ಪುತ್ತೂರು: 2019ರಲ್ಲಿ ಪ್ರಧಾನ ಮಂತ್ರಿಯವರು ರೈತರಿಗೆ ವಾರ್ಷಿಕವಾಗಿ ರೂ.6,೦೦೦ ಆರ್ಥಿಕ ನೆರವು ನೀಡಲು ಪಿಎಂ ಕಿಸಾನ್ ಯೋಜನೆ ಪರಿಚಯಿಸಿದ್ದು ಪಿಎಂ-ಕಿಸಾನ್ ಉತ್ಸಾವ್ ದಿವಸ್‌ನ ಭಾಗವಾಗಿ ಪುತ್ತೂರಿನ ಭಾ.ಕೃ.ಸಂ.ಪ – ಗೇರು ಸಂಶೋಧನಾ ನಿರ್ದೇಶನಾಲಯದಿಂದ “ಗೇರು ಬೆಳೆಯ ವೈಜ್ಞಾನಿಕ ಕೃಷಿ” ಕುರಿತು ತರಬೇತಿ ಕಾರ್ಯಕ್ರಮ ನಡೆಯಿತು.
ಪುತ್ತೂರಿನ ಭಾ.ಕೃ.ಸಂ.ಪ -ಡಿಸಿಆರ್‌ನ ಪ್ರಭಾವಿ ನಿರ್ದೇಶಕ ಡಾ.ಟಿ.ವಿ.ರವಿಪ್ರಸಾದ್ ಮಾತನಾಡಿ ದೇಶಕ್ಕೆ ಹೆಚ್ಚು ಮಹತ್ವಾಕಾಂಕ್ಷೆಯ ಆರ್ಥಿಕ ಗುರಿಗಳನ್ನು ಸಾಧಿಸುವಲ್ಲಿ ರೈತರ ಪ್ರಾಮುಖ್ಯತೆ ಮತ್ತು ಅವರ ಪಾಲ್ಗೊಳ್ಳುವಿಕೆಯನ್ನು ತಿಳಿಸಿ ಗೇರು ಕೃಷಿಯ ಬಗ್ಗೆ ರೈತರಿಗೆ ಶಿಕ್ಷಣ ನೀಡುವಲ್ಲಿ ಈ ನಿರ್ದೇಶನಾಲಯದ ಪಾತ್ರದ ಬಗ್ಗೆ ಹೇಳಿದರು. ತರಬೇತಿ ಕಾರ್ಯಕ್ರಮದ ಭಾಗವಾಗಿ, ರೈತರಿಗೆ ಗೇರಿನ ವೈಜ್ಞಾನಿಕ ಕೃಷಿಯ ಬಗ್ಗೆ ಅರಿವು ಮೂಡಿಸಲು ತಾಂತ್ರಿಕ ಅವಧಿಗಳನ್ನು ಆಯೋಜಿಸಿದ್ದು ಹಿರಿಯ ವಿಜ್ಞಾನಿ ಡಾ. ಈರದಾಸಪ್ಪರವರು ಸೂಕ್ತ ತಳಿಗಳನ್ನು ಆಯ್ಕೆ ಮಾಡುವುದು, ಇಳುವರಿ ವರ್ಧನೆಗೆ ಹೆಚ್ಚಿನ ಸಾಂದ್ರತೆ ಮತ್ತು ಅತಿ-ಹೆಚ್ಚಿನ ಸಾಂದ್ರತೆಯ ನೆಡುವಿಕೆ ವ್ಯವಸ್ಥೆಗಳಿಗೆ ಸೂಕ್ತವಾದ ಕತ್ತರಿಸುವಿಕೆಗೆ ಪ್ರತಿಕ್ರಿಯಿಸುವ ತಳಿಗಳ ಬಗ್ಗೆ ತಿಳಿಸಿದರು. ಹಿರಿಯ ವಿಜ್ಞಾನಿ ಡಾ. ಮಂಜೇಶ್ ಜಿ.ಎನ್.ರವರು ಗೇರು ನರ್ಸರಿ ಮತ್ತು ಕಸಿ ಕಟ್ಟುವ ವಿಧಾನದ ಬಗ್ಗೆ ತಿಳಿಸಿದರು. ಹಿರಿಯ ವಿಜ್ಞಾನಿ ಡಾ. ವನಿತಾ ಕೆ.ರವರು ಗೇರು ಬೆಳೆಯ ಪ್ರಮುಖ ಕೀಟಗಳು ಮತ್ತು ಅವುಗಳ ನಿರ್ವಹಣೆಯ ಬಗ್ಗೆ ಮಾಹಿತಿ ನೀಡಿದರು. ಹಿರಿಯ ವಿಜ್ಞಾನಿ ಡಾ. ರಾಜಶೇಖರ ಎಚ್. ಗೇರು ಬೆಳೆಯಲ್ಲಿನ ಪ್ರಮುಖ ರೋಗಗಳು ಮತ್ತು ನಿರ್ವಹಣೆಯ ಕುರಿತು ಮಾತನಾಡಿದರು.
ಪ್ರಧಾನ ಮಂತ್ರಿ ನರೇಂದ್ರ ಮೋದಿ ಉತ್ತರ ಪ್ರದೇಶದ ವಾರಣಾಸಿಯಿಂದ ಪಿಎಂ-ಕಿಸಾನ್‌ನ 20ನೇ ಹಣಕಾಸು ಕಂತನ್ನು ಬಿಡುಗಡೆ ಮಾಡಿದರು. ಬಿಡುಗಡೆಯನ್ನು ನಿರ್ದೇಶನಾಲಯದಲ್ಲಿ ನೇರಪ್ರಸಾರ ಮಾಡಲಾಯಿತು. ಒಟ್ಟು 100 ಜನ ಪಿಎಂ-ಕಿಸಾನ್ ಉತ್ಸವದ ನೇರ ಪ್ರಸಾರ ಹಾಗೂ ಗೇರು ಕೃಷಿಯ ವೈಜ್ಞಾನಿಕ ತರಬೇತಿಯಲ್ಲಿ ಭಾಗವಹಿಸಿದರು. ಕಾರ್ಯಕ್ರಮದ ನಂತರ ಪರಿಶಿಷ್ಟ ಪಂಗಡದ ರೈತರಿಗೆ ಸಸಿಗಳನ್ನು ವಿತರಿಸಲಾಯಿತು.