ಪುತ್ತೂರು ನಗರಸಭೆ ಪೌರಕಾರ್ಮಿಕರ ದಿನಾಚರಣೆ – ಗಾಂಧಿಕಟ್ಟೆಯಿಂದ ಜಾಥಾ

0

’ನಮ್ಮ ಮಣ್ಣು ನಮ್ಮ ದೇಶ’ ವಿವಿಧ ವಾರ್ಡ್‌ಗಳಿಂದ ಮೃತ್ತಿಕೆ ಸಂಗ್ರಹ
ಕಸ ವಿಲೇವಾರಿ ಸಿಂಪಲ್ ಅಲ್ಲ, ಕಾಂಪ್ಲಿಕೇಟ್ ವರ್ಕ್ – ಗಿರೀಶ್‌ನಂದನ್

ಪುತ್ತೂರು: ಪುತ್ತೂರು ನಗರಸಭೆ ಪೌರಕಾರ್ಮಿಕರ ದಿನಾಚರಣೆಯ ಸೆ.28ರಂದು ಪುತ್ತೂರು ಪುರಭವನದಲ್ಲಿ ನಡೆಯಿತು. ಬೆಳಿಗ್ಗೆ ಗಾಂಧಿಕಟ್ಟೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ಪುತ್ತೂರು ಘಟಕದ ವತಿಯಿಂದ ಕನ್ನಡದ ಶಾಲಿನೊಂದಿಗೆ ಗೌರವ ಸ್ವೀಕರಿಸಿದ ಪೌರ ಕಾರ್ಮಿಕರು ಪುರಭವನದ ತನಕ ಜಾಥಾ ನಡೆಸಿದರು. ಈ ಸಂದರ್ಭ ಪ್ರಧಾನಿ ನರೇಂದ್ರ ಮೋದಿಯವರ ’ನಮ್ಮ ಮಣ್ಣು ನಮ್ಮ ದೇಶ’ ದ ಕಲ್ಪಣೆಯಂತೆ ಕಲಶವನ್ನು ಪುರಭವನಕ್ಕೆ ತಂದು ಅಲ್ಲಿ ಅತಿಥಿಗಳು, ನಗರಸಭಾ ಸದಸ್ಯರುಗಳು ವಿವಿಧ ವಾರ್ಡ್‌ಗಳ ಮೃತ್ತಿಕೆಯನ್ನು ಕಲಶಕ್ಕೆ ತುಂಬಿಸಿದರು. ಸಭಾ ಕಾರ್ಯಕ್ರಮದಲ್ಲಿ ಹಿರಿಯ ಪೌರಾ ಕಾರ್ಮಿಕರಿಬ್ಬರನ್ನು ವಿಶೇಷವಾಗಿ ಸನ್ಮಾನಿಸಲಾಯಿತು. ಉಳಿದ ಪೌರ ಕಾರ್ಮಿಕರನ್ನು ಗೌರವಿಸುವ ಕಾರ್ಯಕ್ರಮ, ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.


ಕಸ ವಿಲೇವಾರಿ ಸಿಂಪಲ್ ಅಲ್ಲ, ಕಾಂಪ್ಲಿಕೇಟ್ ವರ್ಕ್:
ಕಾರ್ಯಕ್ರಮ ಉದ್ಘಾಟಿಸಿದ ಸಹಾಯಕ ಕಮೀಷನರ್ ಗಿರೀಶ್ ನಂದನ್ ಅವರು ಮಾತನಾಡಿ ಇವತ್ತು ಪೌರ ಕಾರ್ಮಿಕರ ಕೊಡುಗೆಯನ್ನು ಸ್ಮರಿಸುವ ದಿನ. ಅವರ ಕೆಲಸ ಸಿಂಪಲ್ ಅಲ್ಲ. ಕಾಂಪ್ಲೀಕೇಟ್ ವರ್ಕ್. ಯಾಕೆಂದರೆ ಒಂದು ದಿನ ಪೌರ ಕಾರ್ಮಿಕರು ಕೆಲಸ ಮಾಡದಿದ್ದರೆ ನಗರ ಹೇಗಿರುತ್ತದೆ ಎಂದು ಚಿಂತೆ ಮಾಡಿ ನೋಡಿ ಎಂದು ಹೇಳಿದ ಅವರು ಅವರಿಂದಾಗಿ ಇವತ್ತು ನಗರಸಭೆ 3ನೇ ಸ್ಥಾನಕ್ಕೆ ಬಂದಿದೆ. ಇದು ಅವರ ಮನೋಬಲ ಹೆಚ್ಚಿಸುವ ಕೆಲಸ ಮಾಡಿದೆ. ಈ ನಿಟ್ಟಿನಲ್ಲಿ ಅವರಿಗೆ ಉತ್ತಮ ನಿರ್ದೇಶನ ನೀಡುತ್ತಿರುವ ಪೌರಾಯುಕ್ತರಿಗೆ ಅಭಿನಂದನೆ ಸಲ್ಲಿಸಿದರು.


ಕಜವುತಕುಲು ಬತ್ತೇರ್ ಅನ್ನುವುದಕ್ಕೆ ಇತಿಶ್ರೀ ಹಾಡಬೇಕು:
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ನಿಕಟಪೂರ್ವ ಅಧ್ಯಕ್ಷ ಕೆ ಜೀವಂಧರ್ ಜೈನ್ ಅವರು ಮಾತನಾಡಿ ನಗರಸಭೆಯಲ್ಲಿ ಸಮಸ್ಯೆಗೆ ಒತ್ತು ಕೊಡುವ ಕೆಲಸ ಮಾಡಲಾಗಿದೆ. ಹಾಗಾಗಿ 30 ಮಂದಿ ನೇರ ನೇಮಕಾತಿ ಆಗಿರುವವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಮುಂದಿನ ದಿನ ಇನ್ನಷ್ಟು ಮಂದಿ ಖಾಯಂ ಆಗಬೇಕು ಎಂದು ಹೇಳಿದ ಅವರು ನಗರಸಭೆ ಸ್ವಚ್ಛತೆಯ ಬಗ್ಗೆ ಕಜವುತಕಲು ಬತ್ತೇರ್ ಎಂಬುದಕ್ಕೆ ಅಂತ್ಯ ಹಾಡಿ ಅದರ ಬದಲು ಪೌರ ಕಾರ್ಮಿಕರಿಗೆ ಸ್ವಚ್ಛತೆಯ ಸೇನಾನಿ ಎಂದು ಬಿರುದು ಕೊಡುವ ಕೆಲಸ ಆಗಬೇಕು. ನಗರಸಭೆ 31 ವಾರ್ಡ್‌ಗಳಲ್ಲಿ ಕೂಡ ವರ್ಷದ ಒಂದು ದಿನ ವಾರ್ಡ್‌ನಲ್ಲಿ ಪೌರ ಕಾರ್ಮಿಕರಿಗೆ ಗೌರವ ಕೊಡುವ ಕಾರ್ಯಕ್ರಮ ಆಗಬೇಕು. ಕಳೆದ ಅವಧಿಯಲ್ಲಿ ಪೌರ ಕಾರ್ಮಿಕರಿಗೆ ವಸತಿ ಯೋಜನೆಗೆ ರೂ. 1 ಕೋಟಿ ಅನುದಾನ ಇಡಲಾಗಿದೆ. ಜಾಗದ ಸಮಸ್ಯೆಯಿಂದ ಅದು ಹಿಂದೆ ಬಿದ್ದಿದೆ. ಮುಂದೆ ತಾಲೂಕು ಆಡಳಿತ ಜಾಗ ಕಾದಿರಿಸಿದರೆ ವಸತಿ ಯೋಜನೆಗೆ ಪೂರಕ ಕೆಲಸ ಅಗಬಹುದು ಮತ್ತು ನಗರಸಭೆ ಸ್ವಚ್ಚತೆಯಲ್ಲಿ ಪ್ರಥಮ ಸ್ಥಾನದ ಗುರಿ ಮುಟ್ಟಬೇಕು. ಇದಕ್ಕೆ ನಾವು ನೀವು ಜೊತೆಯಾಗಿ ಕೆಲಸ ಮಾಡೋಣ ಎಂದರು.


ವೃತ್ತಿಯಲ್ಲಿ ಸಂತೋಷ ಪಟ್ಟುಕೊಳ್ಳಿ:
ಸರಕಾರಿ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯ ಶಾಸ್ತ್ರ ವಿಭಾಗದ ಉಪನ್ಯಾಸಕ ಡಾ ಹರಿಪ್ರಸಾದ್ ಸಂಪನ್ನೂಲ ವ್ಯಕ್ತಿಯಾಗಿ ಮಾತನಾಡಿ ಪೌರಕಾರ್ಮಿಕರ ಕರ್ತವ್ಯ ಅನಿವಾರ್ಯ. ಅದನ್ನು ಮೋನಿಟರ್ ಮಾಡಲು ಸಾಧ್ಯವಿಲ್ಲ. ಹಾಗಾಗಿ ನಾವು ಪ್ರಾಮಾಣಿಕವಾಗಿ ಕಾರ್ಯತತ್ಪರತೆಯಿಂದ ಅವರ ಸೇವೆಗೆ ಗೌರವ ಕೊಡುವ ಮೂಲಕ ಮನೋಭಾವ ಬದಲಾಯಿಸಬೇಕು. ಅದೇ ರೀತಿ ಪೌರ ಕಾರ್ಮಿಕರು ಜೀವನದಲ್ಲಿ ಬಂದ ಅವಕಾಶವನ್ನು ಬಳಸಿಕೊಂಡಾಗ ವೃತ್ತಿಗೆ ನ್ಯಾಯ ಕೊಡಲು ಸಾಧ್ಯ. ಎಲ್ಲಾ ಕೆಲಸ ದೇವರ ಕೆಲಸ ಮತ್ತು ವೃತ್ತಿಯಲ್ಲಿ ಸಂತೋಷ ಪಟ್ಟುಕೊಳ್ಳಿ ಎಂದರು.


ಸ್ವಚ್ಚ ಸರ್ವೇಕ್ಷನ್ ಸಮೀಕ್ಷೆಯಲ್ಲಿ 6 ರಿಂದ 3ನೇ ಸ್ಥಾನ:
ನಗರಸಭೆ ಪೌರಾಯುಕ್ತ ಮಧು ಎಸ್ ಮನೋಹರ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಪ್ರತಿ ವರ್ಷ ಸೆ.23 ಕ್ಕೆ ಪೌರ ಕಾರ್ಮಿಕರ ಆಚರಣೆ ನಡೆಯುತ್ತಿತ್ತು. ಈ ಭಾರಿ ಗಣೇಶೋತ್ಸವದ ಸಂದರ್ಭ ಸ್ಥಳದ ಕೊರತೆ ಆಗಿದ್ದರಿಂದ ಸೆ.28 ಕ್ಕೆ ಆಚರಿಸುತ್ತಿದ್ದೇವೆ. ನಗರಸಭೆಯಲ್ಲಿ ನೇರಪಾವತಿ 30 ಮಂದಿ ಪೌರ ಕಾರ್ಮಿಕರಿಗೆ ರಾಜ್ಯ ಸರಕಾರದ ವತಿಯಿಂದ ಖಾಯಂ ಆಗಿ ಸೆ.1ರಿಂದ ಅವರಿಗೆ ಖಾಯಂ ಅದೇಶ ಪತ್ರವನ್ನು ಪೌರಾಡಳಿತ ಸಚಿವರು ನೀಡಿದ್ದಾರೆ. ನಗರಸಭೆ ವ್ಯಾಪ್ತಿಯಲ್ಲಿ 25ಸಾವಿರ ಮನೆಗಳಿವೆ. ಪ್ರತಿ ಮನೆಯಿಂದ ಕಸ ವಿಂಗಡಣೆ ಮಾಡಿ ವಿಲೇವಾರಿ ಮಾಡುವುದು ಕಷ್ಟ .ಈ ಪರಿಸ್ಥಿತಿಯಲ್ಲಿ ಪೌರ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಇವತ್ತು ಅವರ ಕಷ್ಟದ ಕೆಲಸದಿಂದ ನಗರಸಭೆ ಸುಂದರವಾಗಿದೆ. ಹಾಗಾಗಿ ಸ್ವಚ್ಛ ಸರ್ವೇಕ್ಷನ್ ಸಮೀಕ್ಷೆಯಲ್ಲಿ 6ನೇ ಸ್ಥಾನದಲ್ಲಿದ್ದ ನಗರಸಭೆ 3ನೇ ಸ್ಥಾನಕ್ಕೆ ಬಂದಿದೆ. ಮುಂದಿನ ದಿನ ಸಂಸ್ಕರಣ ಘಟಕ ಪೂರ್ಣ ಆಗಿ. ಶೇ.100 ರಷ್ಟು ಸಂಸ್ಕರಣೆ ಮಾಡಲು ಯಶಸ್ವಿಯಾಗಲಿದ್ದೇವೆ. ಡಂಪಿಂಗ್ ಯಾರ್ಡ್‌ನಲ್ಲಿ ಸಂಗ್ರಹವಾಗಿರುವ ಒಣ ತ್ಯಾಜ್ಯ ವಿಲೇವಾರಿಗೂ ಕ್ರಮ ಕೈಗೊಳ್ಳಲಾಗಿದೆ. 20 ವರ್ಷಗಳಿಂದ ಸಂಗ್ರಹವಾದ ಕಸ ಗುಡ್ಡೆ ಮಾದರಿಯಲ್ಲಿದೆ. ಅದಕ್ಕೆ ಕೇಂದ್ರ ಮತ್ತು ರಾಜ್ಯ ಸರಕಾರದ ಅನುದಾನದಿಂದ ವಿಲೇವಾರಿ ಆಗಲಿದೆ ಎಂದರು.


ಸನ್ಮಾನ, ವಿಶೇಷ ಭತ್ಯೆ ವಿತರಣೆ:
ಹಿರಿಯ ಪೌರ ಕಾರ್ಮಿಕೆ ಕೇಪುಳು ನಿವಾಸಿ ಗುಲಾಬಿ ಮತ್ತು ನೆಲ್ಲಿಗುಂಡಿ ನಿವಾಸಿ ದಯಾನಂದ ಅವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು. ಈ ಸಂದರ್ಭ ಪೌರ ಕಾರ್ಮಿಕರನ್ನು ಗೌರವಿಸುವ ಕಾರ್ಯಕ್ರಮದಲ್ಲಿ ಪೌರ ಕಾರ್ಮಿಕರ ದಿನಾಚರಣೆಯಂದು ನೀಡುವ ರೂ.2 ಸಾವಿರ ವಿಶೇಷ ಗೌರವ ಭತ್ಯೆಯನ್ನು ವಿತರಣೆ ಮಾಡಲಾಯಿತು. ಗುತ್ತಿಗೆದಾರ ಸಂಘದಿಂದ ವೀಶೆಷ ಬಹುಮಾನ ವಿತರಣೆ ಮಾಡಲಾಯಿತು. ಹಿರಿಯ ಆರೋಗ್ಯ ನಿರೀಕ್ಷಕ ರಾಮಚಂದ್ರ ಸನ್ಮಾನ ಕಾರ್ಯಕ್ರಮ ನಿರ್ವಹಿಸಿದರು. ಇದೇ ಸಂದರ್ಭ ಪೌರ ಕಾರ್ಮಿಕರಿಗೆ, ಸಿಬ್ಬಂದಿಗಳಿಗೆ ಏರ್ಪಡಿಸಲಾಗಿದ್ದ ವಿವಿಧ ಆಟೋಟ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಣೆ ನಡೆಯಿತು.


ಬಹಳ ವರ್ಷದ ಹೋರಾಟದ ಫಲವಾಗಿ ನೇರ ನೇಮಕಾತಿಯಾಗಿದೆ:
ಪೌರ ಕಾರ್ಮಿಕರ ಸಂಘದ ಅಧ್ಯಕ್ಷ ಅಣ್ಣಪ್ಪ ಕಾರೆಕ್ಕಾಡು ಅವರು ಮಾತನಾಡಿ ಬಹಳ ವರ್ಷಗಳ ಹೋರಾಟದ ಫಲವಾಗಿ ನಗರಭೆಯ 30 ಮಂದಿಗೆ ನೇರ ನೇಮಕಾತಿ ಆಗಿದೆ. ಇದರಲ್ಲಿ ಹೋರಾಟದ ರಾಜ್ಯ ಅಧ್ಯಕ್ಷ ನಾಗಣ್ಣ ಗೌಡ, ಜಿಲ್ಲಾಧಿಕಾರಿ, ಯೋಜನಾಧಿಕಾರಿ, ಪೌರಾಯುಕ್ತರು ಮತ್ತು ಈ ಹಿಂದಿನ ಅಧ್ಯಕ್ಷ ಜೀವಂಧರ್ ಜೈನ್ ಅವರನ್ನು ನಾವು ನೆನಪಿಸಬೇಕೆಂದರು. ನಗರಸಭೆಯಲ್ಲಿ ದಾರಿ ದೀಪ ನಿರ್ವಹಣೆ ಮಾಡುತ್ತಿರುವ ಕೆಲಸದವರಿಗೆ ಇಎಸ್‌ಐ, ಪಿಎಫ್ ಇಲ್ಲ ಅದನ್ನು ಮಾಡಿ ಕೊಡಿಸುವಂತೆ ಸಹಾಯಕ ಕಮೀಷನರ್‌ಗೆ ಮನವಿ ಮಾಡಿದರು.


ಪೌರ ಕಾರ್ಮಿಕರ ನಾದೇಯ ಪರಿಸರ ಸಂರಕ್ಷಣಾ ನೌಕರರೆಂದಾಗಲಿ:
ನಗರಸಭೆ ಕಚೇರಿ ವ್ಯವಸ್ಥಾಪಕ ಪಿಯುಸ್ ಡಿಸೋಜ ಅನಿಸಿಕೆ ವ್ಯಕ್ತಪಡಿಸಿ ಮುಂದಿನ ದಿನ ಪೌರ ಕಾರ್ಮಿಕರ ನಾಮದೇಯವನ್ನು ಪರಿಸರ ಸಂರಕ್ಷಣಾ ನೌಕರರೆಂದು ಬದಲಿಸಬೇಕೆಂದು ಹೇಳಿದರು. ತಹಸೀಲ್ದಾರ್ ಶಿವಶಂಕರ್ ಜೆ ಶುಭ ಹಾರೈಸಿದರು. ಪೌರ ಕಾರ್ಮಿಕರಾದ ಸರಸ್ವತಿ, ಲೋಹಿತ್ ಅನಿಸಿಕೆ ವ್ಯಕ್ತಪಡಿಸಿದರು.

ನಗರಸಭೆಯ ಕರುಣಾಕರ್ ಸಂಪನ್ಮೂಲ ವ್ಯಕ್ತಿಯನ್ನು ಪರಿಚಯಿಸಿದರು. ಜಯಲಕ್ಷ್ಮೀ, ವಾಣಿ, ರೋಹಿಣಿ ಪ್ರಾರ್ಥಿಸಿದರು. ಪೌರಾಯುಕ್ತ ಮಧು ಎಸ್ ಮನೋಹರ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಭಾರ ಪರಿಸರ ಇಂಜಿನಿಯರ್ ದುರ್ಗಾಪ್ರಸಾದ್, ಕಚೇರಿ ವ್ಯವಸ್ಥಾಪಕ ಪಿಯುಸ್ ಡಿಸೋಜ , ಕರುಣಾಕರ್, ಹಿರಿಯ ಆರೋಗ್ಯ ನಿರೀಕ್ಷಕರಾದ ಶ್ವೇತಾ ಕಿರಣ್, ವರಲಕ್ಷ್ಮೀ ಅತಿಥಿಗಳನ್ನು ಗೌರವಿಸಿದರು. ಲೆಕ್ಕಿಗ ಸಿ.ಆರ್ ದೇವಾಡಿಗ ಕಾರ್ಯಕ್ರಮ ನಿರೂಪಿಸಿದರು. ಕನ್ನಡ ಸಾಹಿತ್ಯ ಪರಿಷತ್ ಪುತ್ತೂರು ಘಟಕದ ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್, ರೋಟರಿ ಯುವ ಅಧ್ಯಕ್ಷ ಪಶುಪತಿ ಶರ್ಮ, ಡಾ| ರಾಜೇಶ್ ಬೆಜ್ಜಂಗಳ, ನಗರಸಭೆ ಸದಸ್ಯರಾದ ಪಿ.ಜಿ ಜಗನ್ನಿವಾಸ್ ರಾವ್, ಬಾಲಚಂದ್ರ, ಸುಂದರ ಪೂಜಾರಿ ಬಡಾವು, ಯೂಸೂಪ್ ಡ್ರೀಮ್, ದೀಕ್ಷಾ ಪೈ, ಮೋಹಿನಿ ವಿಶ್ವನಾಥ್, ಶಶಿಕಲಾ ಸಿ ಎಸ್, ವಸಂತ ಕಾರೆಕ್ಕಾಡು, ರೋಹಿನಿ, ಲೀಲಾವತಿ, ಸಂತೋಷ್ ಬೊಳುವಾರು, ಮನೋಹರ್ ಕಲ್ಲಾರೆ, ಗುತ್ತಿಗೆದಾರ ಸಂಘದ ಮುರಳಿಕೃಷ್ಣ ಹಸಂತಡ್ಕ, ನಗರಸಭೆ ಮಾಜಿ ಸದಸ್ಯ ರಾಮಣ್ಣ ಗೌಡ ಹಲಂಗ ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here