ಜೆಜೆಎಂ ಕಾಮಗಾರಿ ಡಿಸೆಂಬರ್‌ನೊಳಗೆ ಮುಗಿಸದಿದ್ದರೆ ಗುತ್ತಿಗೆದಾರರ ಬಿಲ್ ಪಾವತಿ ತಡೆ

0


ಜೆಜೆಎಂ ಪ್ರಗತಿ ಪರಿಶೀಲನಾ ಸಭೆಯಲ್ಲಿ ಶಾಸಕ ಅಶೋಕ್ ಕುಮಾರ್ ರೈ ಎಚ್ಚರಿಕೆ

ಪುತ್ತೂರು:ಎರಡು ವರ್ಷಗಳ ಹಿಂದೆ ಆರಂಭಗೊಂಡ ಜಲಜೀವನ್ ಮಿಷನ್ ಕುಡಿಯುವ ನೀರು ಪೂರೈಕೆ ಯೋಜನೆಯ ಕಾಮಗಾರಿಗಳನ್ನು ಇದೇ ಡಿಸೆಂಬರ್ ತಿಂಗಳ ಒಳಗೆ ಮುಗಿಸದಿದ್ದರೆ ಗುತ್ತಿಗೆದಾರರ ಬಿಲ್ ಪಾವತಿ ತಡೆ ಹಿಡಿಯಲಾಗುವುದು ಎಂದು ಶಾಸಕ ಅಶೋಕ್ ಕುಮಾರ್ ರೈ ಎಚ್ಚರಿಕೆ ನೀಡಿದ್ದಾರೆ.


ಎರಡು ವರ್ಷದ ಹಿಂದೆ ಯೋಜನೆ ಆರಂಭಗೊಂಡಿದ್ದರೂ ಕಾಮಗಾರಿಗಳು ಇನ್ನೂ ಮುಕ್ತಾಯವಾಗಿಲ್ಲ.ಕಾಮಗಾರಿಗಳು ತೀರಾ ವಿಳಂಬಗೊಂಡಿವೆ.ಅನೇಕ ಕಡೆ ಇನ್ನೂ ಟ್ಯಾಂಕ್ ನಿರ್ಮಾಣ ಮುಗಿದಿಲ್ಲ.ಕೆಲವೊಂದು ಕಡೆಗಳಲ್ಲಿ ಪೈಪ್‌ಲೈನ್ ಕೂಡಾ ನಡೆದಿಲ್ಲ.ಹಲವೆಡೆ ಕಾಮಗಾರಿ ನಡೆದಿದ್ದರೂ ಮೆಸ್ಕಾಂನಿಂದ ಪವರ್ ಸಂಪರ್ಕ ಸಿಕ್ಕಿಲ್ಲ.ಕೆಲವೆಡೆ
ಟ್ರಾನ್ಸ್-ರ್ಮರ್ ಅಳವಡಿಕೆಯಾಗಿಲ್ಲ,ಯಾಕೆ ಹೀಗೆ ಎಂದು ಅಧಿಕಾರಿಗಳನ್ನು ಮತ್ತು ಗುತ್ತಿಗೆದಾರರನ್ನು ಪ್ರಶ್ನಿಸಿದ ಶಾಸಕರು ಡಿಸೆಂಬರ್ ಒಳಗೆ ಕಾಮಗಾರಿ ಪೂರ್ಣಗೊಳ್ಳದಿದ್ದರೆ ಅಂಥ ಗುತ್ತಿಗೆದಾರರ ಬಿಲ್ ಪಾವತಿ ತಡೆಹಿಡಿಯಲಾಗುವುದು ಎಂದು ಎಚ್ಚರಿಕೆ ನೀಡಿದರು.


ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಅಧಿಕಾರಿಗಳು, ಮೆಸ್ಕಾಂ ಅಧಿಕಾರಿಗಳು, ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮ ಪಂಚಾಯತ್‌ಗಳ ಅಧ್ಯಕ್ಷ,ಉಪಾಧ್ಯಕ್ಷರು ಮತ್ತು ಕಾಮಗಾರಿ ಗುತ್ತಿಗೆದಾರರ ಜತೆ ಶಾಸಕರ ಕಚೇರಿ ಸಭಾಂಗಣದಲ್ಲಿ ಅ.16ರಂದು ನಡೆಸಿದ ಜೆಜೆಎಂ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.ಸುದೀರ್ಘ ಅವಧಿಯಿಂದ ಯೋಜನೆ ಅನುಷ್ಠಾನಗೊಳ್ಳುತ್ತಿದ್ದರೂ ಇನ್ನೂ ಪೂರ್ಣಗೊಳ್ಳದಿರುವುದು ವಿಪರ್ಯಾಸ ಎಂದು ಶಾಸಕರು ಹೇಳಿದರು.


ವರ್ಷ ಕಳೆದರೂ ಮುಗಿಯದ ಕಾಮಗಾರಿ:
ಕಬಕ, ನೆಟ್ಟಣಿಗೆ ಮುಡ್ನೂರು, ಅರಿಯಡ್ಕ, ಒಳಮೊಗ್ರು, ಕೆದಂಬಾಡಿ ಸೇರಿದಂತೆ ನಾನಾ ಗ್ರಾ.ಪಂ.ಗಳಿಂದ, ವಿಳಂಬ ಕಾಮಗಾರಿ ಮತ್ತು ಟ್ಯಾಂಕ್ ಕೊರತೆ ಹಾಗೂ ಪವರ್ ಸಂಪರ್ಕ ಸಿಗದೇ ಇರುವ ಬಗ್ಗೆ ಸಭೆಯಲ್ಲಿ ದೂರು ಕೇಳಿ ಬಂತು.ಇಡ್ಕಿದು ಗ್ರಾ.ಪಂ.ನಲ್ಲಿ ರೂ.1.65 ಕೋಟಿಯ ಕಾಮಗಾರಿ ಆರಂಭಗೊಂಡು ವರ್ಷ ಕಳೆದರೂ ಮುಗಿದಿಲ್ಲ ಎಂದು ಉಪಾಧ್ಯಕ್ಷ ಪದ್ಮನಾಭ ಪೂಜಾರಿ ಹೇಳಿದರು.ನೆಟ್ಟಣಿಗೆ ಮುಡ್ನೂರು ಭಾಗದಲ್ಲಿ ಕೆಲಸವೇ ಆರಂಭಗೊಂಡಿಲ್ಲ ಎಂದು ಅಧ್ಯಕ್ಷೆ -ಝಿಯಾ ಇಬ್ರಾಹಿಂ, ಉಪಾಧ್ಯಕ್ಷ ರಾಮ ಮೇನಾಲ ಹೇಳಿದರು.ನೆಟ್ಟಣಿಗೆ ಮುಡ್ನೂರಿಗೆ ಯೋಜನೆ ಮಂಜೂರಾಗಿದ್ದು ಕೊನೆಯ ಹಂತದಲ್ಲಿ ಎಂದು ಇಲಾಖೆಯ ಪುತ್ತೂರು ವಿಭಾಗದ ಎಂಜಿನಿಯರ್ ಸಂದೀಪ್ ಪೂಜಾರಿ ಮಾಹಿತಿ ನೀಡಿದರು.


ಟ್ಯಾಂಕ್‌ಗಳು ಒಣಗುತ್ತಿವೆ: ಒಳಮೊಗ್ರು ಗ್ರಾಪಂಗೆ ರೂ.2 ಕೋಟಿ ಮಂಜೂರಾಗಿದೆ.ಕೆಲವು ಟ್ಯಾಂಕ್‌ಗಳು ಒಣಗುತ್ತಿದ್ದು, ಬಿರುಕು ಬೀಳುವ ಸಂಭವವಿದೆ ಎಂದು ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರು ಹೇಳಿದರು.ಕೆದಂಬಾಡಿ ಗ್ರಾ.ಪಂ ವ್ಯಾಪ್ತಿಯಲ್ಲೂ ಸಮಸ್ಯೆ ಇದೆ ಎಂದು ಅಧ್ಯಕ್ಷೆ ಸುಜಾತ ಮುಳಿಗದ್ದೆ ಮತ್ತು ಉಪಾಧ್ಯಕ್ಷೆ ಜಯಲಕ್ಷ್ಮೀ ಬಳ್ಳಾಲ್ ಮಾಹಿತಿ ನೀಡಿದರು.34 ನೆಕ್ಕಿಲಾಡಿ ಗ್ರಾಪಂ ವ್ಯಾಪ್ತಿಯಲ್ಲಿ ಜೆಜೆಎಂ ಯೋಜನೆ ಸಂಪೂರ್ಣ ಪೂರ್ಣಗೊಂಡಿದೆ ಎಂದು ಗ್ರಾಪಂ ಅಧ್ಯಕ್ಷೆ ಸುಜಾತ ರೈ ಹೇಳಿದರು.ಅಳಿಕೆಯಲ್ಲಿ ಸರ್ವೆ ಸಂದರ್ಭ ಇರಬೇಕಾಗಿದ್ದ ಟ್ಯಾಂಕ್ ಬದಲು ಕೇವಲ 3 ಟ್ಯಾಂಕ್ ಮಾತ್ರ ಮಂಜೂರಾಗಿದೆ.ಇನ್ನು 4 ಟ್ಯಾಂಕ್ ಬೇಕಿದೆ ಎಂದು ಅಳಿಕೆ ಗ್ರಾಪಂ ಅಧ್ಯಕ್ಷ ಪದ್ಮನಾಭ ಪೂಜಾರಿ ಪ್ರಸ್ತಾಪಿಸಿದರು.ಬಹುಗ್ರಾಮ ಕುಡಿಯುವ ನೀರು ಯೋಜನೆಯಲ್ಲಿ ಆ ಭಾಗದಲ್ಲಿ ಟ್ಯಾಂಕ್ ನಿರ್ಮಾಣವಾಗಲಿದ್ದು, ಕೊರತೆಯನ್ನು ತುಂಬಿಕೊಳ್ಳಲಾಗುವುದು ಎಂದು ಇಲಾಖೆ ಅಧಿಕಾರಿ ಜಗದೀಶ್ ಭರವಸೆ ನೀಡಿದರು.


ಮೆಸ್ಕಾಂಗೆ ಕೇವಲ ಮೇಲುಸ್ತುವಾರಿ ಮಾತ್ರ: ಜೆಜೆಎಂ ಯೋಜನೆಯಲ್ಲಿ ಮೆಸ್ಕಾಂ ಇಲಾಖೆಗೆ ಕೇವಲ ಮೇಲುಸ್ತುವಾರಿ ಮಾತ್ರ ಇದೆ.ಟ್ರಾನ್ಸ್ ಫಾರ್ಮರ್, ವಿದ್ಯುತ್ ಸಂಪರ್ಕ ಕೊಡಿಸುವ ಕೆಲಸವಿಲ್ಲ.ಮೆಸ್ಕಾಂಗೆ ಕೇವಲ ಡೆಪಾಸಿಟ್ ಹಣ ಪಾವತಿ ಮಾಡಬೇಕು.ಆ ಬಳಿಕ ನಾವು ಅನುಮತಿ ನೀಡುತ್ತೇವೆ.ಬಳಿಕ ಅದಕ್ಕೆ ಬೇಕಾದ ಟ್ರಾನ್ಸ್- ಫಾರ್ಮರ್ ಖರೀದಿಯೂ ಸೇರಿದಂತೆ ಇಲೆಕ್ಟ್ರಿಕಲ್ ಕೆಲಸಗಳನ್ನು ಜೆಜೆಎಂ ಅಧಿಕಾರಿಗಳೇ ಗುತ್ತಿಗೆದಾರರ ಮೂಲಕ ಮಾಡಿಸಬೇಕು.ವಿದ್ಯುತ್ ಸಂಪರ್ಕಕ್ಕೆ ಸಂಬಂಧಿಸಿ 113 ಕೆಲಸ ಮಂಜೂರಾಗಿದೆ.72 ಕಾಮಗಾರಿಯ ಡೆಪಾಸಿಟ್ ಇನ್ನೂ ನಮಗೆ ಪಾವತಿಸಿಲ್ಲ.41 ಪ್ರಗತಿಯಲ್ಲಿದೆ ಎಂದು ಪುತ್ತೂರು ವಿಭಾಗದ ಮೆಸ್ಕಾಂ ಕಾರ್ಯನಿರ್ವಾಹಕ ಎಂಜಿನಿಯರ್ ರಾಮಚಂದ್ರ ನಾಯ್ಕ್ ಮತ್ತು ನಗರ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ರಾಮಚಂದ್ರ ಅವರು ಮಾಹಿತಿ ನೀಡಿದರು.

110 ಕೋಟಿಯ ಯೋಜನೆ ಮಂಜೂರು
ಪುತ್ತೂರು ಮತ್ತು ಕಡಬ ತಾಲೂಕಿಗೆ ಜಲಜೀವನ್ ಮಿಶನ್‌ನಲ್ಲಿ ಒಟ್ಟು ರೂ.110 ಕೋಟಿಯ ಯೋಜನೆ ಮಂಜೂರಾಗಿದೆ.ಮೊದಲ ಹಂತದಲ್ಲಿ 60 ಕಾಮಗಾರಿ ಮಂಜೂರಾಗಿದ್ದು, ಎಲ್ಲವೂ ಪೂರ್ಣಗೊಂಡು ಲೋಕಾ ರ್ಪಣೆಯಾಗಿದೆ. 2ನೇ ಹಂತದಲ್ಲಿ 39 ಕಾಮಗಾರಿ ಮಂಜೂರಾಗಿದ್ದು 16 ಪೂರ್ತಿಯಾಗಿದೆ.23 ಕಾಮಗಾರಿ ಪ್ರಗತಿಯಲ್ಲಿದೆ.3ನೇ ಹಂತದಲ್ಲಿ ಕಡಬ ತಾಲೂಕಿಗೆ 26 ಕಾಮಗಾರಿ ಮಂಜೂರಾಗಿದ್ದು, ಇದರಲ್ಲಿ 2 ಮಾತ್ರ ಪೂರ್ಣಗೊಂಡಿದ್ದು, 24 ಪ್ರಗತಿಯಲ್ಲಿದೆ.
ರೂಪ್ಲಾ ನಾಯ್ಕ್,
ಜೆಜೆಎಮ್ ಇಲಾಖೆ ಅಧಿಕಾರಿ

ನಾನೇ ಫೀಲ್ಡಿಗೆ ಇಳಿಯಬೇಕಾದೀತು…
ಗ್ರಾಮದಲ್ಲಾಗಲಿ, ನಗರದಲ್ಲಾಗಲೀ ವಾಸ್ತವ್ಯ ಇರುವ ಮನೆಗೆ ನೀರಿನ ಸಂಪರ್ಕ ನೀಡಲು ಮನೆಯವರಲ್ಲಿ ಯಾವುದೇ ದಾಖಲೆಗಳನ್ನು ಕೇಳಬೇಡಿ,ಕುಡಿಯುವ ನೀರು ಎಲ್ಲರಿಗೂ ದೊರೆಯುವಂತಾಗಬೇಕು, ದಾಖಲೆ ಇಲ್ಲ ಎಂದು ನೀರಿನ ಸಂಪರ್ಕ ಕೊಡದೆ ಇರಬಾರದು.ಆರ್ಯಾಪು ಗ್ರಾಮದ ಒಳತ್ತಡ್ಕ ನಿವಾಸಿಯೋರ್ವರಿಗೆ ಗ್ರಾಪಂ ಕುಡಿಯುವ ನೀರಿನ ಸಂಪರ್ಕ ನೀಡಿಲ್ಲ ಎಂಬ ದೂರು ಬಂದಿದೆ, ಆ ಮನೆಯವರು ಪಿಕಪ್‌ನಲ್ಲಿ ಬೇರೆ ಕಡೆಯಿಂದ ಕುಡಿಯುವ ನೀರು ಮನೆಗೆ ತರುತ್ತಿದ್ದಾರೆ ಎಂಬ ಮಾಹಿತಿ ಇದ್ದು ತಕ್ಷಣವೇ ಆ ಮನೆಗೆ ನೀರಿನ ಸಂಪರ್ಕ ನೀಡುವಂತೆ ಗ್ರಾಪಂ ಪಿಡಿಒರವರಿಗೆ ಸೂಚನೆ ನೀಡಲಾಗಿದೆ.ಕೆಲವು ಗ್ರಾ.ಪಂ.ಗಳಲ್ಲಿ ಮನೆಗೆ ಡೋರ್ ನಂಬರ್ ಇಲ್ಲ, ರೇಶನ್ ಕಾರ್ಡು,ಆಧಾರ್ ಕಾರ್ಡು ಕೂಡಾ ಇಲ್ಲ ಎಂದು ನೆಪ ಹೇಳಿ ಕುಡಿಯುವ ನೀರಿನ ಸಂಪರ್ಕ ನೀಡದೇ ಇರುವ ವಿಚಾರ ನನ್ನ ಗಮನಕ್ಕೆ ಬಂದಿದೆ.ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷರು, ಸದಸ್ಯರುಗಳು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಅಂಥ ಮನೆಗಳಿಗೆ ತಕ್ಷಣ ನೀರಿನ ಸಂಪರ್ಕ ನೀಡಬೇಕು.ನನ್ನ ಕ್ಷೇತ್ರದಲ್ಲಿ ಯಾರು ಕೂಡಾ ಹಸಿವಿನಿಂದ ಇರಬಾರದು, ಕರೆಂಟ್ ಇಲ್ಲದೆ ಕತ್ತಲೆಯಲ್ಲಿ ಇರಬಾರದು, ಕುಡಿಯುವ ನೀರು ಇಲ್ಲದೇ ಇರಬಾರದು.ಈ ಮೂರು ವ್ಯವಸ್ಥೆಗಳಿಂದ ಯಾವುದಾದರೂ ಕುಟುಂಬ ವಂಚಿತರಾಗಿದ್ದರೆ ನಾನೇ ಫೀಲ್ಡಿಗೆ ಇಳಿಯಬೇಕಾಗುತ್ತದೆ ಎಂದು ಶಾಸಕರು ಎಚ್ಚರಿಕೆ ನೀಡಿದರು.

LEAVE A REPLY

Please enter your comment!
Please enter your name here