ವಿಜಯ ಸಾಮ್ರಾಟ್ ಆಶ್ರಯದಲ್ಲಿ ಅ.22ಕ್ಕೆ ಪುತ್ತೂರ‍್ದ ಪಿಲಿಗೊಬ್ಬು 2023, ಫುಡ್ ಫೆಸ್ಟ್

0

ಪುತ್ತೂರು: ಹುಲಿವೇಷ ಕುಣಿತ, ತುಳುನಾಡಿನ ದಾರ್ಮಿಕ ಹಿನ್ನೆಲೆ ಇರುವ ಜಾನಪದ ಕಲೆ, ಈ ಕಲೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ವಿಜಯ ಸಾಮ್ರಾಟ್ ಆಶ್ರಯದಲ್ಲಿ ’ಪುತ್ತೂರ‍್ದ ಪಿಲಿಗೊಬ್ಬು-2023’ ಅನ್ನು ಇತಿಹಾಸ ಪ್ರಸಿದ್ದ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವರ ಮಾರು ಗದ್ದೆಯಲ್ಲಿ ಅ.22ರಂದು ನಡೆಯಲಿದೆ. ಇದರ ಜೊತೆಗೆ ವಿಶೇಷವಾಗಿ ಫುಡ್ ಪೆಸ್ಟ್ ರುಚಿಕರ ಖಾದ್ಯಗಗಳ ಮಳಿಗೆಗಳು ಇರಲಿವೆ ಎಂದು ವಿಜಯ ಸಾಮ್ರಾಟ್ ಪುತ್ತೂರು ಇದರ ಸ್ಥಾಪಕ ಅಧ್ಯಕ್ಷ ಮತ್ತು ಪಿಲಿಗೊಬ್ಹು ಸಮಿತಿ ಗೌರವಾಧ್ಯಕ್ಷ ಸಹಜ್ ರೈ ಬಳಜ್ಜ ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.
ಪಿಲಿಗೊಬ್ಬು ಕಾರ್ಯಕ್ರಮದ ಉದ್ಘಾಟನೆಯನ್ನು ಬೆಳಿಗ್ಗೆ ಗಂಟೆ 10ಕ್ಕೆ ಶಾಸಕ ಅಶೋಕ್ ಕುಮಾರ್ ರೈ ನೆರವೇರಿಸಲಿದ್ದಾರೆ. ಪಿಲಿಗೊಬ್ಬು ವೇದಿಕೆಯನ್ನು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವಪ್ರಸಾದ್ ಮುಳಿಯ ನೆರವೇರಿಸಲಿದ್ದಾರೆ. ಹಿರಿಯ ವೈದ್ಯ ಡಾ.ಎಂ.ಕೆ.ಪ್ರಸಾದ್ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಸಂಸದ ನಳೀನ್ ಕುಮಾರ್ ಕಟೀಲ್, ರಾಜ್ಯ ಸಹಕಾರ ರಾಜ್ಯ ಸಹಕಾರ ಮಂಡಲದ ಅಧ್ಯಕ್ಷ ಡಾ.ಎಮ್.ಎನ್.ರಾಜೇಂದ್ರ ಕುಮಾರ್, ಹುಬ್ಬಳಿ ಪಶ್ಚಿಮ ಕ್ಷೇತ್ರದ ಶಾಸಕ ಅರವಿಂದ, ಮಾಜಿ ಶಾಸಕ ಸಂಜೀವ ಮಠಂದೂರು, ಜಯಕರ್ನಾಟಕ ಜನಪದ ವೇದಿಕೆ ಸಂಸ್ಥಾಪಕ ಗುಣರಂಜನ್ ಶೆಟ್ಟಿ ಸಹಿತ ಹಲವಾರು ಮಂದಿ ಗಣ್ಯರು ಭಾಗವಹಿಸಲಿದ್ದಾರೆ. ರಾಜಕೀಯ ರಹಿತವಾಗಿ ಈ ಕಾರ್ಯಕ್ರಮ ನಡೆಯಲಿದೆ. ಬಳಿಕ ಬಲಿಷ್ಟ 10 ತಂಡಗಳಿಂದ ಸ್ಪರ್ಧಾ ಕಾರ್ಯಕ್ರಮ ಆರಂಭಗೊಳ್ಳಲಿದೆ. ಸುಮಾರು 20 ರಿಂದ 25 ಸಾವಿರ ಮಂದಿ ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. ಇದಕ್ಕೆ ಬೇಕಾದ ಎಲ್ಲಾ ಸಿದ್ದತೆ ಮಾಡಲಾಗಿದೆ ಎಂದು ಅವರು ಹೇಳಿದರು.

ಸಮಗ್ರ, ಶಿಸ್ತು, ಗುಂಪು ಪ್ರಶಸ್ತಿ ಸಹಿತ ಹಲವು ನಗದು ಬಹುಮಾನಗಳು
ಒಂದು ತಂಡಕ್ಕೆ 23 ನಿಮಿಷದ ಕಾಲವಕಾಶ ಕೊಡಲಿದ್ದೇವೆ. ಈ 23 ನಿಮಿಷದಲ್ಲಿ ಬೇರೆ ಬೇರೆ ವಿಶೇಷತೆಗಳನ್ನು ಅವರು ಪ್ರದರ್ಶಿಸಬೇಕು. ಪ್ರಥಮ ಬಹುಮಾನವಾಗಿ ರೂ. 3ಲಕ್ಷ, ದ್ವಿತೀಯ ಬಹುಮಾನವಾಗಿ ರೂ.2ಲಕ್ಷ, ತೃತೀಯ ಬಹುಮಾನವಾಗಿ ರೂ.1ಲಕ್ಷ ಹಾಗೂ ಪ್ರೋತ್ಸಾಹಕ ಬಹುಮಾನಗಳನ್ನು ನೀಡಿ ಗೌರವಿಸಲಾಗುವುದು. ಇದರ ಜೊತೆಗೆ ಭಾಗಿಯಾದ ಎಲ್ಲಾ ತಂಡಗಳಿಗೆ ಸಂಭಾವನೆ ನೀಡಿ ಗೌರವಿಸಲಾಗುವುದು. ಸಮಗ್ರ ತಂಡ ಪ್ರಶಸ್ತಿ, ಶಿಸ್ತಿನ ತಂಡ, ಗುಂಪು ಪ್ರಶಸ್ತಿ ವಿಭಾಗದಲ್ಲಿ ಉತ್ತಮ ತಾಸೆ, ಉತ್ತಮ ಬಣ್ಣ, ಉತ್ತಮ ಧರಣಿ ಮಂಡಲ ಕುಣಿತ, ವೈಯುಕ್ತಿಕ ಪ್ರಶಸ್ತಿ ವಿಭಾಗದಲ್ಲಿ ಕಪ್ಪು ಹುಲಿ, ಮರಿ ಹುಲಿ, ಪುತ್ತೂರ‍್ದ ಹುಲಿ, ಮುಡಿ ಹಾರಿಸುವುದು, ನಾಣ್ಯ ತೆಗೆಯುವುದಕ್ಕೆ ವಿಶೇಷ ಬಹುಮಾನವಿದೆ. ಪ್ರತಿ ತಂಡದಲ್ಲಿ 15 ಮಂದಿ ಹುಲಿ ವೇಷ ಇರುತ್ತದೆ. ಹುಲಿ ವೇಷ ಕ್ಷೇತ್ರದಲ್ಲಿ ಉತ್ತಮ ಪರಿಣತಿ ಹೊಂದಿದ ಜಿಲ್ಲೆಯ ಖ್ಯಾತ ತುಳುನಾಡಿನ ತೀರ್ಪುಗಾರರು ತೀರ್ಪುಗಾರಿಕೆ ಮಾಡಲಿದ್ದಾರೆ ಎಂದು ಸಹಜ್ ರೈ ಬಳಜ್ಜ ಹೇಳಿದರು.

ತಾರಾ ಮೆರುಗು:
ಕಾರ್ಯಕ್ರಮ ವೀಕ್ಷಿಸಲು ತುಳುನಾಡಿನ ಹೆಸಾಂತರ ಕೋಸ್ಟಲ್‌ವುಡ್ ಹಾಗು ರಾಜ್ಯದ ಹೆಸರಾಂತ ಸ್ಯಾಂಡಲ್‌ವುಡ್ ನಟ ನಟಿಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಚಿತ್ರ ನಟ ನಿರ್ದೇಶಕ ರಾಜ್ ವಿ ಶೆಟ್ಟಿ, ದಿಗಂತ್, ರಾಮಚಾರಿ ಸೀರಿಯಲ್ ನಾಯಕಿಯಾಗಿರುವ ಮೌನ ಗುಡ್ಡೆಮನೆ, ರಾಜ್ ಸೌಂಡ್ಸ್ ಲೈಟ್ಸ್ ಚಿತ್ರದ ನಾಯಕ ವಿನಿತ್, ಭಜರಂಗಿ -2 ನಲ್ಲಿ ನಟನೆ ಮಾಡಿದ ಚೆಲುವರಾಜ್, ಸರ್ಕಸ್ ಚಲನ ಚಿತ್ರದ ರಚನ, ಚಿರಶ್ರೀ, ದೀಪಕ್ ರೈ ಪಾಣಾಜೆ, ಗಿರೀಶ್ ರೈ, ಧನ್‌ರಾಜ್ ಆಚಾರ್ಯ ಸಹಿತ ಅನೇಕ ಕಲಾವಿದರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಸಹಜ್ ರೈ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಪಿಲಿಗೊಬ್ಬು -2023 ಇದರ ಸಂಚಾಲಕ ನಾಗರಾಜ್ ನಡುವಡ್ಕ, ಕಾರ್ಯಾಧ್ಯಕ್ಷ ಸುಜಿತ್ ರೈ ಪಾಲ್ತಾಡ್, ಪ್ರಧಾನ ಕಾರ್ಯದರ್ಶಿ ಶರತ್ ಆಳ್ವ ಕೂರೇಲು ಉಪಸ್ಥಿತರಿದ್ದರು.

ಅ.21ಕ್ಕೆ ಫುಡ್ ಫೆಸ್ಟ್ ಆರಂಭ
ಅ.21ರಿಂದ ಫುಡ್ ಫೆಸ್ಟ್ ಕಾರ್ಯಕ್ರಮ ಸಂಜೆ ಗಂಟೆ 4 ರಿಂದ ಫುಡ್ ಫೆಸ್ಟ್ ಕಾರ್ಯಕ್ರಮದ ಉದ್ಘಾಟನೆ ನಡೆಯಲಿದೆ. ಶಂಕರ್ ಗ್ರೂಪ್ ಸಂಸ್ಥೆಯ ಆಡಳಿತ ನಿರ್ದೇಶಕ ಸತ್ಯಶಂಕರ್ ಭಟ್ ಉದ್ಘಾಟಿಸಲಿದ್ದಾರೆ. ಆಹಾರ ಮೇಳವು ಅ.21ರಂದು ಸಂಜೆ ಗಂಟೆ 4 ರಿಂದ ರಾತ್ರಿ ಗಂಟೆ 11ರ ತನಕ ಮತ್ತು ಅ.22ರ ಬೆಳಿಗ್ಗೆ ಗಂಟೆ 10 ರಿಂದ ರಾತ್ರಿ ಗಂಟೆ 11ರ ತನಕ ನಡೆಯಲಿದೆ. ಪಗೋಡ ಮಾದರಿಯ ಸುಂದರ ಸುಸಜ್ಜಿತ ಆಹಾರ ಮಳಿಗೆಯಲ್ಲಿ ಬರ್ಗರ್, ಸ್ಯಾಂಡ್‌ವಿಚ್, ವಿವಿಧ ಬಗೆ ದೋಸೆಗಳು, ವಿವಿಧ ಬಗೆಯ ಐಸ್‌ಕ್ರೀಮ್‌ಗಳು, ಮೊಕ್ ಟೈಲ್ ಜ್ಯೂಸ್, ಮಟ್ಕಾ ಸೋಡಾ, ಕರಾವಳಿಯ ರುಚಿಕರ ಖಾದ್ಯಗಳು ಸಹಿತ 40ಕ್ಕೂ ಅಧಿಕ ವಿವಿಧ ಖಾದ್ಯಗಳ ಮಳಿಗೆಗಳು ಪಿಲಿ ಗೊಬ್ಬುವಿನಲ್ಲಿ ಸಂಭ್ರಮಿಸಲಿದೆ ಎಂದು ಪಿಲಿಗೊಬ್ಬು ಸಮಿತಿ ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್ ಅವರು ಹೇಳಿದರು.

ಸೆಲ್ಫಿ ಕಾರ್ನರ್
ಕಾಯಕ್ರಮದಲ್ಲಿ ಕಲಾಭಿಮಾನಿಗಳಿಗೆ ಸೆಲ್ಫಿ ಕಾರ್ನರ್‌ನಲ್ಲಿ ತಮ್ಮ ಭಾವಚಿತ್ರವನ್ನು ತೆಗೆದು ಸಂಭ್ರಮಿಸಲು ಆಕರ್ಷಕ ವಿನ್ಯಾಸದ ಸೆಲ್ಫಿ ಕಾರ್ನರ್ ರಚಿಸಲಾಗಿದೆ. ತುಳುನಾಡಿನ ನಾಡಿಮಿಡಿತ ಮತ್ತು ದೈವಿಕ ಕಲೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಯಶಸ್ಸಿಗೆ ಸಾರ್ವಜನಿಕರು ಪ್ರೋತ್ಸಾಹಿಸುವಂತೆ ಉಮೇಶ್ ನಾಯಕ್ ವಿನಂತಿಸಿದರು.


2 ವರ್ಷದ ಹಿಂದಿನ ಚಿಂತನೆ
ವಿಜಯ ಸಾಮ್ರಾಟ್ ಸ್ಥಾಪನೆಯಾಗಿ 3 ವರ್ಷ ಆಗಿದೆ. ಮೂರು ವರ್ಷದಲ್ಲಿ ಅನೇಕ ಸಮಾಜಮುಖಿ ಕೆಲಸ ಕಾರ್ಯ ಮಾಡಿದ್ದೇವೆ. ಎರಡು ವರ್ಷ ಹಿಂದೆ ಪುತ್ತೂರಿನಲ್ಲಿ ಹುಲಿ ಕುಣಿತ ಕಲೆಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಸ್ಪರ್ಧೆ ಮಾಡುವ ಕುರಿತು ಚಿಂತನೆ ನಡಿಸಿದ್ದೆವು. ಆಗ ಕೋವಿಡ್ ಸಂದರ್ಭದಲ್ಲಿ ಸುಮಾರು 10 ರಿಂದ 12 ಲಕ್ಷ ರೂಪಾಯಿ ಬಜೆಟ್ ಅನ್ನು ಹಲವು ಬಡ ಕುಟುಂಬಗಳಿಗೆ ಆಹಾರ ಕಿಟ್, ಕೆಲವರಿಗೆ ಮನೆ ನಿರ್ಮಾಣ, ಆರೋಗ್ಯ ಸೇವೆ ಮಾಡುವ ಮೂಲಕ ವಿಜಯ ಸಾಮ್ರಾಟ್ ಸಂಸ್ಥೆ ತೊಡಗಿಸಿಕೊಂಡಿತ್ತು. ಪುತ್ತೂರಿನಲ್ಲಿ ಏನಾದರೂ ಹೊಸದು ಮಾಡಬೇಕೆಂಬ ಚಿಂತನೆ ಇತ್ತು, ಅದು ಈಗ ಕೂಡಿ ಬಂದಿದೆ.
ಸಹಜ್ ರೈ ಬಳಜ್ಜ, ಗೌರವಾಧ್ಯಕ್ಷರು
ಪುತ್ತೂರ‍್ದ ಪಿಲಿಗೊಬ್ಬು

LEAVE A REPLY

Please enter your comment!
Please enter your name here