ಬಿಳಿನೆಲೆ ಸಿಎ ಬ್ಯಾಂಕ್ ಮಹಾಸಭೆ-ಸಿ.ಇ.ಒ. ನೇಮಕಾತಿಯಲ್ಲಿ ಅಧ್ಯಕ್ಷರಿಂದ ಅವ್ಯವಹಾರ ಆರೋಪ

0

ಆರೋಪ-ಪ್ರತ್ಯಾರೋಪ, ಮಾತಿನ ಚಕಮಕಿ, ನೂಕಾಟ-ತಳ್ಳಾಟಗಳಿಗೆ ಸಾಕ್ಷಿಯಾದ ಮಹಾಸಭೆ
ಸದಸ್ಯರಿಗೆ ಶೇ.9 ಡಿವಿಡೆಂಡ್ ಘೋಷಣೆ, ಕೊಂಬಾರು,ಸಿರಿಬಾಗಿಲಿಗೆ ಪ್ರತ್ಯೇಕ ಸಂಘ ರಚನೆಗೆ ಆಗ್ರಹ

ಕಡಬ: ಬಿಳಿನೆಲೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಸಂಘದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ನೇಮಕಾತಿಯಲ್ಲಿ ಅವ್ಯವಹಾರ ನಡೆದಿದೆ ಎಂದು ಕೆಲ ಸದಸ್ಯರು ಆರೋಪ ವ್ಯಕ್ತಪಡಿಸಿ ಗದ್ದಲ ನಡೆಸಿದ್ದು ಮಹಾಸಭೆ ಪೂರ್ತಿ ಈ ಅವ್ಯವಹಾರದ ಬಗ್ಗೆಯೇ ಚರ್ಚೆ, ಮಾತಿನ ಚಕಮಕಿ ನಡೆದು ಗೊಂದಲಮಯ ವಾತಾವರಣ ಉಂಟಾಗಿ ಕೊನೆಗೆ ಪೋಲಿಸರ ಮಧ್ಯಪ್ರವೇಶದಿಂದ ಸಭೆ ಅಂತ್ಯಗೊಂಡ ಘಟನೆ ನಡೆದಿದೆ.


ಸಭೆ ಪ್ರಾರಂಭವಾದ ಕೂಡಲೇ ಸ್ವಾಗತ ಮಾಡಲು ಅಧ್ಯಕ್ಷರು ಎದ್ದಾಗ ಸಂಘದ ಸದಸ್ಯರಾದ ಚೆರಿಯನ್, ವಿವೇಕ್, ನಿತೀನ್, ರಮೇಶ್ ವಾಲ್ತಾಜೆ, ಪ್ರದೀಪ್ ಮೊದಲಾದವರು ಮಾತನಾಡಿ, ನೀವು ಸ್ವಾಗತ ಮಾತ್ರ ಮಾಡಿ ಬೇರೆ ವಿಚಾರ ಮಾತನಾಡಬೇಡಿ, ಆ ಬಗ್ಗೆ ಮಾತನಾಡಲು ಇದೆ ಎಂದರು. ಆದರೂ ಅಧ್ಯಕ್ಷರು ಮಾತನಾಡಲು ಪ್ರಾರಂಭಿಸಿದಾಗ ಮತ್ತೆ ಗದ್ದಲ ಪ್ರಾರಂಭವಾಯಿತು. ಬಿಳಿನೆಲೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ನೇಮಕ ಮಾಡಲು ಸಂಘದ ವ್ಯಾಪ್ತಿಯಲ್ಲಿ ಯಾರೂ ವಿದ್ಯಾವಂತರು ಇರಲಿಲ್ಲವೇ, ಅಲ್ಲದೆ ಮ್ಯಾನೆಜರ್ ಹುದ್ದೆಗೆ ಪರವೂರಿನವರನ್ನು ಯಾಕೆ ನೇಮಕಾತಿ ಮಾಡಿದ್ದು, ಅತೀ ಹೆಚ್ಚು ಅಂಕ ಗಳಿಸಿದ ರಂಜಿತ್ ಎಂಬವರಿಂದ ಅಧ್ಯಕ್ಷರು 4 ಲಕ್ಷ ದ 20 ಸಾವಿರ ಮೊದಲು ಪಡೆದಿದ್ದಿರಿ, ಪುನಃ ನಿಮಗೆ ಹಣ ಕೊಡಲು ಅವರಿಗೆ ಸಾಧ್ಯವಾಗದಿದ್ದಾಗ ಅವರನ್ನು ಕ್ರಿಮಿನಲ್ ಹಿನ್ನಲೆ ಪ್ರಕರಣ ಇದ್ದವರು ಎಂದು ಹೇಳಿ ಅವರನ್ನು ನೇಮಕಾತಿ ಮಾಡಿಕೊಳ್ಳದೆ ಪ್ರಸ್ತುತ ಮ್ಯಾನೆಜರ್ ಹುದ್ದೆಯಲ್ಲಿರುವ ಪುನಿತ್ ಎಂಬವರಿಂದ 18 ಲಕ್ಷ ರೂ ಹಣ ಪಡೆದುಕೊಂಡಿದ್ದೀರಿ ಇದಕ್ಕೆ ನಮ್ಮಲ್ಲಿ ದಾಖಲೆ ಇದೆ, ಅಲ್ಲದೆ ಮಹಾಸಭೆಯಲ್ಲಿ ನೀವು ಪ್ರತಿಭಟನೆ ಮಾಡಿ, ಆ ವೇಳೆ ನಾನು ಪ್ರಸ್ತುತ ಮ್ಯಾನೆಜರನ್ನು ವಜಾ ಮಾಡುವ ಬಗ್ಗೆ ನೋಡುತ್ತೇನೆ ಎಂದು ಸ್ವತಃ ಅಧ್ಯಕ್ಷರೆ ಹೇಳಿದ್ದಿರಿ, ಈ ಬಗ್ಗೆ ಆಡಿಯೋ ಕೂಡ ಇದೆ ಎಂದ ಐವರು ಸದಸ್ಯರು ಈಗೀನ ಮ್ಯಾನೆಜರ್ ಅವರನ್ನು ವಜಾ ಮಾಡಿ ಎಂದು ಪಟ್ಟು ಹಿಡಿದರು.ಇದಕ್ಕೆ ಅಧ್ಯಕ್ಷರು ಉತ್ತರಿಸಲು ಎದ್ದು ನಿಂತಾಗ ಅವರಿಗೆ ಈ ಸದಸ್ಯರು ಅವಕಾಶವೇ ನೀಡಲಿಲ್ಲ, ಸದಸ್ಯ ಚೆರಿಯನ್ ಅವರು ಇದೇ ವಿಚಾರವಾಗಿ ಚರ್ಚೆಯಲ್ಲಿ ತೊಡಗಿದ್ದಾಗ ಜಾಮೀನು ಹಾಕಿ ಸುಸ್ತಿಯಾಗಿರುವ ಚೆರಿಯನ್ ಅವರಿಗೆ ಅಧ್ಯಕ್ಷರು ಸೂಚನೆ ನೀಡಿ, ಸುಸ್ತಿದಾರರಿಗೆ ಮಹಾಸಭೆಯಲ್ಲಿ ಮಾತನಾಡಲು ಅವಕಾಶವಿಲ್ಲ, ನಿಮ್ಮ ಪ್ರಕರಣ ನ್ಯಾಯಾಲಯದಲ್ಲಿ ಇದೆ ಎಂದು ಅವರನ್ನು ಮಾತನಾಡದಂತೆ ಸೂಚನೆ ನೀಡಿದರು, ಈ ಸಂದರ್ಭದಲ್ಲಿ ಚೆರಿಯನ್ ಹಾಗೂ ದಾಮೋಧರ್ ಗುಂಡ್ಯ ಅವರ ಮಧ್ಯೆ ಮಾತಿನ ಚಕಮಕಿಯೂ ನಡೆಯಿತು.

ವಿವೇಕ್, ನಿತೀನ್, ರಮೇಶ್ ವಾಲ್ತಾಜೆ, ಪ್ರದೀಪ್ ರಿಕ್ಷಾ ರಮೇಶ್, ಉಮೇಶ್ ಪೊಂಬೋಳಿ ಸೇರಿದಂತೆ ಇನ್ನೂ ಕೆಲವು ಸದಸ್ಯರು ಅಧ್ಯಕ್ಷರ ವಿರುದ್ದ ಆರೋಪ ಮಾಡುತ್ತಿದ್ದರೆ, ಯಶವಂತ ಕಳಿಗೆ, ರಾಮಚಂದ್ರ ದೇರಣೆ, ಅಣ್ಣಪ್ಪ, ಉಮೇಶ್ ಗೌಡ ಸೇರಿದಂತೆ ಹಲವಾರು ಹೆಚ್ಚಿನ ಸದಸ್ಯರು ಅಧ್ಯಕ್ಷರ ಪರವಾಗಿ ಮಾತನಾಡಿ ಮಹಾಸಭೆಯಲ್ಲಿ ಸಂಘದ ಇತರ ವಿಷಯಗಳ ಬಗ್ಗೆಯೂ ಚರ್ಚೆ ಮಾಡಲು ಇದೆ, ಕೆಲವೇ ಮಂದಿಯಿಂದ ಸಭೆಯಲ್ಲಿ ಗೊಂದಲ ಆಗ್ತಿದೆ, ನಮಗೂ ಪ್ರಶ್ನೆ ಕೇಳಲು ಇದೆ ಎಂದು ಹೇಳಿದಾಗ ಅಧ್ಯಕ್ಷರ ವಿರುದ್ದ ಆರೋಪ ಮಾಡುತ್ತಿರುವ ಇನ್ನೊಂದು ತಂಡಗಳ ಮಧ್ಯೆ ಸದಸ್ಯರೋಳಗೆ ಆರೋಪ ಪ್ರತ್ಯಾರೋಪಗಳು ನಡೆಯಿತು.ಈ ವೇಳೆಯೂ ಗೊಂದಲಮಯ ವಾತಾವರಣ ಉಂಟಾಯಿತು. ಕೊನೆಯಲ್ಲಿ ಅಧ್ಯಕ್ಷ ದಾಮೋಧರ್ ಅವರು ಸಿ.ಇ.ಒ ನೇಮಕಾತಿಯಲ್ಲಿ ಯಾವುದೇ ಅವ್ಯವಹಾರ ಆಗಿಲ್ಲ, ರಂಜಿತ್ ಅವರು ಹೆಚ್ಚು ಅಂಕ ಗಳಿಸಿ ನೇಮಕಾತಿ ಮಾಡಲು ಅವರ ಕ್ರಿಮಿನಲ್ ಹಿನ್ನಲೆಯ ಪ್ರಕರಣದಲ್ಲಿ ಇರುವುದರಿಂದ ಅವರನ್ನು ಕೈ ಬಿಡಲಾಯಿತು. ಬಳಿಕ ಈ ನೇಮಕಾತಿ ವಿಷಯ ನ್ಯಾಯಾಲಯದಿಂದ ತಡೆಯಾಜ್ಞೆ ಬಂದಿದ್ದು, ಬಳಿಕ ತಡೆಯಾಜ್ಞೆ ತೆರವು ಆದ ಬಳಿಕ ರಂಜಿತ್ ಅವರನ್ನು ಕೈ ಬಿಟ್ಟು 2ನೇ ಸ್ಥಾನದಲ್ಲಿರುವ ಪುನಿತ್ ಅವರನ್ನು ಆಯ್ಕೆ ಮಾಡಲಾಯಿತು ಎಂದ ಅಧ್ಯಕ್ಷರು, ಪರೀಕ್ಷೆ ಮಾಡುವುದು, ನೆಮಕಾತಿ ಪ್ರಕ್ರಿಯೇಗಳು ನಾವು ಮಾಡುವುದಲ್ಲ, ಅದಕ್ಕೆ ಪ್ರಾಧಿಕಾರ ಇದೆ, ಆ ಮೂಲಕವೇ ನೇಮಕಾತಿ ಮಾಡಿಲ್ಲ, ನೀವು ಸುಮ್ಮನೆ ವೈಯಕ್ತಿಕ ದ್ವೇಷದಿಂದ ಆರೋಪ ಮಾಡಿ ಗೊಂದಲ ಮೂಡಿಸುತ್ತಿದ್ದೀರಿ ಎಂದು ನೇಮಕಾತಿ ಆಗಿರುವ ಪ್ರಕ್ರಿಯೆಗಳನ್ನು ಎಳೆ ಎಲೆಯಾಗಿ ಬಿಡಿಸಿ ಹೇಳಿದರು. ಈ ಸಂದರ್ಭದಲ್ಲಿ ಯಾರೂ ಏನು ಹೇಳುತ್ತಿದ್ದಾರೆ ಎನ್ನುವುದೇ ಅರ್ಥವಾಗುತ್ತಿರಲಿಲ್ಲ, ಸದಸ್ಯರೋಳಗೆ ಮಾತಿನ ಚಕಮಕಿ, ಅಧ್ಯಕ್ಷರು ಮತ್ತು ಅವರ ವಿರುದ್ದ ಆರೋಪ ಮಾಡುತ್ತಿರುವ ಸದಸ್ಯರ ಮಧ್ಯೆ ಮಾತಿನ ಚಕಮಕಿಗಳು ನಡೆಯಿತು. ಒಂದು ಹಂತದಲ್ಲಿ ಸಂತೋಷ್ ಹಾಗೂ ಪ್ರದೀಪ್ ನಡುವೆ ಮಾತಿನ ಚಕಮಕಿ ವಿಕೋಪಕ್ಕೆ ಹೋಗಿ ನೂಕಾಟ ತಳ್ಳಾಟಗಳು ನಡೆಯಿತು. ಈ ವೇಳೆ ಪೋಲಿಸರು ಮಧ್ಯ ಪ್ರವೇಶಿಸಿ ಎಲ್ಲರನ್ನು ಅವರವರ ಸ್ಥಾನದಲ್ಲಿ ಕುಳ್ಳಿರಿಸಲು ಪ್ರಯತ್ನಿಸಿದರು. ಈ ವೇಳೆ ಗದ್ದಲದ ನಡುವೆ ನಿರ್ದೇಶಕ ಚಿದಾನಂದ ದೇವುಪಾಲ್ ವಂದನಾರ್ಪಣೆ ಮಾಡಿದರು, ವಂದನಾರ್ಪಣೆ ಆಗುತ್ತಿದ್ದಂತೆ ಅಧ್ಯಕ್ಷರು ವೇದಿಕೆಯಿಂದ ತೆರಳಿದರು.

ಒಟ್ಟಿನಲ್ಲಿ ಸಿ.ಇ.ಒ ನೇಮಕಾತಿ ವಿಚಾರದಲ್ಲಿ ಆರೋಪ ಪ್ರತ್ಯಾರೋಪ, ನೂಕಾಟ, ತಳ್ಳಾಟಗಳಿಂದ ಕೂಡಿ ಇಡೀ ಸಭೆ ಗೊಂದಲಮಯವಾಗಿ ನಡೆಯಿತು. ಸಭೆಯಲ್ಲಿ ಇತರ ಪ್ರಮುಖ ವಿಚಾರಗಳು ಹೆಚ್ಚು ಪ್ರಸ್ತಾಪವಾಗಿಲ್ಲ.ವೇದಿಕೆಯಲ್ಲಿ ನಿರ್ದೇಶಕರಾದ ಚೆನ್ನಕೇಶವ ಕೈಂತಿಲ, ಅನಿತಾ ಸಣ್ಣಾರ, ಹರಿಪ್ರಸಾದ್ ಕಳಿಗೆ, ಉಮಾವತಿ ಕಳಿಗೆ, ಶಶಿಲೇಖಾ ಮುಗೇರು, ಸುಬ್ಬ ಪರವ, ಶಾರಾದ ಕುಕ್ಕಾಜೆ, ಶಾರಾದ ಮುಂಗ್ಲಿಮಜಲು, ಚಿದಾನಂದ ಗೌಡ ದೇವುಪಾಲ್, ಕೀರ್ತನ್ ಸೂಡ್ಲು, ಪ್ರದೀಪ್, ಸುಜಾತ ಬಿ. ಮಾಜಿ ಪ್ರಭಾರ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಸುಜಾತ.ಬಿ, ಪ್ರಸ್ತುತ ಮುಖ್ಯಕಾರ್ಯನಿರ್ವಾಹಣಾಧಿಕಾರಿ ಪುನಿತ್ ಅವರುಗಳು ಉಪಸ್ಥಿತರಿದ್ದರು. ಸಿಬ್ಬಂದಿಗಳಾದ ಭಾಸ್ಕರ ಎನ್. ಮನೋಜ್ ಕುಮಾರ್, ವೆಂಕಟೇಶ್, ನಾರಾಯಣ, ರೋಸಮ್ಮ ಅವರುಗಳು ಉಪಸ್ಥಿತರಿದ್ದರು.


ಕೊಂಬಾರು-ಸಿರಿಬಾಗಿಲಿಗೆ ಪ್ರತ್ಯೇಕ ಸಂಘ ರಚಿಸಿ-ಆಗ್ರಹ
ಸಭೆಯಲ್ಲಿ ಸರಕಾರದ ಸುತ್ತೋಲೆಯಂತೆ ಕೊಂಬಾರು, ಸಿರಿಬಾಗಿಲು ಗ್ರಾಮಕ್ಕೆ ಪ್ರತ್ಯೇಕ ಸಹಕಾರ ಸಂಘ ರಚಿಸುವಂತೆ ಆ ಭಾಗದ ಸದಸ್ಯರು ಆಗ್ರಹಿಸಿದರು. ಸಂಘದ ಇತರ ವಿಚಾರಗಳ ಬಗ್ಗೆ ಮಾತನಾಡಲು ಇದೆ, ಆದರೆ ಇಲ್ಲಿ ಗೊಂದಲಮಯ ವಾತಾವರಣ ಇದೆ, ನಮಗೆ ಈ ಸಂಘ ಬೇಡ ಪ್ರತ್ಯೇಕ ಸಂಘ ಮಾಡುವಂತೆ ನಿರ್ಣಯ ಮಾಡಿ ಎಂದು ಆಗ್ರಹಿಸಿದರು.


ಮೂರು ಮಂದಿ ನಿರ್ದೇಶಕರಿಂದ ಸಿ.ಇ.ಒ. ನೇಮಕಾತಿಗೆ ಆಕ್ಷೇಪ
ನಿರ್ದೇಶಕರಾದ ಶಾರಾದ ಕುಕ್ಕಾಜೆ, ಅನಿತಾ ಸಣ್ಣಾರ, ಶಾರಾದ ಮುಂಗ್ಲಿಮಜಲು ಅವರು ಸಿ.ಇ.ಒ ನೆಮಕಾತಿ ವಿಚಾರದಲ್ಲಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ, ಈ ಬಗ್ಗೆ ಹಿಂದೆಯೂ ಆಡಳಿತ ಮಂಡಳಿಯ ಸಭೆಯಲ್ಲಿ ಈ ನೇಮಕಾತಿಯ ವಿರುದ್ದ ನಿರ್ಣಯ ಬರೆದಿದ್ದರು. ಅವರು ವೇದಿಕೆಯಿಂದ ಇಳಿದು ಅಧ್ಯಕ್ಷರ ವಿರುದ್ದವೇ ಆಕ್ರೋಶ ವ್ಯಕ್ತಪಡಿಸಿದರು.


ಸದಸ್ಯರಿಗೆ ಶೇ.9 ಡಿವಿಡೆಂಡ್ ಘೋಷಣೆ:
ಅಧ್ಯಕ್ಷರು ಪ್ರಾರಂಭದಲ್ಲಿ ಶೇ6.5 ಡಿವಿಡೆಂಡ್ ಘೋಷಣೆ ಮಾಡಿದ್ದರು, ಇದಕ್ಕೆ ಸಭೆಯಲ್ಲಿ ಹಲವಾರು ಸದಸ್ಯರು ಆಕ್ಷೇಪ ವ್ಯಕ್ತಪಡಿಸಿ ಡಿವಿಡೆಂಡ್ ಹೆಚ್ಚಿಸುವಂತೆ ಆಗ್ರಹಿಸಿದರು. ಬಳಿಕ ಅಧ್ಯಕ್ಷರು ಶೇ.9 ಡಿವಿಡೆಂಡ್ ಘೋಷಣೆ ಮಾಡಿದರು. ಸಂಘವು ವರದಿ ವರ್ಷದಲ್ಲಿ ರೂ. 7251051.67 ನಿವ್ವಳ ಲಾಭ ಗಳಿಸಿದೆ.

LEAVE A REPLY

Please enter your comment!
Please enter your name here