ಪುತ್ತೂರು:1964ರಲ್ಲಿ ಮುಂಬೈನ ಸಾಂದೀಪನಿ ಆಶ್ರಮದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯಂದು ಸ್ಥಾಪನೆಗೊಂಡ ವಿಹಿಂಪ ಧರ್ಮ ಸಂರಕ್ಷಣೆಯ ಸ್ಪಷ್ಟ ನಿಲುವಿನೊಂದಿಗೆ ಜನ್ಮ ತಾಳಿದ್ದಲ್ಲದೆ, ಧರ್ಮ ಕಾರ್ಯಗಳಿಗೆ ಧಕ್ಕೆ, ಆಕ್ರಮಣಗಳಾದಾಗ ಯೋಧರಂತೆ ಶೌರ್ಯ ಮೆರೆದ ಇತಿಹಾಸಗಳಿವೆ ಎಂದು ಹಿಂದು ಶೌರ್ಯ ಜಾಗರಣ ರಥಯಾತ್ರೆಯ ಸ್ವಾಗತ ಸಮಿತಿ ಅಧ್ಯಕ್ಷ ಕಿಶೋರ್ ಬೊಟ್ಯಾಡಿ ಹೇಳಿದರು.
ವಿಶ್ವ ಹಿಂದೂ ಪರಿಷದ್-ಬಜರಂಗದಳ ರಾಷ್ಟ್ರೀಯ ಸ್ವಯಂಸೇವಕ ಸಂಘದ ವಿವಿಧ ಕ್ಷೇತ್ರಗಳಲ್ಲೊಂದು.ದೇಶದ ಶ್ರದ್ದಾಕೇಂದ್ರಗಳ ಅಳಿವು ಉಳಿವಿನ ಪ್ರಶ್ನೆಗಳು ಬಂದಾಗ, ಮತಾಂತರ, ಭಯೋತ್ಪಾದನೆ, ಗೋಹತ್ಯೆ, ಹಿಂದೂ ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯ ಹೀಗೆ ನಾನಾ ಸವಾಲುಗಳನ್ನು ಹೋರಾಟದ ಮೂಲಕ ಮೆಟ್ಟಿ ನಿಂತ ಸಂಘಟನೆ ಅದು ವಿಹಿಂಪ, ಬಜರಂಗದಳ. ದೇಶದಲ್ಲಿ ಅಯೋಧ್ಯೆಯ ರಾಮಮಂದಿರದ ಆಂದೋಲನದ ಮೂಲಕ ಇಡೀ ಜಗತ್ತಿಗೆ ವಿಹಿಂಪದ ಶಕ್ತಿ ಏನೆಂಬುದು ಅಂದು ತಿಳಿದಿತ್ತು.ದೇಶದ ಸಾಂಸ್ಕೃತಿಕಕ್ಕೆ ತೊಂದರೆಯಾದಾಗ ಅದನ್ನು ಉಳಿಸುವಲ್ಲಿ ಅನೇಕ ಹೋರಾಟ ಮಾಡಿದ ಇತಿಹಾಸವಿದೆ.ವಿಹಿಂಪದ ಯುವಘಟಕ ಬಜರಂಗದಳ ಸೇವಾ, ಸುರಕ್ಷಾ, ಸಂಸ್ಕಾರ ಎಂಬ ಮೂರು ಧ್ಯೇಯ ವಾಕ್ಯದಡಿಯಲ್ಲಿ ಸೇವೆಯ ಜೊತೆಗೆ ಸಾಮಾಜಿಕ ಕೈಂಕರ್ಯದಲ್ಲಿ ತೊಡಗಿದೆ.ವಿಹಿಂಪ ಬಜರಂಗದಳದ ಹೋರಾಟ, ಆಂದೋಲನದ ಫಲಶ್ರುತಿಯಾಗಿ ಇಂದು ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ನಿರ್ಮಾಣದ ಕೆಲಸಗಳು ಭರದಿಂದ ಸಾಗುತ್ತಿದೆ.ವಿಹಿಂಪ ಸ್ಥಾಪನೆಯಾಗಿ 60ನೇ ವರ್ಷಕ್ಕೆ ಕಾಲಿಡುತ್ತಿರುವ ಈ ಸಂದರ್ಭದಲ್ಲಿ ಹಿಂದೂ ಧರ್ಮದ ವೈಭವಯುತ, ಚರಿತ್ರೆ, ಹೋರಾಟಗಳನ್ನು ತ್ಯಾಗ, ಪರಾಕ್ರಮದ ಗತವೈಭಗಳನ್ನು ಸಮಾಜಕ್ಕೆ ನೆನಪು ಮಾಡುವ ಉದ್ದೇಶದಿಂದ ಬಲಿಷ್ಠ ಸಮಾಜ, ಬಲಿಷ್ಠ ರಾಷ್ಟ್ರ ನಿರ್ಮಾಣದ ಉದ್ದೇಶದಿಂದ ರಾಷ್ಟ್ರಾದ್ಯಂತ ಶೌರ್ಯ ಜಾಗರಣ ರಥಯಾತ್ರೆಯು ಸಾಗುತ್ತಿದ್ದು, ಅ.7ರಂದು ಪುತ್ತೂರಿಗೆ ಶೌರ್ಯ ಜಾಗರಣ ರಥಯಾತ್ರೆ ಮತ್ತು ಹಿಂದು ಶೌರ್ಯ ಸಂಗಮ ಸಮಾವೇಶ ನಡೆಯಲಿದೆ.ಅ.10ಕ್ಕೆ ಉಡುಪಿಯಲ್ಲಿ ಸಮಾರೋಪಗೊಳ್ಳಲಿದೆ ಎಂದು ಅವರು ತಿಳಿಸಿದ್ದಾರೆ.