ಚಾರ್ಮಾಡಿ 3ನೇ ತಿರುವಿನಲ್ಲಿ ಬೈಕ್, ಕಾರು ಡಿಕ್ಕಿ- ಬೈಕ್ ಸವಾರರಿಗೆ ಹಲ್ಲೆ ನಡೆಸಿ ಬೈಕ್ ಕೊಂಡೊಯ್ದ ಅಪರಿಚಿತರು

0

ಪುತ್ತೂರು: ನೊಂದಾವಣೆಯಾಗದ ಮಾರುತಿ ಎರ್ಟಿಗಾ ಕಾರೊಂದು ಬೈಕ್‌ಗೆ ಡಿಕ್ಕಿ ಹೊಡೆದದ್ದಲ್ಲದೇ ಬೈಕ್ ಸವಾರರೊಂದಿಗೆ ಮಾತಿನ ಚಕಮಕಿ ನಡೆಸಿ ಹಲ್ಲೆ ಮಾಡಿ ಬೈಕ್ ಕಸಿದು ಪರಾರಿಯಾದ ಘಟನೆ ಅ.19ರಂದು ಚಾರ್ಮಾಡಿ ಘಾಟಿಯಲ್ಲಿ ನಡೆದಿದೆ. ಬೈಕ್ ಕಳೆದುಕೊಂಡ ಗಾಯಾಳು ಬೈಕ್ ಸವಾರರಾದ ಪುಣಚ ನೀರ್ಕಜೆ ನಿವಾಸಿ ವೆಲ್ಡಿಂಗ್ ಕೆಲಸ ಮಾಡುತ್ತಿರುವ ಮನೋಜ್ ನೀರ್ಕಜೆ(26 ವ) ಮತ್ತು ಅವರೊಂದಿಗೆ ಸಹಾಯಕರಾಗಿರುವ ಪುಣಚದ ಮನೀಶ್(18 ವ) ಪುತ್ತೂರು ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಾಗಿದ್ದಾರೆ.



ದೂರಿನಲ್ಲಿ ಹೇಳಿದ್ದೇನು?
ಮನೋಜ್, ಮೂಡಿಗೆರೆಯಲ್ಲಿರುವ ತನ್ನ ಅಕ್ಕನ ಮನೆಗೆ ಪೂಜೆಗೆಂದು ಅ.19ರಂಂದು ಬೆಳಿಗ್ಗೆ ಮನೀಶ್ ಜೊತೆ ಬೈಕ್‌ನಲ್ಲಿ ವಿಟ್ಲದಿಂದ ಉಪ್ಪಿನಂಗಡಿ, ಕಕ್ಕಿಂಜೆ ಮೂಲಕ ಮೂಡುಗೆರೆಗೆ ಹೊರಟಿದ್ದಾರೆ. ಚಾರ್ಮಾಡಿಯ ಮೂರನೇ ತಿರುವು ತಲುಪುತ್ತಿದ್ದಂತೆ ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ನೋಂದಾವಣೆಯಾಗದ ಹೊಸ ಎರ್ಟಿಗಾ ಕಾರೊಂದು ಬೈಕ್‌ಗೆ ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ಬೈಕ್ ಕಮರಿಗೆ ಬಿದ್ದಿದೆ. ಅಪಘಾತದಲ್ಲಿ ಬೈಕ್ ಮತ್ತು ಕಾರಿಗೂ ಹಾನಿಯಾಗಿದೆ. ಕಾರಿನಲ್ಲಿದ್ದ ಅಪರಿಚಿತರು ಬೈಕ್ ಸವಾರರಲ್ಲಿ ಕಾರಿಗಾದ ಹಾನಿಯ ಬಗ್ಗೆ ಸರಿಪಡಿಸುವಂತೆ ತಗಾದೆ ಎತ್ತಿದ್ದಾರೆ. ಬೈಕ್‌ ಸವಾರರ ಜೊತೆ ಮಾತಿನ ಚಕಮಕಿ ನಡೆದು ಹಲ್ಲೆ ನಡೆಸಿ ಬೈಕ್ ಸಮೇತ ಪರಾರಿಯಾಗಿದ್ದಾರೆಂದು ಬೈಕ್‌ ಸವಾರರು ಪೊಲೀಸರಿಗೆ ಘಟನೆಯ ಕುರಿತು ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಘಟನೆ ಬಗ್ಗೆ ವಿವರ ನೀಡಿದ ಮನೋಜ್‌ :
ಬೈಕ್ ಮತ್ತು ಕಾರು ಡಿಕ್ಕಿಯಾದ ಸಂದರ್ಭದಲ್ಲಿ ಕಾರಿನಿಂದ ಇಳಿದು ಬಂದ ಅಪರಿಚಿತರು ನಮ್ಮಲ್ಲಿ ಬಂದು ಕಾರಿಗೆ ಹಾನಿಯಾಗಿರುವುದಾಗಿ ಮತ್ತು ಅದರ ದುರಸ್ಥಿತಿಗೆ 1ಲಕ್ಷ ರೂ. ಕೊಡುವಂತೆ ಒತ್ತಾಯಿಸಿದ್ದಾರೆ. ಶೋರೂಮ್ ನಲ್ಲಿ ದುರಸ್ಥಿಗೆ ಎಷ್ಟಾಗಬಹುದು ಎಂದು ನಾವು ಪ್ರಶ್ನಿಸಿದಾಗ ರೂ. 75ಸಾವಿರ ಕೊಡಿ ಎಂದು ಒತ್ತಾಯಿಸಿದ್ದಾರೆ. ನಾವು ನಮ್ಮಿಂದ ಯಾವುದೇ ತಪ್ಪಾಗಿಲ್ಲ, ನಾವು ಹಣ ಯಾಕೆ ಕೊಡಬೇಕು. ಬೇಕಾದರೆ ಪೊಲೀಸ್ ಕೇಸ್ ಮಾಡಿ ಎಂದೆವು. ಅದಕ್ಕೆ ಅವರು ಪೊಲೀಸ್ ಕೇಸ್ ಬೇಡ. ನೀವು ಹಣ ಕೊಡದಿದ್ದರೆ ನಿಮ್ಮ ಬೈಕ್ ಕೊಂಡೊಯ್ಯತ್ತೇವೆ ಎಂದು ಬೆದರಿಸಿದರು. ಆಗ ನಾವು ಅದಕ್ಕೆ ಆಕ್ಷೇಪ ಮಾಡಿದಾಗ ನಮಗೆ ಹಲ್ಲೆ ನಡೆಸಿದ್ದಲ್ಲದೆ ನಮ್ಮಲ್ಲಿದ್ದ ರೂ.10 ಸಾವಿರ ನಗದನ್ನು ತೆಗೆದುಕೊಂಡು ಬೈಕ್ ಸಮೇತ ಪರಾರಿಯಾಗಿದ್ದಾರೆ. ಘಟನೆ ಸ್ಥಳದಲ್ಲಿ ಯಾವುದೇ ಮೊಬೈಲ್ ನೆಟ್‌ವರ್ಕ್ ಸಿಗದ ಹಿನ್ನೆಲೆಯಲ್ಲಿ ಮೂರು ಕಿ.ಮೀ ಕೆಳಗೆ ಬಂದು ನೆಟ್‌ವರ್ಕ್ ಸಿಗುವಲ್ಲಿ 112 ಗೆ ತುರ್ತು ಕರೆ ಮಾಡಿದ್ದೆವು. ಪೊಲೀಸರು ಬಂದು ನಮ್ಮನ್ನು ಉಜಿರೆ ಆಸ್ಪತ್ರೆಗೆ ಕರೆ ತಂದಿದ್ದಾರೆ. ಅಲ್ಲಿಂದ ನಮ್ಮನ್ನು ವೆನ್‌ಲಾಕ್‌ ಆಸ್ಪತ್ರೆಗೆ ಶಿಫ್ಟ್‌ ಮಾಡಲು ತಿಳಿಸಿದ್ದು, ನಾವು ಪುತ್ತೂರು ಸರಕಾರಿ ಆಸ್ಪತ್ರೆಗೆ ಬಂದು ಅಲ್ಲಿಂದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದೇವೆ ಎಂದು ಮನೀಶ್ ಮತ್ತು ಮನೋಜ್ ಅವರು ಮಾಹಿತಿ ನೀಡಿದ್ದಾರೆ.

LEAVE A REPLY

Please enter your comment!
Please enter your name here