ಅಂಬಿಕಾ ಪದವಿಪೂರ್ವ ವಿದ್ಯಾಲಯದಲ್ಲಿ ಪಾರಂಪರಿಕ ದಿನಾಚರಣೆ

0

ಸಾಮಾಜಿಕ ಅಭ್ಯುದಯವೇ ಜ್ಞಾನಾರ್ಜನೆಯ ಉದ್ದೇಶ : ಡಾ.ವಿಜಯ ಸರಸ್ವತಿ


ಪುತ್ತೂರು: ನಮ್ಮ ದೇಶ, ಸಂಸ್ಕೃತಿ, ಸಂಪ್ರದಾಯ, ಪರಂಪರೆಯ ಸಂಪೂರ್ಣ ಪರಿಚಯದ ನೆಲೆಯಲ್ಲಿ ಶಿಕ್ಷಣ ಸಂಸ್ಥೆಗಳಲ್ಲಿ ಪಾರಂಪರಿಕ ದಿನವನ್ನು ಆಚರಿಸುವುದು ಅತ್ಯಂತ ಅಗತ್ಯ. ಜ್ಞಾನಾರ್ಜನೆಯ ಉದ್ದೇಶ ಸಾಮಾಜಿಕ ಅಭ್ಯುದಯವೇ ಹೊರತು ಕೇವಲ ಧನಾರ್ಜನೆಯಲ್ಲ. ಶಿಕ್ಷಣ ವ್ಯಾಪಾರೀಕರಣವಾಗಬಾರದು. ಎಂದು ಪುತ್ತೂರಿನ ವಿವೇಕಾನಂದ ಸ್ವಾಯತ್ತ ಕಾಲೇಜಿನ ಸ್ನಾತಕೋತ್ತರ ವಿಭಾಗದ ಡೀನ್ ಡಾ.ವಿಜಯ ಸರಸ್ವತಿ ಹೇಳಿದರು.


ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆ ಹಾಗೂ ನೆಲ್ಲಿಕಟ್ಟೆಯ ಅಂಬಿಕಾ ಪದವಿ ಪೂರ್ವ ವಿದ್ಯಾಲಯಗಳೆರಡರ ವತಿಯಿಂದ ಬಪ್ಪಳಿಗೆಯ ಶ್ರೀ ಶಂಕರ ಸಭಾಭವನದಲ್ಲಿ ಆಯೋಜಿಸಲಾದ ಪಾರಂಪರಿಕ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಂಗಳವಾರ ಮಾತನಾಡಿದರು.
ಸಂಸ್ಕೃತಿ ನಮ್ಮ ಧರ್ಮದ ಮೂಲ ಬೇರು. ಆ ಸಂಸ್ಕೃತಿಯ ಬೇರುಗಳೇ ವಿದ್ಯಾರ್ಥಿಗಳು. ನಮ್ಮತನದೆಡೆಗಿನ ಆರಾಧನೆ ಹೃದಯಂತರಾಳದಿಂದ ಬರಬೇಕು. ಬದುಕು ಬೆಸೆಯುವ ಸಮುದಾಯವಾಗಿ ವಿದ್ಯಾರ್ಥಿಗಳು ಬೆಳೆಯಬೇಕು. ನಿರಂತರ ಪ್ರಯತ್ನ ನಮ್ಮನ್ನು ಗುರಿಯೆಡೆಗೆ ಕೊಂಡೊಯ್ಯುತ್ತದೆ ಎಂದರಲ್ಲದೆ ನಮ್ಮ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಮಹತ್ತರ ಹೊಣೆಗಾರಿಕೆ ಶಿಕ್ಷಣ ಸಂಸ್ಥೆಗಳ ಮೇಲಿದೆ ಎಂದು ನುಡಿದರು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜನಾವಿಂದು ಭಾರತೀಯ ಉಡುಗೆ ತೊಡುಗೆ ತೊಡುವುದಕ್ಕೂ ಹಿಂಜರಿಯುವ ಮನಃಸ್ಥಿತಿಯಲ್ಲಿದ್ದೇವೆ. ಆದರೆ ನಮ್ಮತನವನ್ನು ಬಿಂಬಿಸಿಕೊಳ್ಳುವುದಕ್ಕೆ ನಾಚಿಕೆ ಪಟ್ಟುಕೊಳ್ಳುವ ಅವಶ್ಯಕತೆಯಾದರೂ ಏನು? ನಾವೆಲ್ಲರೂ ಭಾರತೀಯ ಸಂಸ್ಕೃತಿಯಿಂದ ವಿಮುಖರಾಗದೆ ಅದನ್ನು ಪಾಲಿಸುತ್ತಾ ಸಾಗಬೇಕು. ಭಾರತೀಯತೆಗೆ ವಿರುದ್ಧವಾಗಿ ನಡೆದರೆ ನಮಗೆ ಉಳಿಗಾಲವಿಲ್ಲ್ಲ ಎಂದರಲ್ಲದೆ ನಮಗೋಸ್ಕರ ಉಡುಗೆ ತೊಡುಗೆಗಳಿವೆಯೇ ವಿನಃ ಉಡುಗೆ ತೊಡುಗೆಗಳಿಗೋಸ್ಕರ ನಾವಿರುವುದಲ್ಲ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು ಎಂದರು.


ಈ ಸಂದರ್ಭದಲ್ಲಿ ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಸ್ಮರಣಿಕೆ ಮತ್ತು ಪ್ರಮಾಣ ಪತ್ರಗಳನ್ನು ನೀಡಿ ಅಭಿನಂದಿಸಲಾಯಿತು. ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕೋಶಾಧಿಕಾರಿ ರಾಜಶ್ರೀ ನಟ್ಟೋಜ, ಆಡಳಿತ ಮಂಡಳಿಯ ಸದಸ್ಯ ಸುರೇಶ್ ಶೆಟ್ಟಿ, ನೆಲ್ಲಿಕಟ್ಟೆ ಅಂಬಿಕಾ ಪದವಿಪೂರ್ವ ವಿದ್ಯಾಲಯ ಪ್ರಾಚಾರ್ಯ ಸತ್ಯಜಿತ್ ಉಪಾಧ್ಯಾಯ ಹಾಗೂ ಬಪ್ಪಳಿಗೆಯ ಅಂಬಿಕಾ ವಸತಿಯುತ ಪದವಿ ಪೂರ್ವ ವಿದ್ಯಾಲಯದ ಪ್ರಾಚಾರ್ಯೆ ಸುಚಿತ್ರ ಪ್ರಭು ಉಪಸ್ಥಿತರಿದ್ದರು.


ವಿದ್ಯಾರ್ಥಿನಿ ಆತ್ಮಶ್ರೀ ಮತ್ತು ಬಳಗ ಪ್ರಾರ್ಥಿಸಿದರು. ವಿದ್ಯಾರ್ಥಿ ನಾಯಕ ನಿಶಾಂತ್ ಸ್ವಾಗತಿಸಿದರು. ವಿದ್ಯಾರ್ಥಿನಿ ಕೃತಿ ಕುಂದಲ್ಪಾಡಿ ವಂದಿಸಿದರು. ಉಪನ್ಯಾಸಕಿಯರಾದ ಅಪರ್ಣ, ಸುಚೇತ ರತ್ನ, ಚೈತ್ರಿಕ ನನ್ಯ, ರಾಧಿಕಾ ವಿಜೇತರ ಪಟ್ಟಿಯನ್ನು ವಾಚಿಸಿದರು. ವಿದ್ಯಾರ್ಥಿನಿಯರಾದ ತನ್ವಿತ, ಪ್ರಣಮ್ಯ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here