ರಾಮಕುಂಜ: ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ, ಮತ್ತು ಜೀವನೋಪಾಯ ಸಂವರ್ಧನ ಸಂಸ್ಥೆ-ಸಂಜೀವಿನಿ, ದೀನ್ ದಯಾಳ್ ಅಂತ್ಯೋದಯ ಯೋಜನೆ-ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ ಯೋಜನೆಯಡಿ ಕೊಯಿಲ ಗ್ರಾಮ ಪಂಚಾಯಿತಿ ಹಾಗೂ ಸ್ನೇಹ ಸಂಜೀವಿನಿ ಗ್ರಾಮ ಪಂಚಾಯಿತಿ ಮಟ್ಟದ ಒಕ್ಕೂಟದ ಮೂಲಕ ಸಂಜೀವಿನಿ-ಗ್ರಾಮೀಣ ರೈತ ಸಂತೆ ಕೊಯಿಲ ಗ್ರಾಮ ಪಂಚಾಯಿತಿ ಕಟ್ಟಡದ ಬಳಿಯ ಗೋಕುಲನಗರದಲ್ಲಿ ಸೆ.26ರಂದು ನಡೆಯಿತು.
ಕೊಯಿಲ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪುಷ್ಪಾ ಸುಭಾಸ್ ಶೆಟ್ಟಿ ಉದ್ಘಾಟಿಸಿ ಶುಭ ಹಾರೈಸಿದರು. ಕಡಬ ತಾಲೂಕು ಪಂಚಾಯಿತಿ ಮಾಜಿ ಉಪಾಧ್ಯಕ್ಷೆ ಜಯಂತಿ ಆರ್ ಗೌಡ, ಸ್ನೇಹ ಸಂಜೀವಿನಿ ಒಕ್ಕೂಟ ಅಧ್ಯಕ್ಷೆ ಭವ್ಯ ಮಾತನಾಡಿ ಶುಭ ಹಾರೈಸಿದರು. ಕೊಯಿಲ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಯತೀಶ್ ಸೀಗೆತ್ತಡಿ, ಕಾರ್ಯದರ್ಶಿ ಪಮ್ಮು, ಸದಸ್ಯರಾದ ಹರ್ಷಿತ್, ಚಿದಾನಂದ ಪಾನ್ಯಾಲ್, ಭಾರತಿ, ಸಫಿಯಾ, ಸ್ನೇಹ ಸಂಜೀವಿನಿ ಒಕ್ಕೂಟದ ಕಾರ್ಯದರ್ಶಿ ಪೂರ್ಣಿಮಾ, ಎಂ.ಬಿ.ಕೆ ಸುಶೀಲ ಬಿ.ಕೆ, ಕೃಷಿಸಖಿ ಮಮತಾ ಆನೆಗುಂಡಿ, ಎಲ್ಸಿಆರ್ಪಿಗಳಾದ ಯಕ್ಷತಾ, ಮೀನಾಕ್ಷಿ ಬಿ.ಕೆ, ಪಶುಸಖಿ ಪ್ರೇಮಾ, ಕೃಷಿ ಉದ್ಯೋಗಸಖಿ ವಸಂತಿ ಮತ್ತಿತರರು ಉಪಸ್ಥಿತರಿದ್ದರು. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸಂದೇಶ್ ಸ್ವಾಗತಿಸಿ, ವಂದಿಸಿದರು.
ಯಶಸ್ವಿ ಸಂತೆ:
ಸ್ನೇಹ ಸಂಜೀವಿನಿ ಒಕ್ಕೂಟದ ಮಹಿಳಾ ಸದಸ್ಯರು ಹಾಗೂ ಪ್ರಮುಖರು ತಮ್ಮ ಮನೆಯಲ್ಲೇ ಬೆಳದ ತರಕಾರಿ ಹಾಗೂ ಇತರ ಉತ್ಪನ್ನಗಳನ್ನು ಸಂತೆಯಲ್ಲಿ ಮಾರಾಟ ಮಾಡಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. ಮನೆಯಂಗಳದಲ್ಲಿ ಬೆಳೆದ ಬೆಂಡೆ, ತೊಂಡೆ, ಬಸಳೆ, ಪೀರೆ, ಬದನೆ, ಸೌತೆ, ಅಲಸಂಡೆ, ಅಂಬಡೆ, ಕೆಸುವಿನ ಬಳ್ಳಿ ಮುಂತಾದ ತರಹೇವಾರಿ ತಾಜಾ ತರಕಾರಿಗಳು, ಮನೆಯಲ್ಲೇ ತಯಾರಿಸಿದ ಉತ್ಪನ್ನಗಳಾದ ಉಪ್ಪಿನಕಾಯಿ, ದನದ ತುಪ್ಪ, ಬಟ್ಟೆಯ ವಸ್ತುಗಳನ್ನು ಮಾರಾಟ ಮಾಡಿ ತಾವು ವ್ಯವಹಾರದಲ್ಲಿ ಯಾರಿಗೂ ಕಡಿಮೆಯಿಲ್ಲ ಎಂದು ಸಾಬೀತು ಮಾಡಿದರು. ಬೆಳಿಗ್ಗೆ ಹತ್ತು ಗಂಟೆಯ ವೇಳೆಗೆ ರಾಶಿ ರಾಶಿ ತರಕಾರಿ ಮಾರಾಟಕ್ಕೆ ಸಿದ್ದವಾಗಿತ್ತು, ಕಾರ್ಯಕ್ರಮದ ಉದ್ಘಾಟನಾ ಕಾರ್ಯಕ್ರಮ ಮುಗಿಯುವುದನ್ನೇ ಕಾದಿದ್ದ ಗ್ರಾಹಕರು ತರಕಾರಿ ಹಾಗೂ ಇತರ ಉತ್ಪನ್ಗಳನ್ನು ಮುಗಿಬಿದ್ದು ಖರೀದಿ ಮಾಡಿ ಪ್ರೋತ್ಸಾಹ ನೀಡಿದರು. ಒಂದು ಗಂಟೆಯಲ್ಲಿ ಸಂತೆ ಖಾಲಿಯಾಯಿತು.