ಸಂಪ್ಯ ಪುತ್ತೂರು ದಸರಾ ಮಹೋತ್ಸವದಲ್ಲಿ ತುಳು ಚಿತ್ರನಟರಿಬ್ಬರಿಗೆ, ಉದ್ಯಮಿಗೆ ಸನ್ಮಾನ

0

ದಸರಾ ನಾಡಹಬ್ಬ ಪ್ರತಿ ಮನೆಯಲ್ಲೂ ಸಂಭ್ರಮವಾಗಬೇಕು – ಸಂಜೀವ ಮಠಂದೂರು

ಪುತ್ತೂರು: ನವದುರ್ಗಾರಾಧನ ಸಮಿತಿ ವತಿಯಿಂದ ಸಂಪ್ಯ ಉದಯಗಿರಿ ಶ್ರೀ ವಿಷ್ಣು ಮೂರ್ತಿ ಅನ್ನಪೂರ್ಣೇಶ್ವರಿ ಕ್ಷೇತ್ರದಲ್ಲಿ21ನೇ ವರ್ಷದ ಪುತ್ತೂರು ದಸರಾ ಮಹೋತ್ಸವ ಅ.15ರಂದು ಬೆಳಿಗ್ಗೆ ಉದ್ಘಾಟನೆಗೊಂಡ ಬಳಿಕ ಸಂಜೆ ನಡೆದ ಸಭಾ ಕಾರ್ಯಕ್ರಮದಲ್ಲಿ ತುಳು ಚಿತ್ರರಂಗದ ಚೇತನ್ ರೈ ಮಾಣಿ ಮತ್ತು ರವಿ ರಾಮಕುಂಜ ಹಾಗೂ ಉದ್ಯಮಿ ದ್ವಾರಕ ಕನ್‌ಸ್ಟ್ರಕ್ಷನ್‌ನ ಮಾಲಕ ಗೋಪಾಲಕೃಷ್ಣ ಭಟ್ ಅವರನ್ನು ಸನ್ಮಾನಿಸಲಾಯಿತು.



ದಸರಾ ನಾಡಹಬ್ಬ ಪ್ರತಿ ಮನೆಯಲ್ಲೂ ಸಂಭ್ರಮವಾಗಬೇಕು:
ಪುತ್ತೂರು ದಸರಾ ಮಹೋತ್ಸವದ ಸಂಜೆ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಸಂಜೀವ ಮಠಂದೂರು ಅವರು ಮಾತನಾಡಿ ಹಿಂದೆ ಅವಿಭಕ್ತಕುಟುಂಬದಲ್ಲಿ ಪ್ರತಿ ಮನೆಯಲ್ಲೂ ಸಂಜೆ ಭಜನೆ, ಹಿರಿಯರು ಮತ್ತು ಕಿರಿಯರ ಸಂಭ್ರಮವಿತ್ತು. ದಸರಾ ಹಬ್ಬ ಪ್ರತಿ ಮನೆಯಲ್ಲೂ ಸಂಭ್ರಮಿಸುತ್ತಿತ್ತು. ಇವತ್ತು ಹಿರಿಯರು ಊರಲ್ಲಿ, ಕಿರಿಯರು ಪೇಟೆಯಲ್ಲಿ ಇರುವ ಪರಿಸ್ಥಿತಿ ಉಂಟಾಗಿದೆ. ಇಂತಹ ಸಂದರ್ಭದಲ್ಲಿ ಮತ್ತೊಮ್ಮೆ ದಸರಾ ಸಂಭ್ರಮ ಮನೆ ಮನೆಯಲ್ಲೂ ಕಾಣಬೇಕಾಗಿದೆ. ಈ ನಿಟ್ಟಿನಲ್ಲಿ ಕಳೆದ 20 ವರ್ಷಗಳಿಂದ ನಡೆಯುತ್ತಿರುವ ಪುತ್ತೂರು ದಸರಾ ಮಹೋತ್ಸವ ಜನರಿಗೆ ಪ್ರೇರಣೆ ನೀಡುವಂತಾಗಲಿ ಎಂದರು.


ಉತ್ಸವಗಳಿಗೆ ಭಕ್ತರ ಪೂರ್ಣ ಸಹಕಾರವಿರಲಿ:
ಚಿತ್ರ ನಟ ಚೇತನ್ ಮಾಣಿ ಅವರು ಮಾತನಾಡಿ ಯಾವುದೆ ಸಂಘಟನೆ ಇರಬಹುದು ಅದನ್ನು ಆರಂಭಿಸುವುದು ಸುಲಭ. ಅದನ್ನು ಮುನ್ನಡೆಸುವುದು ಕಷ್ಟ. ಅಂತಹ ಸಂದರ್ಭದಲ್ಲಿ ಕಳೆದ 21 ವರ್ಷದಿಂದ ಕುಕ್ಕಾಡಿ ತಂತ್ರಿ ಪ್ರೀತಂ ಪುತ್ತೂರಾಯ ಅವರು ನಡೆಸಿಕೊಂಡು ಬಂದ ಈ ಉತ್ಸವ ಸಣ್ಣ ಸಂಗತಿಯಲ್ಲ. ಇಂತಹ ಕಾರ್ಯಗಳಿಗೆ ಭಕ್ತರ ಪೂರ್ಣ ಸಹಕಾರಬೇಕು ಎಂದು ಅವರು ಹೇಳಿದರು. ದ್ವಾರಕ ಕನ್‌ಸ್ಟ್ರಕ್ಷನ್‌ನ ಮಾಲಕ ಗೋಪಾಲಕೃಷ್ಣ ಭಟ್, ಚಿತ್ರ ನಟ ರವಿ ರಾಮಕುಂಜ ಶುಭ ಹಾರೈಸಿದರು. ಸಮಿತಿ ಸಾಂಸ್ಕೃತಿಕ ಕಾರ್ಯಕ್ರಮ ಸಂಘಟಕ ಬಾಲಕೃಷ್ಣ ರೈ ಕುಕ್ಕಾಡಿ, ಗೌರವ ಸಲಹೆಗಾರ ಯು.ಲೋಕೇಶ್ ಹೆಗ್ಡೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪುತ್ತೂರು ದಸರಾ ಮಹೋತ್ಸವ ಸಮಿತಿ ಅಧ್ಯಕ್ಷ ಜಯಂತ ಶೆಟ್ಟಿ ಕಂಬಳತ್ತಡ್ಡ ಅಧ್ಯಕ್ಷತೆ ವಹಿಸಿದರು. ಶರಣ್ಯ ಪ್ರಾರ್ಥಿಸಿದರು. ಹರಿಣಿ ಪುತ್ತೂರಾಯ ಸ್ವಾಗತಿಸಿ, ಸಮಿತಿ ಪ್ರಧಾನ ಕಾರ್ಯದರ್ಶಿ ಉಮೇಶ್ ಎಸ್.ಕೆ ವಂದಿಸಿದರು. ಸಮಿತಿ ಗೌರವ ಸಲಹೆಗಾರ ರಾಜೇಶ್ ಬನ್ನೂರು ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ನೆಲ್ಯಾಡಿ ವಾಣಿಶ್ರೀ ನಮ್ಮ ಕಲಾವಿದರಿಂದ ಕುಸಾಲ್ದ ಮಸಾಲೆ ಕಾರ್ಯಕ್ರಮ ನಡೆಯಿತು.

LEAVE A REPLY

Please enter your comment!
Please enter your name here