ಪುತ್ತೂರು:ಕಾಲೇಜು ವಿದ್ಯಾರ್ಥಿನಿಯೋರ್ವರನ್ನು ಹಿಂಬಾಲಿಸಿಕೊಂಡು ಬಂದ ಪ್ರಕರಣದಲ್ಲಿ ಪೊಲೀಸರು ಹುಡುಕಾಡುತ್ತಿದ್ದ ಆರೋಪಿಗೆ ಜಿಲ್ಲಾ ನ್ಯಾಯಾಲಯ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. ತೆಂಕಿಲ ನಿವಾಸಿ ಯುವತಿ ವಿದ್ಯಾರ್ಥಿನಿಯೋರ್ವರು ಜುಲೈ 31ರಂದು ಸಂಜೆ ಇಲ್ಲಿನ ಡಿಸಿಸಿ ಬ್ಯಾಂಕ್ ಕಚೇರಿ ಬಳಿಯಿಂದಾಗಿ ತನ್ನ ಮನೆಗೆ ನಡೆದುಕೊಂಡು ಹೋಗುತ್ತಿದ್ದ ಸಂದರ್ಭ ದ್ವಿಚಕ್ರ ವಾಹನದಲ್ಲಿ ಬಂದ ಅಪರಿಚಿತನೋರ್ವ ಆಕೆಯನ್ನು ಹಿಂಬಾಲಿಸಿಕೊಂಡು ಬಂದು ಆಕೆಯನ್ನುದ್ದೇಶಿಸಿ ಮಾತನಾಡಿ ಹೋಗಿದ್ದ. ಈ ಕುರಿತು ಯುವತಿಯ ತಂದೆ ಠಾಣೆಗೆ ಮೌಖಿಕ ದೂರು ನೀಡಿದ್ದರು.ಮುಂದಿನ ದಿನಗಳಲ್ಲಿ ಈ ರೀತಿಯ ಘಟನೆಗಳು ಮರುಕಳಿಸಬಾರದೆನ್ನುವ ಉದ್ದೇಶದಿಂದ ಪೊಲೀಸರು ಅಪರಿಚಿತನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದರು.
ಘಟನೆ ಬಳಿಕ ಸ್ಥಳೀಯ ಸಿಸಿ ಕ್ಯಾಮರಾಗಳನ್ನು ಪರಿಶೀಲನೆ ನಡೆಸಿದ ವೇಳೆ, ನಾಝೀರ್ ಎಂಬಾತ ಕೃತ್ಯವೆಸಗಿರುವುದನ್ನು ಖಚಿತಪಡಿಸಿಕೊಂಡಿದ್ದ ಪೊಲೀಸರು ಆತನ ಪತ್ತೆಗಾಗಿ ಹುಡುಕಾಟ ನಡೆಸುತ್ತಿದ್ದರು.ಈ ನಡುವೆ ಆರೋಪಿಯು ನಿರೀಕ್ಷಣಾ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಪುತ್ತೂರು ಜಿಲ್ಲಾ ನ್ಯಾಯಾಲಯ ಪುರಸ್ಕರಿಸಿ, ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.ಆರೋಪಿ ಪರ ವಕೀಲೆ ಎಂ.ರಮ್ಲತ್ ವಾದಿಸಿದ್ದರು.