ಪುತ್ತೂರು: ಒಳಮೊಗ್ರು ಗ್ರಾಮದ ಕುಂಬ್ರ ವರ್ತಕರ ಸಂಘವು 20 ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿದ್ದು ಇದರ ಸಂಭ್ರಮಾಚರಣೆಯನ್ನು ಅ.10 ರಂದು ಕುಂಬ್ರದ ನ್ಯೂ ಫ್ಯಾಮಿಲಿ ಕಾಂಪ್ಲೆಕ್ಸ್ ವಠಾರದಲ್ಲಿ ವಿಭಿನ್ನ ರೀತಿಯಲ್ಲಿ ಆಚರಿಸಲಾಯಿತು. ಕುಂಬ್ರ ವರ್ತಕರ ಸಂಘವು 2004 ಅ.10 ರಂದು ಬೆಳಿಗ್ಗೆ 10 ಗಂಟೆ 10 ನಿಮಿಷಕ್ಕೆ ಉದ್ಘಾಟನೆಗೊಂಡಿತ್ತು. ಇದೀಗ 20 ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿರುವ ಸಂಘದ ಹುಟ್ಟುಹಬ್ಬವನ್ನು ಕೂಡ ಅ.10ರಂದು ಬೆಳಿಗ್ಗೆ 10 ಗಂಟೆ 10 ನಿಮಿಷಕ್ಕೆ ದೀಪ ಬೆಳಗಿಸಿ ಕೇಕ್ ಕತ್ತರಿಸಿ, ಪಟಾಕಿ ಸಿಡಿಸುವ ಮೂಲಕ ಸಂಭ್ರಮಾಚರಿಸಲಾಯಿತು. ಸಂಘದ ಸ್ಥಾಪಕಾಧ್ಯಕ್ಷ ಶ್ಯಾಮ್‌ಸುಂದರ ರೈ ಕೊಪ್ಪಳರವರು ದೀಪ ಬೆಳಗಿಸಿ ಪ್ರಾಸ್ತಾವಿಕವಾಗಿ ಮಾತನಾಡಿ, ಹತ್ತು ಹಲವು ಜನಪರ ಸಮಾಜಮುಖಿ ಕೆಲಸಗಳೊಂದಿಗೆ ಮುನ್ನಡೆಯುತ್ತಿರುವ ಕುಂಬ್ರ ವರ್ತಕರ ಸಂಘವು ಯಶಸ್ವಿ 19 ವರ್ಷಗಳನ್ನು ಪೂರೈಸಿ 20 ರ ಹರೆಯಕ್ಕೆ ಕಾಲಿಟ್ಟಿದೆ. ಈ ಸಂದರ್ಭದಲ್ಲಿ 20ನೇ ವರ್ಷವನ್ನು ವಿಶಿಷ್ಠ ರೀತಿಯಲ್ಲಿ ಸಂಭ್ರಮಿಸುವ ಸಲುವಾಗಿ ಇಂದಿನಿಂದ ಪ್ರತಿ ತಿಂಗಳ ಒಂದು ಕಾರ್ಯಕ್ರಮದಂತೆ 11 ಕಾರ್ಯಕ್ರಮಗಳನ್ನು ನಡೆಸಿ 12ನೇ ಕಾರ್ಯಕ್ರಮವನ್ನು ಅದ್ಧೂರಿಯಾಗಿ ನಡೆಸುವುದು ಎಂದು ಹೇಳಿದರು. ಇದಕ್ಕೆ ಎಲ್ಲಾ ವರ್ತಕರ ಹಾಗೂ ಗ್ರಾಹಕರ ಸಹಕಾರವನ್ನು ಕೋರಿದರು.
ಸಂಘದ ಗೌರವ ಸಲಹೆಗಾರರಾದ ನ್ಯಾಯವಾದಿ ಕುಂಬ್ರ ದುರ್ಗಾಪ್ರಸಾದ್ ರೈಯವರು ಮಾತನಾಡಿ, ಪರಿಸರ ದಿನ, ಡಾಕ್ಟರ್ಸ್ ಡೇ ಸೇರಿದಂತೆ ಎಲ್ಲದಕ್ಕೂ ಒಂದು ದಿನ ಇದೆ. ಆದರೆ ವರ್ತಕರಿಗೆ ಯಾವುದೇ ದಿನವಿಲ್ಲ ಆದ್ದರಿಂದ ಕುಂಬ್ರ ವರ್ತಕರ ಸಂಘ ಸ್ಥಾಪನೆಯಾದ ಅ.10 ಅನ್ನು ವರ್ತಕರ ದಿನವನ್ನಾಗಿ ಆಚರಿಸೋಣ ಏಕೆಂದರೆ ಸಮಾಜಮುಖಿ ಕಾರ್ಯಗಳಲ್ಲಿ ಗುರುತಿಸಿಕೊಂಡಿರುವ ವರ್ತಕರ ಸಂಘಕ್ಕೆ ತನ್ನದೇ ಆದ ಇತಿಹಾಸವಿದೆ ಎಂದರು. ಗೌರವ ಸಲಹೆಗಾರ ಅಬ್ದುಲ್ ರಹೀಮಾನ್ ಹಾಜಿ ಅರಿಯಡ್ಕ ಮಾತನಾಡಿ, ವರ್ತಕರ ಸಂಘದ 20 ವರ್ಷದ ಸಂಭ್ರಮಾಚರಣೆ ಎಲ್ಲರಿಗೂ ಮಾದರಿಯಾಗುವಂತೆ ನಡೆಯಲಿದೆ. ಒಂದು ವರ್ಷಗಳ ಕಾಲ ಒಳ್ಳೊಳ್ಳೆ ಕಾರ್ಯಕ್ರಮಗಳು ಮೂಡಿಬರಲಿ ಎಂದು ಹೇಳಿ ಶುಭ ಹಾರೈಸಿದರು. ಒಳಮೊಗ್ರು ಗ್ರಾಪಂ ಅಧ್ಯಕ್ಷ ತ್ರಿವೇಣಿ ಪಲ್ಲತ್ತಾರು ಮಾತನಾಡಿ, ವರ್ತಕರ ಸಂಘದಿಂದ ಇನ್ನಷ್ಟು ಸಮಾಜಮುಖಿ ಕೆಲಸಗಳು ಮೂಡಿಬರಲಿ, ಗ್ರಾಮವನ್ನು ಸ್ವಚ್ಛಗ್ರಾಮವನ್ನಾಗಿಸುವ ನಿಟ್ಟಿನಲ್ಲಿ ಸ್ವಚ್ಛವಾಹಿನಿ ತಂಡಕ್ಕೆ ತಮ್ಮ ಅಂಗಡಿಯ ಕಸವನ್ನು ನೀಡುವ ಮೂಲಕ ಸಹಕರಿಸುವಂತೆ ಕೇಳಿಕೊಂಡರು. ಪುತ್ತೂರು ಗ್ರಾಮಾಂತರ ಠಾಣೆಯ ಎಎಸ್‌ಐ ಶ್ರೀಧರ ರೈಯವರು ಸಂದರ್ಭೋಚಿತವಾಗಿ ಮಾತನಾಡಿ ಶುಭ ಹಾರೈಸಿದರು. ಸಭಾಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ರಫೀಕ್ ಅಲ್‌ರಾಯರವರು ಸಂಘವು ಮುಂದಿನ ದಿನಗಳಲ್ಲಿ ಇನ್ನಷ್ಟು ಸಮಾಜಮುಖಿ ಕೆಲಸಗಳನ್ನು ಮಾಡಿಕೊಂಡು ಬರಲಿದೆ. 20 ವರ್ಷದ ಅಂಗವಾಗಿ ಒಂದು ವರ್ಷ ಕಾಲ ವಿವಿಧ ಕಾರ್ಯಕ್ರಮಗಳನ್ನು ನಡೆಸುವ ಬಗ್ಗೆ ಈಗಾಗಲೇ ಪ್ಲಾನ್ ಮಾಡಿಕೊಂಡಿದ್ದೇವೆ. ಇದಕ್ಕೆ ಸರ್ವರ ಸಹಕಾರ ಅಗತ್ಯ ಎಂದು ಹೇಳಿ ಸಹಕಾರ ಕೋರಿದರು.
ವೇದಿಕೆಯಲ್ಲಿ ಸಂಘದ ಗೌರವ ಸಲಹೆಗಾರ ಚಂದ್ರಕಾಂತ ಶಾಂತಿವನ ಉಪಸ್ಥಿತರಿದ್ದರು. ಅರಿಯಡ್ಕ ಗ್ರಾಪಂ ಮಾಜಿ ಉಪಾಧ್ಯಕ್ಷ ಇಕ್ಬಾಲ್ ಹುಸೇನ್, ಕುಂಬ್ರ ಅಂಗನವಾಡಿ ಶಿಕ್ಷಕಿ ಆಶಾಲತಾ ರೈ ಸಂದರ್ಭೋಚಿತವಾಗಿ ಮಾತನಾಡಿ ಸಂಘಕ್ಕೆ ಶುಭ ಹಾರೈಸಿದರು. ಸಂಘದ ಕೋಶಾಧಿಕಾರಿ ಸಂಶುದ್ದೀನ್ ಎ.ಆರ್.ಸ್ವಾಗತಿಸಿದರು. ಪದ್ಮನಾಭ ಆಚಾರ್ಯ ಪ್ರಾರ್ಥಿಸಿದರು. ಮಾಜಿ ಉಪಾಧ್ಯಕ್ಷ ರಾಜೇಶ್ ರೈ ಪರ್ಪುಂಜ, ಮಾಜಿ ಅಧ್ಯಕ್ಷ ಎಸ್.ಮಾಧವ ರೈ ಕುಂಬ್ರ, ಹನೀಫ್, ರಮ್ಯಶ್ರೀ, ರೇಷ್ಮಾ ಅತಿಥಿಗಳಿಗೆ ಹೂ ನೀಡಿ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಭವ್ಯ ರೈ ವಂದಿಸಿದರು. ಶಿಕ್ಷಕ ವಿಶ್ವನಾಥ ಗೌಡ ಬೊಳ್ಳಾಡಿ ಮತ್ತು ಸಂಘದ ಮಾಜಿ ಅಧ್ಯಕ್ಷ ನಾರಾಯಣ ಪೂಜಾರಿ ಕುರಿಕ್ಕಾರ ಕಾರ್ಯಕ್ರಮ ನಿರೂಪಿಸಿದರು. ಸಂಘದ ಪದಾಧಿಕಾರಿಗಳು ಸಹಕರಿಸಿದ್ದರು. ಇಂಡಿಯನ್ ಶಾಮಿಯಾನದ ಮುಖ್ತಾರ್ ಶಾಮಿಯಾನ ಕೊಡುಗೆಯಾಗಿ ನೀಡಿದ್ದರು. ಒಳಮೊಗ್ರು ಗ್ರಾಪಂ ಸದಸ್ಯರುಗಳು, ಪೊಲೀಸ್ ಇಲಾಖಾ ಸಿಬ್ಬಂದಿಗಳು, ಬ್ಯಾಂಕ್ ಸಿಬ್ಬಂದಿಗಳು, ವರ್ತಕರು, ಗ್ರಾಹಕರು, ಗ್ರಾಮಸ್ಥರು ಉಪಸ್ಥಿತರಿದ್ದರು.
ಕೇಕ್ ಕತ್ತರಿಸಿದ ಅಮರ್, ಅಕ್ಬರ್, ಅಂತೋನಿ
ಮೂರು ಧರ್ಮಗಳಿಗೆ ಸೇರಿದ ವ್ಯಕ್ತಿಗಳಿಂದ ವರ್ತಕರ ಸಂಘ ಸ್ಥಾಪನೆಯಾಗಿದ್ದು ಅವರಲ್ಲಿ ಅಮರ್ ಆಗಿ ನಾರಾಯಣ ಪೂಜಾರಿ ಕುರಿಕ್ಕಾರ, ಅಕ್ಬರ್ ಆಗಿ ಸಂಶುದ್ದೀನ್ ಎ.ಆರ್ ಮತ್ತು ಅಂತೋನಿಯಾಗಿ ಮೆಲ್ವಿನ್ ಮೊಂತೆರೋ ಆಗಿದ್ದಾರೆ. 20ನೇ ವರ್ಷದ ಸಂಭ್ರಮಾಚರಣೆಯ ಸಂದರ್ಭದಲ್ಲೂ ಈ ಮೂವರು ವ್ಯಕ್ತಿಗಳು ಕೇಕ್ ಕತ್ತರಿಸುವ ಮೂಲಕ ಸಂಘದ ಹುಟ್ಟು ಹಬ್ಬವನ್ನು ವಿಶಿಷ್ಠ ರೀತಿಯಲ್ಲಿ ಆಚರಿಸಲಾಯಿತು. ಇದೇ ಸಂದರ್ಭದಲ್ಲಿ ಪಟಾಕಿ ಸಿಡಿಸಿ, ಬಂದಿರುವ ಗ್ರಾಹಕರಿಗೆ ಕೇಕ್, ಪಾನೀಯ, ಸಿಹಿತಿಂಡಿ ಹಂಚಲಾಯಿತು.
ಪೊಲೀಸ್ ಠಾಣೆ, ಅಂಗನವಾಡಿಗಳಿಗೆ ಕೊಡುಗೆ
ಸಂಘದ 20 ನೇ ವರ್ಷದ ಸಂಭ್ರಮದಲ್ಲಿ ಕುಂಬ್ರ, ಸಾರೆಪುಣಿ ಮತ್ತು ಶೇಖಮಲೆ ಅಂಗನವಾಡಿಗಳಿಗೆ ಚೆಯರ್ ಹಾಗೂ ಆಟದ ಸಾಮಾಗ್ರಿಗಳನ್ನು ಕೊಡುಗೆಯಾಗಿ ನೀಡಲಾಯಿತು. ಕುಂಬ್ರ ಜಂಕ್ಷನ್‌ನಲ್ಲಿ ಇಲಾಖೆ ವತಿಯಿಂದ ಅಳವಡಿಸಲು ಪುತ್ತೂರು ಗ್ರಾಮಾಂತರ ಠಾಣೆಗೆ ಒಂದು ಸಿಸಿ ಟಿವಿಯನ್ನು ಕೊಡುಗೆಯಾಗಿನೀಡಲಾಯಿತು. ಇದೇ ಸಂದರ್ಭದಲ್ಲಿ ಸಂಘದ ಸ್ಥಾಪಕ ಅಧ್ಯಕ್ಷರಾಗಿ ಸಂಘವನ್ನು ಮುನ್ನಡೆಸಿಕೊಂಡು ಬಂದಿರುವ ಶ್ಯಾಮಸುಂದರ ರೈ ಕೊಪ್ಪಳರವರನ್ನು ಹಾಲಿ ಅಧ್ಯಕ್ಷ ರಫೀಕ್ ಅಲ್‌ರಾಯರವರು ಉಡುಗೊರೆ ನೀಡಿ ಅಭಿನಂದಿಸಿದರು.
12 ತಿಂಗಳ ವಿಭಿನ್ನ ಕಾರ್ಯಕ್ರಮಗಳ ಆಯೋಜನೆ
ಸಂಘದ 20 ನೇ ವರ್ಷಾಚರಣೆಯ ಪ್ರಯುಕ್ತ ಅಕ್ಟೋಬರ್‌ನಿಂದ ಮುಂದಿನ ಅಕ್ಟೋಬರ್ ತನಕ ಪ್ರತಿ ತಿಂಗಳು ಒಂದೊಂದು ಕಾರ್ಯಕ್ರಮ ಮಾಡುವುದು ಹಾಗೂ 2024 ಅ.10 ರಂದು 20 ರ ಸಂಭ್ರಮವನ್ನು ಅದ್ಧೂರಿಯಾಗಿ ನಡೆಸುವುದು ಎಂದು ಸಭೆಯಲ್ಲಿ ತೀರ್ಮಾನಿಸಲಾಯಿತು.