ಪುತ್ತೂರು: ರಾಜ್ಯ ಬಿಜೆಪಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿರುವ ದ.ಕ.ಸಂಸದ ನಳಿನ್ ಕುಮಾರ್ ಕಟೀಲ್ ಅವರ ಅಧಿಕಾರದ ಅವಧಿ ಈಗಾಗಲೇ ಪೂರ್ಣಗೊಂಡಿರುವುದರಿಂದ ರಾಜ್ಯ ಬಿಜೆಪಿಗೆ ಹೊಸ ಸಾರಥಿ ನೇಮಕವಾಗುವ ನಿರೀಕ್ಷೆಯಂತೆ ಈಗಾಗಲೇ ರಾಜ್ಯ ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆಯವರ ಹೆಸರಿನ ಜೊತೆಗೆ ಕೇಂದ್ರದ ಮಾಜಿ ಸಚಿವ ಡಿ.ವಿ.ಸದಾನಂದ ಗೌಡ ಅವರ ಹೆಸರು ಮುನ್ನೆಲೆಯಲ್ಲಿದೆ.
ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರಲ್ಲದೆ, ಈ ಹಿಂದೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ಜವಾಬ್ದಾರಿ ನಿರ್ವಹಿಸಿದ್ದ ಮಾಜಿ ಸಚಿವ ಸಿ.ಟಿ ರವಿ ಮತ್ತು ಯಡಿಯೂರಪ್ಪ ಅವರ ಮಗ, ರಾಜ್ಯ ಬಿಜೆಪಿ ಉಪಾಧ್ಯಕ್ಷರೂ ಆಗಿರುವ ಶಾಸಕ ಬಿ.ವೈ ವಿಜಯೇಂದ್ರ ಅವರ ಹೆಸರುಗಳೂ ಕೇಳಿ ಬರುತ್ತಿತ್ತು. ಆದರೆ ಇದೀಗ ದಿಢೀರ್ ಬೆಳವಣಿಗೆಯಲ್ಲಿ ಡಿ.ವಿ.ಸದಾನಂದ ಗೌಡರ ಹೆಸರು ಮುಂದೆ ಬಂದಿದೆ. ಅವರನ್ನು ಈಗಾಗಲೇ ದೆಹಲಿಯ ಬಿಜೆಪಿ ರಾಷ್ಟ್ರೀಯ ಪ್ರಮುಖರು ಕರೆದಿರುವುದಾಗಿ ತಿಳಿದು ಬಂದಿದೆ. ನಾನು ಯಾವುದೇ ಹುದ್ದೆಯ ಅಪೇಕ್ಷೆ ಪಟ್ಟವನಲ್ಲ, ಪಕ್ಷದಲ್ಲಿ ಯಾವುದೇ ಅವಕಾಶ ಕೊಟ್ಟರು ಅದನ್ನು ನಿಭಾಯಿಸಬಲ್ಲೆ. ಸದ್ಯ ದೆಹಲಿಗೆ ತೆರಳುತ್ತಿದ್ದೇನೆ ಎಂದು ಡಿ.ವಿ.ಸದಾನಂದ ಗೌಡ ಸುದ್ದಿಗೆ ಪ್ರತಿಕ್ರಿಯಿಸಿದ್ದಾರೆ.