ನೂಜಿಬಾಳ್ತಿಲ ಗ್ರಾ.ಪಂ. ಪಿಡಿಒರವರಿಂದ ಅಂಬೇಡ್ಕರ್‌ಗೆ ಅವಮಾನ – ದ.ಸಂ.ಸ ಆರೋಪ

0

ಪಿಡಿಒ ವಿರುದ್ದ ವ್ಯವಸ್ಥಿತ ಪಿತೂರಿ ನಡೆಸಿ ತೆಜೋವಧೆ ಸಹಿಸಲಾಗದು-ಬೀಮ್ ಆರ್ಮಿ ಎಚ್ಚರಿಕೆ

ಕಡಬ: ನೂಜಿಬಾಳ್ತಿಲ ಪಂಚಾಯತ್ ಅಭಿವೃದ್ದಿ ಅಧಿಕಾರಿ ಗುರುವ ಎಸ್. ಇವರು ಅಂಬೇಡ್ಕರ್ ಅವರಿಗೆ ಅವಮಾನ ಮಾಡಿದ್ದಾರೆ, ಅಲ್ಲದೆ ರಾಜಕೀಯ ಪಕ್ಷದ ಸದಸ್ಯನಂತೆ ವರ್ತಿಸುತ್ತಿದ್ದಾರೆ ಇವರನ್ನು ಕೂಡಲೇ ವರ್ಗಾವಣೆ ಮಾಡದಿದ್ದರೆ ಪ್ರತಿಭಟನೆ ಮಾಡುವುದಾಗಿ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ಇವರು ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿಯವರಿಗೆ ದೂರು ನೀಡಿದ್ದಾರೆ, ಇದೇ ವಿಚಾರಕ್ಕೆ ಸಂಬಂಧಿಸಿ ಕಡಬ ತಾಲೂಕು ಬೀಮ್ ಆರ್ಮಿ ಸಂಘಟನೆಯವರು ತಾ.ಪಂ. ಮುಖ್ಯ ಕಾರ್ಯನಿರ್ವಾಹಣಾಧಿಕಾರಿಯವರಿಗೆ ಮನವಿ ನೀಡಿ, ನೂಜಿಬಾಳ್ತಿಲ ಗ್ರಾ.ಪಂ. ಅಭಿವೃದ್ದಿ ಅಧಿಕಾರಿಯವರ ವಿರುದ್ದ ದಲಿತ ಸಂಘಟನೆಯವರು ಪಿತೂರಿ ನಡೆಸಿ ಅವರ ವಿರುದ್ದ ಸಂಚು ನಡೆಸಿದ್ದಾರೆ, ಅವರನ್ನು ವರ್ಗಾವಣೆ ಮಾಡಿದರೆ ತಾ,ಪಂ ಎದುರು ಪ್ರತಿಭಟನೆ ಮಾಡುವುದಾಗಿ ಎಚ್ಚರಿಸಿದ್ದಾರೆ.

ದ.ಸಂ.ಸ. ಆರೋಪ:
ದ.ಸಂ.ಸ.ಯ ತಾಲೂಕು ಸಂಚಾಲಕ, ನೂಜಿಬಾಳ್ತಿಲ ಗ್ರಾ.ಪಂ.ಯ ಸದಸ್ಯರಾಗಿರುವ ವಸಂತ ಕುಬಲಾಡಿಯವರು ಮನವಿ ನೀಡಿ, 2022ರ ಆ.15ರಂದು ಪಂಚಾಯತ್‌ನಲ್ಲಿರುವ ಅಂಬೇಡ್ಕರ್ ಭಾವಚಿತ್ರ ತುಕ್ಕು ಹಿಡಿದಿರುವುದನ್ನು ತಿಳಿಸಿರುತ್ತೇನೆ. ಆದರೆ 2023ರ ಆ.15ಕ್ಕೂ ಭಾವಚಿತ್ರ ಬದಲಾವಣೆ ಮಾಡಿರುವುದಿಲ್ಲ, ಈ ಬಗ್ಗೆ ನಾನು ದ.ಸಂ.ಸ. ವಾಟ್ಸಾಪ್ ಗ್ರೂಪ್‌ನಲ್ಲಿ ಮಾಹಿತಿ ಹಂಚಿಕೊಂಡಿರುತ್ತೇನೆ. ಕೂಡಲೇ ಎಚ್ಚೆತ್ತುಕೊಂಡಿರುವ ಪಿಡಿಒ ಅವರು ಭಾವಚಿತ್ರವನ್ನು ಬದಲಾಯಿಸಿ ಹೊಸ ಭಾವಚಿತ್ರವನ್ನು ಇಟ್ಟಿದ್ದಾರೆ. ಆದರೆ ಈ ಬಗ್ಗೆ ಅ.5ರಂದು ನಡೆದ ಪಂಚಾಯತ್‌ನ ಸಾಮಾನ್ಯ ಸಭೆಯಲ್ಲಿ ಪಿಡಿಒ ಅವರು ಮಾತನಾಡಿ, ಪಂಚಾಯತ್‌ನ ವಿಷಯವನ್ನು ಸಂಘಟನೆಯ ಗ್ರೂಪ್ ನಲ್ಲಿ ಯಾಕೆ ಹಾಕಿದ್ದು ಎಂದು ನನಗೆ ಗದರಿಸಿ ಎಲ್ಲಾ ಸದಸ್ಯರುಗಳ ಎದುರು ನಿಂದಿಸಿರುತ್ತಾರೆ. ಅಭಿವೃದ್ದಿ ಅಧಿಕಾರಿಯವರು ಪರಿಶಿಷ್ಟ ಜಾತಿಯವರೆಂಬ ಅಹಂಕಾರದಿಂದ ನನ್ನನ್ನು ಏನು ಮಾಡಲು ಸಾಧ್ಯವಿಲ್ಲವೆಂದು ಸಾರ್ವಜನಿಕರಲ್ಲಿ ಹಂಚಿಕೊಂಡಿದ್ದಾರೆ. ಗ್ರಾಮದ ಪ್ರತಿಯೊಂದು ಅಭಿವೃದ್ದಿ ಕಾರ್ಯಗಳು ಕುಂಠಿತವಾಗಿದೆ. ಬಡವರ ಯಾವುದೇ ಕೆಲಸಗಳಿಗೆ ಸಹಕಾರ ನೀಡದೆ ಬೇಜಾವ್ದಾರಿಯಾಗಿ ವರ್ತಿಸುತ್ತಿದ್ದಾರೆ. ಅಧಿಕಾರಿಯಾಗಿದ್ದರೂ ರಾಜಕೀಯ ಪಕ್ಷದ ವ್ಯಕ್ತಿಯಂತೆ ಸಾರ್ವಜನಿಕರಲ್ಲಿ ವರ್ತಿಸುತ್ತಾರೆ. ಇವರನ್ನು ಕೂಡಲೇ ವರ್ಗಾವಣೆ ಮಾಡಬೇಕು ಇಲ್ಲದಿದ್ದಲ್ಲಿ ದ.ಸಂ.ಸ. ಕಡಬ ತಾಲೂಕು ಶಾಖೆ ವತಿಯಿಂದ ತಾ.ಪಂ. ಎದುರು ಪ್ರತಿಭಟನೆ ಮಾಡಲಾಗುವುದು ಎಂದು ಅವರು ಮನವಿಯಲ್ಲಿ ತಿಳಿಸಿದ್ದಾರೆ. ಮನವಿ ನೀಡುವ ಸಂದರ್ಭದಲ್ಲಿ ದಲಿತ ಮುಖಂಡರಾದ ಗುರುವಪ್ಪ ಕಲ್ಲುಗುಡ್ಡೆ, ಕೆ.ಪಿ. ಆನಂದ ಪಡುಬೆಟ್ಟು, ಅಚ್ಯುತ ಮೆಲ್ಕಾಜೆ, ಶ್ರೀಧರ ಬೊಟ್ಟಡ್ಕ, ವಿಶ್ವನಾಥ ಅಲೆಕ್ಕಾಡಿ, ಶೀನ ಬಾಳಿಲ ಮೊದಲಾದವರು ಉಪಸ್ಥಿತರಿದ್ದರು.

ಬೀಮ್ ಆರ್ಮಿ ಎಚ್ಚರಿಕೆ:
ಈ ಬಗ್ಗೆ ಬೀಮ್ ಆರ್ಮಿ ಕಡಬ ತಾಲೂಕು ಅಧ್ಯಕ್ಷ ರಾಘವ ಕಳಾರ ಅವರು, ತಾ.ಪಂ.ಮುಖ್ಯ ಕಾರ್ಯನಿರ್ವಾಹಣಾಧಿಕಾರಿಯವರಿಗೆ ಮನವಿ ನೀಡಿ, ನೂಜಿಬಾಳ್ತಿಲ ಗ್ರಾ.ಪಂ. ಅಭಿವೃದ್ದಿ ಅಧಿಕಾರಿ ಗುರುವ ಎಸ್. ಅವರು ಕಾನೂನು ರೀತಿಯಲ್ಲಿ ಉತ್ತಮ ಕೆಲಸವನ್ನು ಮಾಡಿಕೊಂಡು ಇದ್ದಾರೆ. ಆದರೆ ಕೆಲವರು ಇದನ್ನು ಸಹಿಸಲಾಗದೆ ಅಂಬೇಡ್ಕರ್ ಅವರಿಗೆ ಅವಮಾನ ಮಾಡಿದ್ದಾರೆ ಎಂದು ಇವರ ಬಗ್ಗೆ ಸುಳ್ಳು ದೂರು ನೀಡಿದ್ದಾರೆ. ಕೆಲವು ದಲಿತ ಮುಖಂಡರು ಸಾಮಾಜಿಕ ಜಾಲತಾಣದಲ್ಲಿ ಪಿಡಿಒ ಅವರು ಅಂಬೇಡ್ಕರ್ ಅವರಿಗೆ ಅವಮಾನ ಮಾಡಿದ್ದಾರೆ ಎಂದು ಸುಳ್ಳು ಸುದ್ದಿ ಹರಡಿಸಿದ್ದಾರೆ. ಅಲ್ಲದೆ ಅಭಿವೃದ್ದಿ ಅಧಿಕಾರಿಯವರನ್ನು ವರ್ಗಾವಣೆ ಮಾಡಬೇಕೆಂದು ಆಗ್ರಹಿಸಿರುತ್ತಾರೆ. ಪಿಡಿಒ ಗುರುವ ಅವರು ಈವರೆಗೆ ಯಾವುದೇ ತಪ್ಪುಗಳನ್ನು ಮಾಡದೆ ಇದ್ದರೂ ಇವರ ವಿರುದ್ದ ದ್ವೇಷ ಇಟ್ಟುಕೊಂಡು ತೇಜೋವಧೆ ಮಾಡುತ್ತಿದ್ದಾರೆ. ಇದನ್ನು ಬೀಮ್ ಆರ್ಮಿ ಖಂಡಿಸುತ್ತದೆ, ಮತ್ತು ಪಿಡಿಒ ಅವರನ್ನು ವರ್ಗಾವಣೆ ಮಾಡಿದರೆ ತಾ.ಪಂ. ಎದುರು ಪ್ರತಿಭಟನೆ ಮಾಡಲಿದ್ದೇವೆ ಎಂದು ಹೇಳಿದ್ದಾರೆ.

ವೈಯಕ್ತಿಕ ದ್ವೇಷದಿಂದ ಅಪಪ್ರಚಾರ-ಪಿಡಿಒ
ಈ ಬಗ್ಗೆ ನೂಜಿಬಾಳ್ತಿಲ ಗ್ರಾ.ಪಂ. ಅಭಿವೃದ್ದಿ ಅಧಿಕಾರಿ ಗುರುವ ಅವರು ಪ್ರತಿಕ್ರಿಯೆ ನೀಡಿ, ನನ್ನ ಮೇಲಿನ ವೈಯಕ್ತಿಕ ದ್ವೇಷದಿಂದ ಇಲ್ಲ ಸಲ್ಲದ ಆರೋಪಗಳನ್ನು ಮಾಡಲಾಗುತ್ತಿದೆ. ಅಂಬೇಡ್ಕರ್ ಭಾವ ಚಿತ್ರವನ್ನು ಬದಲಾಯಿಸಿದ್ದೇನೆ, ಪಂಚಾಯತ್ ಕಟ್ಟಡಕ್ಕೆ ಪೈಂಟ್ ಆದ ಬಳಿಕ ಹಳೆ ಪೋಟೋಗಳನ್ನು ಬದಲಾವಣೆ ಮಾಡುವ ಎಂದು ಆಡಳಿತ ಮಂಡಳಿಯ ಅಭಿಪ್ರಾಯದಂತೆ ಆ ಸಮಯದಲ್ಲಿ ಬದಲಾಯಿಸಿಲ್ಲ. ಕಟ್ಟಡಕ್ಕೆ ಪೈಂಟ್ ಆದ ಕೂಡಲೇ ಪೋಟೋ ಬದಲಾಯಿಸಿದ್ದೇನೆ ಎಂದು ಅವರು ಪ್ರತಿಕ್ರಿಯೆ ನೀಡಿದ್ದಾರೆ.

LEAVE A REPLY

Please enter your comment!
Please enter your name here