ಅಂಬಿಕಾ ಮಹಾವಿದ್ಯಾಲಯದಲ್ಲಿ ’ಸಕಾರಾತ್ಮಕ ಪತ್ರಿಕೋದ್ಯಮ’ ಸರಣಿ ಉಪನ್ಯಾಸ

0

ಕಲೆಕೆಯ ಅವಧಿಯಲ್ಲಿಯೇ ಬ್ರಾಂಡ್ ಆಗಿ ರೂಪುಗೊಳ್ಳಬೇಕು : ಉಮೇಶ್ ಶಿಮ್ಲಡ್ಕ


ಪುತ್ತೂರು: ಪತ್ರಿಕೋದ್ಯಮ ವಿದ್ಯಾರ್ಥಿಗಳು ಕ್ಷೇತ್ರಕ್ಕೆ ಅಡಿಯಿಡುವ ಪೂರ್ವದಲ್ಲಿ ಸಾಕಷ್ಟು ಸಿದ್ಧತೆ ಮಾಡಿಕೊಂಡಿರಬೇಕು. ಕಲಿಕೆಯ ಅವಧಿಯಲ್ಲಿಯೇ ತಮ್ಮನ್ನು ತಾವು ಒಂದು ಬ್ರಾಂಡ್ ಆಗಿ ರೂಪಿಸಿಕೊಳ್ಳುತ್ತಾ ಬೆಳೆಯಬೇಕು. ಉದ್ಯೋಗದಾತರು ಮೊದಲನೋಟದಲ್ಲೇ ಒಪ್ಪಿಕೊಳ್ಳುವಂತಹ ಮುಖಮೌಲ್ಯಗಳನ್ನು ಹೊಂದಿದ್ದಲ್ಲಿ ಉತ್ಕೃಷ್ಟ ಉದ್ಯೋಗಗಳ ಸಾಧ್ಯತೆ ನಮ್ಮದಾಗುತ್ತದೆ ಎಂದು ಹಿರಿಯ ಪತ್ರಕರ್ತ ಉಮೇಶ್ ಶಿಮ್ಲಡ್ಕ ಹೇಳಿದರು.


ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯಲ್ಲಿನ ಅಂಬಿಕಾ ಮಹಾವಿದ್ಯಾಲಯದ ಪತ್ರಿಕೋದ್ಯಮ ವಿಭಾಗ ಹಾಗೂ ರೂರಲ್ ಮಿರರ್ ಡಿಜಿಟಲ್ ಮೀಡಿಯಾದ ಸಹಯೋಗದಲ್ಲಿ ಆಯೋಜಿಸಲಾಗುತ್ತಿರುವ ಸಕಾರಾತ್ಮಕ ಪತ್ರಿಕೋದ್ಯಮ ಸರಣಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಶನಿವಾರ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.


ಆಧುನಿಕ ದಿನಮಾನಗಳಲ್ಲಿ ನಮ್ಮ ಲೇಖನ – ಬರಹಗಳ ಪ್ರಕಟಣೆಗೆ ಪತ್ರಿಕೆ, ನಿಯತಕಾಲಿಕಗಳನ್ನಷ್ಟೇ ಕಾಯುತ್ತಾ ಕೂರಬೇಕಾಗಿಲ್ಲ. ನಮ್ಮದೇ ಆದ ಸ್ವಂತ ಬ್ಲಾಗ್, ಫೇಸ್ ಬುಕ್ ಪುಟಗಳನ್ನು ಆರಂಭಿಸಬಹುದು. ವೈವಿಧ್ಯಮಯ ವೀಡಿಯೋಗಳನ್ನೂ ರೂಪಿಸಬಹುದು. ಈ ರೀತಿಯಾಗಿ ನಮ್ಮನ್ನು ನಾವು ಪ್ರಸ್ತುತಗೊಳಿಸುತ್ತಾ ಸಾಗುವುದು ಇಂದಿನ ಅನಿವಾರ್ಯತೆಯೂ ಹೌದು. ಮೊದಲೆಲ್ಲಾ ಮಾಧ್ಯಮಗಳಲ್ಲಿ ಒಂದೊಂದು ಕೆಲಸಕ್ಕೆ ಒಬ್ಬೊಬ್ಬರಿರುತ್ತಿದ್ದರು. ಆದರೆ ಈಗ ಯಾವುದೇ ಕೆಲಸವನ್ನು ಮಾಡುವುದಕ್ಕೂ ಪ್ರತಿಯೊಬ್ಬರೂ ತಯಾರಿರಬೇಕು ಎಂದು ನುಡಿದರು.


ತಾವು ಪಡೆಯುವ ವೇತನದಲ್ಲಿ ಶೇಕಡಾ ಇಪ್ಪತ್ತೈದರಷ್ಟು ಮಾತ್ರ ನಮ್ಮ ಕೆಲಸಕ್ಕೆ. ಉಳಿದ ಎಪ್ಪತ್ತೈದು ಭಾಗ ನಮ್ಮ ಆಲೋಚನಾ ವಿಧಾನಕ್ಕೆ ಎಂಬ ಕಲ್ಪನೆ ಪ್ರತಿಯೊಬ್ಬ ಪತ್ರಕರ್ತನಲ್ಲೂ ಇರಬೇಕು. ಆದ್ದರಿಂದ ನಮ್ಮ ಯೋಚನೆ, ಸೃಜನಶೀಲತೆ ಮಾಧ್ಯಮ ಕ್ಷೇತ್ರದಲ್ಲಿ ನಾವು ಬೆಳಗುವಂತೆ ಮಾಡುತ್ತದೆ ಎಂದರಲ್ಲದೆ ಡಿಜಿಟಲ್ ಪತ್ರಿಕೋದ್ಯಮ ಸಾಕಷ್ಟು ಬೆಳೆಯುತ್ತಿದೆ. ಈ ಕ್ಷೇತ್ರ ನೂತನ ಪತ್ರಕರ್ತರಾಗುವವರಿಗೆ ಹೊಸಸಾಧ್ಯತೆಯಾಗಿ ಗೋಚರಿಸಲಾರಂಭಿಸಿದೆ ಎಂದು ಅಭಿಪ್ರಾಯಪಟ್ಟರು.


ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ರೂರಲ್ ಮಿರರ್ ಡಿಜಿಟಲ್ ಮೀಡಿಯಾದ ಸ್ಥಾಪಕ ಮಹೇಶ್ ಪುಚ್ಚಪ್ಪಾಡಿ ಮಾತನಾಡಿ ಪ್ರತಿಯೊಬ್ಬ ಪತ್ರಕರ್ತರಿಂದಲೂ ಕಲಿಯುವ ವಿಷಯಗಳು ಸಾಕಷ್ಟಿವೆ. ನಮಗೆ ದೊರಕುವ ಮಾಹಿತಿಗಳನ್ನು ಸಮರ್ಪಕವಾಗಿ ಬಳಸಿಕೊಂಡು ಪತ್ರಿಕೋದ್ಯಮದಲ್ಲಿ ಮುಂದುವರಿಯಬೇಕು. ನಾನಾ ಪತ್ರಕರ್ತರ ಅನುಭವಗಳನ್ನು ನಮ್ಮ ಬದುಕಿಗೆ ಪೂರಕವಾಗಿ ಸ್ವೀಕರಿಸಿ ಮುನ್ನಡೆಯಬೇಕು ಎಂದು ಕರೆನೀಡಿದರು.
ಕಾಲೇಜಿನ ಪ್ರಾಚಾರ್ಯ ರಾಕೇಶ ಕುಮಾರ್ ಕಮ್ಮಜೆ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಪಂಚಮಿ ಬಾಕಿಲಪದವು ಪ್ರಾರ್ಥಿಸಿದರು. ವಿದ್ಯಾರ್ಥಿ ಗುರುಪ್ರಸಾದ್ ಸ್ವಾಗತಿಸಿದರು. ವಿದ್ಯಾರ್ಥಿ ಅಕ್ಷಿತ್ ರೈ ವಂದಿಸಿದರು. ವಿದ್ಯಾರ್ಥಿನಿ ಶ್ರಾವ್ಯಾ ಕಾರ್ಯಕ್ರಮ ನಿರ್ವಹಿಸಿದರು.

LEAVE A REPLY

Please enter your comment!
Please enter your name here