ಸುಧಾಕರ್ ಕಾಣಿಯೂರು
ಕಾಣಿಯೂರು: ಹೇಳಲು ತಾಲೂಕಿನ ಪ್ರಮುಖ ದೊಡ್ಡ ಪೇಟೆ. ಆದರೆ ಪೇಟೆಗೆ ಪ್ರವೇಶಿಸಿದ ವೇಳೆ ಹೊಂಡ ಗುಂಡಿಗಳಿಂದ ದುಸ್ತರಗೊಂಡಿರುವ ರಸ್ತೆಗಳು ಜನರನ್ನು ಸ್ವಾಗತಿಸುತ್ತಿವೆ.
ಇದು ಸುಳ್ಯ ತಾಲೂಕಿನ ಪ್ರಮುಖ ಪೇಟೆಗಳಲ್ಲೊಂದಾದ ಬೆಳ್ಳಾರೆ ಪೇಟೆಯಲ್ಲಿ ಕಂಡು ಬರುವ ದೃಶ್ಯ. ಬೆಳ್ಳಾರೆ ಸುಳ್ಯ ತಾಲೂಕಿನ ಪ್ರಮುಖ ಪೇಟೆಯಾಗಿದ್ದು, ಶೀಘ್ರವಾಗಿ ಅಭಿವೃದ್ಧಿ ಪಥದಲ್ಲಿ ಬೆಳೆಯುತ್ತಿರುವ ಪೇಟೆಯೂ ಹೌದು. ಜತೆಗೆ ಹೋಬಳಿ ಕೇಂದ್ರವನ್ನಾಗಿ ಮಾಡಬೇಕು ಎಂಬ ಕೂಗು ಕೇಳಿಬರುತ್ತಿರುವ ಪೇಟೆ. ವ್ಯವಹಾರಿಕ, ಧಾರ್ಮಿಕ, ಶೈಕ್ಷಣಿಕವಾಗಿ ದಿನನಿತ್ಯ ನೂರಾರು ಮಂದಿ ವ್ಯವಹರಿಸುತ್ತಿರುವ ಬೆಳ್ಳಾರೆ ಪೇಟೆ ಹಲವಾರು ಸಮಸ್ಯೆಗಳಿಂದ ಬಳಲುತ್ತಿದೆ.
ರಸ್ತೆಗಳು ಹೊಂಡ-ಗುಂಡಿ
ಬೆಳ್ಳಾರೆ ಪೇಟೆಯಲ್ಲಿ ಪ್ರಮುಖವಾಗಿ ಕಂಡುಬರುವ ಸಮಸ್ಯೆ ರಸ್ತೆಗಳದ್ದು. ಇಲ್ಲಿನ ಪೇಟೆಯ ಮುಖ್ಯ ರಸ್ತೆಗಳು ಸಂಪೂರ್ಣ ದುಸ್ತರಗೊಂಡಿದೆ. ಸುಳ್ಯ-ಬೆಳ್ಳಾರೆ-ಪುತ್ತೂರು ಕಡೆಗೆ ಸಂಪರ್ಕಿಸುವ ಹಾಗೂ ಸುಳ್ಯ-ಬೆಳ್ಳಾರೆ-ನಿಂತಿಕಲ್ಲು ಕಡೆಗೆ ಸಂಪರ್ಕಿಸುವ ಪೇಟೆಯಲ್ಲಿನ ರಸ್ತೆಗಳು ಸಂಪೂರ್ಣ ದುಸ್ತರಗೊಂಡಿದೆ.
ಬೆಳ್ಳಾರೆ ಪೊಲೀಸ್ ಠಾಣೆ ಬಳಿ, ಕೆಪಿಎಸ್ ವಿದ್ಯಾಸಂಸ್ಥೆ, ಬೆಳ್ಳಾರೆ ಜಂಕ್ಷನ್, ಬೆಳ್ಳಾರೆ ಕೆಳಗಿನ ಪೇಟೆ, ಬೆಳ್ಳಾರೆ ಬಸ್ ನಿಲ್ದಾಣ, ಮಸೀದಿ ಬಳಿ ಸೇರಿದಂತೆ ಪೇಟೆಯಲ್ಲೇ ಹಲವು ಕಡೆಗಳಲ್ಲಿ ರಸ್ತೆಗಳು ಹೊಂಡ ಗುಂಡಿಗಳಿಂದ ದುಸ್ತರಗೊಂಡಿದ್ದು, ವಾಹನ ಸವಾರರು ಸಂಕಷ್ಟ ಅನುಭವಿಸುತ್ತಿದ್ದಾರೆ. ಬಸ್ ನಿಲ್ದಾಣದ ಬಳಿ ರಸ್ತೆ ಬಾರೀ ಪ್ರಮಾಣದಲ್ಲಿ ಕಿತ್ತು ಹೋಗಿದೆ. ಪೇಟೆಯ ರಸ್ತೆ ಸಮಸ್ಯೆಯಿಂದಾಗಿ ಅಪಘಾತಗಳು ಸಂಭವಿಸುವ ಆತಂಕವೂ ಇದೆ. ಹೊಂಡ ಗುಂಡಿಗಳಿಂದ ಪಾದಾಚಾರಿಗಳು, ವಿದ್ಯಾರ್ಥಿಗಳು ನಡೆದಾಡಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ.
ಮಳೆ ಬಂದರೆ ತೋಡಿನಂತಾಗುವ ರಸ್ತೆಗಳು;
ಬೆಳ್ಳಾರೆ ಪೇಟೆಯಲ್ಲಿ ರಸ್ತೆಗಳ ಜತೆಗೆ ಚರಂಡಿ ಸಮಸ್ಯೆಯೂ ಜನತೆಯನ್ನು ಸಂಕಷ್ಟಕ್ಕೆ ದೂಡಿದೆ. ಪೇಟೆಯಲ್ಲಿ ಅವೈಜ್ಞಾನಿಕ ರೀತಿಯಲ್ಲಿ ಚರಂಡಿ ವ್ಯವಸ್ಥೆ ಇದೆ ಎಂಬ ದೂರು ವ್ಯಕ್ತವಾಗುತ್ತಿದ್ದು, ಮಳೆ ಬಂದ ಸಂದರ್ಭದಲ್ಲಿ ಚರಂಡಿಯ ನೀರು ರಸ್ತೆಯಲ್ಲೇ ಹರಿದು. ರಸ್ತೆಗಳು ತೋಡಿನಂತಾಗಿ ಪಾದಾಚಾರಿಗಳು, ವಾಹನ ಸವಾರರು ಸಮಸ್ಯೆ ಅನುಭವಿಸುತ್ತಾರೆ.
ಪ್ರಮುಖ ಪೇಟೆ;
ಬೆಳ್ಳಾರೆ ಸುಳ್ಯ ತಾಲೂಕಿನ ಎರಡನೇ ಪ್ರಮುಖ ಪೇಟೆಯಾಗಿದ್ದು, ಹೋಬಳಿ ಕೇಂದ್ರವಾಗುವ ನಿರೀಕ್ಷೆಯಲ್ಲೂ ಇದೆ. ಬೆಳ್ಳಾರೆಯಲ್ಲಿ ಪೊಲೀಸ್ ಠಾಣೆ, ಕರ್ನಾಟಕ ಪಬ್ಲಿಕ್ ಸ್ಕೂಲ್, ಡಿಗ್ರಿ ಕಾಲೇಜು, ಬಸ್ ನಿಲ್ದಾಣ, ಧಾರ್ಮಿಕ ಕೇಂದ್ರಗಳು, ರಾಷ್ಟ್ರೀಕೃತ ಬ್ಯಾಂಕ್ಗಳು, ಸಹಕಾರಿ ಸಂಸ್ಥೆಗಳು, ವ್ಯಾಪಾರ ಮಳಿಗೆಗಳು ಇದ್ದು, ವೇಗವಾಗಿ ಬೆಳೆಯುತ್ತಿರುವ ಪಟ್ಟಣವೂ ಹೌದು. ಇಲ್ಲಿಗೆ ಮುಂದಿನ ಹಲವು ವರ್ಷಗಳ ಯೋಜನೆಯನ್ನು ರೂಪಿಸಿ ಅಭಿವೃದ್ಧಿ ಕೆಲಸಗಳು ಆಗಬೇಕಿದೆ ಎಂಬ ಮಾತು ಸಾರ್ವಜನಿಕರದ್ದು.
ಅಭಿವೃದ್ಧಿ ಬೇಡಿಕೆ;
ಬೆಳ್ಳಾರೆ ಪೇಟೆಯ ರಸ್ತೆ, ಚರಂಡಿ ಸಮಸ್ಯೆಯಿಂದ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದು, ಇಲ್ಲಿನ ರಸ್ತೆ ಹಾಗೂ ಚರಂಡಿಯನ್ನು ಸೂಕ್ತ ರೀತಿಯಲ್ಲಿ ಅಭಿವೃದ್ಧಿ ಹಾಗೂ ದುರಸ್ತಿ ಪಡಿಸಲು ಸಂಬಂಧಿಸಿದವರು ಮುಂದಾಗಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.