ಪುತ್ತೂರು: ಪದವಿ ಪೂರ್ವ ಶಿಕ್ಷಣ ಇಲಾಖೆ ವತಿಯಿಂದ ಕಟೀಲು ದುರ್ಗಾಪರಮೇಶ್ವರಿ ಪದವಿ ಪೂರ್ವ ಕಾಲೇಜಿನ ಸಹಭಾಗಿತ್ವದಲ್ಲಿ ಸೆ.27ರಂದು ನಡೆದ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ವಿವೇಕಾನಂದ ಪದವಿಪೂರ್ವ ಕಾಲೇಜನ್ನು ಪ್ರತಿನಿಧಿಸಿದ ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದ ಪುಣ್ಯ ಪ್ರಥಮ ಸ್ಥಾನವನ್ನು ಗಳಿಸುವುದರ ಮೂಲಕ ಚಿನ್ನದ ಪದಕವನ್ನು ಗಳಿಸಿ ಮೈಸೂರಿನಲ್ಲಿ ನಡೆಯುವ ರಾಜ್ಯ ಮಟ್ಟದ ಕರಾಟೆ ಪಂದ್ಯಾಟಕ್ಕೆ ಆಯ್ಕೆಯಾಗಿದ್ದಾರೆ. ಈಕೆ ಪುತ್ತೂರಿನ ಹಾರಾಡಿಯ ರಾಧಾಕೃಷ್ಣ ಬಿ ಮತ್ತು ಸುನಿತಾ ಆರ್ ಎನ್ ದಂಪತಿ ಪುತ್ರಿ.
ಬಾಲಕರ ವಿಭಾಗದ ಕರಾಟೆ ಸ್ಪರ್ಧೆಯಲ್ಲಿ ಪ್ರಥಮ ಪಿಯುಸಿ ವಿಜ್ಞಾನ ವಿಭಾಗದ ದುರ್ಗೇಶ್ ಬೆಳ್ಳಿ ಪದಕ (ಸಕಲೇಶಪುರದ ನಾಗೇಂದ್ರ ಎಚ್ ಎನ್ ಮತ್ತು ಪುಷ್ಪ ಇ ಎಸ್ ದಂಪತಿ ಪುತ್ರ) ಹಾಗೂ ದ್ವಿತೀಯ ಪಿಯುಸಿ ಕಲಾ ವಿಭಾಗದ ಅರುಣ್ ಕುಮಾರ್ ಎಂ ತೃತೀಯ ಸ್ಥಾನವನ್ನು ಪಡೆಯುವುದರ ಮೂಲಕ ಕಂಚಿನ ಪದಕವನ್ನು ತನ್ನದಾಗಿಸಿಕೊಂಡಿದ್ದಾರೆ. ಈತನು ಪುತ್ತೂರಿನ ಅಮ್ಚಿನಡ್ಕದ ಮಾಡ್ನೂರು ಗ್ರಾಮದ ರಮೇಶ್ ಎ ಎಂ ಮತ್ತು ಲಲಿತಾ ದಂಪತಿ ಪುತ್ರ.
ಈ ವಿದ್ಯಾರ್ಥಿಗಳು ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ರವಿಶಂಕರ್, ಡಾ. ಜ್ಯೋತಿ ಮತ್ತು ಯತೀಶ್ ಇವರ ನೇತೃತ್ವದಲ್ಲಿ ತರಬೇತಿಯನ್ನು ಪಡೆದಿರುತ್ತಾರೆ. ವಿದ್ಯಾರ್ಥಿಗಳ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಅಧ್ಯಾಪಕ ಮತ್ತು ಅಧ್ಯಾಪಕೇತರ ವೃಂದ ಅಭಿನಂದಿಸಿದ್ದಾರೆ.