4.25 ಲಕ್ಷ ರೂ.ನಿವ್ವಳ ಲಾಭ; ಶೇ.20 ಡಿವಿಡೆಂಡ್, ಪ್ರತಿ ಲೀ.ಹಾಲಿಗೆ 73 ಪೈಸೆ ಬೋನಸ್ ಘೋಷಣೆ
ಹಳೆನೇರೆಂಕಿ: ಹಳೆನೇರೆಂಕಿ ಹಾಲು ಉತ್ಪಾದಕರ ಮಹಿಳಾ ನವಸಾಕ್ಷರರ ಸಹಕಾರಿ ಸಂಘದ 2022-23ನೇ ಸಾಲಿನ ಸರ್ವಸದಸ್ಯರ ವಾರ್ಷಿಕ ಸಾಮಾನ್ಯ ಸಭೆ ಸೆ.21ರಂದು ಬೆಳಿಗ್ಗೆ ಸಂಘದ ವಠಾರದಲ್ಲಿ ನಡೆಯಿತು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷೆ ಯಶೋಧಾ ಕೆ.ಎಂ.ರವರು ಮಾತನಾಡಿ, ಸಂಘದಲ್ಲಿ 90 ಸಕ್ರೀಯ ಸದಸ್ಯರಿದ್ದು, ಪ್ರತಿ ದಿನ 750 ಲೀ.ಹಾಲು ಸಂಗ್ರಹವಾಗುತ್ತಿದೆ. 2022-23ನೇ ಸಾಲಿನಲ್ಲಿ 86,86,549.84 ರೂ.ಮೌಲ್ಯದ ಹಾಲು ಸಂಗ್ರಹವಾಗಿದೆ. 15,63,500 ರೂಪಾಯಿಯ ಪಶು ಆಹಾರ ಖರೀದಿಸಿ ಸದಸ್ಯರಿಗೆ ಮಾರಾಟ ಮಾಡಲಾಗಿದೆ. ವರದಿ ವರ್ಷದಲ್ಲಿ ಸಂಘವು 4,25,156.31 ರೂ.ನಿವ್ವಳ ಲಾಭಗಳಿಸಿದೆ. ಸಂಘದ ಸದಸ್ಯರಿಗೆ ಶೇ.20 ಡಿವಿಡೆಂಡ್ ಹಾಗೂ ಪ್ರತಿ ಲೀ.ಹಾಲಿಗೆ 73 ಪೈಸೆಯಂತೆ ಬೋನಸ್ ನೀಡಲಾಗುವುದು ಎಂದು ತಿಳಿಸಿದರು.
ದ.ಕ.ಜಿಲ್ಲಾ ಸಹಕಾರಿ ಹಾಲು ಒಕ್ಕೂಟದ ನಿರ್ದೇಶಕ ನಾರಾಯಣ ಪ್ರಕಾಶ್ ಕೆ.,ಅವರು ಒಕ್ಕೂಟದಿಂದ ಹಾಲು ಉತ್ಪಾದಕರಿಗೆ ಸಿಗುವ ವಿವಿಧ ರೀತಿಯ ಸವಲತ್ತು, ಜಾನುವಾರು ವಿಮೆ ಕುರಿತು ಮಾಹಿತಿ ನೀಡಿದರು. ಸಂಘದ ಉಪಾಧ್ಯಕ್ಷೆ ಪುಷ್ಪಾವತಿ ಯು., ನಿರ್ದೇಶಕರಾದ ಹರಿಣಾಕ್ಷಿ, ಭಾಗೀರಥಿ, ಭವ್ಯಲತಾ ಕೆ., ಕುಸುಮಾವತಿ, ಮೀನಾಕ್ಷಿ, ಮೋಹಿನಿ ಹೆಚ್., ಲೀಲಾವತಿ, ವನಿತಾ, ಭಾನುಮತಿ ಎಸ್.ಕೆ., ಸೀತಾ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯನಿರ್ವಹಣಾಧಿಕಾರಿ ಕಾವ್ಯಸುಧೀರ್ ವರದಿ ಮಂಡಿಸಿದರು. ನಿರ್ದೇಶಕಿ ಹರಿಣಾಕ್ಷಿ ಸ್ವಾಗತಿಸಿ, ಉಪಾಧ್ಯಕ್ಷೆ ಪುಷ್ಪಾವತಿ ಯು.ವಂದಿಸಿದರು. ಹಾಲು ಪರೀಕ್ಷಕಿ ದೇಜಮ್ಮ, ಕೃತಕ ಗರ್ಭಧಾರಣಾ ಕಾರ್ಯಕರ್ತ ರೋಹಿತಾಶ್ವ ಮಾಡ್ತಾ ಸಹಕರಿಸಿದರು.
ಬಹುಮಾನ:
ವರದಿ ಸಾಲಿನಲ್ಲಿ ಸಂಘಕ್ಕೆ 12,398 ಲೀ.ಹಾಲು ಪೂರೈಸಿದ ನಿರ್ಮಲ ಎಂ.ಕೆ.(ಪ್ರಥಮ), 10,594 ಲೀ.ಹಾಲು ಪೂರೈಸಿದ ಕುಸುಮಾವತಿ(ದ್ವಿತೀಯ), 10,556 ಲೀ.ಹಾಲು ಪೂರೈಸಿದ ರೇವತಿ(ತೃತೀಯ) ಹಾಗೂ 10,302 ಲೀ.ಹಾಲು ಪೂರೈಸಿದ ಭವ್ಯಲತಾ(ಚತುರ್ಥ) ಅವರಿಗೆ ಬಹುಮಾನ ನೀಡಿ ಗೌರವಿಸಲಾಯಿತು. 2022-23ನೇ ಸಾಲಿನಲ್ಲಿ ಹಾಲು ಪೂರೈಸಿದ ಎಲ್ಲಾ ಸದಸ್ಯರಿಗೆ ಪ್ರೋತ್ಸಾಹಕ ಬಹುಮಾನ ನೀಡಿ ಗೌರವಿಸಲಾಯಿತು.
ಮಕ್ಕಳಿಗೆ ಪುರಸ್ಕಾರ: ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ ಶೇ.90ಕ್ಕಿಂತ ಮೇಲ್ಪಟ್ಟು ಅಂಕ ಪಡೆದ ಸಂಘದ ಸದಸ್ಯರ ಮಕ್ಕಳಿಗೆ ನಗದು ಪುರಸ್ಕಾರ ನೀಡಿ ಗೌರವಿಸಲಾಯಿತು. ಒಕ್ಕೂಟದ ನಿರ್ದೇಶಕ ನಾರಾಯಣ ಪ್ರಕಾಶ್ ಕೆ.,ಇವರನ್ನು ಸನ್ಮಾನಿಸಿ ಗೌರವಿಸಲಾಯಿತು.