ಪುತ್ತೂರು: ಅಕ್ರಮವಾಗಿ ಕುಡಿಯುವ ನೀರಿನ ನಳ್ಳಿ ಸಂಪರ್ಕ ಹಾಗೂ ಎರಡೆರಡು ನಳ್ಳಿ ಸಂಪರ್ಕ ಹೊಂದಿರುವ ಮನೆಗಳಿಗೆ ಧಿಡೀರ್ ದಾಳಿ ನಡೆಸಿದ ಕೆಯ್ಯೂರು ಗ್ರಾಪಂ ಅಧಿಕಾರಿ ತಂಡವು ಮನೆಯವರಿಗೆ ಸೂಚನೆ ನೀಡಿದ್ದು ಅಲ್ಲದೆ 1 ವಾರದೊಳಗೆ ಅಕ್ರಮ ನಳ್ಳಿ ಸಂಪರ್ಕ ಮತ್ತು ಎರಡೆರಡು ನಳ್ಳಿ ಸಂಪರ್ಕ ಇರುವವರು ಒಂದನ್ನು ಕಡಿತ ಮಾಡುವಂತೆ ಸೂಚನೆ ನೀಡಿದ್ದಾರೆ. ಕೆಯ್ಯೂರು ಗ್ರಾಪಂ ವ್ಯಾಪ್ತಿಯ ಜನತಾ ಕಾಲನಿಗೆ ಭೇಟಿ ನೀಡಿದ ಗ್ರಾಪಂ ತಂಡವು ಕೆಲವು ಮನೆಗಳಲ್ಲಿ ಪಂಚಾಯತ್ನ ನಳ್ಳಿ ಹಾಗೂ ಹೊಸತಾಗಿ ಜೆಜೆಎಂನಿಂದ ನಿರ್ಮಿಸಿದ ನಳ್ಳಿ ಸೇರಿದಂತೆ ಎರಡೆರಡು ನಳ್ಳಿ ಸಂಪರ್ಕ ಇರುವುದನ್ನು ಪತ್ತೆ ಹಚ್ಚಿದೆ. ಇದಲ್ಲದೆ ಕೆಲವು ಮನೆಗಳಲ್ಲಿ ಅಕ್ರಮ ನಳ್ಳಿ ಸಂಪರ್ಕ ಇರುವುದನ್ನು ತಿಳಿದು ಈ ರೀತಿ ಯಾರ್ಯಾರು ಎರಡೆರಡು ನಳ್ಳಿ ಸಂಪರ್ಕ ಹೊಂದಿದ್ದಾರೋ ಅವರು ಒಂದು ನಳ್ಳಿ ಸಂಪರ್ಕವನ್ನು ಕಡ್ಡಾಯವಾಗಿ ತೆಗೆಯುವುದು ಇದಕ್ಕೆ ಒಂದು ವಾರದ ಗಡುವನ್ನು ಕೊಡಲಾಯಿತು. ನೀರಿನ ಬಿಲ್ ಪಾವತಿ ಮಾಡದ ಮನೆಯವರಿಗೆ ನೋಟೀಸ್ ನೀಡಿ ಕೂಡಲೇ ಬಿಲ್ ಪಾವತಿ ಮಾಡಬೇಕು ಇಲ್ಲದಿದ್ದರೆ ಸಂಪರ್ಕ ಕಡಿತ ಮಾಡುತ್ತೇವೆ ಎಂದು ತಿಳಿಸಿದರು. ಕಾಲನಿಯ ಸುಮಾರು 30 ಕ್ಕೂ ಅಧಿಕ ಮನೆಗೆಳಿಗೆ ನೀಡಿ ಪರಿಶೀಲನೆ ಮಾಡಲಾಗಿದೆ.
ತಂಡದಲ್ಲಿ ಗ್ರಾಪಂ ಅಭಿವೃದ್ಧಿ ಅಧಿಕಾರಿ ನಮಿತಾ ಎ.ಕೆ, ಕಾರ್ಯದರ್ಶಿ ಸುರೇಂದ್ರ ರೈ ಇಳಂತಾಜೆ, ಅಧ್ಯಕ್ಷ ಶರತ್ ಕುಮಾರ್ ಮಾಡಾವು, ಉಪಾಧ್ಯಕ್ಷೆ ಸುಮಿತ್ರಾ ಪಲ್ಲತ್ತಡ್ಕ, ಸದಸ್ಯರಾದ ಜಯಂತ ಪೂಜಾರಿ ಕೆಂಗುಡೇಲು, ಜಯಂತಿ ಎಸ್.ಭಂಡಾರಿ, ಸಿಬ್ಬಂದಿ ಧರ್ಮಣ್ಣ, ಪಂಪುಚಾಲಕ ಜನಾರ್ದನ ಉಪಸ್ಥಿತರಿದ್ದರು.
‘ ಅಕ್ರಮವಾಗಿ ಹಾಗೂ ಎರಡೆರಡು ನಳ್ಳಿ ಸಂಪರ್ಕ ಹೊಂದಿದವರು ವಾರದೊಳಗೆ ಒಂದು ನಳ್ಳಿ ಸಂಪರ್ಕವನ್ನು ತೆರವು ಮಾಡಬೇಕು, ಬಿಲ್ ಪಾವತಿ ಮಾಡದವರು ಕೂಡಲೇ ಮಾಡಬೇಕು ಇಲ್ಲದಿದ್ದರೆ ನೀರಿನ ಸಂಪರ್ಕ ಕಡಿತ ಮಾಡಲಾಗುವುದು.’
-ಶರತ್ ಕುಮಾರ್ ಮಾಡಾವು, ಅಧ್ಯಕ್ಷರು ಕೆಯ್ಯೂರು ಗ್ರಾಪಂ