ಉಪ್ಪಿನಂಗಡಿ: ಉದ್ಯೋಗ ಖಾತರಿ ನಡಿಗೆ ಸುಸ್ಥಿರತೆಯೆಡೆಗೆ ಅಭಿಯಾನ

0

ಉಪ್ಪಿನಂಗಡಿ: ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ 2024-25ನೇ ಸಾಲಿನ ಕಾರ್ಮಿಕ ಆಯವ್ಯಯ ತಯಾರಿಸುವ ನಿಟ್ಟಿನಲ್ಲಿ ಉಪ್ಪಿನಂಗಡಿ ಗ್ರಾ.ಪಂ. ನಲ್ಲಿ ಅ.9ರಂದು ಮಹಾತ್ಮ ಗಾಂಧಿ ನರೇಗಾ ಯೋಜನೆಯ ‘ಉದ್ಯೋಗ ಖಾತರಿ ನಡಿಗೆ ಸುಸ್ಥಿರತೆಯೆಡೆಗೆ’ ಅಭಿಯಾನ ನಡೆಯಿತು.


ಗ್ರಾ.ಪಂ. ಅಧ್ಯಕ್ಷೆ ಲಲಿತಾ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ವಿಲ್ಫ್ರೆಡ್ ಲಾರೆನ್ಸ್ ರೋಡ್ರಿಗಸ್, ಮುಂದಿನ ಆರ್ಥಿಕ ವರ್ಷದಲ್ಲಿ ಯೋಜನೆಯಡಿ ಕೈಗೆತ್ತಿಕೊಳ್ಳಬೇಕೆಂದಿರುವ ಸಾರ್ವಜನಿಕ ಹಾಗೂ ವೈಯಕ್ತಿಕ ಕಾಮಗಾರಿಗಳ ಬೇಡಿಕೆಯನ್ನು ಗ್ರಾ.ಪಂ.ಗೆ ಸಲ್ಲಿಸಿದರೆ ಕ್ರಿಯಾ ಯೋಜನೆಯಲ್ಲಿ ಸೇರಿಸಿಕೊಳ್ಳಲಾಗುವುದು ಎಂದರು.


ನರೇಗಾ ಯೋಜನೆಯ ತಾಲೂಕು ಮಾಹಿತಿ, ಶಿಕ್ಷಣ, ಸಂವಹನ ಸಂಯೋಜಕ ಭರತ್‌ರಾಜ್ ಮಾತನಾಡಿ, ಒಂದು ತಿಂಗಳುಗಳ ಕಾಲ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಮನೆ ಮನೆ ಭೇಟಿ ಮಾಡಿ ವೈಯಕ್ತಿಕ ಕಾಮಗಾರಿಗಳನ್ನು ಮಾಡಲಿಚ್ಚಿಸುವ ಫಲಾನುಭವಿಗಳು ಬೇಡಿಕೆಯನ್ನು ಸಲ್ಲಿಸುವುದು ಹಾಗೂ ಬಚ್ಚಲುಗುಂಡಿ, ಬಯೋಗ್ಯಾಸ್, ತೋಟಗಾರಿಕೆ ಬೆಳೆ ವಿಸ್ತರಣೆ, ಪಶುಸಂಗೋಪನೆ ಸಂಬಂಧಿತ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಅವಕಾಶವಿದೆ ಎಂದರು.


ಸಭೆಯಲ್ಲಿ ಗ್ರಾ.ಪಂ. ಉಪಾಧ್ಯಕ್ಷೆ ವಿದ್ಯಾಲಕ್ಷ್ಮೀ ಪ್ರಭು, ಸದಸ್ಯರಾದ ಅಬ್ದುರ್ರಹ್ಮಾನ್, ಲೊಕೇಶ್ ಬೆತ್ತೋಡಿ, ಅಬ್ದುರ್ರಶೀದ್ ಮಠ, ಸಣ್ಣಣ್ಣ, ರುಕ್ಮಿಣಿ. ಶೋಭಾ, ವನಿತಾ, ಉಷಾ ನಾಯ್ಕ, ಗ್ರಾ. ಪಂ. ಕಾರ್ಯದರ್ಶಿ ಗೀತಾ ಶೇಖರ್, ಸಿಬ್ಬಂದಿ ಶ್ರೀನಿವಾಸ ಬಿ., ರಕ್ಷಿತ್ ಕುಮಾರ್, ಇಸ್ಹಾಕ್, ಮಹಾಲಿಂಗ, ಇಕ್ಬಾಲ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here