ಕುಂಬ್ರ: ಬಾಂದಲಪ್ಪು ಜನಸೇವಾ ಸಮಿತಿಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ

0

ಆರೋಗ್ಯ ಕೆಟ್ಟಾಗಲೇ ಆರೋಗ್ಯದ ಬೆಲೆ ತಿಳಿಯುವುದು : ಸಂಜೀವ ಮಠಂದೂರು

ಪುತ್ತೂರು: ನಮ್ಮ ಪೂರ್ವಜರು ಹೇಳಿದ ಆರೋಗ್ಯವೇ ಭಾಗ್ಯ ಎನ್ನುವ ಮಾತು ನೂರಕ್ಕೆ ನೂರು ಸತ್ಯ ಏಕೆಂದರೆ ಆರೋಗ್ಯ ಕೆಟ್ಟು ಹೋದಾಗಲೇ ನಮಗೆ ಆರೋಗ್ಯದ ಬೆಲೆ ಏನು ಎಂಬುದು ಅರ್ಥವಾಗುವುದು, ಯೌವನದಲ್ಲಿ ನಾವು ಆರೋಗ್ಯದ ಬಗ್ಗೆ ಕಾಳಜಿ ವಹಿಸದೇ ಇರುವುದೇ ನಮಗೆ ಮುಂದೆ ಪ್ರಾಯಸ್ಥರಾದ ಆರೋಗ್ಯ ಕೆಡಲು ಮುಖ್ಯ ಕಾರಣವಾಗುತ್ತದೆ. ಆರೋಗ್ಯದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಸಂಘಟನೆಗಳಿಂದ ನಿರಂತರ ಆಗುತ್ತಿರಲಿ ಎಂದು ಪುತ್ತೂರು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಸಂಜೀವ ಮಠಂದೂರು ಹೇಳಿದರು.
ಅವರು ಬಾಂದಲಪ್ಪು ಜನಸೇವಾ ಸಮಿತಿ ಕುಂಬ್ರ ಇದರ ಆಶ್ರಯದಲ್ಲಿ ಎ.ಜೆ ಮೆಡಿಕಲ್ ಕಾಲೇಜು ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ಕುಂಟಿಕಾನ ಮಂಗಳೂರು ಇವರ ಸಹಯೋಗದೊಂದಿಗೆ ನಡೆದ ಅ.8ರಂದು ಕುಂಬ್ರದ ಕರ್ನಾಟಕ ಪಬ್ಲಿಕ್ ಸ್ಕೂಲ್‌ನ ವಠಾರದಲ್ಲಿ ನಡೆದ ಉಚಿತ ಆರೋಗ್ಯ ತಪಾಸಣಾ ಶಿಬಿರದ ಅಧ್ಯಕ್ಷತೆ ವಹಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಇತ್ತೀಚಿನ ದಿನಗಳಲ್ಲಿ ಜನರ ಆರೋಗ್ಯದ ಕಾಳಜಿಯ ದೃಷ್ಟಿಯಿಂದ ಅಲ್ಲಲ್ಲಿ ಆರೋಗ್ಯ ಶಿಬಿರಗಳು ನಡೆಯುತ್ತಿವೆ ಆದರೆ ಇಂತಹ ಆರೋಗ್ಯ ಶಿಬಿರಗಳಿಗೆ ಜನರು ಬರುವ ಪ್ರಮಯವೇ ಬರಬಾರದು ಎಂದಾಗಬೇಕಾದರೆ ನಾವು ನಮ್ಮ ಆರೋಗ್ಯದ ಬಗ್ಗೆ ಸದಾ ಕಾಳಜಿ ವಹಿಸಿಕೊಂಡಿರಬೇಕು ಎಂದು ಮಠಂದೂರು ಹೇಳಿದರು. ಆರೋಗ್ಯಕ್ಕಿಂತ ದೊಡ್ಡದು ಈ ಜಗತ್ತಿನಲ್ಲಿ ಬೇರೆ ಯಾವುದೂ ಇಲ್ಲ ಈ ನಿಟ್ಟಿನಲ್ಲಿ ಕುಂಬ್ರ ಬಾಂದಲಪ್ಪು ಜನಸೇವಾ ಸಮಿತಿಯವರು ಜನರ ಆರೋಗ್ಯ ಕಾಪಾಡುವ ಮೂಲಕ ಸಮಾಜದ ಸ್ವಾಸ್ಥ್ಯ ಕಾಪಾಡುವ ಕೆಲಸವನ್ನು ಮಾಡುತ್ತಿರುವುದು ಶ್ಲಾಘನೀಯ ಎಂದು ಹೇಳಿ ಶುಭ ಹಾರೈಸಿದರು.

ಆರೋಗ್ಯಪೂರ್ಣ ಸಮಾಜ ನಿರ್ಮಾಣ ಸಂಘಟನೆಗಳಿಂದ ಆಗಲಿ: ಅರುಣ್ ಕುಮಾರ್ ಪುತ್ತಿಲ
ಮುಖ್ಯ ಅತಿಥಿಯಾಗಿದ್ದ ಪುತ್ತಿಲ ಪರಿವಾರದ ಮುಖ್ಯಸ್ಥ ಅರುಣ್ ಕುಮಾರ್ ಪುತ್ತಿಲರವರು ಮಾತನಾಡಿ, ಇಂದಿನ ದಿನಗಳಲ್ಲಿ ಬಹಳಷ್ಟು ಮಂದಿ ಆರೋಗ್ಯದ ಸಮಸ್ಯೆಯಿಂದ ಬಳಲುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ಸಮಾಜದ ಕಟ್ಟಕಡೆಯ ವ್ಯಕ್ತಿಯು ಆರೋಗ್ಯದಿಂದಿರಬೇಕು ಎಂಬ ನಿಟ್ಟಿನಲ್ಲಿ ಕೇಂದ್ರ ಸರಕಾರ ಆಯುಷ್ಮಾನ್ ಕಾರ್ಡ್ ಯೋಜನೆಯನ್ನು ಜಾರಿಗೆ ಮಾಡಿದೆ. ಆದರೆ ಕೆಲವೊಂದು ನ್ಯೂನತೆಗಳಿಂದ ಇದರ ಬಗ್ಗೆ ಎಲ್ಲರಿಗೂ ಮಾಹಿತಿ ಸಿಗುತ್ತಿಲ್ಲ, ಆಯುಷ್ಮಾನ ಕಾರ್ಡ್‌ನ ಪ್ರಯೋಜನಗಳನ್ನು ಪಡೆಯಬೇಕಾದರೆ ಮಂಗಳೂರಿನಂತಹ ದೊಡ್ಡಾಸ್ಪತ್ರೆಗಳಿಗೆ ಹೋಗಬೇಕಾಗುತ್ತದೆ ಇದು ಬಡವರಿಗೆ ತುಂಬಾ ಕಷ್ಟ ಆದ್ದರಿಂದ ಆಯುಷ್ಮಾನ್‌ನ ಪ್ರಯೋಜನಗಳು ಪುತ್ತೂರಿನಲ್ಲೇ ಸಿಗುವಂತಾಗಬೇಕು ಈ ನಿಟ್ಟಿನಲ್ಲಿ ಜನಪ್ರತಿನಿಧಿಗಳು ಕಾರ್ಯಪ್ರವೃತ್ತರಾಗಬೇಕು ಎಂದು ಪುತ್ತಿಲ ಕರೆ ನೀಡಿದರು. ಸಮಾಜದ ಸ್ವಾಸ್ಥ್ಯದೊಂದಿಗೆ ಜನರ ಆರೋಗ್ಯ ಕಾಪಾಡುವ ಮೂಲಕ ಆರೋಗ್ಯ ಪೂರ್ಣ ಸಮಾಜ ನಿರ್ಮಾಣದಲ್ಲಿ ಬಾಂದಲಪ್ಪು ಜನಸೇವಾ ಸಮಿತಿಯಂತಹ ಸಂಘಟನೆಗಳು ತೊಡಗಿಕೊಂಡಿರುವುದು ಖುಷಿ ತಂದಿದೆ ಎಂದು ಹೇಳಿ ಶುಭ ಹಾರೈಸಿದರು.

ಅಸಂಕ್ರಾಮಿಕ ರೋಗಗಳು ಜಾಸ್ತಿಯಾಗುತ್ತಿದೆ : ಡಾ.ದೀಪಕ್ ರೈ
ಆಶಯ ನುಡಿಗಳನ್ನಾಡಿದ ಪುತ್ತೂರು ಆರೋಗ್ಯ ಅಧಿಕಾರಿ ಡಾ.ದೀಪಕ್ ರೈಯವರು, ಸೆಪ್ಟೆಂಬರ್‌ನಿಂದ ದಶಂಬರ್ ತನಕದ ಈ ನಾಲ್ಕು ತಿಂಗಳುಗಳಲ್ಲಿ ಜನರ ಆರೋಗ್ಯ ತಪಾಸಣೆ ಮಾಡಿ ದಾಖಲಿಸುವ ಕೆಲಸ ಆರೋಗ್ಯ ಇಲಾಖೆಯಿಂದ ನಡೆಯುತ್ತಿದೆ. ಪ್ರತಿಯೊಬ್ಬರಲ್ಲಿರು ಬೆಲೆ ಕಟ್ಟಲಾಗದ ಸೊತ್ತು ಎಂದರೆ ಅದು ಆರೋಗ್ಯ ಆದ್ದರಿಂದ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಪ್ರತಿಯೊಬ್ಬರ ಕರ್ತವ್ಯ ಆಗಿದೆ. ಇತ್ತೀಚಿನ ದಿನಗಳಲ್ಲಿ ಅಸಂಕ್ರಾಮಿಕ ರೋಗಗಳು ಜಾಸ್ತಿಯಾಗುತ್ತಿರುವುದು ದುರಂತ ಎಂದ ಡಾ.ದೀಪಕ್ ರೈಯವರು, ಸಣ್ಣ ಪ್ರಾಯದಲ್ಲೇ ಹೃದಯಘಾತ ಸಂಭವಿಸುತ್ತಿದೆ. ಈ ನಿಟ್ಟಿನಲ್ಲಿ ಸರಕಾರ ಕೂಡ ಜನರಲ್ಲಿ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವ ಕೆಲಸವನ್ನು ಮಾಡುತ್ತಿದೆ ಎಂದು ಹೇಳಿದ ಅವರು ಆಯುಷ್ಮಾನ್ ಕಾರ್ಡ್ ಬಗ್ಗೆ ಮಾಹಿತಿ ನೀಡಿದರು.

ಕುಂಬ್ರ ಹಲವು ವಿಶೇಷ ಸಂಘಟನೆಗಳ ತವರೂರು: ಶ್ಯಾಮಸುಂದರ ರೈ ಕೊಪ್ಪಳ
ಕುಂಬ್ರ ವರ್ತಕರ ಸಂಘದ ಸ್ಥಾಪಕ ಅಧ್ಯಕ್ಷ ಶ್ಯಾಮಸುಂದರ ರೈ ಕೊಪ್ಪಳ ಮಾತನಾಡಿ, ಕುಂಬ್ರದಲ್ಲಿ ಹಲವು ಬೇರೆ ಬೇರೆ ಸಂಘಟನೆಗಳಿದ್ದು ಇದೊಂದು ಸಂಘಟನೆಗಳ ತವರೂರು ಆಗಿದೆ. ಎಲ್ಲಾ ಸಂಘಟನೆಗಳು ಕೂಡ ತಮ್ಮಿಂದ ಸಾಧ್ಯವಾಗುವ ರೀತಿಯಲ್ಲಿ ಸಮಾಜಸೇವೆ ಮಾಡುತ್ತಿರುವುದು ಶ್ಲಾಘನೀಯ ಎಂದು ಹೇಳಿ ಶುಭ ಹಾರೈಸಿದರು.

ವೇದಿಕೆಯಲ್ಲಿ ಮೈದಾನಿಮೂಲೆ ಜುಮಾ ಮಸೀದಿಯ ಅಧ್ಯಕ್ಷ, ಉದ್ಯಮಿ ಯೂಸುಫ್ ಹಾಜಿ ಕೈಕಾರ, ಕುಂಬ್ರ ಕೆಪಿಎಸ್ ಪ್ರಾಥಮಿಕ ವಿಭಾಗದ ಮುಖ್ಯಗುರು ಶೀಲಾವತಿ, ಒಳಮೊಗ್ರು ಗ್ರಾಪಂ ಉಪಾಧ್ಯಕ್ಷ ಅಶ್ರಫ್ ಉಜಿರೋಡಿ, ಡಾ.ಸುಭಾಷ್ ರೈ ನುಳಿಯಾಲು, ಕೆ.ಎಸ್ ಮೆಡಿಕಲ್ ಕಾಲೇಜಿನ ಡಾ.ಪ್ರಾಂಜಲಿ ರೈ, ಡಾ.ಯಶ್ಮಿ ಎಚ್.ವಿ ಕುಂಬ್ರ, ಎ.ಜೆ ಮಡಿಕಲ್ ಕಾಲೇಜು ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಡಾ.ರಶ್ಮಿ ಮತ್ತು ಡಾ.ಅಮೃತ ಉಪಸ್ಥಿತರಿದ್ದರು. ಬಾಂದಲಪ್ಪು ಜನಸೇವಾ ಸಮಿತಿಯ ಅಧ್ಯಕ್ಷ ರಕ್ಷಿತ್ ರೈ ಮುಗೇರು ಸ್ವಾಗತಿಸಿದರು. ಉಪಾಧ್ಯಕ್ಷ ವಿನೋದ್ ಶೆಟ್ಟಿ ಮುಡಾಲ, ಕೋಶಾಧಿಕಾರಿ ಅಶ್ರಫ್ ಉಜಿರೋಡಿ, ಸಂಘಟನಾ ಕಾರ್ಯದರ್ಶಿ ಶೀನಪ್ಪ ನಾಯ್ಕ ಅತಿಥಿಗಳಿಗೆ ಪುಸ್ತಕ ನೀಡಿ ಸ್ವಾಗತಿಸಿದರು. ವಂಶಿ ಬೊಳ್ಳಾಡಿ ಪ್ರಾರ್ಥಿಸಿದರು. ಸಂಚಾಲಕ ಶಶಿಕಿರಣ್ ರೈ ನೂಜಿಬೈಲು ವಂದಿಸಿದರು. ಶಿಕ್ಷಕ ವಿಶ್ವನಾಥ ಗೌಡ ಬೊಳ್ಳಾಡಿ ಕಾರ್ಯಕ್ರಮ ನಿರೂಪಿಸಿದರು. ಬಾಂದಲಪ್ಪು ಜನಸೇವಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಅಶೋಕ್ ಪೂಜಾರಿ ಬೊಳ್ಳಾಡಿ, ಜತೆ ಕಾರ್ಯದರ್ಶಿ ಶಾರದಾ, ಸಂಘಟನಾ ಕಾರ್ಯದರ್ಶಿ ಮಹಮ್ಮದ್ ಬೊಳ್ಳಾಡಿ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರುಗಳು ಸಹಕರಿಸಿದ್ದರು.

ಆರೋಗ್ಯ ಸೇವಕರಿಗೆ ಸನ್ಮಾನ
ಗ್ರಾಮದ ಆರೋಗ್ಯ ಸೇವಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು. ಪಿಎಚ್‌ಒ ಪ್ರಮೀಳಾ ಕೆ, ಸಿಎಚ್‌ಒಗಳಾದ ದಿವ್ಯಶ್ರೀ, ಶಶಿಕಲ, ಆಶಾ ಕಾರ್ಯಕರ್ತೆಯರಾದ ಚಂದ್ರಾವತಿ, ಸಂಗೀತಾರಾಜ್, ಶಶಿಕಲ, ಸರೋಜಿನಿ ಮತ್ತು ಗಿರಿಜಾರವರಿಗೆ ಶಾಲು ಹಾಕಿ ರಕ್ತಚಂದನದ ಗಿಡ ಹಾಗೂ ಸ್ಮರಣಿಕೆ ಕೊಟ್ಟು ಸನ್ಮಾನಿಸಿ ಗೌರವಿಸಲಾಯಿತು.

ಬಾಂದ್ ಕಲ್ ಕಡಪ್ಪು ‘ಬಾಂದಲಪ್ಪು ಆಯಿತು’.
ಪ್ರಾಸ್ತಾವಿಕವಾಗಿ ಮಾತನಾಡಿದ ಬಾಂದಲಪ್ಪು ಜನಸೇವಾ ಸಮಿತಿಯ ಗೌರವ ಅಧ್ಯಕ್ಷ ಕುಂಬ್ರ ದುರ್ಗಾಪ್ರಸಾದ್ ರೈಯವರು,ಕುಂಬ್ರ ರಾಜರ ಕಾಲದಲ್ಲಿ ವಿಟ್ಲ ಸೀಮೆ ಮತ್ತು ಪಂಜ ಸೀಮೆಗೆ ಸೇರಿದ ಒಂದು ಗಡಿ ಪ್ರದೇಶವಾಗಿತ್ತು. ಇಲ್ಲಿ ಒಂದು ಬಾಂದ್‌ಕಲ್ಲು (ಗಡಿ ಕಲ್ಲು) ಇತ್ತು ಇದನ್ನು ದಾಟಿ ಮುಂದಕ್ಕೆ ಹೋಗಬೇಕು ಆದ್ದರಿಂದ ಇಲ್ಲಿಗೆ ಬಾಂದ್‌ಕಲ್ ಕಡಪ್ಪು ಎನ್ನುತ್ತಿದ್ದರು ಮುಂದೆ ಬಾಂದಲಪ್ಪು ಆಯಿತು ಇದೀಗ ಕುಂಬ್ರ ಆಗಿದೆ. ಇದೇ ಬಾಂದಲಪ್ಪು ಹೆಸರು ಇಟ್ಟುಕೊಂಡು ನಮ್ಮ ಸಂಘಟನೆಯು ಕಳೆದ ವರ್ಷ ಆರಂಭವಾಯಿತು. ಮೊದಲಿಗೆ ವಿದ್ಯಾರ್ಥಿಗಳಿಗೆ ಸುಮಾರು 1.5 ಲಕ್ಷ ರೂ.ಗಳ ವಿದ್ಯಾರ್ಥಿವೇತನ ನೀಡುವ ಕೆಲಸ ಮಾಡಿದ್ದೇವೆ. ಈ ವರ್ಷ ಆರೋಗ್ಯ ಶಿಬಿರ ಮಾಡಿದ್ದೇವೆ. ರಾಜಕೀಯದ ಸಮಯದಲ್ಲಿ ರಾಜಕೀಯ ಮಾಡುವುದು ಇಲ್ಲದ ಸಮಯದಲ್ಲಿ ಸಮಾಜ ಸೇವೆ ಮಾಡುವುದೇ ನಮ್ಮೆಲ್ಲರ ಉದ್ದೇಶವಾಗಿದೆ. ಇದಕ್ಕೆ ಸರ್ವರ ಸಹಕಾರ ಅಗತ್ಯ ಎಂದು ಹೇಳಿದರು.

200 ಕ್ಕೂ ಅಧಿಕ ಮಂದಿಯ ಆರೋಗ್ಯ ತಪಾಸಣೆ
ಆರೋಗ್ಯ ತಪಾಸಣಾ ಶಿಬಿರದಲ್ಲಿ ಸುಮಾರು 200 ಕ್ಕೂ ಅಧಿಕ ಮಂದಿ ತಮ್ಮ ಆರೋಗ್ಯ ತಪಾಸಣೆ ಮಾಡಿಕೊಂಡರು. ಕಣ್ಣು, ಕಿವಿ,ಮೂಗು, ಗಂಟಲು, ಚರ್ಮರೋಗ ಸೇರಿದಂತೆ ಎಲ್ಲಾ ವಿವಿಧ ಆರೋಗ್ಯ ತಪಾಸಣೆ ನಡೆಯಿತು. ಎ.ಜೆ ಮೆಡಿಕಲ್ ಕಾಲೇಜು ಆಸ್ಪತ್ರೆ ಮತ್ತು ಸಂಶೋಧನ ಕೇಂದ್ರದ ಡಾ.ರಶ್ಮಿ, ಡಾ.ಪಲ್ಲವಿ ಹಾಗೂ ತಂಡದವರು ತಪಾಸಣೆ ನಡೆಸಿಕೊಟ್ಟರು.

LEAVE A REPLY

Please enter your comment!
Please enter your name here