ಪುಣಚ: ಉಡುಪಿಯಿಂದ ಕಾಸರಗೋಡಿಗೆ ಸರಬರಾಜಾಗುವ 400 ಕೆ.ವಿ. ಹೆಚ್.ಟಿ ವಿದ್ಯುತ್ ಮಾರ್ಗಕ್ಕೆ ಸಂಬಂಧಿಸಿ ಪುಣಚ ಗ್ರಾಮದ ಬೈರಿಕಟ್ಟೆ – ಕೊಲ್ಲಪದವು ಎಂಬಲ್ಲಿ ಅ.10ರಂದು ಕಾಮಗಾರಿಗೆ ಪರಿಶೀಲನೆ ನಡೆಸುತ್ತಿರುವ ಸಂದರ್ಭ ರೈತ ಸಂಘದ ನೇತೃತ್ವದಲ್ಲಿ ರೈತರು, ಸ್ಥಳೀಯರು ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ.
ಉಡುಪಿ – ಕಾಸರಗೋಡು ವಿದ್ಯುತ್ ಪ್ರಸರಣ ಮಾರ್ಗದಿಂದ ಈ ಭಾಗದ ರೈತರ ಕೃಷಿ ಜಮೀನಿಗೆ ತೊಂದರೆಯಾಗುತ್ತಿದೆ ಎಂದು ಈ ಯೋಜನೆಗೆ ಸ್ಥಳೀಯರು ವಿರೋಧ ವ್ಯಕ್ತಪಡಿಸುತ್ತಿದ್ದರು. ಈಗ ಬೈರಿಕಟ್ಟೆ ಕೊಲ್ಲಪದವು ಎಂಬಲ್ಲಿ ರೈತರೊಬ್ಬರು ಯೋಜನೆಗೆ ಒಪ್ಪಿಗೆ ನೀಡಿದ್ದರೆನ್ನಲಾಗಿದ್ದು ಕಾಮಗಾರಿ ಪ್ರಾರಂಭಿಸಲು ಪರಿಶೀಲನೆಗೆ ಆಗಮಿಸಿದ ಅಧಿಕಾರಿಗಳ ತಂಡದ ವಿರುದ್ಧ ಪ್ರತಿಭಟನೆ ನಡೆಸಿ ದ.ಕ.ಜಿಲ್ಲಾಧಿಕಾರಿಗೆ ಮಾಹಿತಿ ನೀಡಿದರು. ಜಿಲ್ಲಾಧಿಕಾರಿಯವರು ಅಪರ ಜಿಲ್ಲಾಧಿಕಾರಿಗೆ ಕ್ರಮಕೈಗೊಳ್ಳಲು ಸೂಚಿಸಿದರು. ಬಳಿಕ ಅಪರ ಜಿಲ್ಲಾಧಿಕಾರಿಯವರು ಬಂಟ್ವಾಳ ತಹಶೀಲ್ದಾರ್‌ಗೆ ಸ್ಥಳಕ್ಕೆ ಭೇಟಿ ನೀಡಲು ಸೂಚಿಸಿ ಪರಿಶೀಲನೆ ನಿಲ್ಲಿಸುವಂತೆ ಸೂಚಿಸಿದ್ದರು.
ಸಂಜೀವ ಮಠಂದೂರು, ಅರುಣ್ ಪುತ್ತಿಲ ಭೇಟಿ: ಪ್ರತಿಭಟನಾಕಾರರು ಮಾಜಿ ಶಾಸಕ ಸಂಜೀವ ಮಠಂದೂರುರವರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಭೇಟಿ ನೀಡಿದ ಮಾಜಿ ಶಾಸಕ ಮಠಂದೂರುರವರು ಕೂಡ ಜಿಲ್ಲಾಧಿಕಾರಿಗಳನ್ನು ಸಂಪರ್ಕಿಸಿ ಕಾಮಗಾರಿ ಪರಿಶೀಲನೆ ನಿಲ್ಲಿಸುವಂತೆ ಸೂಚಿಸಿದ್ದರು. ಪುತ್ತಿಲ ಪರಿವಾರದ ಅರುಣ್ ಕುಮಾರ್ ಪುತ್ತಿಲರವರು ಸ್ಥಳಕ್ಕೆ ಆಗಮಿಸಿ ರೈತರೊಂದಿಗೆ ಮಾತುಕತೆ ನಡೆಸಿ ಭರವಸೆ ನೀಡಿದ್ದಾರೆ.
400 ಕೆವಿ ಎಚ್‌ಟಿ ವಿದ್ಯುತ್ ತಂತಿ ಕಾಮಗಾರಿ ವಿರೋಧ ಹೋರಾಟ ಸಮಿತಿಯ ಅಧ್ಯಕ್ಷ ರಾಜೀವ ಗೌಡ, ಕಾರ್ಯದರ್ಶಿ ಲಕ್ಷ್ಮೀನಾರಾಯಣ, ಖಜಾಂಜಿ ರೋಹಿತಾಕ್ಷ, ಸಂಚಾಲಕ ಚಿತ್ತರಂಜನ್, ಅಣ್ಣು ಗೌಡ, ಸಂಜೀವ ಗೌಡ, ಪಾರ್ಥ ವಾರಣಾಸಿ, ರವಿ ಕೊಳಂಬೆ, ಪುತ್ತೂರು ಮಂಡಲ ಬಿಜೆಪಿ ಉಪಾಧ್ಯಕ್ಷ ಹರಿಪ್ರಸಾದ್ ಯಾದವ್, ಬಿಜೆಪಿ ಪ್ರಮುಖರಾದ ಕರುಣಾಕರ ಮೂಡಂಬೈಲು, ಪುಣಚ ಗ್ರಾ.ಪಂ. ಸದಸ್ಯರಾದ ಅಶೋಕ್ ಮೂಡಂಬೈಲು, ತೀರ್ಥರಾಮ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
400 ಕೆ.ವಿ. ಹೆಚ್.ಟಿ ವಿದ್ಯುತ್ ಮಾರ್ಗದ ಯೋಜನೆಯ ವಿರೊಧಿಸಿ ಹೋರಾಟ ಮಾಡಲಾಗುತ್ತಿದೆ. ಇದೀಗ ರೈತರೊಬ್ಬರು ಕಾಮಗಾರಿಗೆ ಒಪ್ಪಿಗೆ ಸೂಚಿಸಿದ್ದ ಹಿನ್ನಲೆಯಲ್ಲಿ ಯೋಜನೆಯ ಅಧಿಕಾರಿಗಳ ತಂಡ ಪರಿಶೀಲನೆಗೆ ಬಂದಿದೆ. ಪರಿಶೀಲನೆ ವಿರುದ್ಧ ಜನಪ್ರತಿನಿಧಿಗಳಿಗೆ ಜಿಲ್ಲಾಧಿಕಾರಿಗೆ ಮಾಹಿತಿ ನೀಡಲಾಗಿತ್ತು. ಅಪರ ಜಿಲ್ಲಾಧಿಕಾರಿ ಸೂಚನೆಯಂತೆ ಸ್ಥಳಕ್ಕೆ ಭೇಟಿ ನೀಡಲು ಬಂದಿದ್ದ ತಹಶೀಲ್ದಾರ್ ಅರ್ಧದಾರಿಯಿಂದಲೇ ನಿರ್ಗಮಿಸಿದ್ದರು.
ಶ್ರೀಧರ್ ಶೆಟ್ಟಿ ಬೈಲುಗುತ್ತು
ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ