ಕಸ ಸಂಗ್ರಹಕ್ಕೆ ಶುಲ್ಕ ನೀಡಲು ವರ್ತಕರ ನಕಾರ-ನೋಟೀಸ್ ನೀಡುವ ಬಗ್ಗೆ ನಿರ್ಣಯ
ಪುತ್ತೂರು: ಕೆದಂಬಾಡಿ ಗ್ರಾಪಂನಿಂದ ಈಗಾಗಲೇ ಸ್ವಚ್ಚವಾಹಿನಿ ವಾಹನದಲ್ಲಿ ಸಂಜೀವಿನಿ ಒಕ್ಕೂಟದ ಮೂಲಕ ಪ್ರತಿ ಅಂಗಡಿ ವ್ಯಾಪಾರಸ್ಥರಿಂದ ಹಾಗು ಮನೆಗಳಿಂದ ಒಣ ಕಸ ಸಂಗ್ರಹ ಕೆಲಸ ನಡೆಯುತ್ತಿದ್ದು ಇದಕ್ಕೆ ಪಂಚಾಯತ್ ಇಂತಿಷ್ಟು ಶುಲ್ಕು ವಿಧಿಸಿದೆ. ಆದರೆ ಬಹುತೇಕ ವರ್ತಕರು ಹಾಗೂ ಮನೆಯವರು ಕಸ ಸಂಗ್ರಹದ ಹಣ ಕೊಡುವುದಿಲ್ಲ ಎಂದು ಸಂಜೀವಿನಿ ಒಕ್ಕೂಟದಿಂದ ಪಂಚಾಯತ್‌ಗೆ ಮನವಿ ಮಾಡಿರುವ ಹಿನ್ನೆಲೆಯಲ್ಲಿ ಹಣ ಕೊಡದೇ ಇರುವ ವರ್ತಕರಿಗೆ ಹಾಗೂ ಮನೆಯ ಮಾಲಕರಿಗೆ ನೋಟೀಸ್ ನೀಡುವುದು ಎಂದು ಗ್ರಾಪಂ ಸಾಮಾನ್ಯ ಸಭೆಯಲ್ಲಿ ನಿರ್ಣಯಿಸಲಾಯಿತು.
ಸಭೆಯು ಗ್ರಾಪಂ ಅಧ್ಯಕ್ಷೆ ಸುಜಾತ ಮುಳಿಗದ್ದೆಯವರ ಅಧ್ಯಕ್ಷತೆಯಲ್ಲಿ ಗ್ರಾಪಂ ಸಭಾಂಗಣದಲ್ಲಿ ಸೆ.೨೯ ರಂದು ನಡೆಯಿತು. ಗ್ರಾಮ ಪಂಚಾಯತ್ ವ್ಯಾಪ್ತಿಗೆ ಬರುವ ಎಲ್ಲಾ ಅಂಗಡಿ ವ್ಯಾಪಾರಸ್ಥರಿಂದ ಹಾಗೂ ಮನೆಗಳಿಂದ ಒಣ ಕಸ ಸಂಗ್ರಹದ ಜವಬ್ದಾರಿಯನ್ನು ಸಂಜೀವಿನಿ ಒಕ್ಕೂಟಕ್ಕೆ ಪಂಚಾಯತ್ ನೀಡಿದ್ದು ಅದರಂತೆ ಒಣ ಕಸ ಸಂಗ್ರಹ ಕೆಲಸ ನಡೆಯುತ್ತಿದೆ. ಪಂಚಾಯತ್ ವ್ಯಾಪ್ತಿಯಲ್ಲಿ 120 ಕ್ಕೂ ಅಧಿಕ ಅಂಗಡಿ ವ್ಯಾಪಾರಸ್ಥರಿದ್ದು ಸುಮಾರು 700 ಕ್ಕೂ ಅಧಿಕ ಮನೆಗಳಿವೆ. ಮನೆಯವರಿಗೆ ರೂ.30 ಹಾಗೂ ಅಂಗಡಿ ವ್ಯಾಪಾರಸ್ಥರಿಗೆ ಸೆಲೂನ್, ಚಿನ್ನದ ಅಂಗಡಿ ಮತ್ತು ಬ್ಯಾಂಕ್‌ಗಳಿಗೆ ರೂ.50 ಮತ್ತು ಇತರ ಅಂಗಡಿ, ವಾಣಿಜ್ಯ ಸಂಕೀರ್ಣಗಳಿಗೆ ರೂ.100 ರ ಮಾಸಿಕ ಶುಲ್ಕ ವಿಧಿಸಲಾಗಿದೆ. ಆದರೆ ಬಹುತೇಕ ಅಂಗಡಿಯವರು ಹಾಗೂ ಕೆಲವು ಮನೆಯವರು ಹಣ ಕೊಡುವುದಿಲ್ಲ ಎಂದು ಸಂಜೀವಿನಿ ಒಕ್ಕೂಟದವರು ಅಂಗಡಿ ಮಾಲಕರ ಹೆಸರು ಮತ್ತು ಮನೆಯವರ ಹೆಸರು ಬರೆದು ಪಂಚಾಯತ್‌ಗೆ ನೀಡಿದ್ದು ಹಣ ವಸೂಲು ಮಾಡಿಕೊಡುವಂತೆ ವಿನಂತಿಸಿಕೊಂಡಿದ್ದರು. ಇದಲ್ಲದೆ ಸೆಲೂನ್ ಮಾಲಕರು ನಮ್ಮಲ್ಲಿರುವ ಕೂದಲು ಸೇರಿದಂತೆ ಎಲ್ಲಾ ಕಸವನ್ನು ಕೊಂಡೋಗಬೇಕು ಹಾಗಾದರೆ ಮಾತ್ರ ಹಣ ಕೊಡುತ್ತೇವೆ ಎಂದು ಹೇಳುತ್ತಿದ್ದಾರೆ ಎಂದು ಮನವಿಯಲ್ಲಿ ಹೇಳಿಕೊಂಡಿದ್ದರು. ಈ ಬಗ್ಗೆ ಚರ್ಚೆ ನಡೆದು ಕಸ ಸಂಗ್ರಹಕ್ಕೆ ಶುಲ್ಕು ವಿಧಿಸುವುದು ಸರಕಾರದ ಆದೇಶವಾಗಿದೆ. ಆದೇಶ ಉಲ್ಲಂಘನೆ ಮಾಡುವುದು ಸರಿಯಲ್ಲ ಎಂದ ಅಭಿವೃದ್ಧಿ ಅಧಿಕಾರಿ ಹಾಗೂ ಸದಸ್ಯರುಗಳು ಯಾರು ಹಣ ಕೊಡುವುದಿಲ್ಲವೋ ಅಂತಹ ವರ್ತಕರಿಗೆ ಪಂಚಾಯತ್‌ನಿಂದ ನೋಟೀಸ್ ಮಾಡುವುದು ನೋಟೀಸ್ ಮಾಡಿದ ಬಳಿಕವೂ ಹಣ ಪಾವತಿ ಮಾಡದಿದ್ದರೆ ವ್ಯಾಪಾರ ಪರವಾನಗೆ ತಡೆಹಿಡಿಯುವುದು ಎಂದು ನಿರ್ಣಯಿಸಲಾಯಿತು.
ಗ್ರಾಮದ ಅಲ್ಲಲ್ಲಿ ಬ್ಯಾನರ್ ಅಳವಡಿಸಿರುವ ಬಗ್ಗೆ ಸಭೆಯಲ್ಲಿ ಕೃಷ್ಣ ಕುಮಾರ್ ಇದ್ಯಪೆ ವಿಷಯ ಪ್ರಸ್ತಾಪಿಸಿದರು. ಕೆಲವು ಕಡೆಗಳಲ್ಲಿ ಬ್ಯಾನರ್ ಅಳವಡಿಸಿ ತಿಂಗಳು ಕಳೆದರೂ ಬ್ಯಾನರ್ ತೆರವುಗೊಳಿಸಿಲ್ಲ ಬ್ಯಾನರ್ ಅಳವಡಿಕೆಗೆ 30 ದಿನದ ಅನುಮತಿ ಮಾತ್ರ ನೀಡಬೇಕು ಎಂದು ಹೇಳಿದರು.ಇದಕ್ಕೆ ಉತ್ತರಿಸಿದ ಅಭಿವೃದ್ಧಿ ಅಧಿಕಾರಿ ಅಜಿತ್ ಜಿ.ಕೆಯವರು, ಒಂದು ತಿಂಗಳಿಗೆ ಅನುಮತಿ ನೀಡಿದ್ದರೂ ಮತ್ತೆ ಹಣ ಕಟ್ಟಿ ಬ್ಯಾನರ್ ಪರವಾನಗೆ ನವೀಕರಣ ಮಾಡಿಕೊಳ್ಳುವ ಅವಕಾಶವಿದೆ ಎಂದರು. ಧಾರ್ಮಿಕ ಕಾರ್ಯಕ್ರಮಗಳ ಬ್ಯಾನರ್ ಅಳವಡಿಕೆಗೂ ಪರವಾನಗೆ ಕಡ್ಡಾಯ ಮಾಡಬೇಕು ಎಂದು ಸದಸ್ಯರು ಆಗ್ರಹಿಸಿದರು. ಬ್ಯಾನರ್ ಅಳವಡಿಸುವವರಿಂದ ಡೆಫಾಸಿಟ್ ಪಡೆದುಕೊಳ್ಳಿ, ಬ್ಯಾನರ್ ಪರವಾನಗೆ ಅವಧಿ ಮುಗಿದ ಬಳಿಕ ಅವರಿಗೆ ಡೆಫಾಸಿಟ್ ಹಿಂತಿರುಗಿಸಿ ಎಂದು ರತನ್ ರೈ ಹೇಳಿದರು.
ಈಗಾಗಲೇ ಗ್ರಾಮದಲ್ಲಿ ಜೆಜೆಎಂನಲ್ಲಿ ಸುಮಾರು 392 ಕುಡಿಯುವ ನೀರಿನ ನಳ್ಳಿ ಸಂಪರ್ಕ ಮಾಡಲಾಗಿದ್ದು ಇದರಲ್ಲಿ ಕೆಲವು ಮನೆಗಳಿಗೆ ಎರಡೆರಡು ಸಂಪರ್ಕ ಮಾಡಲಾಗಿದೆ. ಈ ಹಿಂದೆ ಇದ್ದ ನಳ್ಳಿ ಸಂಪರ್ಕವನ್ನು ತೆಗೆಯದೆ ಜೆಜೆಎಂನಿಂದ ಬೇರೊಂದು ನಳ್ಳಿ ಸಂಪರ್ಕವನ್ನು ಮಾಡಲಾಗಿದೆ. ಇದೀಗ ಎರಡು ನಳ್ಳಿಗಳ ಮೂಲಕ ನೀರು ತೆಗೆಯುತ್ತಿರುವುದು ಕಂಡು ಬರುತ್ತಿದೆ ಈ ಬಗ್ಗೆ ಪರಿಶೀಲನೆ ಮಾಡಬೇಕು ಎಂದು ಸದಸ್ಯರು ಆಗ್ರಹಿಸಿದರು. ಇದಕ್ಕೆ ಉತ್ತರಿಸಿದ ಅಭಿವೃದ್ಧಿ ಅಧಿಕಾರಿಯವರು ಈ ಬಗ್ಗೆ ಪ್ರತಿ ಮನೆಗೆ ಭೇಟಿ ಕೊಟ್ಟು ಪರಿಶೀಲನೆ ಮಾಡುವುದು ಎರಡು ನಳ್ಳಿ ಸಂಪರ್ಕವಿದ್ದರೆ ಒಂದನ್ನು ಕಡಿತ ಮಾಡುವುದು ಎಂದು ಹೇಳಿದರು ಅದರಂತೆ ನಿರ್ಣಯ ಕೈಗೊಳ್ಳಲಾಯಿತು. ಕೆಲವು ಜೆಜೆಎಂ ನಳ್ಳಿ ಸಂಪರ್ಕದಲ್ಲಿ ನೀರು ಸೋರುತ್ತಿರುವ ಬಗ್ಗೆ ಸದಸ್ಯರು ಸಭೆಗೆ ತಿಳಿಸಿದರು. ಈ ಬಗ್ಗೆ ಪರಿಶೀಲನೆ ಮಾಡುವುದು ಎಂದು ಅಭಿವೃದ್ಧಿ ಅಧಿಕಾರಿಯವರು ತಿಳಿಸಿದರು.
ಸಭೆಯಲ್ಲಿ ಗ್ರಾಪಂ ಉಪಾಧ್ಯಕ್ಷೆ ಜಯಲಕ್ಷ್ಮೀ ಬಲ್ಲಾಳ್, ಸದಸ್ಯರುಗಳಾದ ಭಾಸ್ಕರ ರೈ ಮಿತ್ರಂಪಾಡಿ, ಪ್ರವೀಣ್ ಶೆಟ್ಟಿ ತಿಂಗಳಾಡಿ, ಕೃಷ್ಣ ಕುಮಾರ್ ಇದ್ಯಪೆ, ವಿಠಲ ರೈ ಮಿತ್ತೋಡಿ, ರೇವತಿ ಬೋಳೋಡಿ, ಸುಜಾತ, ಅಸ್ಮಾ ಚರ್ಚೆಯಲ್ಲಿ ಪಾಲ್ಗೊಂಡರು. ಗ್ರಾಪಂ ಸಿಬ್ಬಂದಿ ಜಯಂತ ಮೇರ್ಲ ಅರ್ಜಿಗಳನ್ನು ಓದಿದರು. ಸಿಬ್ಬಂದಿ ಮೃದುಳ ನಿರ್ಣಯಗಳನ್ನು ದಾಖಲಿಸಿಕೊಂಡರು. ಅಭಿವೃದ್ಧಿ ಅಧಿಕಾರಿ ಅಜಿತ್ ಜಿ.ಕೆ ಸ್ವಾಗತಿಸಿ, ಸರಕಾರಿ ಸುತ್ತೋಲೆಗಳನ್ನು ಓದಿ ವಂದಿಸಿದರು. ಸಿಬ್ಬಂದಿಗಳಾದ ಗಣೇಶ್, ವಿದ್ಯಾಪ್ರಸಾದ್, ಶಶಿಪ್ರಭಾ ಸಹಕರಿಸಿದ್ದರು.
ಗ್ರಾಮದ ದರ್ಮಲೆಗುಡ್ಡೆ ಎಂಬಲ್ಲಿ ಈಗಾಗಲೇ ಪಂಚಾಯತ್‌ನ ಘನ ತ್ಯಾಜ್ಯ ಘಟಕ ಮತ್ತು ಸ್ಮಶಾನ ನಿರ್ಮಾಣಕ್ಕೆ 3 ಎಕರೆ ಜಾಗವನ್ನು ಕಾಯ್ದಿರಿಸಲಾಗಿದ್ದು ಆದರೆ ಈ ಜಾಗವು ಖಾಸಗಿ ವ್ಯಕ್ತಿಯವರ ಜಾಗದೊಂದಿಗೆ ಸೇರ್ಪಡೆಗೊಂಡಿದ್ದು ಅವರು ಜಾಗವನ್ನು ಬಿಟ್ಟುಕೊಡದೇ ಇರುವುದರಿಂದ ಪಂಚಾಯತ್ ಹೈಕೋರ್ಟ್‌ನಲ್ಲಿ ದಾವೆ ಹೂಡಿದ್ದು ಈ ಬಗ್ಗೆ ಪ್ರವೀಣ್ ಶೆಟ್ಟಿಯವರು ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದರು. ಪಂಚಾಯತ್‌ಗೆ ಸೇರಬೇಕಾದ 3 ಎಕರೆ ಜಾಗವನ್ನು ನಾವು ಪಡೆದುಕೊಳ್ಳಲೇ ಬೇಕು ಈ ಬಗ್ಗೆ ಪಿಡಿಒರವರು ಮುತುವರ್ಜಿ ವಹಿಸಬೇಕು ಎಂದು ಹೇಳಿದರು. ಇದಕ್ಕೆ ಉತ್ತರಿಸಿದ ಪಿಡಿಒರವರು, ಈ ಬಗ್ಗೆ ನಾನು ವಕೀಲರೊಂದಿಗೆ ಮಾತುಕತೆ ನಡೆಸುತ್ತಲೇ ಇದ್ದೇನೆ ಎಂದು ತಿಳಿಸಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಪ್ರವೀಣ್ ಶೆಟ್ಟಿಯವರು, ಸಾರ್ವಜನಿಕ ಹಿತಾಶಕ್ತಿಯ ಮೇಲೆ ಕೋರ್ಟ್‌ನಲ್ಲಿ ದಾವೆ ಹೂಡಲು ನಾನು ಸಿದ್ಧ ಯಾವುದೇ ಕಾರಣಕ್ಕೂ ಸರಕಾರಿ ಜಾಗವನ್ನು ಖಾಸಗಿಯವರಿಗೆ ಬಿಟ್ಟು ಕೊಡಲು ತಯಾರಿಲ್ಲ ಎಂದು ಹೇಳಿದರು.