ಕಾವು ಪ್ರಾ.ಕೃ.ಪ.ಸಹಕಾರ ಸಂಘದಲ್ಲಿ ಅಂಚೆ ಜನಸಂಪರ್ಕ ಅಭಿಯಾನ-ಆಧಾರ್ ಮೇಳ

0

ಕಾವು: ಜಿಲ್ಲಾ ಪ್ರಶಸ್ತಿ ಪುರಸ್ಕೃತ ಕಾವು ನನ್ಯ ತುಡರ್ ಯುವಕ ಮಂಡಲದ ನೇತೃತ್ವದಲ್ಲಿ ಕಾವು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಶ್ರಯದಲ್ಲಿ ಭಾರತೀಯ ಅಂಚೆ ಇಲಾಖೆ ಪುತ್ತೂರು ವಿಭಾಗದ ವತಿಯಿಂದ ಅಂಚೆ ಇಲಾಖೆ ಸೌಲಭ್ಯದ ಮಾಹಿತಿ ಮತ್ತು ಅಂಚೆ ಜನಸಂಪರ್ಕ ಅಭಿಯಾನ ಹಾಗೂ ಆಧಾರ್ ನೋಂದಣಿ-ತಿದ್ದುಪಡಿ ಸೇವೆಯ ಒಂದು ದಿನದ ಆಧಾರ್ ಮೇಳ ಕಾರ್ಯಕ್ರಮವು ಅ.6ರಂದು ಕಾವು ಸಹಕಾರ ಸಂಘದ ಶಿವಸದನ ಸಭಾಭವನದಲ್ಲಿ ನಡೆಯಿತು.

ಗ್ರಾಮೀಣ ಜನರಿಗೆ ಆಧಾರ ಮೇಳ ಹೆಚ್ಚು ಪ್ರಯೋಜನ-ನನ್ಯ
ಆಧಾರ್ ಮೇಳವನ್ನು ದೀಪಬೆಳಗಿಸಿ ಉದ್ಘಾಟಿಸಿದ ಕಾವು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ನನ್ಯ ಅಚ್ಚುತ ಮೂಡೆತ್ತಾಯರವರು ಮಾತನಾಡಿ ಒಂದು ಸಂದರ್ಭದಲ್ಲಿ ಅಂಚೆ ಇಲಾಖೆಯು ನಿಂತುಹೋಗುವ ಸಮಯದಲ್ಲಿ ಕೇಂದ್ರಸರಕಾರವು ಹಲವಾರು ಯೋಜನೆಗಳ ಮೂಲಕ ಅಂಚೆಇಲಾಖೆಯನ್ನು ಬಲಪಡಿಸುವ ಕೆಲಸವನ್ನು ಮಾಡಿದೆ. ಅಂಚೆ ಜನಸಂಪರ್ಕ ಅಭಿಯಾನದ ಮೂಲಕ ಅಂಚೆ ಇಲಾಖೆಯ ಸೌಲಭ್ಯ ಮತ್ತು ಸರ್ಕಾರದ ಯೋಜನೆಯನ್ನು ಗ್ರಾಮೀಣ ಜನರಿಗೆ ತಲುಪಿಸುತ್ತಿದೆ, ಪ್ರಸ್ತುತ ದಿನದಲ್ಲಿ ಅತ್ಯಗತ್ಯವಾಗಿ ಬೇಕಾದ ಆಧಾರ್ ಕಾರ್ಡ್‌ನ ಸಮಸ್ಯೆಯನ್ನು ಆಧಾರ್ ಮೇಳದ ಮೂಲಕ ಸರಿಪಡಿಸಿ ಗ್ರಾಮೀಣ ಜನರಿಗೆ ಹೆಚ್ಚು ಪ್ರಯೋಜನವಾಗಿದೆ, ಇಂತಹ ಕಾರ್ಯಕ್ರಮಗಳಿಗೆ ಸಹಕಾರ ಸಂಘವು ಇನ್ನು ಮುಂದೆಯೂ ಸಹಕಾರವನ್ನು ನೀಡಲಿದೆ ಎಂದರು.

ಸಮಾಜಮುಖಿ ಕೆಲಸಕ್ಕೆ ಸದಾ ಬೆಂಬಲ-ಸಂತೋಷ್ ಮಣಿಯಾಣಿ
ಮುಖ್ಯ ಅತಿಥಿಯಾಗಿದ್ದ ಅರಿಯಡ್ಕ ಗ್ರಾ.ಪಂ ಅಧ್ಯಕ್ಷ ಸಂತೋಷ್ ಮಣಿಯಾಣಿ ಮಾತನಾಡಿ ಆಧಾರ್‌ನಲ್ಲಿರುವ ಕೆಲವೊಂದು ಸಣ್ಣ ಸಮಸ್ಯೆಯಿಂದ ಜನರು ಸರ್ಕಾರದ ಸೌಲಭ್ಯದಿಂದ ವಂಚಿತರಾಗಬೇಕಾಗುತ್ತದೆ, ಅಂತಹ ಸಮಸ್ಯೆಯನ್ನು ಸರಿಪಡಿಸಲು ತುಡರ್ ಯುವಕ ಮಂಡಲದವರು ಅಂಚೆ ಇಲಾಖೆಯ ಮೂಲಕ ಆಧಾರ್ ಮೇಳವನ್ನು ನಡೆಸಿರುವುದಕ್ಕೆ ಗ್ರಾ.ಪಂ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ, ಜನರಿಗೆ ಅನುಕೂಲವಾಗುವ ಎಲ್ಲಾ ಸಮಾಜಮುಖಿ ಕೆಲಸಕ್ಕೆ ನಮ್ಮ ಬೆಂಬಲ ಸದಾ ಇದೆ ಎಂದು ಹೇಳಿದರು.

ಗ್ರಾಮೀಣ ಜನರು ಆಧಾರ್‌ಮೇಳವನ್ನು ಸದುಪಯೋಗಪಡಿಸಿಕೊಳ್ಳಿ-ಕೇಶವಮೂರ್ತಿ
ಮುಖ್ಯ ಅತಿಥಿಯಾಗಿದ್ದ ಕಾವು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೇಶವಮೂರ್ತಿ ಪಿ.ಜಿಯವರು ಮಾತನಾಡಿ ತುಡರ್ ಯುವಕ ಮಂಡಲವು ಈ ಹಿಂದೆಯೂ ನಮ್ಮ ಸಂಘದಲ್ಲಿ ಆಧಾರ್ ಮೇಳವನ್ನು ಆಯೋಜಿಸಿ ಹೆಚ್ಚು ಜನರಿಗೆ ಪ್ರಯೋಜನವಾಗಿತ್ತು, ಇದೀಗ ಮತ್ತೆ ಅಂಚೆ ಇಲಾಖೆಯ ಮೂಲಕ ಆಧಾರ್ ಮೇಳವನ್ನು ಅಯೋಜಿಸಿದ್ದು ಗ್ರಾಮೀಣ ಜನರು ಇಂತಹ ಕಾರ್ಯಕ್ರಮವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಹೇಳಿದರು.

ಸುಳ್ಯ ಉಪವಿಭಾಗದ ಅಂಚೆ ಉಪನಿರೀಕ್ಷಕ ಪ್ರದೀಪ್ ಮತ್ತು ಪುತ್ತೂರು ವಿಭಾಗದ ಮಾರ್ಕೆಟಿಂಗ್ ಎಕ್ಸಿಕ್ಯೂಟೀವ್ ಗುರುಪ್ರಸಾದ್‌ರವರು ಅಂಚೆ ಜನ ಸಂಪರ್ಕ ಅಭಿಯಾನ ಮತ್ತು ಅಂಚೆ ಇಲಾಖೆ ಸೌಲಭ್ಯದ ಬಗ್ಗೆ ಮಾಹಿತಿ ನೀಡಿದರು.
ಕಾವು ಉಪ ಅಂಚೆಪಾಲಕ ಶಿವರಾಮ ಕೆ. ರವರು ಮಾತನಾಡಿ ಗ್ರಾಮೀಣ ಭಾಗದಲ್ಲಿ ಆಧಾರ್ ಮೇಳವನ್ನು ಆಯೋಜನೆ ಮಾಡಲು ಮುಂದಾಳತ್ವ ವಹಿಸಿದ ತುಡರ್ ಯುವಕ ಮಂಡಲ ಮತ್ತು ಸಹಕರಿಸಿದ ಕಾವು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಅಭಿನಂದನೆ ಸಲ್ಲಿಸಿದರು.
ಸಭಾಧ್ಯಕ್ಷತೆ ವಹಿಸಿದ್ದ ತುಡರ್ ಯುವಕ ಮಂಡಲದ ಅಧ್ಯಕ್ಷ ಜಗದೀಶ ನಾಯ್ಕ ಆಚಾರಿಮೂಲೆಯವರು ವಂದಿಸಿದರು.

ಪ್ರೀತಿಕಾ ಚಾಕೋಟೆ ಪ್ರಾರ್ಥಿಸಿದರು. ತುಡರ್ ಭಜನಾ ಸಂಘದ ಅಧ್ಯಕ್ಷ ಸಂಕಪ್ಪ ಪೂಜಾರಿ ಚಾಕೋಟೆ ಸ್ವಾಗತಿಸಿದರು. ಮಾಜಿ ಅಧ್ಯಕ್ಷ ಸುನೀಲ್ ನಿಧಿಮುಂಡ ಕಾರ್ಯಕ್ರಮ ನಿರ್ವಹಿಸಿದರು.
ಒಂದು ದಿನದ ಆಧಾರ್‌ಮೇಳದಲ್ಲಿ ಹೊಸ ನೋಂದಣಿ, ಮೊಬೈಲ್ ನಂಬರ್ ಸೇರ್ಪಡೆ/ಬದಲಾವಣೆ, ಬಯೋಮೆಟ್ರಿಕ್(ಬೆರಳಚ್ಚು)ಪರಿಷ್ಕರಣೆ, ಹೆಸರು ವಿಳಾಸ ತಿದ್ದುಪಡಿ, ಜನ್ಮದಿನಾಂಕ ತಿದ್ದುಪಡಿ ಸೇವೆಗಳು ನಡೆಯಿತು. ಸುಮಾರು 100 ಜನರು ಟೋಕನ್ ತೆಗೆದು ಪ್ರಯೋಜನ ಪಡೆದುಕೊಂಡರು. ಅಂಚೆ ಇಲಾಖೆಯ ಸಿಬ್ಬಂದಿಗಳು, ಸಹಕಾರ ಸಂಘದ ಸಿಬ್ಬಂದಿಗಳು, ತುಡರ್ ಯುವಕ ಮಂಡಲದ ಸದಸ್ಯರು ಸಹಕರಿಸಿದರು.

LEAVE A REPLY

Please enter your comment!
Please enter your name here