ಉಪ್ಪಿನಂಗಡಿ/ಸವಣೂರು:ಪಂಚಾಯತ್ ರಾಜ್ ಇಲಾಖೆ 2022-23ನೇ ಸಾಲಿನ ಗಾಂಧಿ ಗ್ರಾಮ ಪುರಸ್ಕಾರ’ಕ್ಕೆ ಪುತ್ತೂರು ತಾಲೂಕಿನ ಉಪ್ಪಿನಂಗಡಿ ಮತ್ತು ಕಡಬ ತಾಲೂಕಿನ ಸವಣೂರು ಗ್ರಾಮ ಪಂಚಾಯತ್ ಸೇರಿದಂತೆ ರಾಜ್ಯದ ಒಟ್ಟು 233 ಗ್ರಾಮ ಪಂಚಾಯತ್‌ಗಳು ಹಾಗೂ ವಿಶೇಷ ಗಾಂಧಿ ಗ್ರಾಮ ಪುರಸ್ಕಾರ’ಕ್ಕೆ ನಾಲ್ಕು ಗ್ರಾಮ ಪಂಚಾಯತಿಗಳನ್ನು ಆಯ್ಕೆ ಮಾಡಿದೆ.ಪ್ರತಿ ತಾಲೂಕಿನಿಂದ ಒಂದು ಪಂಚಾಯತ್‌ನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದ್ದು ಸುಳ್ಯ ತಾಲೂಕಿನಿಂದ ಮರ್ಕಂಜ ಗ್ರಾಮ ಪಂಚಾಯತ್,ಬಂಟ್ವಾಳ ತಾಲೂಕಿನಿಂದ ಅಮ್ಮುಂಜೆ ಮತ್ತು ಬೆಳ್ತಂಗಡಿ ತಾಲೂಕಿನಿಂದ ಬಳಂಜ ಗ್ರಾಮ ಪಂಚಾಯತ್‌ನ್ನು ಗಾಂಧಿ ಗ್ರಾಮ ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದೆ.
ಗ್ರಾಮ ಪಂಚಾಯತುಗಳು ಸ್ಥಳೀಯ ಮಟ್ಟದಲ್ಲಿ ಸ್ವಯಂ ಆಡಳಿತ ಸಂಸ್ಥೆಗಳಲ್ಲಿ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಬೇಕೆಂಬ ಉದ್ದೇಶದಿಂದ ರಾಜ್ಯದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುವ ಗ್ರಾಮ ಪಂಚಾಯತ್‌ಗಳಿಗೆ ಪ್ರತಿ ತಾಲೂಕಿಗೆ ಒಂದರಂತೆ ರಾಜ್ಯ ಸರ್ಕಾರದಿಂದ ಗಾಂಧಿ ಗ್ರಾಮ ಪುರಸ್ಕಾರ ನೀಡಿ ಗೌರವಿಸಲಾಗುತ್ತಿದೆ.ಕರ್ನಾಟಕ ಪಂಚಾಯತ್‌ರಾಜ್ ಆಯುಕ್ತಾಲಯದ ಆಯುಕ್ತರು ಆಯ್ಕೆಯಾದ ಗ್ರಾ.ಪಂ.ಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ದಕ್ಷಿಣ ಕನ್ನಡ ಜಿಲ್ಲೆಯ 9 ಗ್ರಾಮ ಪಂಚಾಯತುಗಳು ಗಾಂಧಿ ಪುರಸ್ಕಾರಕ್ಕೆ ಆಯ್ಕೆಯಾಗಿದೆ.ಪ್ರತೀ ತಾಲೂಕಿಗೆ ಒಂದರಂತೆ ಗ್ರಾಮ ಪಂಚಾಯತುಗಳನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಪ್ರಥಮ ಸುತ್ತಿನಲ್ಲಿ 5 ಗ್ರಾ.ಪಂ. ಗಳ ಆಯ್ಕೆ :
ಗಾಂಧಿ ಪುರಸ್ಕಾರಕ್ಕಾಗಿ ಗ್ರಾ.ಪಂ.ಗಳನ್ನು ಆಯ್ಕೆ ಮಾಡಲು ಗೂಗಲ್ ಫಾರ್ಮ್ ತಂತ್ರಾಂಶದ ಮೂಲಕ ವಿವಿಧ ಮಾನದಂಡಗಳನ್ನು ನಿಗದಿ ಪಡಿಸಿ ರಾಜ್ಯದ ಎಲ್ಲಾ ಗ್ರಾಮ ಪಂಚಾಯತುಗಳಿಂದ ಅರ್ಜಿ ಆಹ್ವಾನಿಸಲಾಗುತ್ತದೆ.ತಂತ್ರಾಂಶದ ಮೂಲಕ ಕೇಳಲಾದ ಒಟ್ಟು ೧೩೮ ಪ್ರಶ್ನೆಗಳಿಗೆ ತಮ್ಮ ಗ್ರಾ.ಪಂ.ನಲ್ಲಿ ಆಗಿರುವ ಪ್ರಗತಿಯಂತೆ ಉತ್ತರಿಸಿದ ವಿವರಗಳ ಆಧಾರದಲ್ಲಿ ತಾಲೂಕಿಗೆ ಅತೀ ಹೆಚ್ಚು ಅಂಕ ಗಳಿಸಿರುವ ಐದು ಗ್ರಾಮ ಪಂಚಾಯತುಗಳನ್ನು ಮೊದಲ ಸುತ್ತಿನಲ್ಲಿ ಆಯ್ಕೆ ಮಾಡಲಾಗುತ್ತದೆ.
ಜಿ.ಪಂ. ತಂಡದಿಂದ ಪರಿಶೀಲನೆ:
ಹೀಗೆ ಆಯ್ಕೆ ಮಾಡಿದ ಗ್ರಾಮ ಪಂಚಾಯತುಗಳ ಪರಿಶೀಲನೆಗೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಯವರ ಅಧ್ಯಕ್ಷತೆಯ ಸಮಿತಿ ಇರುತ್ತದೆ.ಸಮಿತಿಯು ಗ್ರಾ.ಪಂ.ಗಳಿಗೆ ಭೇಟಿ ನೀಡಿ ದಾಖಲೆಗಳ ಪರಿಶೀಲನೆ ಮತ್ತು ಕ್ಷೇತ್ರ ವೀಕ್ಷಣೆ ನಡೆಸಿ ತಾಲೂಕಿಗೆ ಒಂದು ಗ್ರಾಮ ಪಂಚಾಯತನ್ನು ಅಂತಿಮಗೊಳಿಸುತ್ತದೆ.ಹೀಗೆ ಅಂತಿಮಗೊಳಿಸಿದ ಪಂಚಾಯತುಗಳ ಮೇಲೆ ಸಮಿತಿಯು ಆಕ್ಷೇಪಣೆಗಳನ್ನು ಆಹ್ವಾನಿಸುತ್ತದೆ.ಹೀಗೆ ಆಯ್ಕೆಯಾದ ಗ್ರಾ.ಪಂ.ಗಳ ಕುರಿತು ಆಕ್ಷೇಪಣೆ ಸಲ್ಲಿಸಲು ಸೆ.21ರ ಅಪರಾಹ್ನ 3 ಗಂಟೆಯೊಳಗೆ ಅವಕಾಶ ನೀಡಲಾಗಿತ್ತು.ನಿಗದಿತ ಅವಧಿಯೊಳಗೆ ಯಾವುದೇ ಆಕ್ಷೇಪಣೆಗಳು ಸಲ್ಲಿಕೆಯಾಗದ ಹಿನ್ನೆಲೆ ಯಲ್ಲಿ ಗ್ರಾ.ಪಂ.ಗಳನ್ನು ಅಂತಿಮಗೊಳಿಸಿ,ಪ್ರಶಸ್ತಿಗಾಗಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆಗೆ ಶಿಫಾರಸು ಮಾಡಲಾಗಿತ್ತು.ಹೀಗೆ ಅಂತಿಮಗೊಳಿಸಿದ ಪಟ್ಟಿಯನ್ನು ಸೆ.25ರಂದು ಕರ್ನಾಟಕ ಸರಕಾರದ ಅಪರ ಕಾರ್ಯದರ್ಶಿ (ಪಂಚಾಯತ್‌ರಾಜ್)ಅವರ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯಮಟ್ಟದ ಪರಾಮರ್ಶೆ ಸಮಿತಿ ಸಭೆಯಲ್ಲಿ ಮಂಡಿಸಿ ಆಯ್ಕೆ ನಡೆಸಲಾಯಿತು.
2022-23ನೇ ಸಾಲಿನ ಗಾಂಧಿ ಗ್ರಾಮ ಪುರಸ್ಕಾರ ಪ್ರಶಸ್ತಿಗೆ ಜಿಲ್ಲಾ ಮಟ್ಟದ ಗ್ರಾಮ ಪುರಸ್ಕಾರ ಆಯ್ಕೆ ಸಮಿತಿಯಲ್ಲಿ ಆಯ್ಕೆ ಮಾಡಿ ಕಳುಹಿಸಲಾದ ಗ್ರಾಮ ಪಂಚಾಯತ್‌ಗಳ ಪಟ್ಟಿಯನ್ನು ಸೆ.೨೫ರಂದು ಸರಕಾರದ ಪಂಚಾಯತ್‌ರಾಜ್ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಯವರ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯ ಮಟ್ಟದ ಪರಾಮರ್ಶೆ ಸಮಿತಿ ಸಭೆಯಲ್ಲಿ ಮಂಡಿಸಿ, ಅಂತಿಮವಾಗಿ ಪ್ರಶಸ್ತಿಗೆ ಪಂಚಾಯತ್‌ಗಳನ್ನು ಆಯ್ಕೆ ಮಾಡಲಾಗಿತ್ತು.
2022-23ನೇ ಸಾಲಿನ `ಗಾಂಧಿ ಗ್ರಾಮ ಪುರಸ್ಕಾರ’ಕ್ಕೆ ಉಪ್ಪಿನಂಗಡಿ ಗ್ರಾ.ಪಂ.ಆಯ್ಕೆಯಾಗಿದ್ದು ಈ ಕುರಿತು ಗ್ರಾ.ಪಂ.ನಿಕಟಪೂರ್ವ ಅಧ್ಯಕ್ಷರು, ಹಾಲಿ ಉಪಾಧ್ಯಕ್ಷರು ಪ್ರತಿಕ್ರಿಯೆ ನೀಡಿ ಹರ್ಷ ವ್ಯಕ್ತಪಡಿಸಿದ್ದಾರೆ.
ನಮ್ಮ ಗ್ರಾ.ಪಂ.ಗೆ ಪುರಸ್ಕಾರ ಬಂದಿರುವುದು ಖುಷಿ ಕೊಟ್ಟಿದೆ. ಗ್ರಾ.ಪಂ.ನ ಆರು ವಾರ್ಡ್‌ಗಳಲ್ಲಿ ಕೂಡಾ ನಾವು ಸ್ವಚ್ಚತೆಗೆ ಮೊದಲ ಆದ್ಯತೆ ನೀಡಿದ್ದೇವೆ. ಪೇಟೆಯೊಳಗೆ ಹೇಗೆ ಸ್ವಚ್ಛತೆ ಕೆಲಸಗಳು ನಡೆಯುತ್ತವೆಯೋ ಹಾಗೆಯೇ ಗ್ರಾಮಾಂತರ ಪ್ರದೇಶಗಳಲ್ಲೂ ಸ್ವಚ್ಛತೆಗೆ ಆದ್ಯತೆ ನೀಡುತ್ತಿದ್ದೇವೆ. ಇಲ್ಲಿ ಹಸಿ ಕಸ ಸಿಗದಿದ್ದರೂ, ಪ್ಲಾಸ್ಟಿಕ್ ಸೇರಿದಂತೆ ಇನ್ನಿತರ ಒಣ ಕಸಗಳನ್ನು ತೆಗೆದುಕೊಂಡು ಬರಲು ಕಸದ ವಾಹನ ಹೋಗುತ್ತದೆ. ನಾನು ಅಧ್ಯಕ್ಷೆಯಾಗಿ ಅಧಿಕಾರ ಸ್ವೀಕರಿಸಿದ ಸಂದರ್ಭ ಗ್ರಾ.ಪಂ.ನ ತ್ಯಾಜ್ಯ ಘಟಕದಲ್ಲಿ ಒಣಕಸ ಸಂಗ್ರಹ ಹಾಗೆಯೇ ಉಳಿದಿತ್ತು. ನಾವು ಸ್ವಚ್ಛತೆಯ ಬಗ್ಗೆ ಸಮಿತಿಯೊಂದನ್ನು ಮಾಡಿ ಅದನ್ನು ವಿಲೇವಾರಿ ಮಾಡಿದ್ದಲ್ಲದೆ, ಘಟಕದ ವಿಸ್ತರಣೆಯ ಕಾರ್ಯವೂ ನಡೆದಿದೆ. ಅಲ್ಲದೇ, ಸರಿಯಾಗಿ ಕೆಲಸ ಮಾಡದ ಸಿಬ್ಬಂದಿಯನ್ನು ತೆಗೆದು ಹೊಸ ಸಿಬ್ಬಂದಿಗಳನ್ನು ನೇಮಿಸಿದ್ದೇವೆ. ಸಾರ್ವಜನಿಕ ಸ್ಥಳಗಳಲ್ಲಿ ಎಲ್ಲಿಂದಲೋ ತಂದ ತ್ಯಾಜ್ಯ ಸುರಿಯುವವರ ಮಾಹಿತಿ ನೀಡಿದರೆ, ಅವರ ಹೆಸರನ್ನು ಗೌಪ್ಯವಾಗಿಟ್ಟು ಅವರಿಗೆ ಪ್ರೋತ್ಸಾಹಕ ಬಹುಮಾನ ಹಾಗೂ ತ್ಯಾಜ್ಯ ಸುರಿದವರ ಮೇಲೆ ದಂಡನೆ ಹಾಕುವ ನಿರ್ಣಯಗಳನ್ನು ಕೈಗೊಂಡು ಅದರ ಮಾಹಿತಿಯನ್ನು ಪತ್ರಿಕೆಯಲ್ಲಿ ಪ್ರಕಟಿಸಿದ್ದಲ್ಲದೆ, ಅದನ್ನು ಅನುಷ್ಠಾನಕ್ಕೆ ತಂದಿದ್ದೇವೆ. ಅಲ್ಲದೇ, ವರ್ಷದಲ್ಲಿ 4-5 ಬಾರಿ ವಿವಿಧ ಸಂಘ- ಸಂಸ್ಥೆಗಳನ್ನು ಒಗ್ಗೂಡಿಸಿಕೊಂಡು ಸ್ವಚ್ಛತಾ ಜಾಗೃತಿ ಮೂಡಿಸುವ ಕಾರ್ಯವನ್ನೂ ಮಾಡುತ್ತಿದ್ದೇವೆ. ಈ ಎಲ್ಲಾ ಕ್ರಮಗಳಿಂದಾಗಿ ನಮ್ಮ ಗ್ರಾಮಕ್ಕೆ ಈ ಪುರಸ್ಕಾರ ಲಭಿಸುವಂತಾಗಿದೆ ಎಂದು ಉಪ್ಪಿನಂಗಡಿ ಗ್ರಾ.ಪಂ.ನಿಕಟಪೂರ್ವಾಧ್ಯಕ್ಷೆ ಉಷಾಚಂದ್ರ ಮುಳಿಯ ಪ್ರತಿಕ್ರಿಯಿಸಿದ್ದಾರೆ.
ಗ್ರಾ.ಪಂ.ನ ಉಪಾಧ್ಯಕ್ಷೆ ವಿದ್ಯಾಲಕ್ಷ್ಮೀ ಪ್ರಭು ಮಾತನಾಡಿ, ಗ್ರಾ.ಪಂ.ಗೆ ಪ್ರಶಸ್ತಿ ಬಂದಿರುವುದು ಖುಷಿ ಕೊಡುವುದರೊಂದಿಗೆ ನಮ್ಮ ಜವಾಬ್ದಾರಿಯನ್ನು ಇನ್ನಷ್ಟು ಹೆಚ್ಚಿಸಿದೆ. ಈಗಾಗಲೇ ನಾವು ಇಡೀ ಗ್ರಾ.ಪಂ. ವ್ಯಾಪ್ತಿಯಲ್ಲಿ ಸ್ವಚ್ಛತೆಗೆ ಮೊದಲ ಆದ್ಯತೆ ನೀಡುತ್ತಿದ್ದೇವೆ.ಎಲ್ಲರ ಸಹಕಾರ ಪಡೆದುಕೊಂಡು ಉಪ್ಪಿನಂಗಡಿಯನ್ನು ಸ್ವಚ್ಛ ಗ್ರಾಮವನ್ನಾಗಿಸುವುದೇ ನಮ್ಮ ಗುರಿ. ಗ್ರಾ.ಪಂ.ನ ಎಲ್ಲಾ ವಾರ್ಡ್‌ಗಳಿಗೆ ನಮ್ಮ ಕಸ ಶೇಖರಿಸುವ ವಾಹನ ಹೋಗುತ್ತದೆ. ಸ್ವಚ್ಛತಾ ಅಭಿಯಾನವನ್ನು ಮಾಡಿ ಮಾಹಿತಿ ನೀಡುವ ಕಾರ್ಯವನ್ನು ಮಾಡುತ್ತಿದ್ದೇವೆ. ನಮ್ಮ ಸ್ವಚ್ಛತಾ ಘಟಕವನ್ನು ಇನ್ನಷ್ಟು ಅಭಿವೃದ್ಧಿ ಪಡಿಸಬೇಕೆಂಬ ಕನಸಿದೆ ಎಂದು ತಿಳಿಸಿದರು. ಗ್ರಾ.ಪಂ.ಅಧ್ಯಕ್ಷರು, ಪಿಡಿಒ ಸಂಪರ್ಕಕ್ಕೆ ಲಭ್ಯರಾಗಿಲ್ಲ.
ಅ.2ರಂದು ಪ್ರಶಸ್ತಿ ಪ್ರದಾನ
ಪುರಸ್ಕಾರಕ್ಕೆ ಆಯ್ಕೆಯಾದ ಎಲ್ಲ 237 ಪಂಚಾಯತಿಗಳಿಗೂ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಅ.2ರಂದು ನಡೆಯುವ ಕಾರ್ಯಕ್ರಮದಲ್ಲಿ ತಲಾ 5 ಲಕ್ಷ ರೂ. ನಗದು, ಪ್ರಶಸ್ತಿ ಫಲಕ ನೀಡಿ ಗೌರವಿಸಲಾಗುತ್ತದೆ.ಆಯ್ಕೆಯಾದ ಪಂಚಾಯಿತಿಗಳ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಸಮಾರಂಭದಲ್ಲಿ ಹಾಜರಿದ್ದು, ಪ್ರಶಸ್ತಿ ಸ್ವೀಕರಿಸಬೇಕು ಎಂದು ಸೂಚಿಸಲಾಗಿದೆ.
ಸವಣೂರು ಗ್ರಾ.ಪಂ.ಗೆ ಪ್ರಶಸ್ತಿ-ಪ್ರತಿಕ್ರಿಯೆ
ಸವಣೂರು ಗ್ರಾ.ಪಂ.ಗೆ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಆಯ್ಕೆಯಾಗಿರುವುದು ಅತೀವ ಸಂತಸ ತಂದಿದೆ.ಗ್ರಾ.ಪಂ.ನ ಈ ಹಿಂದಿನ ಅವಧಿಯ ಅಧ್ಯಕ್ಷರು,ಉಪಾಧ್ಯಕ್ಷರಾದಿಯಾಗಿ ಎಲ್ಲಾ ಸದಸ್ಯರು, ಸಿಬಂದಿಗಳು,ಗ್ರಾಮಸ್ಥರ ,ಅಧಿಕಾರಿಗಳ ಮಾರ್ಗದರ್ಶನದಿಂದ ಗ್ರಾ.ಪಂ.ವ್ಯಾಪ್ತಿಯಲ್ಲಿ ನಡೆಸಲಾದ ಅಭಿವೃದ್ದಿ ಕಾರ್ಯಗಳಿಂದ ಈ ಪ್ರಶಸ್ತಿ ಬಂದಿದೆ
-ಸುಂದರಿ ಬಿ.ಎಸ್.,ಅಧ್ಯಕ್ಷರು ಸವಣೂರು ಗ್ರಾ.ಪಂ.
ಸವಣೂರು ಗ್ರಾ.ಪಂ.ಗೆ ಗಾಂಧಿ ಗ್ರಾಮ ಪುರಸ್ಕಾರ ಬಂದಿರುವುದು ಸಂತಸವಾಗಿದೆ.ಆಯ್ಕೆಗೆ ಸಂಬಂಧಿಸಿದಂತೆ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಲಾಗಿದೆ.ಆಡಳಿತ ಮಂಡಳಿ ಹಾಗೂ ಗ್ರಾಮಸ್ಥರ ಸಹಕಾರದಲ್ಲಿ ಇದು ಸಾಧ್ಯವಾಗಿದೆ.
-ಸಂದೇಶ್,ಪ್ರಭಾರ ಅಭಿವೃದ್ದಿ ಅಧಿಕಾರಿ ಸವಣೂರು ಗ್ರಾ.ಪಂ
ಸವಣೂರು ಗ್ರಾ.ಪಂ.ನಲ್ಲಿ ಹೆಚ್ಚಿನ ಅಭಿವೃದ್ದಿ ಕಾರ್ಯ ಆಗುತ್ತಿರುವುದರಿಂದ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಆಯ್ಕೆಯಾಗಿರುವುದು ಸಂತಸ ತಂದಿದೆ.ಗ್ರಾ.ಪಂ.ನ ಚುನಾಯಿತ ಸದಸ್ಯರು,ಅಧಿಕಾರಿಗಳು, ಸಿಬ್ಬಂದಿಗಳ ,ಗ್ರಾಮಸ್ಥರ ಸಹಕಾರದಿಂದ ಈ ಪ್ರಶಸ್ತಿ ಬಂದಿದೆ.
-ರಾಜೀವಿ ವಿ. ಶೆಟ್ಟಿ, ನಿಕಟಪೂರ್ವ ಅಧ್ಯಕ್ಷರು ಸವಣೂರು ಗ್ರಾ.ಪಂ.
21 ಸದಸ್ಯ ಬಲ ಹೊಂದಿರುವ ಸವಣೂರು ಗ್ರಾ.ಪಂ.ನಲ್ಲಿ ಗ್ರಾಮ ಸಭೆ,ಜಮಾಬಂಧಿ,ಸಾಮಾನ್ಯ ಸಭೆಗಳನ್ನು ನಿಯಮಿತವಾಗಿ ನಡೆಸಲಾಗಿದ್ದು, ಸರಕಾರದ ಅನುದಾನಗಳನ್ನು ಸಮರ್ಪಕವಾಗಿ ಬಳಸಿಕೊಂಡು ಅಭಿವೃದ್ದಿ ಕಾರ್ಯ ನಡೆಸಲಾಗಿದೆ.ಕಳೆದ ಬಾರಿ ಅಮೃತ ಗ್ರಾ.ಪಂ.ಯೋಜನೆಗೂ ಸವಣೂರು ಗ್ರಾ.ಪಂ.ಆಯ್ಕೆಯಾಗಿದ್ದು, ಅದರಲ್ಲಿ ಬಂದ ಅನುದಾನಗಳನ್ನೂ ಸಮರ್ಪಕವಾಗಿ ಬಳಸಿಕೊಳ್ಳಲಾಗಿದೆ.ಆಡಳಿತ ಮಂಡಳಿ ಹಾಗೂ ಮೂರು ಗ್ರಾಮಗಳ ಗ್ರಾಮಸ್ಥರ ಸಹಕಾರದಿಂದ ಈ ಪ್ರಶಸ್ತಿಗೆ ಆಯ್ಕೆಯಾಗುವಂತಾಗಿದೆ-
-ಎ.ಮನ್ಮಥ ,ಲೆಕ್ಕ ಸಹಾಯಕರು ಸವಣೂರು ಗ್ರಾ.ಪಂ.