ಕುರಿಯ ಗ್ರಾಮಕ್ಕೆ ಪ್ರತ್ಯೇಕ ಪಂಚಾಯತ್ ಅನುಷ್ಟಾನವಾಗಬೇಕು

0

ಆರ್ಯಾಪು ಗ್ರಾ.ಪಂ ಸಾಮಾನ್ಯ ಸಭೆಯಲ್ಲಿ ಸದಸ್ಯರ ಆಗ್ರಹ

ಪುತ್ತೂರು:ಆರ್ಯಾಪು ಗ್ರಾ.ಪಂ ವ್ಯಾಪ್ತಿಯಲ್ಲಿರುವ ಕುರಿಯ ಗ್ರಾಮಕ್ಕೆ ಪ್ರತ್ಯೇಕ ಗ್ರಾಮ ಪಂಚಾಯತ್ ಅನುಷ್ಠಾನವಾಗಬೇಕು ಎಂದು ಆರ್ಯಾಪು ಗ್ರಾ.ಪಂ ಸಾಮಾನ್ಯ ಸಭೆಯಲ್ಲಿ ಸದಸ್ಯರು ಆಗ್ರಹಿಸಿದ್ದಾರೆ.‌


ಸಭೆಯು ಅ.4ರಂದು ಅಧ್ಯಕ್ಷೆ ಗೀತಾರವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ಕುರಿಯ ವಾರ್ಡ್‌ನ ಸದಸ್ಯ ಯಾಕೂಬ್ ಸುಲೈಮಾನ್‌ರವರು ವಿಷಯ ಪ್ರಸ್ತಾಪಿಸಿ, ಕುರಿಯ ಗ್ರಾಮದಲ್ಲಿ ಎಂಟು ಮಂದಿ ಸದಸ್ಯರಿದ್ದಾರೆ. ಅಲ್ಲದೆ ಅಲ್ಲಿ ಸಾಕಷ್ಟು ಜನಸಂಖ್ಯೆಯೂ ಇದ್ದು ಕುರಿಯ ಗ್ರಾಮಕ್ಕೆ ಪ್ರತ್ಯೇಕ ಪಂಚಾಯತ್ ಆಗಬೇಕು ಎಂದು ಆಗ್ರಹಿಸಿದರು. ಇದಕ್ಕೆ ಸದಸ್ಯರು ಸಹಮತ ಸೂಚಿಸಿದರು. ಪಂಚಾಯತ್ ಪ್ರತ್ಯೇಕಗೊಂಡಾಗ ಕುರಿಯದಲ್ಲಿ ಕನಿಷ್ಠ ಸಂಖ್ಯೆಯ ಸದಸ್ಯರಾಗುತ್ತಾರೆ. ಆಗ ಅಲ್ಲಿಗೆ ಹೆಚ್ಚಿನ ಅನುದಾನಗಳು ಬರುವುದಿಲ್ಲ. ಇದಕ್ಕೆ ಈಗಾಲೇ ಪ್ರತ್ಯೇಕಗೊಂಡ ಪಂಚಾಯತ್‌ಗಳೇ ಉದಾಹರಣೆಯಿದೆ. ಹೀಗಾಗಿ ಎರಡೂ ಗ್ರಾಮದವರು ಒಟ್ಟಾಗಿ ಒಂದೇ ಪಂಚಾಯತ್‌ನಲ್ಲಿರುವ ಎಂದು ಸದಸ್ಯ ಪವಿತ್ರ ರೈ ತಿಳಿಸಿದರು. ಆರ್ಯಾಪು ಹಾಗೂ ಕುರಿಯ ಗ್ರಾಮಗಳೆರಡು ಪಟ್ಟಣದ ಅಂಚಿನಲ್ಲಿರುವುದರಿಂದ ನಗರ ಸಭೆ ವಿಸ್ತರಣೆಯಾಗುವಾಗ ಎರಡು ಗ್ರಾಮಗಳು ನಗರ ಸಭಾ ವ್ಯಾಪ್ತಿಗೆ ಹೋಗಲಿದೆ ಎಂದು ಸದಸ್ಯ ಬೂಡಿಯಾರ್ ಪುರುಷೋತ್ತಮ ರೈಯವರು ತಿಳಿಸಿದರು. ಕುರಿಯ ಗ್ರಾಮವು ಗ್ರಾಮೀಣ ಪ್ರದೇಶದಲ್ಲಿದೆ. ಆರ್ಯಾಪು ಗ್ರಾಮವು ಪಟ್ಟಣದ ವ್ಯಾಪ್ತಿಯಲ್ಲಿರುವುದರಿಂದಾಗಿ ಎರಡೂ ಗ್ರಾಮಗಳಲ್ಲಿಯೂ ತೆರಿಗೆ ನಿಗಧಿಯಲ್ಲೂ ವ್ಯತ್ಯಾಸ ಬರುತ್ತಿದೆ. ಪ್ರತ್ಯೇಕಗೊಂಡಾಗ ಈ ಸಮಸ್ಯೆ ಬರಲು ಸಾಧ್ಯವಿಲ್ಲ ಎಂದು ಪಿಡಿಓ ತಿಳಿಸಿದರು. ಪ್ರತ್ಯೇಕ ಪಂಚಾಯತ್ ಅದರೆ ಕುರಿಯ ಭಾಗದ ಜನರಿಗೆ ಸಾಕಷ್ಟು ಅನುಕೂಲವಾಗಲಿದೆ. ಪ್ರತ್ಯೇಕ ಪಂಚಾಯತ್ ಆಗುವುದಕ್ಕೆ ಹೆಚ್ಚಿನ ಸದಸ್ಯರಲ್ಲಿ ಒಳವಿತ್ತು. ಕುರಿಯ ಗ್ರಾಮಕ್ಕೆ ಶೀಘ್ರವಾಗಿ ಪಂಚಾಯತ್ ಅನುಷ್ಠಾನವಾಗಲಿ. ಬೂಡಿಯಾರ್ ಪುರುಷೋತ್ತಮ ರೈಯಯವರು ಅಲ್ಲಿನ ಪ್ರಥಮ ಅಧ್ಯಕ್ಷರಾಗಿ ಆಯ್ಕೆಯಾಗಿ ಬರಲಿ ಎಂದು ಸದಸ್ಯ ಹರೀಶ್ ನಾಯಕ್ ತಿಳಿಸಿದರು.


ಎಂಬಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಅಂಗನವಾಡಿ ಉದ್ಘಾಟನೆಗೆ ದಿನಾಂಕ ನಿಗಧಿಗೊಳಿಸುವ ವಿಚಾರದಲ್ಲಿ ಸದಸ್ಯರಾದ ಚೇತನ್, ಪೂರ್ಣಿಮಾ ರೈ, ಪವಿತ್ರ ರೈ ಹಾಗೂ ಕಸ್ತೂರಿಯವರ ಮಧ್ಯೆ ತೀವ್ರ ಚರ್ಚೆ ನಡೆಯಿತು. ಸದಸ್ಯ ಚೇತನ್ ಮಾತನಾಡಿ, ಅಂಗನವಾಡಿ ಉದ್ಘಾಟನೆಗೆ ನಿಗದಿಗೊಳಿಸಿದ ದಿನಾಂಕ ಉತ್ತಮವಲ್ಲ. ಅಲ್ಲದೆ ಅಲ್ಲಿ ಕಾಮಗಾರಿಯು ಪೂರ್ಣಗೊಂಡಿಲ್ಲ. ಸಿಟೌಟ್ ಕಾಮಗಾರಿಗಳು ಇನ್ನೂ ನಡೆಯಬೇಕಿದೆ ಎಂದರು. ಪಂಚಾಯತ್‌ನ ಲೈಬ್ರೇರಿ, ಉದ್ಯಾನವನ ಹಾಗೂ ಅಂಗನವಾಡಿ ಕಟ್ಟಡ ಉದ್ಘಾಟನೆಯನ್ನು ಒಂದೇ ದಿನ ಮಾಡುವುದಾಗಿ ಕಳೆದ ಸಭೆಯಲ್ಲಿ ತೀರ್ಮಾನಿಸಲಾಗಿತ್ತು. ಅದರಂತೆ ಶಾಸಕರು ನೀಡಿದ ದಿನಾಂಕದಂದು ಉದ್ಘಾಟನೆಗೆ ದಿನ ನಿಗಧಿಪಡಿಸಲಾಗಿದೆ. ಈಗ ಆಗುವುದಿಲ್ಲ ಅಂದರೆ ಹೇಗೆ ಎಂದು ಪೂರ್ಣಿಮಾ ರೈ ಹಾಗೂ ಪವಿತ್ರ ರೈ ಪ್ರಶ್ನಿಸಿದರು. ಅಲ್ಲಿ ಅಂಗನವಾಡಿ ಕಟ್ಟಡದ ಕಾಮಗಾರಿಯೇ ಪೂರ್ಣಗೊಂಡಿಲ್ಲ. ಪೂರ್ಣಗೊಳ್ಳದೇ ಉದ್ಘಾಟನೆ ಮಾಡುವುದು ಹೇಗೆ? ಕಟ್ಟಡ ಕಾಮಗಾರಿ ಪೂರ್ಣಗೊಂಡ ಬಳಿಕ ಶಾಸಕರಿಂದಲೇ ಉದ್ಘಾಟನೆ ಮಾಡುವ. ಸಿಟೌಟ್ ನಿರ್ಮಾಣಕ್ಕೆ ಧರ್ಮಸ್ಥಳದಿಂದ ಅನುದಾನ ಒದಗಿಸುವುದಾಗಿ ತಿಳಿಸಿದ್ದಾರೆ. ಅದಲ್ಲದೆ ಶ್ರೀಕೃಷ್ಣ ಯುವಕ ಮಂಡಲದವರು ಸಿಟೌಟ್ ನಿರ್ಮಿಸಿಕೊಡುವ ಭರವಸೆ ನೀಡಿದ್ದಾರೆ ಎಂದು ಚೇತನ್ ತಿಳಿಸಿದರು. ಉದ್ಘಾಟನೆಗೆ ದಿನಾಂಕ ನಿಗಧಿಯಾದ ಬಳಿಕ ಕಾಮಗಗಾರಿ ಸ್ಥಗಿತಗೊಂಡಿರುವುದಾಗಿ ಪೂರ್ಣಿಮಾ ರೈ ತಿಳಿದರು. ಸದಸ್ಯ ಪುರುಷೋತ್ತಮ ರೈ ಮಾತನಾಡಿ, ಅಂಗನವಾಡಿ ಉದ್ಘಾಟನೆ ವಿಚಾರದಲ್ಲಿ ನಾವು ರಾಜಕೀಯ ಮಾಡುವುದು ಸರಿಯಲ್ಲ. ಯಾರೋ ಹೇಳಿದ್ದನ್ನು ಕೇಳವುದು ಬೇಡ. ಶಾಸಕರು ನೀಡಿದ ದಿನ ಉದ್ಘಾಟನೆ ನಡೆಸುವ ಎಂದು ತಿಳಿಸಿದರು. ಅಂಗನವಾಡಿ ಕಟ್ಟಡವನ್ನು ಎಲ್ಲಾ ಕಾಮಗರಿ ಮುಗಿದ ಬಳಿಕ ಉದ್ಘಾಟನೆ ಮಾಡುವ. ಈಗಾಗಲೇ ಕಾಮಗರಿ ಪೂರ್ಣಗೊಂಡಿರುವ ಲೈಬ್ರೇರಿ ಹಗೂ ಉದ್ಯಾನವನನ್ನು ಉದ್ಘಾಟನೆ ನಡೆಸುವುದು ಉತ್ತಮ ಎಂದು ಪವಿತ್ರ ರೈ ಹಾಗೂ ಪೂರ್ಣಿಮಾ ರೈ ತಿಳಿಸಿದರು. ಪಿಡಿಓ ನಾಗೇಶ ಮಾತನಾಡಿ, ಎರಡು ಕಾಮಗಾರಿ ಮಾತ್ರ ಉದ್ಘಾಟನೆ ಬಗ್ಗೆ ಮಾತನಾಡಿದ್ದು. ಅಂಗನವಾಡಿ ಉದ್ಘಾಟನೆ ಪ್ರಸ್ತಾಪವಾಗಿಲ್ಲ. ಅಂಗನವಾಡಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಸೇರಿದ್ದು. ಅವರ ನೇತೃತ್ವದಲ್ಲಿ ಉದ್ಘಾಟನೆ ನಡೆಯಲಿದೆ ಎಂದು ತಿಳಿಸಿದರು. ಅಂಗನವಾಡಿ ಕಾಮಗಾರಿ ಪೂರ್ಣಗೊಂಡರೆ ಒಟ್ಟಾಗಿ ಉದ್ಘಾಟನೆ ಮಾಡಬಹುದು ಎಂದು ನಾವು ತಿಳಿಸಿರುವುದಾಗಿ ಪೂರ್ಣೀಮಾ ರೈ ತಿಳಿಸಿದರು.


ಎಲ್ಲಾ ವಾರ್ಡ್‌ಗಳಲ್ಲಿ ಸ್ವಚ್ಚತೆ:
ಸ್ವಚ್ಚತೆ ಒಂದು ದಿನಕ್ಕೆ ಸೀಮಿತವಲ್ಲ. ಇಡೀ ತಿಂಗಳ ನಡೆಯಬೇಕು. ಪ್ರತಿಯೊಬ್ಬ ಸದಸ್ಯರು ತಮ್ಮ ಪರಿಸರಸಲ್ಲಿ ಕನಿಷ್ಠ ಒಂದು ಗಂಟೆಯಾದರೂ ಸ್ಚಚ್ಚತೆ ಮಾಡಬೇಕು. ರಸ್ತೆ, ಶಾಲೆ, ನೀರಿನ ಟ್ಯಾಂಕ್, ಧಾರ್ಮಿಕ ಕೇಂದ್ರ, ಅಂಗನವಾಡಿ, ಕಾಲೊನಿ, ರಸ್ತೆಗಳಲ್ಲಿ ಸ್ವಚ್ಚತೆ ಮಾಡಬಹುದು. ತ್ಯಾಜ್ಯ ಸಂಗ್ರಹಣೆಗೆ ಪಂಚಾಯತ್‌ನಿಂದ ವಾಹನ ಒದಗಿಸಲಾಗುವುದು ಎಂದು ಪಿಡಿಓ ನಾಗೇಶ್ ತಿಳಿಸಿದರು. ಸ್ವಚ್ಚತೆ ಪ್ರತಿಯೊಬ್ಬರ ಕರ್ತವ್ಯ ಹೀಗಾಗಿ ಕರಪತ್ರ ಮುದ್ರಿಸಿ ಪ್ರತಿ ಮನೆಗಳಿಗೆ ವಿತರಿಸುವ ಮೂಲಕ ಎಲ್ಲರಲ್ಲಿಯೂ ಜಾಗೃತಿ ಮೂಡಿಸಬೇಕು. ಸ್ವಚ್ಚತೆ ಕಾಪಾಡದಿದ್ದರೆ ದಂಡ ವಿಧಿಸುವುದಾಗಿ ಎಚ್ಚರಿಕೆ ನೀಡಬೇಕು ಎಂದು ಸದಸ್ಯ ಬೂಡಿಯಾರ್ ಪುರುಷೋತ್ತಮ ರೈ ಹೇಳಿದರು. ಅಂಗಡಿ ಪರಿಸರದಲ್ಲಿ ಸ್ವಚ್ಚತೆ ಕಾಪಾಡಾಲು ಎಲ್ಲಾ ಅಂಗಡಿ ಮ್ಹಾಲಕರಿಗೆ ನೊಟೀಸ್ ನೀಡುವಂತೆ ಸದಸ್ಯ ಪವಿತ್ರ ರೈ ತಿಳಿಸಿದರು. ಕೊಳಚೆ ನೀರುನ್ನು ಯಾರೂ ಚರಂಡಿಗೆ ಬಿಡಬಾರದು. ಇಂಗುಗುಂಡಿ ನಿರ್ಮಿಸಿಕೊಳ್ಳುವಂತೆ ಪಿಡಿಓ ತಿಳಿಸಿದರು. ಅಂಗನವಾಡಿಗಳಲ್ಲಿ ಸ್ವಚ್ಚತೆಗಳಿಲ್ಲ ಎಂದು ಸದಸ್ಯರು ಆರೋಪಿಸಿದರು.


ಗ್ರಾಮದವರನ್ನೇ ಗ್ರಾಮ ಸಹಾಯಕ ಹುದ್ದೆಗೆ ನೇಮಿಸಿ:
ಕಂದಾಯ ಇಲಾಖೆಯ ಗ್ರಾಮ ಆಡಳಿತಾಧಿಕಾರಿಗಳ ಕಚೇರಿಯಲ್ಲಿರುವ ಗ್ರಾಮ ಸಹಾಯಕ ಹುದ್ದೆಗೆ ಆಯಾ ಗ್ರಾಮದವರು ಆಗಿರಬೇಕು ಎಂದು ಕಂದಾಯ ಇಲಾಖೆಯ ಕಾಯಿದೆಯಲ್ಲಿದೆ. ಆದರೆ ಆರ್ಯಾಪು ಗ್ರಾಮದ ಗ್ರಾಮ ಆಡಳಿತಾಧಿಕಾರಿ ಕಚೇರಿಯಲ್ಲಿರುವ ಗ್ರಾಮ ಸಹಾಯಕರು ಆಯಾಪು ಗ್ರಮದವರಲ್ಲ. ಅವರು ಬೇರೆ ಗ್ರಾಮದವರು. ಹೀಗಾಗಿ ಆರ್ಯಾಪು ಗ್ರಾಮದವರನ್ನೇ ಗ್ರಾಮ ಸಹಾಯಕರನ್ನಾಗಿ ನೇಮಿಸುವಂತೆ ಸದಸ್ಯ ಪವಿತ್ರ ರೈ ಆಗ್ರಹಿಸಿದರು.


ಅ.17 ಲೈಬ್ರೇರಿ, ಉದ್ಯಾನವನ ಉದ್ಘಾಟನೆ:
ಪಂಚಾಯತ್‌ನಿಂದ ನಿರ್ಮಾಣಗೊಂಡಿರುವ ಅಮೃತ ಉದ್ಯಾನವನ ಹಾಗೂ ಇ-ಲೈಬ್ರೇರಿಯು ಉದ್ಘಾಟನೆಯು ಅ.17ರಂದು ಬೆಳಿಗ್ಗೆ 11 ಗಂಟೆಗೆ ನಡೆಯಲಿದೆ. ಶಾಸಕ ಉದ್ಘಾಟಿಸಲಿದ್ದಾರೆ ಎಂದು ಪಿಡಿಓ ನಾಗೇಶ್ ತಿಳಿಸಿದರು.


ವಿವಿಧ ಸಮಿತಿಗಳಿಗೆ ಆಯ್ಕೆ:
ಪಂಚಾಯತ್‌ನ ವಿವಿಧ ಉಪ ಸಮಿತಿಗಳಾದ ಹಣಕಾಸು ಸಮಿತಿ, ಸಾಮಾನ್ಯ ಸ್ಥಾಯಿ ಸಮಿತಿ, ಸಾಮಾಜಿಕ ನ್ಯಾಯ ಸಮಿತಿ, ನೀರು ನೈರ್ಮಲ್ಯ ಸಮಿತಿ ಹಾಗೂ ಜೀವ ವೈವಿದ್ಯಾ ಸಮಿತಿಗೆ ಸದಸ್ಯರನ್ನು ಆಯ್ಕೆ ಮಾಡಲಾಯಿತು.


ಗ್ರಾಮ ಆಡಳಿತಾಧಿಕಾರಿ ಕಚೇರಿ ಜಾಗ ಗ್ರಾ.ಪಂಗೆ ಹಸ್ತಾಂತರಕ್ಕೆ ಕ್ರಮ:
ಪಂಚಾಯತ್, ಕಂದಾಯ ಹಾಗೂ ಇತರ ಸೇವೆಗೆಳು ಒಂದೇ ಕಡೆ ದೊರೆಯಬೇಕು ಎಂಬ ಸರಕಾರದ ನಿಯಮವೂ ಇದೆ. ಹೀಗಾಗಿ ಸಾರ್ವಜನಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಗ್ರಾಮ ಆಡಳಿತಾಧಿಕಾರಿಗಳ ಕಚೇರಿ ಗ್ರಾ.ಪಂ ಕಚೇರಿ ಬಳಿಗೆ ಸ್ಥಳಾಂತರಿಸಬೇಕು. ಇದರ ಬಗ್ಗೆ ಸಭೆಯಲ್ಲಿ ಚರ್ಚಿಸಿ ಈಗಿರುವ ಗ್ರಾಮ ಕರಣಿಕರ ಕಚೇರಿ ಇರುವ ಜಾಗವನ್ನು ಪಂಚಾಯತ್‌ಗೆ ಹಸ್ತಾಂತರಕ್ಕೆ ಕ್ರಮಕೈಗೊಳ್ಳಲಾಗುವುದು. ಅಲ್ಲಿ ಕಟ್ಟಡ ನಿರ್ಮಿಸುವ ಯೋಜನೆ ರೂಪಿಸುವುದಾಗಿ ತೀರ್ಮಾನಿಸಲಾಯಿತು.


೭೧ ನಾಯಿಗಳಿಗೆ ರೋಗ ನಿರೋಧಕ ಲಸಿಕೆ:
ಪಶುವೈದ್ಯಕೀಯ ಇಲಾಖೆಯ ಮುಖಾಂತರ ಪಂಚಾಯತ್ ವ್ಯಾಪ್ತಿಯ ಕುರಿಯದಲ್ಲಿ ೫೪ ಹಾಗೂ ಆರ್ಯಾಪು ಗ್ರಾಮದಲ್ಲಿ 17 ನಾಯಿಗಳಿಗೆ ಹುಚ್ಚು ರೋಗ ನಿರೋಧಕ ಲಸಿಕೆಗಳನ್ನು ವಿತರಿಸಲಾಗಿದೆ ಎಂದು ಪಿಡಿಓ ನಾಗೇಶ್ ತಿಳಿಸಿದರು.


ದಾರಿದೀಪ ದುರಸ್ಥಿಗೆ ಗುತ್ತಿಗೆ ಬದಲಾಯಿಸಿ:
ಪಂಚಾಯತ್ ವ್ಯಾಪ್ತಿಯಲ್ಲಿ ಈಗಿರುವ ದಾರಿದೀಪ ನಿರ್ವಹಣೆ ಹಾಗೂ ದುರಸ್ಥಿಯ ಗುತ್ತಿಗೆದಾರರು ಪ್ರಾರಂಭದಲ್ಲಿ ಸರಿಯಾಗಿ ಕೆಲಸ ಮಾಡುತ್ತಿದ್ದರು. ಈಗ ಸರಿಯಾಗಿ ಬರುತ್ತಿಲ್ಲ. ಸಮಸ್ಯೆಗಳಿಗೆ ಸ್ಪಂಧನೆ ನೀಡುತ್ತಿಲ್ಲ. ಹೀಗಾಗಿ ಅವರನ್ನು ಬದಲಾಯಿಸಿ, ಹಿಂದಿನ ಗುತ್ತಿಗೆದಾರರಿಗೆ ನೀಡಬೇಕು ಎಂದು ಸದಸ್ಯರು ಆಗ್ರಹಿಸಿದರು. ದಾರಿ ದೀಪ ನಿರ್ವಹಣೆಯ ಬಗ್ಗೆ ಸಾರ್ವಜನಿಕ ದೂರುಗಳಿರುವುದರಿಂದ ಗುತ್ತಿಗೆದಾರರಿಗೆ ಎಚ್ಚರಿಕೆ ನೀಡುವುದಾಗಿ ತೀರ್ಮಾನಿಸಲಾಯಿತು.
ನೇಲ್ಯಡ್ಕ ಅಂಗನವಾಡಿಯಲ್ಲಿ ಖಾಲಿಯಿರುವ ಕಾರ್ಯಕರ್ತೆಯ ಹುದ್ದೆಯ ಖಾಲಿಯಿದ್ದು ಶೀಘ್ರ ಭರ್ತಿ ಮಾಡುವಂತೆ ಸದಸ್ಯರು ಆಗ್ರಹಿಸಿದರು. ಈ ಕುರಿತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಮನವಿ ಮಾಡಿ ಹುದ್ದೆ ಭರ್ತಿ ಮಾಡುವಂತೆ ಒತ್ತಾಯಿಸುವುದಾಗಿ ತೀರ್ಮಾನಿಸಲಾಯಿತು.


ಶೇಡಿಗುಂಡಿ-ಬಳಕ್ಕೆ ಸಂಪರ್ಕ ರಸ್ತೆ ನಿರ್ಮಿಸಿ:
ಶೇಡಿಗುಂಡಿ-ಬಳಕ್ಕೆ ಸಂಪರ್ಕ ರಸ್ತೆ ನಿರ್ಮಾಣ ಮಾಡುವಂತೆ ಸಾರ್ವಜನಿಕರ ಒತ್ತಾಯದಂತೆ ತಾಲೂಕ ಮಟ್ಟದಲ್ಲಿ ಕಮದಾಯ ಅಧಿಕಾರಿಗಳು ಸ್ಥಳ ತನಿಖೆ ನಡೆಸಿದ್ದಾರೆ. ಅದನ್ನು ಶೀಘ್ರವಾಗಿ ಮಾಡುವಂತೆ ಸದಸ್ಯರಾದ ಯತೀಶ್ ದೇವ ಹಾಗೂ ಹರೀಶ್ ನಾಯ್ಕ ಆಗ್ರಹಿಸಿದರು.


ಉಪಾಧ್ಯಕ್ಷ ಅಶೋಕ್ ನಾಯ್ಕ, ಸದಸ್ಯರಾದ ವಸಂತ ಶ್ರೀದುರ್ಗಾ, ದೇವಕಿ, ಸುಬ್ರಹ್ಮಣ್ಯ ಬಲ್ಯಾಯ, ಶ್ರೀನಿವಾಸ ರೈ, ನಳಿನಿ ಕುಮಾರಿ, ರಶೀದಾ ಬಿ., ರಕ್ಷಿತಾ, ನೇಮಾಕ್ಷ ಸುವರ್ಣ, ಕಲಾವತಿ, ಕಸ್ತೂರಿ ರೇವತಿ ಬಿ.ಎಸ್ ಸಭೆಯಲ್ಲಿ ಉಪಸ್ಥಿತರಿದ್ದರು. ಪಿಡಿಓ ನಾಗೇಶ್ ಎಂ ಸ್ವಾಗತಿಸಿದರು. ಕಾರ್ಯದರ್ಶಿ ಮೋನಪ್ಪ ವಂದಿಸಿದರು. ಸಿಬಂದಿಗಳು ಸಹಕರಿಸಿದರು.

LEAVE A REPLY

Please enter your comment!
Please enter your name here