ಪುತ್ತೂರು: ಜಿಲ್ಲೆಯಲ್ಲಿ ಮಂಗಳೂರು ಬಳಿಕ ಪುತ್ತೂರಿನಲ್ಲೇ ನವದುರ್ಗೆಯರ ಆರಾಧಾನೆಯೊಂದಿಗೆ ಪುತ್ತೂರು ದಸರಾ ಮಹೋತ್ಸವ ನಡೆಯುತ್ತಿದ್ದು ನವದುರ್ಗಾರಾಧನ ಸಮಿತಿ ವತಿಯಿಂದ ಸಂಪ್ಯ ಉದಯಗಿರಿ ಶ್ರೀ ವಿಷ್ಣು ಮೂರ್ತಿ ಅನ್ನಪೂರ್ಣೇಶ್ವರಿ ಕ್ಷೇತ್ರದಲ್ಲಿ 21 ನೇ ವರ್ಷದ ಪುತ್ತೂರು ದಸರಾ ಮಹೋತ್ಸವ ಅ.15 ರಂದು ಬೆಳಿಗ್ಗೆ ಉದ್ಘಾಟನೆಗೊಂಡಿತು. ಬೆಳಿಗ್ಗೆ ಕುಕ್ಕಾಡಿ ತಂತ್ರಿ ಪ್ರೀತಂ ಪುತ್ತೂರಾಯ ಅವರ ನೇತೃತ್ವದಲ್ಲಿ ಗಣಪತಿ ಸಹಿತ ನವದುರ್ಗೆಯರ ಪ್ರತಿಷ್ಠೆ ನಡೆಯಿತು.
ಆರ್ಯಾಪು ಗ್ರಾ.ಪಂ ಅಧ್ಯಕ್ಷ ಗೀತಾ ಪುತ್ತೂರು ದಸರಾ ಮಹೋತ್ಸವವನ್ನು ಉದ್ಘಾಟಿಸಿ ಮಾತನಾಡಿ ಪುತ್ತೂರಿನ ಭಕ್ತರಿಗೆ ದೂರದ ಮಂಗಳೂರಿಗೆ ಹೋಗುವ ಬದಲು ಪುತ್ತೂರಿನಲ್ಲೇ ಇಂತಹ ಗಣಪತಿ, ಶಾರದೆ ಸಹಿತ ನವದುರ್ಗೆಯರ ದರುಶನವನ್ನು ಮಾಡಲು ಅವಕಾಶವಿದೆ. ಈ ಪುತ್ತೂರು ದಸರಾ ಇನ್ನೂ ವಿಜೃಂಭಣೆಯಿಂದ ನಡೆಯಲಿ ಎಂದು ಹಾರೈಸಿದರು. ತಾ.ಪಂ ಕಾರ್ಯನಿರ್ವಹಣಾಧಿಕಾರಿ ನವೀನ್ ಕುಮಾರ್ ಭಂಡಾರಿ ಭಗವಧ್ವಜರೋಹಣ ಮಾಡಿ ಶುಭ ಹಾರೈಸಿದರು. ದಸರಾ ಮಹೋತ್ಸವ ಸಮಿತಿ ಗೌರವ ಸಲಹೆಗಾರ ಅರುಣ್ ಕುಮಾರ್ ಪುತ್ತಿಲ, ನಗರಸಭಾ ಸದಸ್ಯ ಶೀನಪ್ಪ ನಾಯ್ಕ್, ಆರ್ಯಾಪು ಗ್ರಾಪಂ ಉಪಾಧ್ಯಕ್ಷ ಅಶೋಕ್ ನಾಯ್ಕ್, , ಸಾಂಸ್ಕೃತಿ ಸಮಿತಿಯ ಬಾಲಕೃಷ್ಣ ಶೆಟ್ಟಿ ಕುಕ್ಕಾಡಿ, ಪ್ರಕಾಶ್, ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು. ದಸರಾ ಮಹೋತ್ಸವ ಸಮಿತಿ ಸಂಚಾಲಕ ಕೆ.ಪ್ರೀತಂ ಪುತ್ತೂರಾಯ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಧ್ಯಕ್ಷ ಜಯಂತ ಶೆಟ್ಟಿ ಕಂಬಳತ್ತಡ್ಡ ಸ್ವಾಗತಿಸಿ, ಸಮಿತಿ ಗೌರವ ಸಲಹೆಗಾರ ಲೋಕೇಶ್ ಹೆಗ್ಡೆ ವಂದಿಸಿದರು. ಸಮಿತಿ ಪ್ರಧಾನ ಕಾರ್ಯದರ್ಶಿ ಉಮೇಶ್ ಎಸ್.ಕೆ ಕಾರ್ಯಕ್ರಮ ನಿರೂಪಿಸಿದರು.