ಪುತ್ತೂರು: ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ, ಸ್ನಾನಕ್ಕೆ ತೆರಳಿದ ವೇಳೆ ಹೊಳೆ ನೀರಲ್ಲಿ ಮುಳುಗಿ ಮೃತಪಟ್ಟ ಕಟ್ಟತ್ತಾರು ನಿವಾಸಿ ಹಂಝ ಎಂಬವರ ಪುತ್ರ ಪ್ರಥಮ ಪಿಯು ವಿದ್ಯಾರ್ಥಿ ತಸ್ಲೀಂ ರವರ ಅಂತಿಮ ದರ್ಶನ ಪಡೆದರು. ಈ ವೇಳೆ ಶಾಸಕರೊಂದಿಗೆ ಅಕ್ರಮ ಸಕ್ರಮ ಸಮಿತಿ ಸದಸ್ಯ ಮಹಮ್ಮದ್ ಬಡಗನ್ನೂರು ಜೊತೆಗಿದ್ದರು. ನಿನ್ನೆ ಸ್ನೇಹಿತರೊಂದಿಗೆ ಮಾಡಾವಿನ ಗೌರಿ ಹೊಳೆಯಲ್ಲಿ ಸ್ನಾನಕ್ಕೆ ತೆರಳಿದ್ದ ತಸ್ಲೀಂ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದರು. ನಿನ್ನೆ ಸಂಜೆಯಿಂದ ಮೃತದೇಹಕ್ಕಾಗಿ ಹೊಳೆಯಲ್ಲಿ ಹುಡುಕಾಟ ನಡೆಸಿದ್ದು ಇಂದು ಬೆಳಿಗ್ಗೆ ಮೃತದೇಹ ಪತ್ತೆಯಾಗಿತ್ತು.
ಗೌರಿ ಹೊಳೆಯಲ್ಲಿ ನೀರಿನ ಸೆಳೆತ ಹೆಚ್ಚಾಗಿದ್ದರಿಂದ ಮೃತದೇಹವನ್ನು ಹುಡುಕಾಡಲು ಅಡ್ಡಿಯಾಗಿತ್ತು. ಇದೇ ಕಾರಣಕ್ಕೆ ಮುಳುಗು ತಜ್ಞ ಈಶ್ವರ್ ಮಲ್ಪೆ ಅವರಿಗೆ ಕರೆ ಕಳುಹಿಸಲಾಗಿತ್ತು. ತನ್ನ ಪಾಲಿಗೆ ಒಲಿದುಬಂದಿದ್ದ ಪ್ರಶಸ್ತಿಯನ್ನು ಸ್ವೀಕರಿಸಲು ಬೆಂಗಳೂರಿಗೆ ತೆರಳಿದ್ದ ಈಶ್ವರ್ ಬೆಂಗಳೂರಿನಲ್ಲಿ ಡಾ.ಎ ಪಿ ಜೆ ಅಬ್ದುಲ್ ಕಲಾಂ ಮಿಸೈಲ್ ಮ್ಯಾನ್ ಪ್ರಶಸ್ತಿ ಸ್ವೀಕರಿಸಿ ತಕ್ಷಣ ಪುತ್ತೂರಿನತ್ತ ಮುಖ ಮಾಡಿ ಅದಾಗಲೇ ತನಗಾಗಿ ಉಪ್ಪಿನಂಗಡಿಯಲ್ಲಿ ಅಂಬ್ಯುಲೆನ್ಸ್ ನೊಂದಿಗೆ ಕಾಯುತ್ತಿದ್ದ ತಂಡದೊಂದಿಗೆ ಬೆಳಗ್ಗಿನ ಜಾವ ಗೌರಿ ಹೊಳೆ ತಟಕ್ಕೆ ಬಂದಿಳಿದಿದ್ದರು. ಕಾರ್ಯ ಪ್ರವರ್ತರಾದ ಈಶ್ವರ್ 6.30ರ ವೇಳೆಗೆ ಮೃತದೇಹವನ್ನು ನೀರಿನಾಳದಿಂದ ಮೇಲೆತ್ತುವಲ್ಲಿ ಯಶಸ್ವಿಯಾಗಿದ್ದರು. ಈಶ್ವರ್ ಮಲ್ಪೆ ಅವರ ಸೇವಾಕಾರ್ಯಕ್ಕೆ ಸ್ಥಳೀಯರು ಮುಕ್ತವಾಗಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.