ರೆಡ್‌ಕ್ರಾಸ್ ಸಮಾಜದ ಕಟ್ಟ ಕಡೆಯ ವ್ಯಕ್ತಿಗಳಿಗೂ ಸ್ಪಂದಿಸುವ ಕೆಲಸ ಮಾಡಿದ್ದಾರೆ -ಶಾಸಕ ಅಶೋಕ್ ಕುಮಾರ್ ರೈ
ಪುತ್ತೂರು: ಪುತ್ತೂರು: ಸಮಾಜಕ್ಕಾಗಿ ಸಮಯ ಕೊಡುವವರ ಸಂಖ್ಯೆ ತುಂಬಾ ಕಡಿಮೆ ಇದೆ. ಅಂತಹದರಲ್ಲಿ ರೆಡ್‌ಕ್ರಾಸ್‌ನಿಂದ ಸಮಾಜದಲ್ಲಿ ಕಷ್ಟದಲ್ಲಿರುವ ಕಟ್ಟ ಕಡೆಯ ವ್ಯಕ್ತಿಗಳಿಗೂ ಸ್ಪಂದಿಸುವ ಕೆಲಸ ಮಾಡಿದ್ದಾರೆ ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.
ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಕಾರ್ಯಾಚರಿಸುತ್ತಿರುವ ಡಯಾಲಿಸಿಸ್ ಘಟಕಕ್ಕೆ ರಾಷ್ಟ್ರೀಯ ಆರೋಗ್ಯ ಮಿಷನ್ ಅಡಿಯಲ್ಲಿ ಪುತ್ತೂರು ರೆಡ್ ಕ್ರಾಸ್ ವತಿಯಿಂದ ಹೊಸ ಸೇರ್ಪಡೆಯಾಗಿ ಡಯಾಲಿಸಿಸ್ ಯಂತ್ರ ಮತ್ತು ಮಕ್ಕಳ ಚಿಕಿತ್ಸಾ ವಿಭಾಗಕ್ಕೆ ಮಲ್ಟಿ ಪ್ಯಾರಾ ಮಾನಿಟರ್ ಹಾಗು ಆಸ್ಪತ್ರೆಯ ವಠಾರದಲ್ಲಿ ಟಿ.ವಿ ಮೋನಿಟರ್ ಕೊಡುಗೆ ಕುರಿತು ಅ.16ರಂದು ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಆಸ್ಪತ್ರೆಗೂ ಒಂದು ಆರೋಗ್ಯ ಸಮಿತಿ ರಚನೆ ಮಾಡಲಾಗಿದೆ. ಅವರು ಸುಮ್ಮನೆ ಕೂತುಕೊಳ್ಳಲು ನಾನು ಬಿಡುವುದಿಲ್ಲ. ಆಸ್ಪತ್ರೆಗೆ ಮತ್ತು ರೋಗಿಗಳಿಗೆ ಅವಶ್ಯ ಇರುವ ಔಷಧಿಗಳ ಪೂರೈಕೆ, ಆಸ್ಪತ್ರೆಯಲ್ಲಿ ಯಾವ ಕೆಲಸ ಆಗಬೇಕು ಎಂದು ನೋಡಬೇಕು. ನಮ್ಮ ಕಚೇರಿಯಿಂದ ಮೆಡಿಕಲ್ ಸೆಕ್ಷನ್ ನೋಡುವ ವ್ಯಕ್ತಿ ಇದ್ದಾರೆ. ಅವರ ಸಂಪರ್ಕ ಇಟ್ಟುಕೊಳ್ಳಿ ಎಂದ ಅವರು ರೆಡ್‌ಕ್ರಾಸ್ ಸಂಸ್ಥೆಯು ಉತ್ತಮ ಕಾರ್ಯಕ್ಕೆ ಕೈಜೋಡಿಸಿದ್ದಾರೆ. ಸಂಸ್ಥೆಗೆ ಎಷ್ಟು ಧನ್ಯವಾದ ಹೇಳಿದರು ಸಾಕಾಗುವುದಿಲ್ಲ. ಡಯಾಲೀಸಿಸ್ ಎಂಬ ದೊಡ್ಡ ಕಾಣಿಕೆ ನೋವಿದ್ದವರಿಗೆ ತಲುಪುವ ಕಾರ್ಯ ರೆಡ್ ಕ್ರಾಸ್ ಸಂಸ್ಥೆ ಮಾಡಿದೆ ಎಂದರು.
ದ.ಕ.ಜಿಲ್ಲೆಯಲ್ಲೇ ಉತ್ತಮ ಆಸ್ಪತ್ರೆ:
ಆಸ್ಪತ್ರೆಯಲ್ಲಿ ಸಿಬ್ಬಂದಿ ಕೊರತೆ ಇದೆ ಎಂದು ಹೇಳುವುದಕ್ಕಿಂತ ಇದ್ದವರಿಂದ ಆಸ್ಪತ್ರೆಯ ಕೆಲಸಕ್ಕೆ ವೇಗ ಕೊಡಿಸುವ ಕೆಲಸ ಆಗಬೇಕು. ಆದರೆ ಪುತ್ತೂರು ಆಸ್ಪತ್ರೆಯ ಕುರಿತು ದಕ್ಷಿಣ ಕನ್ನಡ ಜಿಲ್ಲೆಯಲ್ಲೇ ಉತ್ತಮ ಕೆಲಸ ನಿರ್ವಹಿಸುತ್ತಾರೆ ಎಂದು ಹೇಳುತ್ತಾರೆ. ಇಲ್ಲಿನ ಆಡಳಿತಾಧಿಕಾರಿ ಡಾ. ಆಶಾ ಪುತ್ತೂರಾಯ ಉತ್ತಮ ಕೆಲಸ ನಿರ್ವಹಿಸುತ್ತಾರೆ. ಮುಂದೆ ಇಲ್ಲಿ ರೋಗಿಗಳು ಹೆಚ್ಚು ಕಾಯುವ ಕೆಲಸ ಆಗದೆ ಇನ್ನಷ್ಟು ವೇಗ ಕೊಡುವಂತೆ ತಿಳಿಸಿದ ಅವರು ನಿಮ್ಮ ಜೊತೆ ಆರೋಗ್ಯ ರಕ್ಷಾ ಸಮಿತಿ ಕೈ ಜೋಡಿಸಲಿದ್ದಾರೆ. ನನ್ನಿಂದ ಏನು ಆಗಬೇಕೆಂದು ಹೇಳಿ. ರೂ. 1 ಕೋಟಿಯ ಅನುದಾನಕ್ಕೆ ಎಸ್ಟಿಮೇಟ್ ಮಾಡಿ ಕೊಡುವ ಕೆಲಸ ನಿಮಗೆ. ಅದಕ್ಕೆ ಅನುಮೋದನೆ ಪಡೆದು, ಅನುದಾನ ತರಿಸಿಕೊಡುವ ಕೆಲಸ ನನಗೆ. ಅಧಿಕಾರಿಗಳಿಂದ ಎಸ್ಟಿಮೆಟ್ ಮಾಡಲು ಆಗದಿದ್ದರೆ ಶಾಸಕರ ಕಚೇರಿಯ ನಮ್ಮ ಯುವಕನ ಮೂಲಕ ಎಸ್ಟಿಮೇಟ್ ಮಾಡಿಸಿ ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.
50 ಬೆಡ್‌ನ ಹೆಚ್ಚುವರಿ ಕಟ್ಟಡಕ್ಕೆ ಮನವಿ:
ಆಸ್ಪತ್ರೆಯ ಆಡಳಿತಾಧಿಕಾರಿ ಡಾ. ಆಶಾ ಪುತ್ತೂರಾಯ ಅವರು ಮಾತನಾಡಿ 2015ರಲ್ಲಿ ಆರಂಭಗೊಳ್ಳುವಾಗ ಕೇವಲ ಎರಡೇ ಮೆಷಿನ್ ಇತ್ತು. ಮತ್ತೆ ಬೇಡಿಕೆ ಜಾಸ್ತಿಯಾದಾಗ ಕಂಪೆನಿಯ ಹೊರಗುತ್ತಿಗೆ ಆಧಾರದಲ್ಲಿ 5 ಮೆಷಿನ್ ಕಾರ್ಯ ನಿರ್ವಹಿಸುತ್ತಿತ್ತು. ಈ ಮಧ್ಯೆ ರೋಟರಿ ಸಂಸ್ಥೆ ಮೆಷಿನ್ ಕೊಡಲು ಮುಂದೆ ಬಂದಿದ್ದರೂ ಸ್ಥಳದ ಕೊರತೆಯಿಂದ ಅದು ಪೆಡಿಂಗ್ ಆಗಿತ್ತು. ಬಳಿಕ ಹೊಸ ಡಯಾಲೀಸ್ ಘಟಕ ತೆರೆದ ಬಳಿಕ ರೋಟರಿ ಯುವ ಮತ್ತು ಎಲೈಟ್ ಸಂಸ್ಥೆ ತುಂಬಾ ಸಹಕಾರ ನೀಡಿದರು. 6 ಮಿಷಿನ್ ಹೊಸದಾಗಿ ಸೇರ್ಪಡೆಗೊಂಡಿತ್ತು. ಈಗ ನಮ್ಮಲ್ಲಿ 97 ರಿಂದ 100 ರೋಗಿಗಳಿದ್ದಾರೆ. ಇವತ್ತು ರೋಗಿಗಳು ಹೆಚ್ಚಾಗುತಿದ್ದಾರೆ. ಈ ಸಂದರ್ಭ ರೋಗ ಬರುವ ಮುನ್ನ ಎಚ್ಚೆತ್ತುಕೊಳ್ಳುವ ಜಾಗೃತಿ ಮೂಡಿಸುವ ಕೆಲಸ ಆಗಬೇಕಾಗಿದೆ ಎಂದ ಅವರು ಇವತ್ತು ಬೆಡ್‌ಗಳ ಅವಶ್ಯಕತೆ ಇದೆ. ಹಾಗಾಗಿ 50 ಬೆಡ್‌ಗಳ ಹೆಚ್ಚುವರಿ ಕಟ್ಟಡ ಬೇಕು ಎಂದು ಶಾಸಕರಲ್ಲಿ ಮನವಿ ಮಾಡಿದರು.
ಕಿಂಚಿತ್ ಸೇವೆ ನೀಡಿದ ತೃಪ್ತಿ:
ಪುತ್ತೂರು ರೆಡ್ ಕ್ರಾಸ್ ಸಭಾಪತಿ ಎಸ್. ಸಂತೋಷ್ ಶೆಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿ ನಮಗೆ ಸರಕಾರಿ ಆಸ್ಪತ್ರೆಗೆ ಕಿಂಚಿತ್ ಸೇವೆ ನೀಡಿದ ತೃಪ್ತಿ ಇದೆ. ಮುಂದಿನ ದಿನಗಳಲ್ಲಿ ದಾನಿಗಳ ಸಹಕಾರ ಸಿಕ್ಕಿದರೆ ಇನ್ನಷ್ಟು ಸಹಕಾರ ನೀಡಲಿದ್ದೇವೆ ಎಂದ ಅವರು ಪುತ್ತೂರು ಸರಕಾರಿ ಆಸ್ಪತ್ರೆಯ ಮಕ್ಕಳ ಚಿಕಿತ್ಸಾ ವಿಭಾಗಕ್ಕೆ ರೂ. 1 ಲಕ್ಷ ವೆಚ್ಚದ ಮಲ್ಟಿ ಪ್ಯಾರಾ ಮಾನಿಟರ್ ಕೊಡುಗೆ ಮತ್ತು ಆಸ್ಪತ್ರೆಯ ಹೊರ ಪ್ರಾಂಗಣದ ನಿರೀಕ್ಷಣಾ ಕೊಠಡಿಗೆ ರೂ. 50 ಸಾವಿರ ವೆಚ್ಚದ ಟಿವಿ ಅಳವಡಿಸಲಾಗಿದ್ದು, ಪುತ್ತೂರು ರೆಡ್ ಕ್ರಾಸ್ ಘಟಕದಿಂದ ಪ್ರಸ್ತುತ ವರ್ಷದಲ್ಲಿ ಒಟ್ಟು ರೂ. 9 ಲಕ್ಷ ಮೊತ್ತದ ಆವಶ್ಯಕತೆಗಳನ್ನು ಸರಕಾರಿ ಆಸ್ಪತ್ರೆಗೆ ನೀಡಲಾಗಿದೆ ಎಂದರು. ರೆಡ್‌ಕ್ರಾಸ್ ಸಂಸ್ಥೆಯ ಕೋಶಾಧಿಕಾರಿ ಅಬ್ದುಲ್ ರಹಿಮಾನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಉಪಸಭಾಪತಿ ಪದ್ಮನಾಭ ಶೆಟ್ಟಿ ಸ್ವಾಗತಿಸಿ, ರೆಡ್‌ಕ್ರಾಸ್ ಕಾರ್ಯದರ್ಶಿ ಆಸ್ಕರ್ ಆನಂದ್ ವಂದಿಸಿದರು. ರೆಡ್ ಕ್ರಾಸ್ ಕಾರ್ಯಕ್ರಮ ಸಂಯೋಜನಾ ಉಪಸಮಿತಿಯ ಮುಖ್ಯಸ್ಥ ಪ್ಯಾಟ್ರಿಕ್ ಸಿಪ್ರಿಯನ್ ಮಸ್ಕರೇನಸ್ ವಂದಿಸಿದರು. ರೋಟರಿ ಸೆಂಟ್ರಲ್ ಅಧ್ಯಕ್ಷ ಡಾ| ರಾಜೇಶ್ ಬೆಜ್ಜಂಗಳ, ತಾ.ಪಂ ಮಾಜಿ ಅಧ್ಯಕ್ಷ ಮಹಮ್ಮದ್ ಬಡಗನ್ನೂರು, ನಗರಸಭೆ ಮಾಜಿ ಸದಸ್ಯ ಹೆಚ್.ಮಹಮ್ಮದ್ ಆಲಿ, ಮಹಾಲಿಂಗ ನಾಯ್ಕ್, ನವೀನ್ ಚಂದ್ರ ನಾಕ್, ಬಿ. ಟಿ. ಮಹೇಶ್ಚಂದ್ರ ಸಾಲಿಯಾನ್ ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು.