ರೈತರಿಗೆ 3 ಪಾಳಿಗಳಲ್ಲಿ ನಿರಂತರ 5 ಗಂಟೆ ವಿದ್ಯುತ್ ಪೂರೈಕೆ: ಎಸ್ಕಾಂ ಎಂಡಿಗಳಿಗೆ ಸಿಎಂ ಸಿದ್ಧರಾಮಯ್ಯ ಸೂಚನೆ

0

ಕಚೇರಿಯಲ್ಲೇ ಕುಳಿತರೆ ಸಮಸ್ಯೆ ಬಗೆಹರಿಯದು
ಎಸ್ಕಾಂಗಳ ಎಂ.ಡಿ.ಗಳು ಕಚೇರಿಯಲ್ಲೇ ಕುಳಿತರೆ ಸಮಸ್ಯೆ ಬಗೆಹರಿಯುವುದಿಲ್ಲ.ಮುಖ್ಯ ಎಂಜಿನಿಯರ್‌ಗಳು ಫೀಲ್ಡ್ಗೆ ಹೋಗಬೇಕು.ಪರಿಸ್ಥಿತಿಯನ್ನು ರೈತರಿಗೆ ಮನವರಿಕೆ ಮಾಡಿಸಿ ಅವರ ಸಮಸ್ಯೆಗಳನ್ನು ಆಲಿಸಬೇಕು.ಹಿಂದಿನ ಸರಕಾರದ ಅವಧಿಯಲ್ಲಿ ಉತ್ತಮ ಮಳೆ ಆಗಿದ್ದರೂ ವಿದ್ಯುತ್ ಉತ್ಪಾದನೆ ಮಾಡಲಿಲ್ಲ.ನಮ್ಮ ಸರಕಾರ ಬಂದ ಮೇಲೆ ಮಳೆ ಕೊರತೆ ಆಗಿ, ಬರಗಾಲ ಬಂದಿದೆ.ಇದನ್ನು ರೈತರಿಗೆ ಮನವರಿಕೆ ಮಾಡಿಸಬೇಕು ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಅಧಿಕಾರಿಗಳಿಗೆ ಸೂಚಿಸಿದರು.

ಅಧಿಕಾರಿಗಳಿಗೆ ತರಾಟೆ
ರೈತರಿಗೆ ವಿದ್ಯುತ್ ಕೊರತೆ ಆಗದಂತೆ ತುರ್ತು ಸಂದರ್ಭದಲ್ಲಿ ಅಗತ್ಯವಾದ ಯೋಜನೆ ಮತ್ತು ಸಿದ್ಧತೆಗಳನ್ನು ಏಕೆ ಮಾಡಿಕೊಂಡಿಲ್ಲ ಎಂದು ಇಂಧನ ಇಲಾಖೆ ಅಧಿಕಾರಿಗಳನ್ನು ಸಿಎಂ ತರಾಟೆಗೆ ತೆಗೆದುಕೊಂಡರು. ವಿದ್ಯುತ್ ಪೂರೈಕೆಗಾಗಿ ಹಲವು ಜಿಲ್ಲೆಗಳಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಗಳನ್ನು ಪ್ರಸ್ತಾಪಿಸಿದ ಅವರು, ವಿದ್ಯುತ್ ಅನ್ನು ವೈಜ್ಞಾನಿಕವಾಗಿ ಸರಬರಾಜು ಮಾಡಲು ಕ್ರಮವಹಿಸಬೇಕು. ಮೊದಲೇ ಹೀಗೆ ಮಾಡಿದ್ದರೆ ವಿದ್ಯುತ್ ಕೊರತೆ ನಡುವೆಯೂ ರೈತರಿಗೆ ಸಮಸ್ಯೆ ಆಗುತ್ತಿರಲಿಲ್ಲ ಎಂದರು.

ಲೋಡ್ ಶೆಡ್ಡಿಂಗ್‌ ಆಗದಂತೆ ಎಚ್ಚರಿಕೆ ವಹಿಸಬೇಕು
ಮುಖ್ಯ ಎಂಜಿನಿಯರ್‌ಗಳು ಫೀಲ್ಡ್ಗೆ ಹೋಗಬೇಕು
ಮಳೆ ಕೊರತೆಯಿಂದ ಬರಗಾಲ ಬಂದು ಸಮಸ್ಯೆ
ಅಧಿಕಾರಿಗಳು ಇದನ್ನು ರೈತರಿಗೆ ಮನವರಿಕೆ ಮಾಡಬೇಕು

ಬೆಂಗಳೂರು:ರಾಜ್ಯದಲ್ಲಿ ಬರ ಪರಿಸ್ಥಿತಿಯ ಹಿನ್ನೆಲೆಯಲ್ಲಿ ವಿದ್ಯುತ್ ಬೇಡಿಕೆ ಗಣನೀಯವಾಗಿ ಹೆಚ್ಚಿರುವುದರಿಂದ ರೈತರಿಗೆ ಪ್ರತಿದಿನ ಮೂರು ಪಾಳಿಗಳಲ್ಲಿ ನಿರಂತರ ಐದು ಗಂಟೆಗಳ ಕಾಲ ವಿದ್ಯುತ್ ಪೂರೈಕೆ ಮಾಡುವಂತೆ ಹಾಗೂ ಲೋಡ್ ಶೆಡ್ಡಿಂಗ್ ಆಗದಂತೆ ಎಚ್ಚರಿಕೆ ವಹಿಸಬೇಕು ಎಂದು ಮೆಸ್ಕಾಂ ಸಹಿತ ಎಸ್ಕಾಂಗಳ ಎಂ.ಡಿ.ಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ.

ಗೃಹ ಕಚೇರಿ ಕೃಷ್ಣಾದಲ್ಲಿ ಇಂಧನ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಅವರು, ಕೃಷಿ ಕ್ಷೇತ್ರದಲ್ಲಿ ವಿದ್ಯುತ್‌ಗೆ ಬೇಡಿಕೆ ಹೆಚ್ಚಾಗಿದ್ದು, ಎಲ್ಲ ಮುಖ್ಯ ಎಂಜಿನಿಯರ್‌ಗಳನ್ನು ಜಿಲ್ಲೆಗೊಬ್ಬರಂತೆ ನೋಡಲ್ ಅಧಿಕಾರಿಗಳಾಗಿ ನೇಮಕ ಮಾಡಲಾಗಿದ್ದು, ರೈತರಿಗೆ ನಿರಂತರ 5 ಗಂಟೆ ವಿದ್ಯುತ್ ಪೂರೈಕೆ ಆಗುತ್ತಿರುವುದನ್ನು ಖಾತರಿಪಡಿಸಬೇಕು ಎಂದು ಮುಖ್ಯಮಂತ್ರಿ ಸೂಚನೆ ನೀಡಿದರು.

ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿ ಇಂದಿನ ಸಭೆಯ ತೀರ್ಮಾನಗಳು ಪಾಲನೆಯಾಗುತ್ತಿರುವುದನ್ನು ಖಾತರಿಪಡಿಸಬೇಕು.ಕಳೆದ ಐದು ವರ್ಷಗಳಿಂದ ವಿದ್ಯುತ್ ಉತ್ಪಾದನೆಯ ಸ್ಥಾಪಿತ ಸಾಮರ್ಥ್ಯ ಹೆಚ್ಚಳ ಕೇವಲ 4 ಸಾವಿರ ಮೆಗಾವ್ಯಾಟ್‌ನಷ್ಟು ಮಾತ್ರ ಇದೆ. ರಾಜ್ಯದ ಒಟ್ಟಾರೆ ವಿದ್ಯುತ್ ಉತ್ಪಾದನಾ ಸಾಮರ್ಥ್ಯ 32 ಸಾವಿರ ಮೆಗಾ ವ್ಯಾಟ್ ಇದ್ದರೂ ಇದರಲ್ಲಿ 16 ಸಾವಿರ ಮೆಗಾ ವ್ಯಾಟ್ ಸೌರ ವಿದ್ಯುತ್ ಆಗಿದೆ.ಇದು ಹಗಲು ಹೊತ್ತಿನಲ್ಲಿ ಮಾತ್ರ ಉತ್ಪಾದನೆ ಆಗುವುದರಿಂದ ಬೇಡಿಕೆ ನಿರ್ವಹಣೆಯಲ್ಲಿ ವ್ಯತ್ಯಯವಾಗುತ್ತಿದೆ.ಜೊತೆಗೆ ಕಲ್ಲಿದ್ದಲಿನಲ್ಲಿದ್ದ ಕೆಲವು ಸಮಸ್ಯೆಗಳನ್ನು ನಿವಾರಿಸಿ, ಆಮದು ಕಲ್ಲಿದ್ದಲು ಖರೀದಿಗೆ ಟೆಂಡರ್ ಕರೆಯಲಾಗಿದೆ ಎಂದು ಅಧಿಕಾರಿಗಳು ಮುಖ್ಯಮಂತ್ರಿಗಳಿಗೆ ವಿವರಿಸಿದರು.

ನವೆಂಬರ್‌ನಿಂದ ಉತ್ತರ ಪ್ರದೇಶದಿಂದ 300 ಮೆಗಾ ವ್ಯಾಟ್, ಪಂಜಾಬ್‌ನಿಂದ 600 ಮೆಗಾ ವ್ಯಾಟ್ ವಿದ್ಯುತ್ ಪಡೆಯಲಾಗುವುದು.ಕೆ.ಇ.ಆರ್.ಸಿ.ಅನುಮೋದನೆಯೊಂದಿಗೆ 1500 ಮೆಗಾ ವ್ಯಾಟ್ ಅಲ್ಪಾವಧಿ ವಿದ್ಯುತ್ ಖರೀದಿಗೆ ಕ್ರಮ ಕೈಗೊಳ್ಳಲಾಗುವುದು.ರಾಜ್ಯದಲ್ಲಿನ ವಿದ್ಯುತ್ ಉತ್ಪಾದಕರಿಂದ ವಿದ್ಯುತ್ ಪಡೆಯಲು ರಾಷ್ಟ್ರೀಯ ವಿಪತ್ತಿನಡಿ ವಿದ್ಯುತ್ ಕಾಯ್ದೆಯ ಸೆಕ್ಷನ್ 11ನ್ನು ಜಾರಿಗೊಳಿಸಲಾಗಿದೆ.ಆ ಮೂಲಕ ವಿದ್ಯುತ್ ಕೊರತೆಯನ್ನು ನಿವಾರಿಸಲಾಗುವುದು ಎಂದೂ ಅಧಿಕಾರಿಗಳು ವಿವರಿಸಿದರು.

ಶೇ.13ರಷ್ಟು ವಿದ್ಯುತ್ ವಿತರಣಾ ನಷ್ಟವಾಗುತ್ತಿದೆ.ಗೃಹಜ್ಯೋತಿಯಿಂದಾಗಿ ವಿದ್ಯುತ್ ಕಳವು ಕಡಿಮೆಯಾಗಿದೆ.ಕೈಗಾರಿಕಾ ವಿದ್ಯುತ್ ಕಳವು ಅತಿ ಕಡಿಮೆ. ಕಬ್ಬಿನ ಬೆಳೆಗೆ ನೀರು ಹಾಯಿಸಲು ಕೆಲವು ಜಿಲ್ಲೆಗಳಲ್ಲಿ ವಿದ್ಯುತ್ ಬೇಡಿಕೆ ಹೆಚ್ಚಾಗಿದೆ.ಇನ್ನು ಕೆಲವೇ ದಿನಗಳಲ್ಲಿ ಕಬ್ಬಿನ ಕಟಾವು, ಅರೆಯುವಿಕೆ ಪ್ರಾರಂಭವಾಗುತ್ತಿದ್ದಂತೆ ಬೇಡಿಕೆ ಇಳಿಕೆಯಾಗಲಿದ್ದು, ಕಬ್ಬು ಅರೆಯುವಿಕೆಯೊಂದಿಗೆ ಕೊ-ಜನರೇಶನ್‌ನಿಂದ ವಿದ್ಯುತ್ ಲಭ್ಯವಾಗುತ್ತದೆ ಎಂದು ಅಧಿಕಾರಿಗಳು ವಿವರಿಸಿದರು.

2020-21ರಲ್ಲಿ ರಾಜ್ಯಕ್ಕೆ ಹಂಚಿಕೆಯಾಗಿದ್ದ 7 ಸಾವಿರ ಆಫ್ ಗ್ರಿಡ್/ಸ್ಟ್ಯಾಂಡ್ ಅಲೋನ್ ಸೌರ ಪಂಪ್‌ಗಳ ಅಳವಡಿಕೆಯಾಗಿಲ್ಲ.ಇತರೆ ರಾಜ್ಯಗಳಿಗೆ 1 ಲಕ್ಷ ಪಂಪ್‌ಗಳ ಹಂಚಿಕೆಯಾಗಿದೆ. ರಾಜ್ಯದ ಪಾಲಾದ 150 ಮೆಗಾ ವ್ಯಾಟ್ ವಿದ್ಯುತ್ತನ್ನು ಹೊಸದಿಲ್ಲಿಗೆ ಹಂಚಿಕೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.ದೈನಂದಿನ ಬಳಕೆಯು 180 ಮಿಲಿಯನ್ ಯೂನಿಟ್‌ನಿಂದ 260 ಮಿಲಿಯನ್ ಯೂನಿಟ್‌ಗಳಿಗೆ ಏರಿಕೆಯಾಗಿದೆ.ಮಳೆಗಾಲದಲ್ಲಿ ಗರಿಷ್ಠ ಹಗಲಿನ ವಿದ್ಯುತ್ ಬೇಡಿಕೆ 11 ಸಾವಿರ ಮೆಗಾವ್ಯಾಟ್‌ನಿಂದ 16 ಸಾವಿರ ಮೆಗಾ ವ್ಯಾಟ್‌ಗೆ ಏರಿಕೆಯಾಗಿದೆ.ಜಲವಿದ್ಯುತ್ ಮತ್ತು ಪವನ ವಿದ್ಯುತ್ ಲಭ್ಯತೆಯಲ್ಲಿನ ಕೊರತೆಯಿಂದಾಗಿ, ರಾತ್ರಿಯ ವೇಳೆಯಲ್ಲಿ ಸುಮಾರು 10 ಸಾವಿರ ಮೆಗಾ ವ್ಯಾಟ್ ವಿದ್ಯುತ್ ಕೊರತೆ ಎದುರಿಸಲಾಗುತ್ತಿದೆ. ರಾಜ್ಯದಿಂದ 1 ಸಾವಿರ ದಿಂದ 1500 ಮೆಗಾ ವ್ಯಾಟ್ ಖರೀದಿಸಲು ಪ್ರಯತ್ನಗಳು ನಡೆಯುತ್ತಿವೆ ಎಂದು ಅವರು ಹೇಳಿದರು.

ಹೆಚ್ಚು ವಿದ್ಯುತ್ ಉತ್ಪಾದಿಸಲು ಪ್ರಯತ್ನಗಳು: ಜಲವಿದ್ಯುತ್ ಲಭ್ಯತೆಯಲ್ಲಿ 3 ಸಾವಿರ ದಶಲಕ್ಷ ಯೂನಿಟ್ ಕಡಿಮೆಯಾಗಿದೆ. ಪ್ರತಿ ದಿನಕ್ಕೆ ಸರಾಸರಿ 10 ದಶಲಕ್ಷ ಯೂನಿಟ್ ಜಲವಿದ್ಯುತ್ತನ್ನು ಗರಿಷ್ಠ ಬೇಡಿಕೆ ಪೂರೈಸಲು ಮತ್ತು ವಿದ್ಯುತ್ ಜಾಲದ ನಿರ್ವಹಣೆಗಾಗಿ ಮಾತ್ರ ಬಳಸಲಾಗುತ್ತಿದೆ. ಹೆಚ್ಚಿನ ಬೇಡಿಕೆಯ ಕಾರಣದಿಂದ ಶಾಖೋತ್ಪನ್ನ ಘಟಕಗಳನ್ನು ಮರುಚಾಲನೆಗೊಳಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಸಭೆಯಲ್ಲಿ ಸಿಎಂ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು, ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮ, ಇಂಧನ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತಾ, ಹಣಕಾಸು ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಎಲ್.ಕೆ.ಅತೀಕ್, ಎಸ್ಕಾಂಗಳ ಎಂಡಿಗಳ ಸಹಿತ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here