ಪುತ್ತೂರು: ಸಮಾಜಮುಖಿ ಚಿಂತನೆಯ ವಿಜಯ ಸಾಮ್ರಾಟ್ ಪುತ್ತೂರು ಸಂಸ್ಥೆಯ ಆಶ್ರಯದಲ್ಲಿ ಇದೇ ಮೊದಲ ಬಾರಿಗೆ ಹುಲಿ ವೇಷಧಾರಿಗಳ ಕುಣಿತ ಸ್ಪರ್ಧೆ ‘ಪುತ್ತೂರುದ ಪಿಲಿಗೊಬ್ಬು-2023’ ಇತಿಹಾಸ ಪ್ರಸಿದ್ದ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವರ ಮಾರು ಗದ್ದೆಯಲ್ಲಿ ಅ.22ರಂದು ನಡೆಯಲಿದೆ.ಇದರ ಜೊತೆಗೆ ವಿಶೇಷವಾಗಿ ಆಯೋಜಿಸಲಾಗಿರುವ ವಿವಿಧ ಬಗೆಯ ತಿಂಡಿಗಳ ಫುಡ್ ಫೆಸ್ಟ್ ಅ.21ರಂದು ಸಂಜೆ ಉದ್ಘಾಟನೆಗೊಳ್ಳಲಿದೆ.
ಫುಡ್ ಫೆಸ್ಟ್ ಕಾರ್ಯಕ್ರಮ ಅ.21ರ ಸಂಜೆ ಗಂಟೆ 4ಕ್ಕೆ ಉದ್ಘಾಟನೆಗೊಳ್ಳಲಿದೆ.ಶಂಕರ್ ಗ್ರೂಪ್ ಆಫ್ ಕಂಪೆನಿಯ ಆಡಳಿತ ನಿರ್ದೇಶಕ ಸತ್ಯಶಂಕರ್ ಭಟ್ ಉದ್ಘಾಟಿಸಲಿದ್ದಾರೆ.ಸಂಜೆ ಗಂಟೆ 4ರಿಂದ ರಾತ್ರಿ ಗಂಟೆ 11ರ ತನಕ ಮತ್ತು ಅ.22ರ ಬೆಳಿಗ್ಗೆ ಗಂಟೆ 10ರಿಂದ ರಾತ್ರಿ ಗಂಟೆ 11ರ ತನಕ ಫುಡ್ ಫೆಸ್ಟ್ ನಡೆಯಲಿದೆ.ಪಗೋಡ ಮಾದರಿಯ ಸುಂದರ ಸುಸಜ್ಜಿತ ಆಹಾರ ಮಳಿಗೆಯಲ್ಲಿ ಬರ್ಗರ್, ಸ್ಯಾಂಡ್ವಿಚ್, ವಿವಿಧ ಬಗೆ ದೋಸೆಗಳು, ವಿವಿಧ ಬಗೆಯ ಐಸ್ಕ್ರೀಮ್ಗಳು, ಮೊಕ್ಟೈಲ್ ಜ್ಯೂಸ್, ಮಟ್ಕಾ ಸೋಡಾ, ಕರಾವಳಿಯ ರುಚಿಕರ ಖಾದ್ಯಗಳು ಸಹಿತ 40ಕ್ಕೂ ಅಧಿಕ ವಿಭಿನ್ನ ಬಗೆಯ ಖಾದ್ಯಗಳನ್ನು ಸವಿಯುವ ಅವಕಾಶವಿದೆ. ಫುಡ್ ಫೆಸ್ಟ್ ಗಾಗಿ ಈಗಾಗಲೇ ಸುಸಜ್ಜಿತ ಸ್ಟಾಲ್ಗಳ ವ್ಯವಸ್ಥೆ ಮಾಡಲಾಗಿದೆ.
ಪಿಲಿಗೊಬ್ಬು ಕಾರ್ಯಕ್ರಮವನ್ನು ಅ.22ರಂದು ಬೆಳಿಗ್ಗೆ ಗಂಟೆ 10ಕ್ಕೆ ಶಾಸಕ ಅಶೋಕ್ ಕುಮಾರ್ ರೈ ಉದ್ಘಾಟಿಸಲಿದ್ದಾರೆ. ಉದ್ಘಾಟನಾ ಕಾರ್ಯಕ್ರಮದ ಬಳಿಕ ಬಲಿಷ್ಟ 10 ತಂಡಗಳಿಂದ ಹುಲಿ ಕುಣಿತ ಸ್ಪರ್ಧಾ ಕಾರ್ಯಕ್ರಮ ಆರಂಭಗೊಳ್ಳಲಿದೆ. ಸುಮಾರು 20 ರಿಂದ 25 ಸಾವಿರ ಮಂದಿ ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ.ಇದಕ್ಕೆ ಬೇಕಾದ ಎಲ್ಲಾ ಸಿದ್ದತೆಗಳನ್ನು ಮಾಡಲಾಗಿದೆ ಎಂದು ವಿಜಯ ಸಾಮ್ರಾಟ್ ಪುತ್ತೂರು ಸಂಸ್ಥೆಯ ಸ್ಥಾಪಕಾಧ್ಯಕ್ಷ ಮತ್ತು ಪಿಲಿಗೊಬ್ಬು ಸಮಿತಿಯ ಗೌರವಾಧ್ಯಕ್ಷರಾಗಿರುವ ಸಹಜ್ ರೈ ಹೇಳಿದ್ದಾರೆ.