ಉಪ್ಪಿನಂಗಡಿಯಲ್ಲಿ ಗಾಂಧಿ ಪ್ರತಿಮೆಗಿಲ್ಲ ನೆಲೆ!ಪಾರ್ಕ್ ಮರೆಯಾದರೂ ಶಾಶ್ವತವಾಗುಳಿದ ಊರ ಹೆಸರು

0

ಉಪ್ಪಿನಂಗಡಿ: ಇಲ್ಲಿನ ಗಾಂಧಿಪಾರ್ಕ್‌ನಲ್ಲಿ ಗಾಂಧಿ ಪ್ರತಿಮೆಯನ್ನು ಪ್ರತಿಷ್ಠಾಪಿಸಿದ ಜಾಗವು ರಾಷ್ಟ್ರೀಯ ಹೆದ್ದಾರಿಯ ಚತುಷ್ಪಥ ಕಾಮಗಾರಿಗೆ ಹೋದ ಬಳಿಕ ಉಪ್ಪಿನಂಗಡಿ ಗ್ರಾಮದಲ್ಲೊಂದು ಪಾರ್ಕ್, ಅಲ್ಲೊಂದು ಗಾಂಧಿ ಪ್ರತಿಮೆಯ ಸ್ಥಾಪನೆಯ ಕನಸು ಕನಸಾಗಿಯೇ ಉಳಿದಿದೆ. ಆದರೆ ಗಾಂಧಿ ಪ್ರತಿಮೆ ಇದ್ದ ಆ ಪ್ರದೇಶಕ್ಕೆ ಮಾತ್ರ ಗಾಂಧಿಪಾರ್ಕ್ ಎಂಬ ಹೆಸರು ಶಾಶ್ವತವಾಗಿ ಉಳಿದಿದೆ.

ಉಪ್ಪಿನಂಗಡಿಯ ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿರುವ ಸರ್ವೇ ನಂ.19ರ ಸುಮಾರು 20 ಸೆಂಟ್ಸ್ ಜಾಗದಲ್ಲಿ 1971ರಲ್ಲಿ ಗಾಂಧೀಜಿಯವರ ಪ್ರತಿಮೆಯನ್ನಿಟ್ಟು ಪಾರ್ಕ್ ಒಂದನ್ನು ನಿರ್ಮಿಸಲಾಗಿತ್ತು. ಬಳಿಕ ಈ ಪರಿಸರ ಗಾಂಧಿ ಪಾರ್ಕ್ ಎಂದೇ ನಾಮಾಂಕಿತಗೊಂಡು ಚಿರಪರಿಚಿತವೂ ಆಯಿತು. ಅಲ್ಲಿ ಧ್ವಜ ಸ್ತಂಭ ಸ್ಥಾಪನೆ ಸೇರಿದಂತೆ ಬಳಿಕದ ದಿನಗಳಲ್ಲಿ ಅದು ಅಭಿವೃದ್ಧಿಯನ್ನೂ ಕಂಡಿದ್ದು, ಸುತ್ತಲೂ ಆವರಣಗೋಡೆ, ಪಾರ್ಕ್‌ನೊಳಗಡೆ ಕಲ್ಲು ಬೆಂಚುಗಳು, ಮರ-ಗಿಡಗಳು, ಹಸಿರ ಹುಲ್ಲುಹಾಸು ಇಲ್ಲಿ ಕಾಣಿಸಿಕೊಂಡು ಹಸಿರ ಪರಿಸರ ಇದಾಯಿತು. ಒಂದು ಕಡೆಯಿಂದ ಗ್ರಾಮಕ್ಕೊಂದು ಉದ್ಯಾನವನವಿಲ್ಲವೆಂಬ ಕೊರಗನ್ನೂ ಇದು ನೀಗಿಸಿತು. ಕೆಲವು ಸಂಘ- ಸಂಸ್ಥೆಗಳ ಮುತುವರ್ಜಿಯಿಂದ ಹಲವು ಅಭಿವೃದ್ಧಿ ಕಾರ್ಯಗಳು ಇಲ್ಲಿ ನಡೆದಿದ್ದವು. ಪ್ರತಿ ವರ್ಷ ಸ್ವಾತಂತ್ರ್ಯ ದಿನಾಚರಣೆ, ಗಾಂಧಿ ಜಯಂತಿಯನ್ನು ಇಲ್ಲಿ ಆಚರಿಸಲಾಗುತ್ತಿತ್ತು. ಆದರೆ ಕಾಲಕ್ರಮೇಣ ಈ ಉದ್ಯಾನವನ ತನ್ನ ಎಂದಿನ ಹಿರಿಮೆ ಕಳೆದುಕೊಂಡು ಕಳೆಗುಂದಿದ್ದು, ಅಭಿವೃದ್ಧಿಯಲ್ಲಿ ಹಿನ್ನಡೆ ಕಂಡು ಸ್ವಾತಂತ್ರ್ಯ ದಿನಾಚರಣೆ, ಗಾಂಧಿಜಯಂತಿ ಹತ್ತಿರ ಬರುವಾಗ ಮಾತ್ರ ಈ ಉದ್ಯಾನವನದ ಗಿಡ-ಗಂಟಿ, ಹುಲ್ಲುಗಳು ತೆರವಾಗುತ್ತಿದ್ದರೂ, ಇದು ಆಡು- ಜಾನುವಾರುಗಳನ್ನು ಕಟ್ಟುವ ತಾಣವಾಗಿ ಬದಲಾದರೂ, ಇಲ್ಲಿರುವ ಗಾಂಧಿ ಪ್ರತಿಮೆ ಉಪ್ಪಿನಂಗಡಿಗೆ ತಿಲಕವಿಟ್ಟಂತಿತ್ತು. ಆದರೆ 2018ರಲ್ಲಿ ರಾಷ್ಟ್ರೀಯ ಚತುಷ್ಪಥ ಕಾಮಗಾರಿಗಾಗಿ ಇಲ್ಲಿದ್ದ ಧ್ವಜಸ್ತಂಭ ಹಾಗೂ ಗಾಂಧಿ ಪ್ರತಿಮೆಯನ್ನು ತೆರವುಗೊಳಿಸಲಾಯಿತು.


ಗಾಂಧಿ ಹೆಸರಲ್ಲಿ ಸಂಘಟನೆ: ಜಾತ್ಯಾತೀತ ನೆಲೆಗಟ್ಟಿನ ಸಮಾನಮನಸ್ಕರು ಗಾಂಧಿ ಪಾರ್ಕ್ ಹೆಸರನ್ನಿಟ್ಟುಕೊಂಡೇ 1995ರಲ್ಲಿಗಾಂಪಾ ಗೆಳೆಯರು’ ಎಂಬ ಸಂಘಟನೆಯನ್ನು ಹುಟ್ಟುಹಾಕಿದರು. ಈ ಸಂಘಟನೆಯು ಅನ್ಯಾಯದ ವಿರುದ್ಧ ಹಲವು ಹೋರಾಟಗಳನ್ನು ನಡೆಸಿ ಉತ್ತಮ ಹೆಸರು ಪಡೆದಿತ್ತು. ಕಾಲಕ್ರಮೇಣ ಈ ಸಂಘಟನೆಯಲ್ಲಿದ್ದವರು ಉದ್ಯೋಗ ಸೇರಿದಂತೆ ಇನ್ನಿತರ ಕಾರಣಗಳಿಂದ ಚದುರಿಹೋದರು. ಇದರಿಂದಾಗಿ ಒಂದು ಕಾಲದಲ್ಲಿ ಹಲವು ಹೋರಾಟಗಳನ್ನು ಸಂಘಟಿಸಿ, ಅದರಲ್ಲಿ ಸಕ್ರೀಯವಾಗಿ ತೊಡಗಿಸಿಕೊಳ್ಳುವ ಮೂಲಕ ಸಮಾಜಕ್ಕೆ ಮಾದರಿಯಾಗಿದ್ದ ಸಂಘಟನೆಯು ಬಳಿಕದ ದಿನಗಳಲ್ಲಿ ನೇಪಥ್ಯಕ್ಕೆ ಸರಿಯಿತು.


ಗಾಂಧಿ ಪ್ರತಿಮೆಯೆಲ್ಲಿ?:
ಇಲ್ಲಿಂದ ಗಾಂಧಿ ಪ್ರತಿಮೆ ಹಾಗೂ ಧ್ವಜ ಸ್ತಂಭ ತೆರವಾದ ಬಳಿಕ ಗ್ರಾ.ಪಂ.ನ ಹೊಸ ಕಟ್ಟಡದ ಮೇಲೆ ಧ್ವಜಸ್ತಂಭವನ್ನು ಸ್ಥಾಪಿಸಲಾಗಿದೆ. ಆದರೆ ಗಾಂಧಿ ಪ್ರತಿಮೆಯ ಮಾತ್ರ ಸುಳಿವಿಲ್ಲ. ಈ ಬಗ್ಗೆ ಆಡಳಿತಗಾರರನ್ನು ಪ್ರಶ್ನಿಸುವಾಗ ಗಾಂಧಿ ಪ್ರತಿಮೆಯನ್ನು ಮರು ಸ್ಥಾಪಿಸುತ್ತೇವೆ ಎಂಬ ಧ್ವನಿಗಳು ಕೇಳಿ ಬರುತ್ತಿವೆಯೇ ಹೊರತು. ಅಂದಿನ ಗಾಂಧಿ ಪ್ರತಿಮೆ ಯಾವ ಸ್ಥಿತಿಯಲ್ಲಿದೆ ಎಂಬುದಕ್ಕೆ ಮಾತ್ರ ಅಧಿಕೃತ ಉತ್ತರ ದೊರಕುತ್ತಿಲ್ಲ.ಇಲ್ಲಿನ ಗ್ರಾ.ಪಂ. ವಾಣಿಜ್ಯ ಕಟ್ಟಡಗಳನ್ನು ನಿರ್ಮಿಸಲು ಕೊಟ್ಟಿರುವ ಕಾಳಜಿ ಗಾಂಧಿ ಪ್ರತಿಮೆ ಸ್ಥಾಪನೆಗೆ ಕೊಟ್ಟಂತಿಲ್ಲ. ಉದ್ಯಾನವನಕ್ಕೆ ಜಾಗ ಸಿಗದಿದ್ದರೆ ಭವ್ಯವಾದ ಗ್ರಾ.ಪಂ.ನ ಕಟ್ಟಡದ ಮೇಲಾದರೂ ಗಾಂಧಿ ಪ್ರತಿಮೆಯನ್ನು ಪ್ರತಿಷ್ಠಾಪಿಸಬಹುದಿತ್ತು. ಒಂದು ಕಟ್ಟೆ ಕಟ್ಟಿ ಗಾಂಧಿ ಪ್ರತಿಮೆ ಸ್ಥಾಪಿಸಲು ಗ್ರಾ.ಪಂ.ನ ಆವರಣದಲ್ಲಿಯೂ ಜಾಗವಿತ್ತು. ಆದರೆ ಇದ್ಯಾವುದಕ್ಕೂ ಗ್ರಾ.ಪಂ. ಮುಂದಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸುವ ಸಾರ್ವಜನಿಕರು, ಗಾಂಧಿ ಪಾರ್ಕ್‌ನ ನೆನಪಿಗಾಗಿ ಇನ್ನಾದರೂ ಗಾಂಧಿಗೊಂದು ಕಟ್ಟೆ ಕಟ್ಟಿ ಅಲ್ಲಿ ಪ್ರತಿಮೆಯನ್ನು ಸ್ಥಾಪಿಸುವ ಮೂಲಕ ಗಾಂಧಿ ಪ್ರತಿಮೆಯನ್ನು ಹೊರಜಗತ್ತಿಗೆ ಅನಾವರಣಗೊಳಿಸಿ ಎಂದು ಆಗ್ರಹಿಸಿದ್ದಾರೆ.


ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹಾತ್ಮಗಾಂಧಿಯವರನ್ನು ಬ್ರಿಟಿಷರು ಕತ್ತಲೆ ಕೋಣೆಯಲ್ಲಿಟ್ಟಿದ್ದರು. ಆದರೆ ಗಾಂಧೀಜಿಯವರು ಅಹಿಂಸಾತ್ಮಕ ಹೋರಾಟದಿಂದ ತಂದು ಕೊಟ್ಟ ಸ್ವಾತಂತ್ರ್ಯದ ಸುಖ ಅನುಭವಿಸುವವರೇ ಉಪ್ಪಿನಂಗಡಿಯಲ್ಲಿ ಇಂದು ಗಾಂಧೀಜಿಯನ್ನು ಕತ್ತಲೆ ಕೋಣೆಯಲ್ಲಿಟ್ಟಿದ್ದಾರೆ. ಗಾಂಧಿ ಪ್ರತಿಮೆಯನ್ನು ಪ್ರತಿಷ್ಠಾಪಿಸುವುದಕ್ಕಿಂತ ಮೊದಲು ಹಿಂದಿನ ಆ ಪ್ರತಿಮೆಯನ್ನು ಮೊದಲು ಜನರೆದುರು ಅನಾವರಣಗೊಳಿಸುವ ಕೆಲಸವಾಗಲಿ. ಆ ಪ್ರತಿಮೆ ಇಲ್ಲದಿದ್ದರೆ ಅದು ಏನಾಯಿತು ಎಂಬುದರ ಬಗ್ಗೆಯೂ ಜನರಿಗೆ ಮಾಹಿತಿ ಕೊಡುವ ಕೆಲಸವಾಗಲಿ. ಚತುಷ್ಪಥ ಹೆದ್ದಾರಿಗೆ ಗಾಂಧಿ ಪಾರ್ಕ್‌ನ ಸ್ವಲ್ಪ ಜಾಗ ಹೋಗಿದೆಯಷ್ಟೇ. ಆದರೆ ಅಂದು ಗ್ರಾ.ಪಂ. ತರಾತುರಿಯಲ್ಲಿ ಗಾಂಧಿ ಪ್ರತಿಮೆಯನ್ನು ತೆರವುಗೊಳಿಸುವ ಕೆಲಸ ಮಾಡಿದೆ. ಗಾಂಧಿ ಪ್ರತಿಮೆ ಸ್ಥಾಪಿಸಲು ಸ್ಥಳವಿಲ್ಲ ಎಂಬ ಕಾರಣ ಬೇಡ. ಆದ್ದರಿಂದ ಗಾಂಧಿ ಪಾರ್ಕ್‌ನಲ್ಲೇ ಅದು ಮರು ಪ್ರತಿಷ್ಠಾಪನೆ ಆಗಬೇಕಿದೆ.
ಅಶ್ರಫ್ ಬಸ್ತಿಕ್ಕಾರ್ ಸಾಮಾಜಿಕ ಕಾರ್ಯಕರ್ತ, ಹೋರಾಟಗಾರರು

LEAVE A REPLY

Please enter your comment!
Please enter your name here