ಕಣಿಯಾರುಮಲೆ ಅರಣ್ಯ ಪ್ರದೇಶದಲ್ಲಿ ಆತಂಕ ಸೃಷ್ಟಿಸುತ್ತಿರುವ ಒಂಟಿ ಚಿರತೆ

0

ಚಿರತೆ ದಾಳಿಗೆ ಬಲಿಯಾಗುತ್ತಿವೆ ದನ, ಕರು, ನಾಯಿ, ಮಂಗಗಳು…!

ಬರಹ: ಶಿಶೇ ಕಜೆಮಾರ್


ಪುತ್ತೂರು: ಆ ಕಾಡಿನಂಚಿನಲ್ಲಿರುವ ಮನೆಯವರಿಗೆ ರಾತ್ರಿಯಾದರೆ ಭಯ ಶುರುವಿಟ್ಟುಕೊಳ್ಳುತ್ತದೆ. ಒಂದು ಕಡೆಯಲ್ಲಿ ಕಾಡುಕೋಣಗಳ ಉಪದ್ರವಾದರೆ ಇನ್ನೊಂದು ಕಡೆಯಲ್ಲಿ ಚಿರತೆಯ ಕಾಟ. ಹೌದು ಇದು ಕೆಯ್ಯೂರು ಮತ್ತು ಕೊಳ್ತಿಗೆ ಗ್ರಾಮಕ್ಕೆ ಸಂಬಂಧಪಟ್ಟ ಕಣಿಯಾರು ಮಲೆ ಮೀಸಲು ಅರಣ್ಯ ಪ್ರದೇಶದಲ್ಲಿ ಮನೆ ಕಟ್ಟಿಕೊಂಡು ವಾಸ ಮಾಡುತ್ತಿರುವವರ ನಿತ್ಯದ ಕಥೆಯಾಗಿದೆ. ಮಂಗಳೂರು ಅರಣ್ಯ ವಿಭಾಗ ಪುತ್ತೂರು ವಲಯಕ್ಕೆ ಸೇರಿರುವ ಸುಮಾರು 1284.50 ಹೆಕ್ಟೆರ್ ವಿಸ್ತ್ರೀರ್ಣದ ಕಣಿಯಾರುಮಲೆ ಮೀಸಲು ಅರಣ್ಯ ಪ್ರದೇಶದಲ್ಲಿ ಕಳೆದೊಂದು ವರ್ಷದಿಂದ ಒಂಟಿ ಚಿರತೆಯೊಂದರ ಅಟ್ಟಹಾಸ ಶುರುವಾಗಿದೆ. ಸುಮಾರು 30 ಕ್ಕೂ ಅಧಿಕ ಮನೆಗಳು ಈ ಅರಣ್ಯ ಪ್ರದೇಶದ ಆಸುಪಾಸಿನಲ್ಲಿದ್ದು ಈಗಾಗಲೇ ಈ ಚಿರತೆಯು ಕೆಲವೊಂದು ಮನೆಯ ಅಂಗಳಕ್ಕೆ ಹೆಜ್ಜೆ ಇಟ್ಟಿದ್ದು ಸಾಕು ನಾಯಿಗಳ ಮೇಲೆ ದಾಳಿ ಮಾಡಿದೆ. ಇದಲ್ಲದೆ ದಿನದ ಹಿಂದೆ ಗುಡ್ಡದಲ್ಲಿದ್ದ ದನದ ಕರುವೊಂದನ್ನು ತಿಂದು ರಬ್ಬರ್ ಮರಕ್ಕೆ ನೇತು ಹಾಕಿದ ಘಟನೆಯೂ ನಡೆದಿದೆ. ಈ ಭಾಗದ ಜನರು ಹೇಳುವ ಪ್ರಕಾರ ಇದೊಂದು ಒಂಟಿ ಚಿರತೆಯಾಗಿದ್ದು ಕಣಿಯಾರು ಮಲೆ ಪ್ರದೇಶದಲ್ಲಿಯೇ ಅಡ್ಡಾಡುತ್ತಿದೆ ಎನ್ನುತ್ತಿದ್ದಾರೆ. ಇಷ್ಟರ ತನಕ ಜನರಿಗೆ ಯಾವುದೇ ತೊಂದರೆ ಮಾಡದಿದ್ದರೂ ಹಲವು ಮಂದಿ ಈ ಚಿರತೆಯನ್ನು ನೋಡಿ ಭಯಗೊಂಡಿದ್ದು ಮಾತ್ರ ಸತ್ಯ.


ಒಂಟಿ ಚಿರತೆಯ ಅಟ್ಟಹಾಸ: ಚಿರತೆ ಮರಿಯೊಂದು ಇಲ್ಲಿ ಬಂದು ಇದೀಗ ದೊಡ್ಡದಾಗಿದೆ ಎಂದು ಹೇಳುವ ಇಲ್ಲಿನ ಸ್ಥಳೀಯರು, ಮೊದಲಿಗೆ ಸಣ್ಣಪುಟ್ಟ ನಾಯಿಗಳ ಮೇಲೆ ದಾಳಿ ಮಾಡುತ್ತಿದ್ದ ಮರಿ ಚಿರತೆ ಇದೀಗ ಬೆಳೆದು ದೊಡ್ಡದಾಗಿದೆ ಎನ್ನುತ್ತಾರೆ. ಸಂಜೆಯ ಹೊತ್ತಿಗೆ ಈ ಚಿರತೆಯನ್ನು ಹಲವು ಮಂದಿ ನೋಡಿದ್ದಾರೆ. ಇಳಂತಾಜೆ ಈ ಭಾಗದಲ್ಲಿ ಕೆಲವು ಜನರ ಮನೆಯ ಅಂಗಳಕ್ಕೂ ಇದು ಕಾಲಿಟ್ಟಿದೆ. ಕೆಲವು ತಿಂಗಳ ಹಿಂದೆ ಇಳಂತಾಜೆಯ ಕೃಷಿಕರೊಬ್ಬರ ಮನೆಯ ಅಂಗಳಕ್ಕೆ ಬಂದ ಚಿರತೆ ಸಾಕು ನಾಯಿಯ ಮೇಲೆ ದಾಳಿ ಮಾಡಿ ಗಾಯಗೊಳಿಸಿದೆ. ಆದರೆ ಇದುವರೇಗೆ ಚಿರತೆಯಿಂದ ಜನರಿಗೆ ಯಾವುದೇ ತೊಂದರೆ ಉಂಟಾಗಿಲ್ಲ.


ಮಂಗ, ಜಿಂಕೆಗಳು ಕಣ್ಮರೆಯಾಗುತ್ತಿವೆ: ಕಣಿಯಾರು ಮಲೆ ಮೀಸಲು ಅರಣ್ಯ ಪ್ರದೇಶದಲ್ಲಿ ಕಾಡುಕೋಣ, ಕಾಡೆಮ್ಮೆ, ಕಡವೆ, ಜಿಂಕೆ,ಮಂಗಗಳು ಕೂಡ ಅಧಿಕ ಸಂಖ್ಯೆಯಲ್ಲಿ ಇವೆ. ಸುಮಾರು 10 ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿದ್ದ ಜಿಂಕೆಗಳು ಕಳೆದ ಕೆಲವು ತಿಂಗಳುಗಳಿಂದ ಕಾಣುತ್ತಿಲ್ಲ ಎನ್ನುತ್ತಾರೆ ಇಲ್ಲಿನ ಕೃಷಿಕರೊಬ್ಬರು. ಅದೇ ರೀತಿ ಮಂಗಗಳು ಹಿಂಡುಹಿಂಡಾಗಿ ಬರುತ್ತಿದ್ದವು ಅವುಗಳು ಕೂಡ ಕಡಿಮೆಯಾಗಿವೆ ಎನ್ನುತ್ತಾರೆ. ಚಿರತೆಯ ಹಾವಳಿಯಿಂದ ಜಿಂಕೆ, ಕಡವೆ, ಮಂಗಗಳು ಅರಣ್ಯ ಬಿಟ್ಟು ಹೋಗಿರಬಹುದೇ ಅಥವಾ ಚಿರತೆಯ ಬಾಯಿಗೆ ಆಹಾರವಾಗಿರಬಹುದೇ ಎನ್ನುವುದು ಸ್ಥಳೀಯರ ಪ್ರಶ್ನೆಯಾಗಿದೆ.


ಕಾಡುಕೋಣಗಳ ಹಾವಳಿ: ಸುಮಾರು 12 ಕ್ಕೂ ಅಧಿಕ ಕಾಡುಕೋಣ,ಕಾಡೆಮ್ಮೆಗಳು (ಕಾಟಿ) ಕಣಿಯಾರುಮಲೆ ಅರಣ್ಯ ಪ್ರದೇಶದಲ್ಲಿವೆ. ರಾತ್ರಿ ವೇಳೆ ತೋಟ, ಗದ್ದೆಗೆ ನುಗ್ಗುವ ಇವುಗಳು ಕೃಷಿಯನ್ನು ಹಾಳು ಮಾಡುತ್ತಿವೆ. ಇವುಗಳು ಬರದಂತೆ ತಡೆಯುವುದೇ ದೊಡ್ಡ ಸಾಹಸ ಎನ್ನುತ್ತಾರೆ ಇಲ್ಲಿಯವರು. ಸಂಜೆ ವೇಳೆಗಾಗಲೇ ರಸ್ತೆ ಬದಿಯಲ್ಲಿ ಕಾಣಿಸಿಕೊಳ್ಳುವ ಕಾಟಿಗಳು ಇದುವರೆಗೆ ಮನುಷ್ಯರಿಗೆ ತೊಂದರೆ ನೀಡಿಲ್ಲ ಆದರೆ ಕೃಷಿಯನ್ನು ಹಾಳು ಮಾಡುತ್ತಿವೆ.


ಈ ಗುಡ್ಡಪ್ರದೇಶದಲ್ಲಿವೆ 50 ಕ್ಕೂ ಹೆಚ್ಚು ಬೀಡಾಡಿ ದನಗಳು
ಕಣಿಯಾರುಮಲೆ ಮೀಸಲು ಅರಣ್ಯದ ಒಂದು ಭಾಗದಲ್ಲಿ ಸುಮಾರು 50 ಕ್ಕೂ ಅಧಿಕ ಬೀಡಾಡಿ ದನಗಳು ವಾಸ ಮಾಡುತ್ತಿವೆ ಎಂದಾದರೆ ಯಾರೂ ನಂಬಲಿಕ್ಕೆ ಇಲ್ಲ ಆದರೆ ಇದು ನಿಜ. ಕೆಎಫ್‌ಡಿಸಿಯವರ ರಬ್ಬರ್ ಪ್ಲಾಂಟೇಶನ್‌ಗೆ ಒತ್ತಿಕೊಂಡಿರುವ ಅರಣ್ಯ ಪ್ರದೇಶದಲ್ಲಿ ದನಗಳು ವಾಸ ಮಾಡುತ್ತಿದೆ. ಇಷ್ಟೊಂದು ದನಗಳು ಇಲ್ಲಿಗೆ ಎಲ್ಲಿಂದ ಬಂದವು ಎಂದರೆ ಕೆಲವೊಂದು ದನಗಳು ತಪ್ಪಿಸಿಕೊಂಡು ಬಂದಿದ್ದರೆ ಇನ್ನು ಕೆಲವು ದನ(ಹೋರಿ)ಗಳನ್ನು ಕೆಲವು ಮಂದಿ ಇಲ್ಲಿಗೆ ತಂದು ಬಿಟ್ಟು ಹೋಗುತ್ತಿದ್ದಾರೆ ಎಂಬ ಮಾತು ಕೇಳಿಬರುತ್ತಿವೆ. ಅಂತೂ ಇಲ್ಲೇ ಇದ್ದು ಇಲ್ಲೇ ಕರು ಹಾಕಿದ ದನಗಳೂ ಇಲ್ಲಿವೆ. ಒಂದರ್ಥದಲ್ಲಿ ಕಾಡೆಮ್ಮೆಗಳ ಹಾಗೆ ಕಾಡು ದನಗಳಾಗಿ ಹೋಗಿವೆ ಎನ್ನಬಹುದು. ಇದೇ ಪ್ರದೇಶದಲ್ಲಿ ಅಂದರೆ ಕಣಿಯಾರುಮಲೆಯ ಅರ್ತಿಯಡ್ಕ ಎಂಬಲ್ಲಿ ದನದ ಕರುವೊಂದನ್ನು ರಬ್ಬರ್ ಮರದ ಗೆಲ್ಲುಗಳ ಮಧ್ಯೆ ಸಿಕ್ಕಿಸಿ ಹೋಗಿರುವುದು ಗೋಚರಿಸಿದೆ. ಇದು ಪಕ್ಕಾ ಚಿರತೆಯ ಕೆಲಸವೇ ಆಗಿರುವುದರಿಂದ ಅರಣ್ಯ ಇಲಾಖೆಯವರು ಈ ಭಾಗದ ಜನರಿಗೆ ಎಚ್ಚರಿಕೆಯಿಂದಿರಲು ಸೂಚನೆ ಕೊಟ್ಟಿದ್ದಾರೆ.


ಚಿರತೆಯನ್ನು ಹಿಡಿದು ದಟ್ಟಾರಣ್ಯಕ್ಕೆ ಬಿಡುವುದೇ ಪರಿಹಾರ…
ಕಾಡು ಪ್ರಾಣಿಗಳ ಉಪಟಳಕ್ಕೆ ಮುಖ್ಯ ಕಾರಣವೇ ಮನುಷ್ಯ ಕಾಡನ್ನು ನಾಶ ಮಾಡಿರುವುದು ಹಾಗಂತ ಕಾಡು ಪ್ರಾಣಿಗಳಿಂದ ಮನುಷ್ಯನಿಗೆ ತೊಂದರೆಯಾಗುತ್ತದೆ ಎಂದಾದರೆ ಅವುಗಳನ್ನು ಹತೋಟಿಗೆ ತರುವುದು ಕೂಡ ಅಗತ್ಯ. ಈ ನಿಟ್ಟಿನಲ್ಲಿ ಅರಣ್ಯ ಇಲಾಖೆಗೆ ಮುಖ್ಯ ಜವಾಬ್ದಾರಿ ಇದೆ. ಕಣಿಯಾರುಮಲೆ ಅರಣ್ಯ ಪ್ರದೇಶದಲ್ಲಿ ಓಡಾಡುವ ಚಿರತೆಯಿಂದ ಇದುವರೆಗೆ ಮನುಷ್ಯರಿಗೆ ಯಾವುದೇ ತೊಂದರೆ ಉಂಟಾಗಿಲ್ಲ ಹಾಗಂತ ಬಹಳಷ್ಟು ಮಂದಿ ಚಿರತೆಯನ್ನು ನೋಡಿ ಭಯಗೊಂಡಿದ್ದಾರೆ. ರಾತ್ರಿಯಾದರೆ ರಸ್ತೆಯಲ್ಲಿ ಓಡಾಡಲು ಕೂಡ ಹೆದರುತ್ತಿದ್ದಾರೆ. ಈಗಾಗಲೇ ನಾಯಿ,ದನದ ಮೇಲೆ ದಾಳಿ ಮಾಡಿದ ಚಿರತೆ ಮುಂದೊಂದು ದಿನ ಮನುಷ್ಯರ ಮೇಲೂ ದಾಳಿ ಮಾಡಬಹುದಾಗಿದೆ. ಆದ್ದರಿಂದ ಈ ಚಿರತೆಯನ್ನು ಹಿಡಿದು ಬೇರೆ ಕಾಡಿಗೆ ಬಿಡುವುದೇ ಸೂಕ್ತ ಎನ್ನುವುದು ಈ ಭಾಗದ ಜನರ ಅಭಿಪ್ರಾಯವಾಗಿದೆ. ಈ ಬಗ್ಗೆ ಅರಣ್ಯ ಇಲಾಖೆ ಕ್ರಮ ಕೈಗೊಳ್ಳಬೇಕಾಗಿದೆ.


ಚಿರತೆ ಕಂಡು ಬಂದರೆ ಬೋನು ಇಟ್ಟು ಹಿಡಿಯುವ ಪ್ರಯತ್ನ ಮಾಡುತ್ತೇವೆ
` ಕಣಿಯಾರುಮಲೆ ಮೀಸಲು ಅರಣ್ಯ ಪ್ರದೇಶದಲ್ಲಿ ದನದ ಕರುವನ್ನು ಕೊಂದಿರುವುದು ಚಿರತೆಯೇ ಆಗಿದ್ದು ಈ ಬಗ್ಗೆ ನಮ್ಮ ಇಲಾಖಾ ಸಿಬ್ಬಂದಿಗಳಿಗೆ ಎಚ್ಚರಿಕೆಯಿಂದ ಇರಲು ತಿಳಿಸಿದ್ದೇವೆ. ಅದೇ ರೀತಿ ರಬ್ಬರ್ ಟ್ಯಾಪರ್‌ಗೂ ಸೂಚನೆ ನೀಡಿದ್ದೇವೆ. ಘಟನೆಯ ಬಳಿಕ ಚಿರತೆ ಬಗ್ಗೆ ಯಾರಿಗೂ ಸುಳಿವು ಸಿಕ್ಕಿಲ್ಲ. ಚಿರತೆ ಕಂಡು ಬಂದರೆ ಬೋನು ಇಟ್ಟು ಅದನ್ನು ಹಿಡಿದು ದಟ್ಟ ಅರಣ್ಯ ಪ್ರದೇಶಕ್ಕೆ ಬಿಡುವ ವ್ಯವಸ್ಥೆ ಮಾಡುತ್ತೇವೆ. ಜನರು ಭಯಪಡುವ ಅಗತ್ಯವಿಲ್ಲ.’
ಕುಮಾರಸ್ವಾಮಿ, ಉಪವಲಯ ಅರಣ್ಯಾಧಿಕಾರಿ, ನರಿಮೊಗರು ಉಪವಲಯ


ಇದೊಂದು ಒಂಟಿ ಚಿರತೆ..
` ಇದೊಂದು ಒಂಟಿ ಚಿರತೆ ಇರಬೇಕು ಅನ್ನಿಸುತ್ತೆ, ನಾಲ್ಕು ತಿಂಗಳ ಹಿಂದೆ ಸಂಜೆ 7.30 ಹೊತ್ತಿಗೆ ನಮ್ಮ ಮನೆಯ ಅಂಗಳಕ್ಕೆ ಬಂದಿದೆ. ಚಿರತೆಯ ಹೆಜ್ಜೆ ಗುರುತನ್ನು ಬಹಳಷ್ಟು ಸಲ ನೋಡಿದ್ದೇವೆ. ಮನುಷ್ಯರಿಗೆ ಇದುವರೆಗೆ ಉಪದ್ರ ಕೊಟ್ಟಿಲ್ಲ. ಕಾಡಲ್ಲಿದ್ದ ಮಂಗಗಳು ಕಡಿಮೆಯಾಗಿವೆ. ಸುಮಾರು ಜಿಂಕೆಗಳಿದ್ದವು ಅವುಗಳೂ ಕಾಣುತ್ತಿಲ್ಲ. ರಾತ್ರಿಯಾದರೆ ಭಯ ಶುರುವಾಗುತ್ತದೆ. ಕಾಡುಕೋಣ, ಕಾಡೆಮ್ಮೆಗಳು ಕೃಷಿಯನ್ನು ಹಾಳು ಮಾಡುತ್ತಿವೆ.’
ಇಳಂತಾಜೆ ಸುಬ್ಬಣ್ಣ ಭಟ್, ಪ್ರಗತಿಪರ ಕೃಷಿಕರು


ಕಾಡಲ್ಲಿವೆ 50 ಕ್ಕೂ ಹೆಚ್ಚು ಬೀಡಾಡಿ ದನಗಳು
` ಕಣಿಯಾರುಮಲೆ ಕೆಎಫ್‌ಡಿಸಿ ರಬ್ಬರ್ ಪ್ಲಾಂಟೇಶನ್‌ನ ಹಾಲು ಸಂಗ್ರಹಣ ಕೇಂದ್ರದ ಆಸುಪಾಸಿನಲ್ಲೇ ದನದ ಕರುವನ್ನು ಕೊಂದು ಅರ್ಧ ತಿಂದು ರಬ್ಬರ್ ಮರಕ್ಕೆ ನೇತಾಡಿಸಿದ್ದನ್ನು ನೋಡಿದರೆ ಇದು ಚಿರತೆ ಎಂಬುದರಲ್ಲಿ ಯಾವುದೇ ಅನುಮಾನ ಇಲ್ಲ. ಈ ಪ್ರದೇಶದಲ್ಲಿ ಸುಮಾರು ೫೦ ಕ್ಕೂ ಅಧಿಕ ಬೀಡಾಡಿ ದನಗಳು ವಾಸ ಮಾಡುತ್ತಿವೆ. ಚಿರತೆಯ ಬಗ್ಗೆ ಅರಣ್ಯ ಇಲಾಖೆಯವರು ಕ್ರಮ ಕೈಗೊಳ್ಳಬೇಕಾಗಿದೆ. ಇದುವರೆಗೆ ಚಿರತೆಯಿಂದ ಜನರಿಗೆ ಯಾವುದೇ ತೊಂದರೆಯಾಗಿಲ್ಲ ಆದ್ದರಿಂದ ಜನರು ಭಯಪಡುವ ಅಗತ್ಯವಿಲ್ಲ.’
ಪವನ್ ಡಿ.ಜಿ ದೊಡ್ಡಮನೆ, ಸದಸ್ಯರು ಕೊಳ್ತಿಗೆ ಗ್ರಾಪಂ

LEAVE A REPLY

Please enter your comment!
Please enter your name here