ಸುಳ್ಯದಲ್ಲಿ ಗಾಣಿಗ ಸಮ್ಮಿಲನ -2023: ಹಿಂದುಳಿದ ವರ್ಗಗಳಿಗೆ ಅನುದಾನ ದೊರೆಯಲು ಜಾತಿ ಗಣತಿ ಅತೀ ಅವಶ್ಯ : ವಿ.ಆರ್. ಸುದರ್ಶನ್

0

ಹುಟ್ಟು ಸಾವಿನ ಮಧ್ಯೆ ಮಾನವನ ಪಾಪ ಪುಣ್ಯದ ಲೆಕ್ಕಾಚಾರದ ಮೇಲೆ ಮುಂದಿನ ಜನ್ಮದ ಅವಲೋಕನ ನಿಗದಿಯಾಗುವುದು. ಮಹಿಳೆಯರು ಮಕ್ಕಳ ಬಗ್ಗೆ ಜವಾಬ್ದಾರಿ ಹಾಗೂ ಸನ್ನಡತೆಯ ಮಾರ್ಗದರ್ಶನ ಮಾಡಬೇಕು.ಆತ್ಮಶುದ್ಧಿ ನೈತಿಕತೆ ಭಾವನೆಯನ್ನು ಮೈಗೂಡಿಸಿಕೊಂಡು ಬೆಳೆಯಬೇಕು. ಸಮುದಾಯದ ಬೆಳವಣಿಗೆಗೆ ಕಾರಣಿಕರ್ತರಾಗುವ ಸಂಘದ ಪದಾಧಿಕಾರಿಗಳನ್ನು ಪ್ರೋತ್ಸಾಹಿಸಿ ಬೆಂಬಲಿಸಬೇಕು. ಮಠದಲ್ಲಿ ಧ್ಯಾನಕೇಂದ್ರ ಶಿಕ್ಷಣದ ವ್ಯವಸ್ಥೆಗಾಗಿ ಸ್ವಾರ್ಥ ಬಿಟ್ಟು ಮಠದ ಹಾಗೂ ಜನಾಂಗದ ಅಭಿವೃದ್ಧಿ ಪರ ಚಿಂತನೆ ಮಾಡಿದ್ದೇವೆ.
ಹಲವಾರು ಸಮ್ಮಿಲನ ಕಾರ್ಯಕ್ರಮ ಏರ್ಪಡಿಸಿ ಸಮುದಾಯದ ಒಳ ಪಂಗಡವನ್ನು ಸಂಘಟಿಸಿ ರಕ್ತ ಸಂಬಂಧ ಬೆಳೆಸುವ ಉದ್ದೇಶದಿಂದ ಕಾರ್ಯಕ್ರಮ ಆಯೋಜಿಸಿರುತ್ತೇವೆ. ಇದರಿಂದ ಪರಸ್ಪರ ಸಂಬಂಧಗಳು ಬೆಸೆಯಲು ಕಾರಣವಾಗಿದೆ. ಸಮುದಾಯ ಪಂಗಡವನ್ನು ಅತೀ ಹಿಂದುಳಿದ ವರ್ಗದ ಸೇರ್ಪಡೆಗೆ ಪ್ರಯತ್ನ ಪಟ್ಟಿದ್ದೇವೆ. ಜನಾಂಗದವರು ಮಠದ ಸಂಪರ್ಕದಲ್ಲಿರಬೇಕು. ಸಮುದಾಯದ ಮಕ್ಕಳಿಗೆ ಉಚಿತ ಶಿಕ್ಷಣ ವಸತಿ ವ್ಯವಸ್ಥೆ ಕಲ್ಪಿಸಿಕೊಡಲಾಗುವುದು.

  • ಪೂರ್ಣಾನಂದ ಪುರಿ ಸ್ವಾಮೀಜಿ

ದೇಶದಲ್ಲಿ ಅನೇಕ ಹಿಂದುಳಿದ ವರ್ಗಗಳಿದ್ದು, ಆಡಳಿತದಲ್ಲಿ ಮತ್ತು ಅನುದಾನದಲ್ಲಿ ಪಾಲು ಪಡೆಯಬೇಕಾದರೆ ಜಾತಿಗಣತಿ ಅತೀ ಅವಶ್ಯವಾಗಿ ಆಗಬೇಕಾಗಿದೆ. ರಾಜ್ಯ ಸರಕಾರ ಮತ್ತು ಕೇಂದ್ರ ಸರಕಾರ ಇದಕ್ಕೆ ಕೂಡಲೇ ಮುಂದಾಗಬೇಕು ಎಂದು ವಿಧಾನ ಪರಿಷತ್ ಮಾಜಿ ಸಭಾಪತಿ ವಿ.ಆರ್. ಸುದರ್ಶನ್ ಹೇಳಿದರು.
ಅವರು ಸುಳ್ಯದ ದುರ್ಗಾಪರಮೇಶ್ವರಿ ಕಲಾ ಮಂದಿರದಲ್ಲಿ ಅ.1ರಂದು ಸುಳ್ಯ ತಾಲೂಕು ಪಾಟಾಳಿ ಯಾನೆ ಗಾಣಿಗರ ಸಮಾಜ ಸೇವಾ ಸಂಘದ ಆಶ್ರಯದಲ್ಲಿ ನಡೆದ ಗಾಣಿಗ ಸಮ್ಮಿಲನ – 2023 ಅನ್ನು ಉದ್ದೇಶಿಸಿ ಮಾತನಾಡಿದರು.
ಸುಳ್ಯ ವಿಧಾನ ಸಭಾ ಕ್ಷೇತ್ರದ ಶಾಸಕಿ ಕು.ಭಾಗೀರಥಿ ಮುರುಳ್ಯ ರವರು ದೀಪ ಪ್ರಜ್ವಲಿಸಿ ಉದ್ಘಾಟಿಸಿ ಶುಭ ಹಾರೈಸಿದರು.
ಬೆಂಗಳೂರು ಶ್ರೀ ಕ್ಷೇತ್ರ ತೈಲೇಶ್ವರ ಗಾಣಿಗರ ಮಹಾ ಸಂಸ್ಥಾನ ಮಠದ ಪೂರ್ಣಾನಂದ ಪುರಿ ಮಹಾಸ್ವಾಮೀಜಿ ಯವರು ಆಶೀರ್ವಚನ ನೀಡಿದರು.

ಪಾಟಾಳಿ ಯಾನೆ ಗಾಣಿಗ ಸಮಾಜ ಸೇವಾ ಸಂಘದ ಅಧ್ಯಕ್ಷ ನ್ಯಾಯವಾದಿ ಚಂದ್ರಶೇಖರ ಉದ್ದಂತಡ್ಕ ರವರು ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕರ್ನಾಟಕ ಸರಕಾರದ ಮಾಜಿ ಸಭಾಪತಿ ಸುದರ್ಶನ್, ಅಖಿಲ ಕರ್ನಾಟಕ ರಾಜ್ಯ ಗಾಣಿಗ ಸಂಘದ ಅಧ್ಯಕ್ಷ ರಾಜಶೇಖರ್ ಬೆಂಗಳೂರು, ಅಖಿಲ ಕರ್ನಾಟಕ ರಾಜ್ಯ ಗಾಣಿಗರ ಸಂಘದ ಉಪಾಧ್ಯಕ್ಷ ಅಂಕ ಶೆಟ್ಟಿ ಬೆಂಗಳೂರು, ನಿವೃತ್ತ ಕ್ಷೇತ್ರ ಶಿಕ್ಷಣಾಧಿಕಾರಿ ಶಂಕರ ಪಾಟಾಳಿ ಪರಿವಾರಕಾನ, ಪುತ್ತೂರು ಸರಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಅಪ್ಪು ಪಾಟಾಳಿ ಜಯನಗರ, ನಿವೃತ್ತ ಉಪ ತಹಶಿಲ್ದಾರ್ ಮಹಾಲಿಂಗ ದೇರೆಬೈಲು, ಸಂಘದ ಆಂತರಿಕ ಲೆಕ್ಕ ಪರಿಶೋಧಕ ಮಹಾಲಿಂಗನ್ ಬಾಜರ್ತೊಟ್ಟಿ, ಸ್ವಿಗ್ಗಿ ಇಂಡಿಯಾ ನಿರ್ದೇಶಕ ಪ್ರೀತಂ ಕೆ.ಎಸ್, ಸಿ.ಎ. ದಯಾನಂದ ಕೆ ಉಪಸ್ಥಿತರಿದ್ದರು.

ಮಂಗಳೂರು ವಾಣಿಯ ಗಾಣಿಗ ಸಂಘದ ಅಧ್ಯಕ್ಷ ರಾಮ ಮುಗ್ರೋಡಿ, ಪುತ್ತೂರು ವಾಣಿಯ ಗಾಣಿಗ ಸಂಘದ ಅಧ್ಯಕ್ಷ ಪ್ರಸಾದ್ ಬಾಕ್ತಿಮಾರ್, ವಿಟ್ಲ ವಾಣಿಯ ಗಾಣಿಗ ಸಂಘದ ಅಧ್ಯಕ್ಷ ಉದಯ ಕುಮಾರ್ ದಂಬೆ, ಈಶ್ವರಮಂಗಲ ವಾಣಿಯ ಗಾಣಿಗ ಸಂಘದ ಅಧ್ಯಕ್ಷ ಮಹಾಲಿಂಗ , ಚೇತನ್ ಮತ್ತು ಉಮೇಶ್ ರವರು ಗೌರವ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಶಾಸಕಿ ಕು.ಭಾಗೀರಥಿ ಮುರುಳ್ಯ ರವರನ್ನು ಸಮಾಜ ಬಾಂಧವರ ಪರವಾಗಿ ಸನ್ಮಾನಿಸಲಾಯಿತು.

ಗಾಣಿಗ ಸಮಾಜದ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಾದ ನಾಟಿ ವೈದ್ಯ ಮಾನ ಬಂಟ್ರಬೈಲು, ಯಕ್ಷಗಾನ ಕಲಾವಿದ ಬಣ್ಣದ ಸುಬ್ರಾಯ ಸಂಪಾಜೆ, ಸಮಾಜ ಸೇವೆಗೆ ಸುಬ್ಬ ಪಾಟಾಳಿ ಕಾಂತಮಂಗಲ, ನಿವೃತ್ತ ಯೋಧರಾದ ಚಂದ್ರಶೇಖರ ಬೆಳ್ಳಾರೆ, ಲೋಕೇಶ್ ಇರಂತಮಜಲು, ಮುಖ್ಯಮಂತ್ರಿ ಚಿನ್ನದ ಪದಕ ವಿಜೇತ ಆರಕ್ಷಕ ದಿನೇಶ್ ನಾರ್ಣಕಜೆ, ಹಿರಿಯ ನ್ಯಾಯವಾದಿ ನಾರಾಯಣ ಪಾಟಾಳಿ ಕೆ, ಶಿಕ್ಷಕ ಚಂದ್ರಶೇಖರ ಕೇರ್ಪಳ, ವಿಜ್ಞಾನಿಗಳಾದ ಪ್ರವೀಣ್ ಎ.ಎಸ್.ಜಯನಗರ, ಕ್ರೀಡಾ ಕ್ಷೇತ್ರ ವನಿತಾ ಸಚಿತ್ ಪೆರಿಯಪ್ಪು, ಮನೋಜ್ ಕುಮಾರ್ ಸೂಂತೋಡು ರವರನ್ನು ಸಂಘದ ವತಿಯಿಂದ ಶಾಲು ಹಾರ ಫಲಪುಷ್ಪ ಸ್ಮರಣಿಕೆ ಸನ್ಮಾನ ಪತ್ರ ನೀಡಿ ಗೌರವಿಸಿ ಸನ್ಮಾನಿಸಲಾಯಿತು.

ಸೆ. 27 ರಂದು ಸಮುದಾಯ ಬಾಂಧವರಿಗೆ ಹಮ್ಮಿಕೊಂಡ ಕ್ರೀಡೋತ್ಸವ ಮತ್ತು ಭಕ್ತಿ ಗೀತೆ ಸ್ಪರ್ಧೆಯ ವಿಜೇತರಿಗೆ ಸಮಾರಂಭದಲ್ಲಿ ಬಹುಮಾನ ವಿತರಿಸಲಾಯಿತು.
ಲಕ್ಷೀಶ ಅಡ್ಕಾರ್ ಪ್ರಾರ್ಥಿಸಿದರು. ನಿವೃತ್ತ ಕ್ಷೇತ್ರ ಶಿಕ್ಷಣಾಧಿಕಾರಿ ಶಂಕರ ಪಾಟಾಳಿ ಪ್ರಾಸ್ತಾವಿಕ ಮಾತಿನೊಂದಿಗೆ ಸ್ವಾಗತಿಸಿದರು. ಸಂಜಯ್ ನೆಟ್ಟಾರು,ಗೀತಾ ಎರ್ಮೆಟ್ಟಿ, ಗೀತಾ ಅಡ್ಕಾರ್, ನಿತೀಶ್ ಮರ್ಕಂಜ ರವರು ಸನ್ಮಾನ ಪತ್ರ ವಾಚಿಸಿದರು. ಜಯರಾಮ ಅಡ್ಕಾರ್ ಬಹುಮಾನ ಪಟ್ಟಿ ವಾಚಿಸಿದರು. ಆರ್ಥಿಕ ಸಮಿತಿ ಸಂಚಾಲಕ ಚಂದ್ರಶೇಖರ ಪನ್ನೆ ವಂದಿಸಿದರು. ಸಮಿತಿ ಸಂಚಾಲಕ ಪ್ರವೀಣ್ ಜಯನಗರ ಮತ್ತು ಸಾವಿತ್ರಿ ಜಯನಗರ ಕಾರ್ಯಕ್ರಮ ನಿರೂಪಿಸಿದರು.
ಗಾಣಿಗ ಸಮಾಜ ಸೇವಾ ಸಂಘದಪದಾಧಿಕಾರಿಗಳು,ಕಾರ್ಯಕಾರಿ ಸಮಿತಿ, ಬೈಲುವಾರು ಸಮಿತಿ ಮತ್ತು ಮಹಿಳಾ ಸಮಿತಿಯ ಸಂಚಾಲಕರು,ಸಹಸಂಚಾಲಕರು ಹಾಗೂ ಸದಸ್ಯರು ಸ್ವಯಂ ಸೇವಕರಾಗಿ ಸಹಕರಿಸಿದರು.

ಬೆಂಗಳೂರಿನ ಮಠದಿಂದ ಆಗಮಿಸಿದ ಸ್ವಾಮೀಜಿ ಯವರನ್ನು ಬೆಳಗ್ಗೆ ಬೂಡು ಭಗವತಿ ದ್ವಾರದ ಬಳಿಯಿಂದ ಸಮಾಜದ ಬಾಂಧವರು ಪೂರ್ಣ ಕುಂಭ ಸ್ವಾಗತದೊಂದಿಗೆ ವೇದಿಕೆಗೆ ಕರೆದುಕೊಂಡು ಬರಲಾಯಿತು.
ಸಭಾಂಗಣದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಸಮಾಜ ಬಾಂಧವರು ಜಮಾಯಿಸಿದ್ದರು. ಆಗಮಿಸಿದ ಎಲ್ಲರಿಗೂ ಮಧ್ಯಾಹ್ನ ಭೋಜನದ ವ್ಯವಸ್ಥೆ ಮಾಡಲಾಗಿತ್ತು. ಅಪರಾಹ್ನ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಗಜಾನನ ನಾಟ್ಯಾಂಜಲಿ ಶ್ರೀಮತಿ ಸುಜಾತ ಕಲಾ ಕ್ಷೇತ್ರ ಮುಳ್ಳೇರಿಯ ಕಲಾ ತಂಡದಿಂದ ನೃತ್ಯ ಶಿಲ್ಪಂ ನೃತ್ಯ ರೂಪಕ ಪ್ರದರ್ಶನ ಗೊಂಡಿತು. ಸಮ್ಮಿಲನ ಕಾರ್ಯಕ್ರಮ ಅಚ್ಚು ಕಟ್ಟಾದ ವ್ಯವಸ್ಥೆ ಯೊಂದಿಗೆ ಯಶಸ್ವಿಯಾಗಿ ನಡೆಯಿತು.
ಗಾಣಿಗ ಸಮ್ಮಿಲನ ಕಾರ್ಯಕ್ರಮವನ್ನು ಸುದ್ದಿ ಯೂ ಟ್ಯೂಬ್ ಚಾನೆಲ್ ನಲ್ಲಿ ನೇರ ಪ್ರಸಾರ ಮಾಡಲಾಗಿತ್ತು.

ಸಮಾಜ ಬಾಂಧವರನ್ನು ಒಂದೆಡೆ ಸೇರಿಸಿ ಸಂಘಟಿಸಿ ಸಮುದಾಯದ ಜಾಗೃತಿಗಾಗಿ ಇಂತಹ ಸಮ್ಮಿಲನ ಕಾರ್ಯಕ್ರಮ ಪೂರಕವಾಗುವುದು.
-ಕು. ಭಾಗೀರಥಿ ಮುರುಳ್ಯ

ಸಮುದಾಯದಲ್ಲಿ ಜಾಗೃತಿಯಾದಾಗ ಅಭಿವೃದ್ಧಿ ಸಾಧ್ಯ. ಕೇಂದ್ರ ಮತ್ತು ರಾಜ್ಯ ಸರಕಾರಗಳು ಹಿಂದುಳಿದ ವರ್ಗಗಳ ಮೀಸಲಾತಿಯಲ್ಲಿ ಪುರುಷರಿಗೆ ಮಹಿಳೆಯರಿಗೆ ಸಮಾನತೆ ನೀಡುವಲ್ಲಿ ಒತ್ತು ನೀಡಬೇಕು.
ಸಮುದಾಯದ ಜನತೆಗೆ ಅನಾನುಕೂಲತೆಯಾದಾಗ ಶಕ್ತಿ ತುಂಬುವ ಕಾರ್ಯ ಸಮ್ಮೇಳನದ ಮೂಲಕ ರೂಪುಗೊಳ್ಳಲಿ.

ವಿ.ಆರ್. ಸುದರ್ಶನ್

LEAVE A REPLY

Please enter your comment!
Please enter your name here