ಹೊಸ್ತಾರೋಗಣೆ, ಕದಿರು ಕಟ್ಟುವಿಕೆ : ಕುಕ್ಕೆ ಕ್ಷೇತ್ರದಲ್ಲಿ ಭಕ್ತಸಾಗರ

0

ಸುಬ್ರಹ್ಮಣ್ಯ: ಪ್ರಸಿದ್ಧ ನಾಗಾರಾಧನೆಯ ಪುಣ್ಯಕ್ಷೇತ್ರ ಸುಬ್ರಹ್ಮಣ್ಯದ ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಳದಲ್ಲಿ ಹೊಸ್ತಾರೋಗಣೆ ಮತ್ತು ಕದಿರು ಕಟ್ಟುವ ಕಾರ್ಯವು ವಿವಿಧ ವೈಧಿಕ ವಿದಿವಿಧಾನಗಳೊಂದಿಗೆ ಶ್ರದ್ಧಾ ಭಕ್ತಿಯಿಂದ ಶುಕ್ರವಾರ ನೆರವೇರಿತು. ಈ ನಿಮಿತ್ತ ಪ್ರಾತಃಕಾಲ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರ ಮೂಲ ವಿಗ್ರಹಕ್ಕೆ ಪಂಚಾಮೃಮಹಾಭಿಷೇಕವನ್ನು ಶ್ರೀ ದೇವಳದ ಪ್ರಧಾನ ಅರ್ಚಕ ವೇದಮೂರ್ತಿ ಸೀತಾರಾಮ ಎಡಪಡಿತ್ತಾಯರು ನೆರವೇರಿಸಿದರು.


ಅಭಿಷೇಕದ ಬಳಿಕ ತೆನೆ ತರಲು ಪ್ರಧಾನ ಅರ್ಚಕ ಸೀತಾರಾಮ ಎಡಪಡಿತ್ತಾಯರು ದರ್ಪಣತೀರ್ಥ ನದಿ ತೀರಕ್ಕೆ ತೆರಳಿದರು. ಬತ್ತದ ತೆನೆಗೆ ದರ್ಪಣತೀರ್ಥ ನದಿಯ ತಟದಲ್ಲಿ ಪ್ರಧಾನ ಅರ್ಚಕರು ಪೂಜೆ ನೆರವೇರಿಸಿದರು.ಈ ಸಂದರ್ಭ ಶ್ರೀ ದೇವಳದ ಪುರೋಹಿತರು ಮಂತ್ರಘೋಷವನ್ನು ಮಾಡಿದರು. ಬಳಿಕ ಬತ್ತದ ತೆನೆಯನ್ನು ದೀವಟಿಗೆ, ಬ್ಯಾಂಡ್, ವಾದ್ಯದ ನಿನಾದದೊಂದಿಗೆ, ಆನೆ, ಬಿರುದಾವಳಿಗಳ ಮೂಲಕ ಮಂತ್ರಘೋಷದೊಂದಿಗೆ ಮೆರವಣಿಗೆಯಲ್ಲಿ ದೇವಳಕ್ಕೆ ತರಲಾಯಿತು. ಶ್ರೀ ದೇವಳಕ್ಕೆ ಒಂದು ಪ್ರದಕ್ಷಿಣೆ ಬಂದು ಅರ್ಚಕರು ತೆನೆಯನ್ನು ಗರ್ಭಗುಡಿಗೆ ಕೊಂಡೊಯ್ದರು. ನಂತರ ಶ್ರೀ ದೇವರ ಸನ್ನಿಧಿಯಲ್ಲಿ ಪ್ರಧಾನ ಅರ್ಚಕರು ಕದಿರು ಪೂಜೆ ನೆರವೇರಿಸಿದರು.ಬಳಿಕ ಶ್ರೀ ದೇವಳದ ಗರ್ಭಗುಡಿಗೆ ಕದಿರು ಕಟ್ಟಿದರು.


ಶ್ರೀ ದೇವಳದ ಗರ್ಭಗುಡಿಗೆ ಕೊರಳನ್ನು ಕಟ್ಟಿದ ಬಳಿಕ ಶ್ರೀ ದೇವಳದ ಪರಿವಾರ ಗುಡಿಗಳಿಗೆ, ದೇವಳದ ವಿವಿಧ ಭಾಗಗಳಿಗೆ ಕಟ್ಟಲು, ರಥಗಳಿಗೆ ಕಟ್ಟಲು ಗುರಿಕಾರರಿಗೆ , ಕಛೇರಿಗೆ ಕದಿರನ್ನು ಕಟ್ಟಲು ಮತ್ತು ದೇವಳದ ಆಡಳಿತ ವರ್ಗಗಳಿಗೆ ತೆನೆ ವಿತರಿಸಲಾಯಿತು. ತದನಂತರ ಅಲ್ಲಿ ಸೇರಿದ್ದ ಸಹಸ್ರಾರು ಭಕ್ತಾಧಿಗಳಿಗೆ ಕದಿರನ್ನು ವಿತರಿಸಲಾಯಿತು.ಮಾರುದ್ದದ ಸರದಿಯ ಸಾಲಿನಲ್ಲಿ ನಿಂತು ಅಧಿಕ ಸಂಖ್ಯೆಯಲ್ಲಿ ಊರ ಭಕ್ತರು ಕದಿರ ಪ್ರಸಾದವನ್ನು ಸ್ವೀಕರಿಸಿದರು. ಬಳಿಕ ಹೊಸ್ತಾರೋಗಣೆಯ ಪ್ರಯುಕ್ತ ಶ್ರೀ ದೇವರಿಗೆ ಗರ್ಭಗುಡಿಯ ಎದುರಿನ ಮಂಟಪದಲ್ಲಿ ಪಂಚಾಮೃತ ಮಹಾಭಿಷೇಕ, ವಿಶೇಷ ಪೂಜೆ ಹಾಗೂ ನವಾನ್ನ ನೈವೇಧ್ಯ ಸಮರ್ಪಿತವಾಯಿತು. ಈ ಮೊದಲು ಶ್ರೀ ದೇವಳದಲ್ಲಿ ಮೂರು ತೆಂಗಿನ ಕಾಯಿ ಗಣಪತಿ ಹೋಮ ನಡೆಯಿತು.


ಈ ಸಂದರ್ಭದಲ್ಲಿ ಶ್ರೀ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನರಾಂ.ಎಸ್.ಸುಳ್ಳಿ, ಕಾರ್ಯನಿರ್ವಹಣಾಧಿಕಾರಿ ಡಾ.ನಿಂಗಯ್ಯ, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಪ್ರಸನ್ನ ದರ್ಬೆ, ಶ್ರೀವತ್ಸ ಬೆಂಗಳೂರು, ಮನೋಹರ ರೈ, ಲೋಕೇಶ್ ಮುಂಡುಕಜೆ, ಶೋಭಾ ಗಿರಿಧರ್, ವನಜಾ.ವಿ.ಭಟ್ ಸೇರಿದಂತೆ ದೇವಳದ ಸಿಬ್ಬಂಧಿಗಳು, ಭಕ್ತರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here