ- ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ. ರಾಜಾರಾಮ್ ಕೆ.ಬಿ., ಸರ್ವರಿಗೂ ಸಮಬಾಳು- ಸರ್ವರಿಗೂ ಸಮಪಾಲು ಎಂಬ ಪಕ್ಷ ಸಿದ್ಧಾಂತದಡಿ ರಾಜಕಾರಣ ನಡೆಸಿದವರು ರಮಾನಾಥ ರೈಯವರು. ಎಲ್ಲರನ್ನೂ ಸಮಾನರಾಗಿ ಕಾಣುತ್ತಾ, ಭ್ರಷ್ಟಾಚಾರ ರಹಿತವಾದ ರಾಜಕಾರಣ ಇವರದ್ದು. ಹಾಗಾಗಿ ಎಂದೆಂದಿಗೂ ಇವರು ಎಲ್ಲರ ಪ್ರೀತಿ- ಗೌರವಕ್ಕೆ ಪಾತ್ರರಾಗುತ್ತಿದ್ದಾರೆ ಎಂದರು.


ಅತಿಥಿಗಳಾಗಿದ್ದ ಖ್ಯಾತ ವೈದ್ಯ ಡಾ. ರಘು ಬೆಳ್ಳಿಪ್ಪಾಡಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಎಸ್. ಮಹಮ್ಮದ್, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ, ಎ.ಎಂ. ಅಡಿಟೋರಿಯಂನ ಮಾಲಕ ಸುಲೈಮಾನ್ ಕೆ. ಮಾತನಾಡಿ ಶುಭ ಹಾರೈಸಿದರು. ವೇದಿಕೆಯಲ್ಲಿ ದ.ಕ. ಜಿಲ್ಲಾ ಯುವ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಲುಕ್ಮಾನ್ ಬಂಟ್ವಾಳ, ಪೆರ್ನೆ ಗ್ರಾ.ಪಂ. ಅಧ್ಯಕ್ಷೆ ಶ್ರೀಮತಿ ವಿಜಯ, ಪೆರ್ನೆ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ತೋಯಜಾಕ್ಷ ಶೆಟ್ಟಿ, ವಲಯ ಕಾಂಗ್ರೆಸ್ ಅಧ್ಯಕ್ಷ ಅಬ್ದುಲ್ ಶಾಫಿ ಉಪಸ್ಥಿತರಿದ್ದರು.
ಪುತ್ತೂರು ಹಾಗೂ ಬಂಟ್ವಾಳ ಕ್ಷೇತ್ರದ ಕಾಂಗ್ರೆಸ್ ಬೆಂಬಲಿತ ಗ್ರಾ.ಪಂ. ಅಧ್ಯಕ್ಷ- ಉಪಾಧ್ಯಕ್ಷರನ್ನು ಸನ್ಮಾನಿಸಲಾಯಿತು. ಪೆರ್ನೆ- ಬಿಳಿಯೂರು ಬೂತ್ ಅಧ್ಯಕ್ಷರುಗಳಿಗೆ ಗೌರವಾರ್ಪಣೆ ಸಲ್ಲಿಸಲಾಯಿತು. ಕಂಬಳ ತೀರ್ಪುಗಾರ ಎಡ್ತೂರು ರಾಜೀವ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ಶಾಸಕರಿಂದ ಅಹವಾಲು ಸ್ವೀಕಾರ ಕಾರ್ಯಕ್ರಮ ನಡೆಯಿತು.


ಕಾರ್ಯಕ್ರಮದಲ್ಲಿ ವಿಟ್ಲ- ಉಪ್ಪಿನಂಗಡಿ ಬ್ಲಾಕ್ ಯುವ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಮುಹಮ್ಮದ್ ಫಾರೂಕ್, ಪೆರ್ನೆ ಗ್ರಾ.ಪಂ. ಮಾಜಿ ಅಧ್ಯಕ್ಷರುಗಳಾದ ತನಿಯಪ್ಪ ಪೂಜಾರಿ, ಸುನೀಲ್ ನೆಲ್ಸನ್ ಪಿಂಟೊ, ಶ್ರೀಮತಿ ಭಾರತಿ, ಕಾಂಗ್ರೆಸ್ ಪ್ರಮುಖರಾದ ಶಿವ ಪ್ರಸಾದ್ ಪಾಣಾಜೆ, ರೋಶನ್ ರೈ ಬನ್ನೂರು, ಅನಿ ಮಿನೇಜಸ್, ರೂಪೇಶ್ ರೈ ಅಲಿಮಾರ್, ವಿಕ್ರಂ ರೈ ಅಂತರ, ಜಯಪ್ರಕಾಶ್ ಬದಿನಾರು, ಚಂದ್ರಹಾಸ ಶೆಟ್ಟಿ, ವಿಜಯಕುಮಾರ್ ಕೆ., ಸೋಮನಾಥ, ವೆಂಕಪ್ಪ ಪೂಜಾರಿ ಮರುವೇಲು, ಬೇಬಿ ಕುಂದರ್, ಅಬ್ಬಾಸ್ ಅಲಿ, ಪ್ರಕಾಶ್ ರೈ ಬೆಳ್ಳಿಪ್ಪಾಡಿ, ದೇವದಾಸ್ ರೈ ಬೆಳ್ಳಿಪ್ಪಾಡಿ, ಸಣ್ಣಣ್ಣ, ನಝೀರ್ ಮಠ, ನೂರುದ್ದೀನ್ ಸಾಲ್ಮರ, ವಿದ್ಯಾಲಕ್ಷ್ಮೀ ಪ್ರಭು, ಮಲ್ಲಿಕಾ, ನವಾಝ್ ಕವೇಲು, ಮಿತ್ರದಾಸ ರೈ, ಪುಷ್ಕರ ಪೂಜಾರಿ, ಉಮೇಶ್ ಬಾಕಿಮಾರು, ಸುಂದರ ಮಲ್ಲಡ್ಕ, ರಾಜೀವ ಶೆಟ್ಟಿ ಇರುಬೈಲು, ಸೀತಾರಾಮ ಶೆಟ್ಟಿ ಇರುಬೈಲು, ಸಂಜೀವ ಪೂಜಾರಿ, ವಿಶ್ವನಾಥ ಶೆಟ್ಟಿ, ಲಕ್ಷ್ಮಣ ನಾಯ್ಕ, , ಉನೀಸ್ ಗಡಿಯಾರ, ಪ್ರಹ್ಲಾದ್ ಬೆಳ್ಳಿಪ್ಪಾಡಿ, ಶರೀಫ್ ಪೆರ್ನೆ ಮತ್ತಿತರರು ಉಪಸ್ಥಿತರಿದ್ದರು.


ಸೇವಾದಳದ ಜೋಕಿಂ ಡಿಸೋಜಾ ವಂದೇ ಮಾತರಂ ಹಾಡಿದರು. ಅಭಿನಂದನಾ ಸಮಿತಿಯ ಅಧ್ಯಕ್ಷ ಮುರಳೀಧರ ರೈ ಮಠಂತಬೆಟ್ಟು ಸ್ವಾಗತಿಸಿದರು. ಸಂಚಾಲಕ ಉಮಾನಾಥ ರೈ ಪ್ರಾಸ್ತಾವಿಕವಾಗಿ ಮಾತನಾಡಿ, ಅಭಿನಂದನಾ ನುಡಿಗಳನ್ನಾಡಿದರು. ನಿರಂಜನ್ ರೈ ಮಠಂತಬೆಟ್ಟು ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here