– ಪ್ರವೀಣ್ ಚೆನ್ನಾವರ
ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯದ ಕುಮಾರ ಪರ್ವತ ಪ್ರವೇಶಿಸಲು ಅರಣ್ಯ ಇಲಾಖೆ ವಿಧಿಸಿದ್ದ ನಿರ್ಬಂಧ ತೆರವುಗೊಳಿಸಲಾಗಿದೆ. ಬೆಂಗಳೂರು ಸೇರಿದಂತೆ ವಿವಿಧೆಡೆಯ ಸುಮಾರು 750 ಚಾರಣಿಗರು ಶನಿವಾರ ಬಂದಿದ್ದರು. ಚಾರಣದ ಸಂದರ್ಭದಲ್ಲಿ ಸ್ವಚ್ಛತೆ ಕಾಪಾಡಲು ಅರಣ್ಯ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ.ಈ ವರ್ಷ ಮೇ ತಿಂಗಳಿನಿಂದ ಅರಣ್ಯ ಇಲಾಖೆಯವರು ಚಾರಣ, ಪ್ರವಾಸಿಗರ ಪ್ರವೇಶವನ್ನು ನಿರ್ಬಂಧಿಸಿದ್ದರು.
ಒಂದೆಡೆ ಹಸುರು, ಇನ್ನೊಂದೆಡೆ ಮುಳಿ ಹುಲ್ಲಿನಿಂದ ಕೂಡಿದ ನುಣುಪಾದ ಶಿಖರ. ಬಂಡೆಗಳ ಕಡಿದಾದ ಪ್ರದೇಶವೂ ಇಲ್ಲಿದ್ದು, ಚಾರಣಿಗರು ಹೆಚ್ಚಿನ ಸಂಖ್ಯೆಯಲ್ಲಿ ಪ್ರಕೃತಿಯ ಸೌಂದರ್ಯ ಸವಿಯಲು ಇಲ್ಲಿ ಬೆಟ್ಟ ಹತ್ತುತ್ತಾರೆ. ದಿನಕ್ಕೆ 25ರಿಂದ 30 ತಂಡಗಳು ಚಾರಣಕ್ಕೆ ತೆರಳುತ್ತವೆ. ಮಳೆಗಾಲದ ಕೆಲ ತಿಂಗಳು ಹೊರತು ಪಡಿಸಿ ಇತರ ಅವಧಿಯಲ್ಲಿ ಇಲ್ಲಿ ಚಾರಣಿಗರು ಕಂಡುಬರುತ್ತಿದ್ದರೂ ಅಕ್ಟೋಬರ್‌ನಿಂದ ಫೆಬ್ರವರಿ ತನಕ ಚಾರಣಕ್ಕೆ ಪ್ರಶಸ್ತ ಅವಧಿಯಾಗಿದೆ.
3 ಜಿಲ್ಲೆಗಳ ಗಡಿಭಾಗ
ಕುಮಾರ ಪರ್ವತವು ದ.ಕ. ಮತ್ತು ಕೊಡಗು ಜಿಲ್ಲೆಗಳ ಗಡಿಭಾಗದಲ್ಲಿದೆ. ಪರ್ವತ ಶೃಂಗವು ಸಮುದ್ರ ಮಟ್ಟದಿಂದ 5,615 ಅಡಿ ಎತ್ತರದಲ್ಲಿದೆ. ಕೊಡಗು, ಹಾಸನ ಮತ್ತು ದ.ಕ. ಈ ಮೂರು ಜಿಲ್ಲೆಯ ಕಡೆಗಳಿಂದಲೂ ಚಾರಣ ಕೈಗೊಳ್ಳಬಹುದಾಗಿದೆ. ಮನಸ್ಸಿಗೆ ಮುದ ನೀಡುವ ಸೌಂದರ್ಯ ಹೊಂದಿರುವ ಕುಮಾರ ಪರ್ವತ ಚಾರಣಿಗರಿಗೆ ಸವಾಲನ್ನು ಒಡ್ಡುತ್ತದೆ. ಇಲ್ಲಿ ಬಂದು ಸೌಂದರ್ಯ ಸವಿಯುತ್ತಾ ಮೈಮರೆಯುವ ಮಂದಿ ಹಲವಾರು ಅಪಾಯಗಳನ್ನೂ ತಂದುಕೊಳ್ಳುತ್ತಾರೆ. ಚಾರಣದ ಪ್ರತಿ ಹೆಜ್ಜೆಯೂ ಹೊಸತಾಗಿರುವುದರಿಂದ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕು. ಕಾಡು ಹಾದಿಯಲ್ಲಿ ದಾರಿ ತಪ್ಪುವ, ಬೆಳೆದು ನಿಂತ ಆನೆಹುಲ್ಲಿನಿಂದ ಗಾಯಮಾಡಿಕೊಳ್ಳುವ, ಕಾಡುಪ್ರಾಣಿಗಳ ದಾಳಿಯ ಸಂಭವವೂ ಹೆಚ್ಚಿರುತ್ತದೆ. ಕುಮಾರ ಪರ್ವತ ಚಾರಣ ಪಶ್ಚಿಮ ಘಟ್ಟದಲ್ಲಿ ಹೆಚ್ಚು ಪ್ರಸಿದ್ದವಾಗಿರುವ ಚಾರಣ ಸಾಹಸ ಚಟುವಟಿಕೆಯಾಗಿದೆ. ಕುಮಾರ ಪರ್ವತ ಚಾರಣವು ಮಧ್ಯಮ ಹಂತದ ಅಂದರೆ ತೀರಾ ಸುಲಭವಲ್ಲದ ಆದರೆ ಅಷ್ಟೊಂದು ಕಷ್ಟವೂ ಇಲ್ಲದ ಚಾರಣವಾಗಿದೆ. ಕುಮಾರ ಪರ್ವತ ಚಾರಣದಲ್ಲಿ ತಳಹಂತದಿಂದ ಶಿಖರದ ವರೆಗೆ ಒಟ್ಟು 25-28 ಕಿ.ಮೀ ನಡೆಯಬೇಕಾಗುತ್ತದೆ. ಮತ್ತು ಸಾಮಾನ್ಯವಾಗಿ ಎರಡು ದಿನಗಳ ಅವಧಿಯಲ್ಲಿ ಪೂರ್ಣಗೊಳ್ಳುತ್ತದೆ.