ಅ.15 ರಿಂದ 23: ಓಂ ಶ್ರೀ ಶಕ್ತಿ ಆಂಜನೇಯ ಮಂತ್ರಾಲಯದಲ್ಲಿ 84ನೇ ವರ್ಷದ ‘ನವರಾತ್ರಿ ಪೂಜೆ’

0

ಭಜನೆ-ಪಾರಾಯಣ-ತಾಳಮದ್ದಳೆ-ಯಕ್ಷಗಾನ ಸಹಿತ ಒಂಭತ್ತು ದಿನವೂ ಆರಾಧನೆಯೊಂದಿಗೆ ಸಾಂಸ್ಕೃತಿಕ ವೈಭವ

ಪುತ್ತೂರು: ಜಗನ್ಮಾತೆಯನ್ನು ನವರೂಪಗಳಲ್ಲಿ ನವವಿಧಗಳಲ್ಲಿ ಭಕ್ತಿ-ಭಾವದಿಂದ ಆರಾಧಿಸುವ ಆಚರಣೆಯೇ ನವರಾತ್ರಿ ಅಥವಾ ಇದನ್ನೇ ಶರನ್ನವರಾತ್ರಿ ಎಂದೂ ಕರೆಯುತ್ತಾರೆ. ನವರಾತ್ರಿಯ ಸಮಯದಲ್ಲಿ ದುರ್ಗಾದೇವಿಯನ್ನು ಒಂಭತ್ತು ರೂಪಗಳಲ್ಲಿ ಪೂಜಿಸಿ ಆರಾಧಿಸಲಾಗುತ್ತದೆ.. ಈ ಒಂಬತ್ತುರೂಪಗಳೆಂದರೆ, ಶೈಲಪುತ್ರಿ, ಬ್ರಹ್ಮಚಾರಿಣಿ, ಚಂದ್ರಘಂಟಾ, ಕೂಷ್ಮಾಂಡಾ, ಸ್ಕಂದಮಾತಾ, ಕಾತ್ಯಾಯನಿ, ಕಾಲರಾತ್ರಿ, ಮಹಾಗೌರಿ ಮತ್ತು ಸಿದ್ಧಿದಾತ್ರಿ.

ಕರಾವಳಿಯಲ್ಲಿ ನವರಾತ್ರಿ ಆಚರಣೆಗೆ ವಿಶೇಷ ಮಹತ್ವವಿದೆ. ಇಲ್ಲಿ ಹಲವು ಕಡೆಗಳಲ್ಲಿ ನವರಾತ್ರಿ ಆರಾಧನೆಯನ್ನು ವಿಶೇಷ ಭಕ್ತಿ – ಭಾವದಿಂದ ಆಚರಿಸಲಾಗುತ್ತಿದ್ದು, ಅದರಂತೆ ಪುತ್ತೂರಿನ ಬೊಳುವಾರಿನಲ್ಲಿರುವ ಓಂ ಶ್ರೀ ಶಕ್ತಿ ಆಂಜನೇಯ ಮಂತ್ರಾಲಯದಲ್ಲೂ ಅ.15 ರಿಂದ ಅ.23ರವರೆಗೆ 84ನೇ ವರ್ಷದ ನವರಾತ್ರಿ ಆರಾಧನೆ ನಡೆಯಲಿದೆ. ಅ.15 ರವಿವಾರದಂದು ಬೆಳಿಗ್ಗೆ 7 ಗಂಟೆಗೆ ಸರಿಯಾಗಿ ನವರಾತ್ರಿ ಕಲಶ ಪ್ರತಿಷ್ಠಯೊಂದಿಗೆ ಆರಾಧನೆ ಪ್ರಾರಂಭಗೊಳ್ಳಲಿದೆ.

ನವರಾತ್ರಿ ಅಂಗವಾಗಿ ಶ್ರೀ ಕ್ಷೇತ್ರದಲ್ಲಿ ಪ್ರತೀದಿನ ಭಜನೆ ಹಾಗೂ ರಾತ್ರಿ 9.30ಕ್ಕೆ ಮಹಾಪೂಜೆ ನಡೆಯಲಿದೆ. ಇನ್ನು ಅ.23ರಂದು ಸೋಮವಾರ ರಾತ್ರಿ 10 ಗಂಟೆಗೆ ಮುಕ್ತಾಯದ ಮಹಾಶಕ್ತಿ ಪೂಜೆ ಅರ್ಚಕರಾದ ತಿರುಮಲೇಶ್ವರ ಭಟ್ ಅವರ ಪೌರೋಹಿತ್ಯದಲ್ಲಿ ಹಾಗೂ ಮಣಿಯಾಣಿ ಸಹೋದರರ – ಊರ ಹತ್ತು ಸಮಸ್ತರ ಮುಂದಾಳತ್ವದಲ್ಲಿ ನಡೆಯಲಿದೆ.ನವರಾತ್ರಿ ಆಚರಣೆ ಪ್ರಯುಕ್ತ ಅ.15 ರಂದು ಮೊದಲ್ಗೊಂಡು ಅ.23ರವರೆಗೆ ಪ್ರತೀದಿನ ಸಾಯಂಕಾಲ ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಗಳೂ ಸಹ ನಡೆಯಲಿದೆ.


ಪ್ರತೀದಿನ ಸಾಂಸ್ಕೃತಿಕ-ಧಾರ್ಮಿಕ ಕಾರ್ಯಕ್ರಮಗಳು:
ಅ.15ರಂದು ಸಾಯಂಕಾಲ 6 ಗಂಟೆಯಿಂದ ವಿಶ್ವಹಿಂದೂ ಪರಿಷತ್ ಮಾತೃಶಕ್ತಿ ಭಜನಾ ಮಂಡಳಿ ಇವರಿಂದ ಭಜನಾ ಕಾರ್ಯಕ್ರಮ ನಡೆಯಲಿದೆ. ಅ.17ರಂದು ಪುತ್ತೂರು ಮಹಿಳಾ ಮಂಡಳಿಯವರಿಂದ ಶ್ರೀ ಲಲಿತಾ ಸಹಸ್ರನಾಮ ಪಠಣ ಹಾಗೂ ಬಳಿಕ ತಿರುಪತಿ ತಿರುಮಲ ಟ್ರಸ್ಟ್ ಬೊಳುವಾರು ಇದರ ಸದಸ್ಯರಿಂದ ಭಜನಾ ಕಾರ್ಯಕ್ರಮ ನಡೆಯಲಿದೆ. ಅ.19ರಂದು ಒಡಿಯೂರು ವಜ್ರಮಾತಾ ಭಜನಾ ಮಂಡಳಿ ಪುತ್ತೂರು ಇವರಿಂದ ಭಜನಾ ಕಾರ್ಯಕ್ರಮ ನಡೆಯಲಿದೆ. ಅ.20ರಂದು ಮೂಡಾಯೂರು ಚಂದ್ರಶೇಖರ ಮತ್ತು ಬಳಗದವರಿಂದ ಸ್ಯಾಕ್ಸೋಫೋನು ವಾದನ ನಡೆಯಲಿದೆ. ಅ.21ರಂದು ಬೊಳುವಾರು ಸುಬ್ರಹ್ಮಣ್ಯ ನಗರದ ಮೈದಾನದಲ್ಲಿ ಶ್ರೀ ದೇವಿ ಮಹಿಳಾ ಯಕ್ಷ ತಂಡ ಬಾಲವನ ಪುತ್ತೂರು ಇವರಿಂದ ಶ್ರೀ ದೇವಿ ಲೀಲಾಮೃತ ಎಂಬ ಯಕ್ಷಗಾನ ಬಯಲಾಟ ನಡೆಯಲಿದೆ. ಅ.22ರಂದು ಶ್ರೀ ಆಂಜನೇಯ ಮಹಿಳಾ ಯಕ್ಷಗಾನ ಸಂಘ ಮತ್ತು ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘ ಬೊಳುವಾರು-ಪುತ್ತೂರು ವತಿಯಿಂದ ಬೊಳುವಾರು ಸುಬ್ರಹ್ಮಣ್ಯ ನಗರದ ಮೈದಾನದಲ್ಲಿ ‘ಯಕ್ಷಗಾನ ತಾಳಮದ್ದಳೆ’ ನಡೆಯಲಿದೆ.


ಅ.23ರಂದು ರಾತ್ರಿ 7 ಗಂಟೆಯಿಂದ ದಿ.ಗಂಗಣ್ಣ ಮತ್ತು ದಿ. ಚಂದ್ರಶೇಖರ ಸ್ಮರಣಾರ್ಥ ಬಾಲಕೃಷ್ಣ (ಬಾಲಣ್ಣ) ಮತ್ತು ಬಳಗದವರಿಂದ ಬೊಳುವಾರು ಸುಬ್ರಹ್ಮಣ್ಯ ನಗರದ ಮೈದಾನದಲ್ಲಿ ತಾಲೀಮು ಬೆಂಕಿಯಾಟ ಪ್ರದರ್ಶನ ಹಾಗೂ ಹುಲಿಯಾಟ ಪ್ರದರ್ಶನ ನಡೆಯಲಿದೆ. ಅದೇ ದಿನ ರಾತ್ರಿ 9.30ರಿಂದ ಸಾಂಸ್ಕೃತಿಕ ಕಲಾ ಕೇಂದ್ರ ಬೊಳುವಾರು-ಪುತ್ತೂರು ಇವರಿಂದ ‘ಬಾರಿಸು ಕನ್ನಡ ಡಿಂಡಿಮವ’ ಸಂಪನ್ನಗೊಳ್ಳಲಿದ್ದು ಬಳಿಕ, ರಾತ್ರಿ 10.30ರಿಂದ ಶ್ರೀ ಮಹಾಲಕ್ಷ್ಮೀ ಕೃಪಾಪೋಷಿತ ಯಕ್ಷಗಾನ ಮಂಡಳಿ ಇವರಿಂದ ಜಿಲ್ಲೆಯ ಹೆಸರಾಂತ ಕಲಾವಿದರ ಕೂಡುವಿಕೆಯಿಂದ ‘ದಕ್ಷಯಜ್ಞ ಗಿರಿಜಾ ಕಲ್ಯಾಣ’ ಯಕ್ಷಗಾನ ಬಯಲಾಟ ನಡೆಯಲಿದೆ.


ನವರಾತ್ರಿ ಆಚರಣೆಯ ವಿಶೇಷ:
ನವರಾತ್ರಿಯ ಮೊದಲನೆಯ ದಿನ ಕಳಸ ಬೆಳಗುವುದರೊಂದಿಗೆ ಅರಂಭವಾಗುತ್ತದೆ. ಶಕ್ತಿ ದೇವತೆಯಾದ ದುರ್ಗಾ ಮಾತೆಗೆ ಕಳಸ ಬೆಳಗುವುದರೊಂದಿಗೆ ದೀಪ ಹಚ್ಚಿ ಪೂಜೆ ಮಾಡುತ್ತಾರೆ. ಎರಡನೆಯ ದಿನದಂದು ಲಕ್ಷ್ಮೀ ಪೂಜೆ, ಮೂರನೆಯ ದಿನದಂದು ಮಹಿಷಾಸುರಮರ್ದಿನಿ ರೂಪದಲ್ಲಿ ದೇವಿಯನ್ನು ಪೂಜಿಸಲಾಗುತ್ತದೆ, ನಾಲ್ಕನೆಯ ದಿನದಂದು ಸಿಂಹವಾಹಿನಿಯಾದ ಚಾಮುಂಡೇಶ್ವರಿ ದೇವಿಯನ್ನು, ಐದನೇ ದಿನದಲ್ಲಿ ಧೂಮ್ರಾಹ ಎಂಬ ರೂಪದಲ್ಲಿ ದೇವಿಯನ್ನು ಪೂಜಿಸಲಾಗುತ್ತದೆ, ಆರನೆಯ ದಿನದಂದು ಧನ ಲಕ್ಷ್ಮಿಯ ರೂಪದಲ್ಲಿ ಪೂಜಿಸಲಾಗುತ್ತದೆ, ಏಳನೆಯ ದಿನದಂದು ವಿದ್ಯೆಯನ್ನು ಕರುಣಿಸುವ ಸರಸ್ವತಿ ಮಾತೆಯ ರೂಪದಲ್ಲಿ ಪೂಜಿಸಲಾಗುತ್ತದೆ, ಎಂಟನೆಯ ದಿನ ದುರ್ಗಾದೇವಿಯನ್ನು ಪೂಜಿಸುವುದರಿಂದ ಈ ದಿನವನ್ನು ದುರ್ಗಾಷ್ಟಮಿ ಎಂದೂ ಕರೆಯುತ್ತಾರೆ, ನವರಾತ್ರಿಯ ಒಂಬತ್ತನೇ ದಿನದಂದು ಜಗನ್ಮಾತೆಯು ಲೋಕಕಂಠಕ ಅಸುರರನ್ನು ಸಂಹರಿಸಿ ಲೋಕಕ್ಕೆ ಶಾಂತಿಯನ್ನು ತಂದಳೆಂಬ ನಂಬಿಕೆಯ ದ್ಯೋತಕವಾಗಿ ಒಂಬತ್ತನೇ ದಿನದಂದು ಆಯುಧ ಪೂಜೆ ಮಾಡಲಾಗುತ್ತದೆ. ಈ ರೀತಿ ಆಶ್ವಯುಜ ಶುದ್ಧ ಪಾಡ್ಯದಿಂದ ನವಮಿಯವರೆಗೆ ಜಗನ್ಮಾತೆಯನ್ನು ಈ ಎಲ್ಲಾ ರೂಪಗಳಲ್ಲಿ ಆರಾಧಿಸಿ ಆಕೆಯ ಅನುಗ್ರಹಕ್ಕೆ ಭಕ್ತರು ಪಾತ್ರರಾಗುತ್ತಾರೆ.

LEAVE A REPLY

Please enter your comment!
Please enter your name here