ಪುತ್ತೂರು: ರೋಟರಿ ಕ್ಲಬ್ ಪುತ್ತೂರು ಯುವ ಮತ್ತು ಜನ್ಮ ಪೌಂಡೇಶನ್ ಟ್ರಸ್ಟ್ ಇದರ ನೇತೃತ್ವದಲ್ಲಿ ಕೆ.ವಿ.ಜಿ. ದಂತ ವಿದ್ಯಾಲಯ ಮತ್ತು ಆಸ್ಪತ್ರೆ ಸುಳ್ಯ ಹಾಗೂ ಕೊಡಿಪ್ಪಾಡಿ ಗ್ರಾಮ ಪಂಚಾಯತ್ ಸಹಯೋಗದಲ್ಲಿ ಉಚಿತ ದಂತ ವೈದ್ಯಕೀಯ ಶಿಬಿರ ಅ.11ರಂದು ಕೊಡಿಪ್ಪಾಡಿ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ನಡೆಯಿತು.
ಶಿಬಿರವನ್ನು ಉದ್ಘಾಟಿಸಿದ ಕೊಡಿಪ್ಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸೋಮಪ್ಪ ಪೂಜಾರಿ ಓಜಾಲ ಮಾತನಾಡಿ ರೋಟರಿಯ ಕಾರ್ಯವನ್ನು ಶ್ಲಾಘಿಷಿದರು. ಮುಖ್ಯ ಅತಿಥಿಯಾಗಿದ್ದ ರೋಟರಿ ಅಸಿಸ್ಟೆಂಟ್ ಗವರ್ನರ್ ನರಸಿಂಹ ಪೈ ಮಾತನಾಡಿ ಈ ಶಿಬಿರದ ಪ್ರಯೋಜನ ಗ್ರಾಮದ ಜನರು ಪಡೆದು ಆರೋಗ್ಯವಂತರಾಗಿ ಬದುಕುವಂತೆ ಸಲಹೆ ನೀಡಿದರು. ಜನ್ಮ ಪೌಂಡೇಶನ್ ಅಧ್ಯಕ್ಷ ಹರ್ಷಕುಮಾರ್ ರೈ ಮಾತನಾಡಿ ಕಳೆದ ಹಲವು ವರ್ಷಗಳಿಂದ ಗ್ರಾಮ ಗ್ರಾಮಗಳಲ್ಲಿ, ಹಳ್ಳಿ ಹಳ್ಳಿಗಳಲ್ಲಿ ರೋಟರಿ ಮತ್ತು ಜನ್ಮ ಪೌಂಡೇಶನ್ ವತಿಯಿಂದ ಉಚಿತ ದಂತ ವೈದ್ಯಕೀಯ ಶಿಬಿರ ನಡೆಸಿಕೊಂಡು ಬರುತಿದ್ದು ಸಹಕಾರ ನೀಡುತ್ತಿರುವ ಕೆ.ವಿ.ಜಿ. ದಂತ ವೈದ್ಯಕೀಯ ಸಂಸ್ಥೆಯ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದರು. ವೇದೆಕೆಯಲ್ಲಿ ಪಂಚಾಯತ್ ಅಭಿವೃದ್ದಿ ಅಧಿಕಾರಿ ಶರೀಫ್ ಎ., ಕೊಡಿಪ್ಪಾಡಿ ಸ.ಹಿ.ಪ್ರ.ಶಾಲೆಯ ಶಿಕ್ಷಕ ಗಣೇಶ್, ರೋಟರಿ ಜೊತೆ ಕಾರ್ಯದರ್ಶಿ ವಿನೀತ್ ಶೆಣೈ ವೇದಿಕೆಯಲ್ಲಿ ಉಪಸ್ಥಿತರಿದ್ದರು. ರೋಟರಿ ಯುವದ ಅಧ್ಯಕ್ಷರಾದ ಪಶುಪತಿ ಶರ್ಮ ಸ್ವಾಗತಿಸಿ, ಕಾರ್ಯಕ್ರಮ ಸಂಯೋಜಿಸಿದ ಅಭೀಷ್ ಕೊಳಕ್ಕೆಮಾರ್ ಧನ್ಯವಾದ ಸಲ್ಲಿಸಿದರು. ಕೆ.ವಿ.ಜಿ. ಸಂಸ್ಥೆಯ ವೈದ್ಯರಾದ ಸಂದೀಪ್, ಕನ್ನಡ ಸಾಹಿತ್ಯ ಪರಿಷತ್‌ನ ಅಧ್ಯಕ್ಷ ಉಮೇಶ್ ನಾಯಕ್, ಗ್ರಾಮ ಪಂಚಾಯತ್ ಸದಸ್ಯರು ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.
ಶಿಬಿರದಲ್ಲಿ ದಂತ ಕುಳಿ ತುಂಬುವಿಕೆ, ಹಲ್ಲಿನ ಸ್ವಚ್ಚತೆ, ಹಲ್ಲಿನ ಕೀಳುವಿಕೆ, ಕೃತಕ ದಂತ ಜೋಡಣೆ ಇತ್ಯಾದಿ ಚಿಕಿತ್ಸೆಯ ಅಗತ್ಯವಿದ್ದ ಸಾರ್ವಜನಿಕರು ಆಗಮಿಸಿ ಸೂಕ್ತ ಚಿಕಿತ್ಸೆ ಹಾಗೂ ಸಲಹೆ ಪಡೆದು ಶಿಬಿರದ ಪ್ರಯೋಜನ ಪಡೆದುಕೊಂಡರು.