ಪುತ್ತೂರು: ಮನೆಯಿಂದ ತಪ್ಪಿಸಿಕೊಂಡು ಬಂದು ರೈಲಿನಲ್ಲಿ ಟಿಕೆಟ್ ಇಲ್ಲದೇ ಪ್ರಯಾಣಿಸುತ್ತಿದ್ದ ವೇಳೆ ಚೆಕ್ಕಿಂಗ್ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದ ಅಪ್ರಾಪ್ತ ಬಾಲಕ ಮತ್ತೆ ಮನೆ ಸೇರಿದ ಪ್ರಕರಣವೊಂದು ಅ.11ರಂದು ಪುತ್ತೂರಿನಲ್ಲಿ ನಡೆದಿದೆ.
ಬೆಳ್ತಂಗಡಿ ತಾಲೂಕಿನ ಕುಪ್ಪೆಟ್ಟಿಯ ಅಪ್ರಾಪ್ತ ಬಾಲಕನೋರ್ವ ಮನೆಯವರಿಗೆ ಯಾವುದೇ ಮಾಹಿತಿ ನೀಡದೇ ಪುತ್ತೂರು ರೈಲ್ವೆ ನಿಲ್ದಾಣಕ್ಕೆ ಬಂದು ಬೆಂಗಳೂರಿಗೆ ಹೋಗುವ ರೈಲು ಏರಿದ್ದ. ಆದರೆ ರೈಲು ಸುಬ್ರಹ್ಮಣ್ಯ ನೆಟ್ಟಣ ರೈಲ್ವೇ ನಿಲ್ದಾಣ ತಲುಪುವಷ್ಟರಲ್ಲಿ ಪುತ್ತೂರು ರೈಲ್ವೆ ಟಿಕೆಟ್ ಚೆಕ್ಕಿಂಗ್ ಅಧಿಕಾರಿಗಳಾದ ವಿಠಲ್ ನಾಯ್ಕ್ ಮತ್ತು ವಂಶಿಕೃಷ್ಣ ಅವರು ಬಾಲಕ ಟಿಕೆಟ್ ಇಲ್ಲದೆ ಪ್ರಯಾಣ ಮಾಡುತ್ತಿರುವುದನ್ನು ಪತ್ತೆ ಮಾಡಿ ವಿಚಾರಿಸಿದ್ದಾರೆ. ಈ ವೇಳೆ ಆತ ತಾನು ಮನೆಯಲ್ಲಿ ಗಲಾಟೆ ಮಾಡಿ ಬಂದಿರುವುದಾಗಿ ತಿಳಿಸಿದ್ದ. ನಂತರ ಅಧಿಕಾರಿಗಳು ಬಾಲಕನ ಪೋಷಕರಿಗೆ ಮಾಹಿತಿ ನೀಡಿ, ಅವರನ್ನು ಪುತ್ತೂರು ರೈಲ್ವೆ ನಿಲ್ದಾಣಕ್ಕೆ ಕರೆಸಿ ಅವರ ಜೊತೆಗೆ ಬಾಲಕನ್ನು ಕಳುಹಿಸಿಕೊಟ್ಟಿದ್ದಾರೆ ಎಂದು ವರದಿಯಾಗಿದೆ.