ಡಾ. ಕೋಟಾ ಶಿವರಾಮ ಕಾರಂತರ 122ನೇ ಜನ್ಮದಿನೋತ್ಸವ ಆಚರಣೆ – ವರ್ಣಚಿತ್ರ ಕಲಾವಿದ ಚಂದ್ರಕಾಂತ ಆಚಾರ್ಯರಿಗೆ ಬಾಲವನ ಪ್ರಶಸ್ತಿ ಪ್ರದಾನ

0

ಪುತ್ತೂರು: ಡಾ. ಶಿವರಾಮ ಕಾರಂತರ ಕರ್ಮಭೂಮಿಯಾದ ಬಾಲವನದಲ್ಲಿ ಅವರ ಬದುಕಿನ ಅವಧಿ ನೋಡಿದರೆ ಇಷ್ಟು ವರ್ಷದಲ್ಲಿ ಇಲ್ಲಿ ಅಭಿವೃದ್ಧಿ ಆಗಿರುವುದು ಏನೂ ಸಾಕಾಗಿಲ್ಲ. ಬಾಲವನ ಇಡೀ ವಿಶ್ವಕ್ಕೆ ಮಾದರಿಯಾಗಿರುವುದರಿಂದ ಇಲ್ಲಿ ಕಾರಂತರ ಚಿಂತನೆಯಲ್ಲೇ ಇನ್ನಷ್ಟು ಅಭಿವೃದ್ಧಿ ಪಡಿಸುವ ಅವಶ್ಯಕತೆ ಇದೆ ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದ್ದಾರೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಡಾ ಕೋಟ ಶಿವರಾಮ ಕಾರಂತರ ಬಾಲವನ ಮತ್ತು ಪುತ್ತೂರು ಸಹಾಯಕ ಆಯುಕ್ತರ ಕಾರ್ಯಾಲಯದ ವತಿಯಿಂದ ಅ.10ರಂದು ಬಾಲವನ ಬಯಲು ರಂಗ ಮಂದಿರದಲ್ಲಿ ನಡೆದ ಡಾ ಕೋಟ ಶಿವರಾಮ ಕಾರಂತರ ಜನ್ಮದಿನೋತ್ಸವ ಮತ್ತು ಬಾಲವನ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಶಿವರಾಮ ಕಾರಂತರ ಭಾವಚಿತ್ರಕ್ಕೆ ಪುಷ್ಪಾರ್ಚಣೆ ಮಾಡುವ ಮೂಲಕ ಉದ್ಘಾಟಿಸಿ, ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕರು, ಬದುಕಿನಲ್ಲಿ ಉಪದೇಶ ಮಾಡುವುದು ಜಾಸ್ತಿ. ಉಪದೇಶ ಮಾಡುವುದನ್ನು ಕಡಿಮೆ ಮಾಡಿ ಬದುಕಿ ತೋರಿಸಿ ಅನ್ನುವ ವಿಚಾರವನ್ನು ವಿಶ್ವಕೋಶ ಎಂದೇ ಪ್ರಸಿದ್ದಿ ಪಡೆದಿರುವ ಡಾ. ಶಿವರಾಮ ಕಾರಂತರು ಹೇಳಿದ್ದರು. ಅವರು 427 ಕೃತಿಗಳು, 47 ಕಾದಂಬರಿಗಳು ಬರೆಯುವ ಮೂಲಕ ಎಲ್ಲಾ ಕಡೆ ಸಂಚಾರ ಮಾಡಿ ವಾಸ್ತವ ವಿಚಾರ ಅರಿತವರು. ಕಲೆಯ ವಿಚಾರದಲ್ಲೂ ಆಳವಾಗಿ ಆಸಕ್ತಿ ಹೊಂದಿದವರು. ಅಂತಹ ಪುಣ್ಯದ ಮಣ್ಣಿನಲ್ಲಿ ನಾವು ಬೆಳೆದಿರುವುದಕ್ಕೆ ಹೆಮ್ಮೆ ಪಡೆಯಬೇಕು. ಸರಕಾರದ ಅನುದಾನದಿಂದ ಮುಂದಿನ ದಿನ ಸಂಬಂಧಪಟ್ಟವರ ಗಮನಕ್ಕೆ ತಂದು ಅಭಿವೃದ್ಧಿ ಚಿಂತನೆ ಮಾಡಲಾಗುವುದು. ಕಾರಂತರು ಬರೆದ ಕಾದಂಬರಿಗಳು, ಕೃತಿ, ಕಲೆ, ಸಾಹಿತ್ಯಗಳಿಗೆ ಪೂರಕವಾಗಿ ಇಲ್ಲಿ ಕಾರ್ಯಕ್ರಮ ನಡೆಯಬೇಕು. ಅದು ಮುಂದಿನ ಪೀಳಿಗೆಗೆ ಕೊಡುಗೆಯಾಗಬೇಕು. ಕಾರಂತರ ಒಡನಾಡಿಯಾಗಿರುವವರನ್ನು ಗುರುತಿಸಿ ಪರಿಚಯಿಸುವ ಕೆಲಸ ಆಗಬೇಕು ಎಂದು ಹೇಳಿದರು.

ಮುಂಬೈ ವಿಶ್ವವಿದ್ಯಾನಿಲಯದ ವಿಶ್ರಾಂತ ಪ್ರಾಧ್ಯಾಪಕ ಡಾ. ತಾಳ್ತಜೆ ವಸಂತಕುಮಾರರವರು ಕಾರಂತ ಸ್ಮರಣೆ ಮಾಡಿ ಕಾರಂತರು ತಮ್ಮ ಕೃತಿಯಲ್ಲಿ ವ್ಯಕ್ತಿಗತವಾದ ಅನುಭವ ಇರಬೇಕೆಂದು ನಂಬಿದವರು. ಅವರ ಕೃತಿಯ ಪ್ರಾರಂಭದ 15 ಪುಟ ಓದಿದರೆ ಅನಂತರದ ಪುಟವನ್ನು ಸರಾಗವಾಗಿ ಓದಬಹುದು. ಯಾಕೆಂದರೆ ಬಹಳ ಕ್ಷೇತ್ರಿಯವಾದ ನೆಲೆಯಿಂದ ಕೃತಿ ರಚಿಸಿದ್ದಾರೆ. ಅಲೌಕಿಕ ಅಂಶ ತಂದು ಕೃತಿ ರಚನೆ ಮಾಡುತ್ತಿದ್ದರು. ಕಾರಂತರ ಕೃತಿ ಚೋಮನ ದುಡಿಯಿಂದ ಓದಿ, ಕೊನೆಗೆ ಮರಳಿ ಮಣ್ಣಿಗೆ ಕೃತಿಯಲ್ಲಿ ಮುಗಿಸಿ ಎಂದ ಅವರು ಕಾರಂತರು ಕೃತಿಯೊಂದಿಗೆ ಗೆಜ್ಜೆ ಕಟ್ಟಿದ ಅವರು ನಾಟಕ ರಚನಕಾರರಾಗಿದ್ದರು. ಬೆಳ್ಳಾರೆ, ವಿಟ್ಲ, ಉಪ್ಪಿನಂಗಡಿ, ಪಾಣಾಜೆ, ನೆಲ್ಲಿಕಟ್ಟೆಯ ಶಾಲೆಗಳಲ್ಲಿ ಮಕ್ಕಳಿಗೆ ನಾಟಕ ಆಡಿಸುವ ಮೂಲಕ ಪ್ರೋತ್ಸಾಹ ನೀಡಿದ ಅವರು ಹತ್ತು ಹಲವು ನೆಲೆಯಲ್ಲಿ ಚಾಪನ್ನು ಮೂಡಿಸಿ ಮುಂದಿನ ಅಧ್ಯಾಯನ ಬೆಳವಣಿಗೆಗೆ ದಾರಿ ಮಾಡಿಕೊಟ್ಟಿದ್ದಾರೆ. ಅವರು 90ನೇ ವಯಸ್ಸಿನ ನಂತರವೂ ಕೃತಿ ರಚನೆ ಮಾಡಿರುವುದಲ್ಲದೆ ಅನುವಾದವನ್ನೂ ಮಾಡಿದ್ದಾರೆ. ಹಾಗಾಗಿ ಕಾರಂತರ ಬಗೆಗಿನ ಪುಸ್ತಕಗಳನ್ನು ಓದಿ ಎಂದರು.

ಕರ್ನಾಟಕ ಲಲಿತ ಕಲಾ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಅಂತಾರಾಷ್ಟ್ರೀಯ ಮಟ್ಟದ ವರ್ಣ ಚಿತ್ರಕಲಾವಿದ ಪುತ್ತೂರು ಮೂಲದ ಕೆ. ಚಂದ್ರಕಾಂತ ಆಚಾರ್ಯ ಇವರಿಗೆ ದಿ| ಕುರುಂಜಿ ವೆಂಕಟರಮಣ ಗೌಡ ಇವರ ಶಾಶ್ವತ ಕೊಡುಗೆಯಲ್ಲಿ ಕೊಡ ಮಾಡುವ ಕೋಟ ಶಿವರಾಮ ಕಾರಂತರ ಬಾಲವನ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಚಂದ್ರಕಾಂತ ಆಚಾರ್ಯ ಪುತ್ತೂರಿಗೆ ಮಣ್ಣಿಗೆ ವಿಶೇಷ ಶಕ್ತಿ ಇದೆ. ಎಷ್ಟೆಷ್ಟೋ ಮಹಾನುಭಾವರುಗಳನ್ನು ಪಡೆದ ಊರಿದು. ಚಿತ್ರಕಲೆಯಲ್ಲಿ ಬಣ್ಣದ ಕಸುಬು ಮಾಡಿದವರಿಗೆ ಕಲೆಯ ಆಳದ ಅರಿವಿದೆ. ಅಂತಹ ಅರಿವು ಕಾರಂತರಿಗಿತ್ತು. ನನಗೆ ಪ್ರಥವಾಗಿ ಬೈದವರು ಕಾರಂತರು. ಯಾಕೆಂದರೆ ಬಾಲ್ಯದಲ್ಲಿ ನಾನು ನನ್ನ ಮಿತಿಯಲ್ಲಿ ನಾನು ಗ್ರಹಿಸಿದ ಕಲೆ ರಚನೆ ಮಾಡಿದ್ದೆ. ಅದನ್ನು ತಪ್ಪಿ ಕಾರಂತರು ನೋಡಿ ಬಾಲವನದಲ್ಲೇ ಕೂತು ನನಗೆ ಬೈದರು. ನೋಡು ಮರದ ಚಿತ್ರ ಬರೆಯಬೇಕಾದರೆ ಮರದ ಎದುರು ಕೂತು ಅದರ ಪರ್ಸನಾಲಿಟಿ ತಿಳಿಯಬೇಕು ಎಂದು ಹೇಳಿದರು. ಇದೇ ವಿಚಾರ ಮತ್ತೆ ನನಗೆ ಪುನರಾವರ್ತನೆ ಆಗಿದ್ದು ಶಾಂತಿನಿಕೇತನದಲ್ಲಿ ಎಂದ ಅವರು ಇವತ್ತು ನನಗೆ ಅಪರೂಪದ ಪುರಸ್ಕಾರ ನೀಡಿದ್ದೀರಿ. ಇದು ನೋಬೆಲ್ ಪಾರಿತೋಷಕ್ಕಕಿಂತಲೂ ಮಿಗಿಲಾದೆ. ನನಗೆ ನನ್ನ ಊರಿನ ಜನರು ಗುರುತಿಸಿದ್ದಿರಿ. ಹೊರಲಾರದಷ್ಟು ಪ್ರೀತಿಯನ್ನು ಅಭಿಮಾನ ತೋರಿಸಿದಿರಿ. ಇದಕ್ಕೆ ನಾನು ಚಿರಋಣಿ ಎಂದರು. ಕಾರಂತರ ಒಡನಾಡಿ ಹಾಗೂ ಹಿರಿಯ ಸಾಹಿತಿ ಪಡಾರು ಮಹಾಬಲೇಶ್ವರ ಭಟ್ ಅವರನ್ನೂ ಇದೇ ಸಂದರ್ಭದಲ್ಲಿ ಸಮಿತಿಯಿಂದ ಅಭಿನಂದಿಸಲಾಯಿತು.

ಪ್ರಶಸ್ತಿ ಸಮಿತಿಯ ಸದಸ್ಯರಾಗಿರುವ ಬೆಟ್ಟಂಪಾಡಿ ಪ್ರಥಮ ದರ್ಜೆ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ| ವರದರಾಜ ಚಂದ್ರಗಿರಿ ರವರು ಅಭಿನಂದನಾ ನುಡಿಗಳನ್ನಾಡಿದರು. ನಾಡಿನ ಹಲವು ಗಣ್ಯರು ಭಾಗವಹಿಸಿದ್ದ ಈ ಕಾರ್ಯಕ್ರಮದಲ್ಲಿ ಶಾಲಿನಿ ಶೆಟ್ಟಿ ಬಳಗದಿಂದ ಪ್ರಾರ್ಥನೆ, ಶುಭರಾವ್ ಬಳಗದಿಂದ ನಾಡಗೀತೆ ಹಾಡಲಾಯಿತು. ಸಹಾಯಕ ಕಮೀಷನರ್ ಆಗಿರುವ ಬಾಲವನ ಅಭಿವೃದ್ದಿ ಸಮಿತಿ ಸದಸ್ಯ ಕಾರ್ಯದರ್ಶಿ ಗಿರೀಶ್ ನಂದನ್ ಎಂ ಸ್ವಾಗತಿಸಿದರು. ಕನ್ನಡ ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರಾಜೇಶ್ ಜಿ ವಂದಿಸಿದರು. ಡಾ. ರಾಜೇಶ್ ಬೆಜ್ಜಂಗಳ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here