ಪುತ್ತೂರು ವಿಭಾಗಕ್ಕೂ ಬರಲಿದೆ ಕೆಎಸ್‌ಆರ್‌ಟಿಸಿಯ ‘ಪಲ್ಲಕ್ಕಿ’

0

ಪುತ್ತೂರು: `ಸಂತೋಷವು ಪ್ರಯಾಣಿಸುತ್ತದೆ’ ಎಂಬ ಟ್ಯಾಗ್‌ಲೈನ್‌ನೊಂದಿಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ(ಕೆಎಸ್‌ಆರ್‌ಟಿಸಿ)ದಿಂದ ಅತ್ಯಾಕರ್ಷಕ ಬಣ್ಣ ಹಾಗೂ ವಿನ್ಯಾಸಗಳೊಂದಿಗೆ ಲೋಕಾರ್ಪಣೆಗೊಂಡಿರುವ ಪಲ್ಲಕ್ಕಿ ನಾನ್ ಎಸಿ ಸ್ಲೀಪರ್ ಬಸ್‌ಗಳಲ್ಲಿ 4 ಬಸ್‌ಗಳು ಪುತ್ತೂರು ವಿಭಾಗಕ್ಕೂ ಶೀಘ್ರದಲ್ಲಿ ಸೇರಿಕೊಳ್ಳಲಿದೆ.


ರಾಜಹಂಸ, ಐರಾವತ, ಅಂಬಾರಿ ಎಂಬ ಸಾಂಸ್ಕೃತಿಕ ಹೆಸರುಗಳಂತೆ ಹೊಸ ಬಸ್ ಪಲ್ಲಕ್ಕಿ ಎಂಬ ಹೆಸರನ್ನು ಹೊಂದಿದೆ. ಇದು ರಾಜಹಂಸ ಹಾಗೂ ಇತರ ನಾನ್ ಎಸಿ ಸ್ಲೀಪರ್ ಬಸ್‌ಗಳಿಗಿಂತ ಹಲವು ವೈಶಿಷ್ಟ್ಯತೆಗಳನ್ನು ಹೊಂದಿದೆ. ಈ ನೂತನ ಬಸ್‌ಗಳಿಗೆ ಅ.7ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನಸೌಧದ ಮುಂಭಾಗದಲ್ಲಿ ಚಾಲನೆ ನೀಡಿದ್ದರು. ಐಷಾರಾಮಿ ಬಸ್ ಇದಾಗಿದ್ದು ಪ್ರಥಮ ಹಂತದಲ್ಲಿ ಬಿಡುಗಡೆಗೊಂಡಿರುವ ಒಟ್ಟು 40 ಬಸ್‌ಗಳಲ್ಲಿ 4 ಬಸ್‌ಗಳು ಪುತ್ತೂರು ವಿಭಾಗಕ್ಕೆ ಆಗಮಿಸಲಿದೆ. ಈ ನಾನ್ ಎಸಿ ಸ್ಲೀಪರ್ ಬಸ್ ಪುತ್ತೂರು-ಬೆಂಗಳೂರು ಮಧ್ಯೆ ಸಂಚರಿಸಲಿವೆ. ಈ ಬಸ್ಸು ಆಕರ್ಷಕ ವಿನ್ಯಾಸ ಹಾಗೂ ಬಣ್ಣಗಳಿಂದ ಪ್ರಯಾಣಿಕರನ್ನು ತನ್ನತ್ತ ಸೆಳೆಯುವಂತಿದೆ.


ಏನೆಲ್ಲಾ ವೈಶಿಷ್ಠ್ಯತೆಗಳಿವೆ:
ಪಲ್ಲಕ್ಕಿ ಬಸ್ಸುಗಳು 30 ಸ್ಲೀಪಿಂಗ್ ಬರ್ತ್‌ಗಳನ್ನು ಹೊಂದಿದ್ದು, ಪ್ರಯಾಣದ ಸಮಯದಲ್ಲಿ ಮೊಬೈಲ್ ಮತ್ತು ಲ್ಯಾಪ್‌ಟಾಪ್ ಚಾರ್ಜಿಂಗ್ ಸೌಲಭ್ಯ, ಪ್ರತಿ ಬರ್ತ್‌ನಲ್ಲಿ ಮೀಸಲಾದ ಮೊಬೈಲ್ ಹೋಲ್ಡರ್ ಮತ್ತು ಪ್ರತಿ ಪ್ರಯಾಣಿಕರಿಗೆ ಚಪ್ಪಲಿ, ಶೂ ಇಡಲು ಸ್ಥಳಾವಕಾಶ ಇದೆ. ಬಸ್ಸುಗಳನ್ನು ಪ್ರಯಾಣಿಕರ ಸುರಕ್ಷತೆಯ ದೃಷ್ಟಿಯಿಂದ ವಿನ್ಯಾಸಗೊಳಿಸಲಾಗಿದೆ. ಬಸ್ಸಿನಲ್ಲಿ ವಿಶೇಷ ಬೆಂಕಿ ಪತ್ತೆ ಮತ್ತು ನಿಗ್ರಹ ವ್ಯವಸ್ಥೆಯನ್ನು ಅಳವಡಿಸಲಾಗಿದ್ದು, ಬಸ್ಸಿನೊಳಗೆ ಯಾವುದೇ ಅಹಿತಕರ ಘಟನೆ ನಡೆದ ಸಂದರ್ಭದಲ್ಲಿ ಎಲ್ಲಾ ಪ್ರಯಾಣಿಕರಿಗೂ ಎಚ್ಚರಿಕೆ ನೀಡುವ ವ್ಯವಸ್ಥೆ ಹೊಂದಿದೆ. ಬಸ್‌ನಲ್ಲಿ ಆಡಿಯೋ ಸ್ಪೀಕರ್ ಮೂಲಕ ಪ್ರಯಾಣಿಕರಿಗೆ ಮಾಹಿತಿ ನೀಡುವ ವ್ಯವಸ್ಥೆಯೂ ಇದೆ. ಪ್ರಯಾಣಿಕರು ಬಸ್‌ನಲ್ಲಿ ಆಗುವ ಸಮಸ್ಯೆಗಳ ಬಗ್ಗೆ ಬಸ್ ಸಿಬ್ಬಂದಿಗೆ ಬಸ್‌ನಲ್ಲಿ ಒದಗಿಸಲಾದ ಆಡಿಯೊ ಸ್ಪೀಕರ್‌ಗಳ ಮೂಲಕ ತಿಳಿಸಬಹುದು.
ಬಸ್ಸುಗಳನ್ನು ರಾತ್ರಿಯ ಪ್ರಯಾಣಕ್ಕಾಗಿ ನಿರ್ಮಿಸಲಾಗಿದೆ. ಇವು 11.3 ಮೀಟರ್ ಉದ್ದದ ನಾನ್ ಎಸಿ ಬಸ್. ಬಿಎಸ್-6 ತಂತ್ರಜ್ಞಾನದ ಮಾದರಿಯ ಹೆಚ್.ಪಿ. ಇಂಜಿನ್ ಅಳವಡಿಸಲಾಗಿದೆ.


ಸೀಟ್ ನಂಬರ್ ಮೇಲೆ ಎಲ್‌ಇಡಿ ಅಳವಡಿಕೆ ಮಾಡಲಾಗಿದೆ. ಓದಲು ಉತ್ತಮ ಬೆಳಕಿನ ಎಲ್.ಇ.ಡಿ ಲೈಟ್ ಅಳವಡಿಸಲಾಗಿದೆ. ಡಿಜಿಟಲ್ ಗಡಿಯಾರ ಹಾಗೂ ಎಲ್.ಇ.ಡಿ. ಪ್ಲೋರ್ ವ್ಯವಸ್ಥೆಯಿದೆ. ಪ್ರಯಾಣಿಕರಿಗೆ ತಲೆದಿಂಬಿನ ವ್ಯವಸ್ಥೆ ಹೊಂದಿದೆ. ನಾನ್ ಎಸಿ ಸ್ಲೀಪರ್ ಬಸ್‌ಗಳಲ್ಲಿ ಇದೇ ಮೊದಲ ಬಾರಿಗೆ ಚಾಲಕರಿಗೆ ಸಹಾಯವಾಗಲೂ ಬಸ್ ಹಿಂಭಾಗದಲ್ಲಿ ಹೈಟೆಕ್ -ಕ್ಯಾಮರಾ ಅಳವಡಿಸಲಾಗಿದೆ.


9 ಸಾರಿಗೆ ಬಸ್‌ಗಳು:
ಪಲ್ಲಕಿ ಬಸ್ ಮಾತ್ರವಲ್ಲದೆ 100 ಕರ್ನಾಟಕ ಸಾರಿಗೆಯ ಬಸ್‌ಗಳನ್ನು ಕೆಎಸ್‌ಆರ್‌ಟಿಸಿ ಬಿಡುಗಡೆ ಮಾಡಿದೆ. ಇದರಲ್ಲಿ ಪುತ್ತೂರು ವಿಭಾಗಕ್ಕೆ 9 ಬಸ್‌ಗಳು ಆಗಮಿಸಲಿದೆ. ಈ ಪೈಕಿ 4 ಬಸ್‌ಗಳು ಈಗಾಗಲೇ ಬಂದಿದ್ದು 5 ಬಸ್‌ಗಳು ಇನ್ನು ಬರಲಿದೆ. ಇದರಲ್ಲಿ ಪುತ್ತೂರು, ಬಿ.ಸಿ ರೋಡ್, ಮಡಿಕೇರಿ ಹಾಗೂ ಧರ್ಮಸ್ಥಳ ಘಟಕಗಳಿಗೆ ತಲಾ 2 ಬಸ್‌ಗಳು ಹಾಗೂ ಸುಳ್ಯ ಘಟಕಕ್ಕೆ 1 ಬಸ್‌ಗಳಂತೆ ವಿಂಗಡಿಸಲಾಗಿದೆ.


235 ಗುತ್ತಿಗೆ ಆಧಾರದ ಚಾಲಕರ ನೇಮಕ:
ನಿಗಮಕ್ಕೆ ಗುತ್ತಿಗೆ ಆಧಾರದಲ್ಲಿ ಚಾಲಕರು ನೇಮಕಗೊಂಡಿದ್ದು ಇದರಲ್ಲಿ 235 ಮಂದಿ ಚಾಲಕರು ಪುತ್ತೂರು ವಿಭಾಗಕ್ಕೆ ಆಗಮಿಸಿದ್ದಾರೆ. ಎರಡು ಹಂತದಲ್ಲಿ ಚಾಲಕರನ್ನು ನಿಯೋಜಿಸಲಾಗಿದೆ. ಪ್ರಥಮ ಹಂತದಲ್ಲಿ 125 ಹಾಗೂ ಎರಡನೇ ಹಂತದಲ್ಲಿ 110 ಮಂದಿ ಚಾಲಕರನ್ನು ನಿಯೋಜಿಸಲಾಗಿದೆ. ಇದರಲ್ಲಿ ಪುತ್ತೂರು-50, ಬಿ.ಸಿ.ರೋಡ್-40, ಧರ್ಮಸ್ಥಳ-75, ಮಡಿಕೇರಿ-35 ಹಾಗೂ ಸುಳ್ಯ ಘಟಕಕ್ಕೆ 35 ಚಾಲಕರನ್ನು ನಿಯೋಜಿಸಲಾಗುವುದು. ನೇಮಕಗೊಂಡಿರುವ ಚಾಲಕರ ಸಂಖ್ಯೆಗಿಂತ ವರ್ಗಾವಣೆಗೊಂಡಿರುವ ಚಾಲಕರ ಸಂಖ್ಯೆ ಅಧಿಕವಾಗಿದೆ. ಹೀಗಾಗಿ ವಿಭಾಗದ ವ್ಯಾಪ್ತಿಯಲ್ಲಿ ಚಾಲಕರ ಬೇಡಿಕೆ ಇನ್ನೂ ಇದೆ ಎಂಬ ಮಾಹಿತಿ ಲಭಿಸಿದೆ.


ಪ್ರಥಮ ಹಂತದಲ್ಲಿ ಬಿಡುಗಡೆಗೊಂಡಿರುವ ಪಲ್ಲಕ್ಕಿ ಬಸ್‌ಗಳ ಪೈಕಿ 4 ಬಸ್‌ಗಳು ಪುತ್ತೂರು ವಿಭಾಗಕ್ಕೆ ಆಗಮಿಸಲಿದೆ. ಶೀಘ್ರದಲ್ಲಿ ವಿಭಾಗಕ್ಕೆ ಹೊಸ ಮಾದರಿ ಬಸ್‌ಗಳು ಬರಲಿದ್ದು ಇದರಲ್ಲಿ ಪುತ್ತೂರು ಘಟಕ ಹಾಗೂ ಧರ್ಮಸ್ಥಳ ಘಟಕಗಳಿಗೆ ತಲಾ 2 ಬಸ್‌ಗಳಂತೆ ವಿಂಗಡಿಸಲಾಗುವುದು. ಐಷಾರಾಮಿ ಬಸ್ ಇದಾಗಿದೆ. ಬಸ್‌ನ ಪ್ರಯಾಣ ದರದ ಬಗ್ಗೆ ಆದೇಶ ಬರಬೇಕಿದೆ.
-ಜಯಕರ ಶೆಟ್ಟಿ, ವಿಭಾಗೀಯ ನಿಯಂತ್ರಣಾಧಿಕಾರಿ

LEAVE A REPLY

Please enter your comment!
Please enter your name here