ಪುತ್ತೂರು: ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ವಿಚಾರದಲ್ಲಿ ನ್ಯಾಯಾಲಯದಲ್ಲಿದ್ದ ತಡೆಯಾಜ್ಞೆ ತೆರವುಗೊಂಡಿದ್ದು ಸರಕಾರ ದ ಕ ಜಿಲ್ಲೆಗೆ 546 ಶಿಕ್ಷಕರನ್ನು ನೇಮಕ ಮಾಡಿ ಆದೇಶ ಹೊರಡಿಸಿದ್ದು ಪುತ್ತೂರಿಗೆ 131 ಶಿಕ್ಷಕರನ್ನು ನೇಮಿಸಲಾಗಿದೆ.
ದ ಕ ಜಿಲ್ಲೆ ಸೇರಿದಂತೆ ಪುತ್ತೂರು ತಾಲೂಕಿನಲ್ಲಿ ಸರಕಾರಿ ಪ್ರಾಥಮಿಕ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಇದ್ದು ಆದರೆ ಶಿಕ್ಷಕರನ್ನು ನೇಮಕ ಮಾಡುವಂತಿರಲಿಲ್ಲ. ಶಿಕ್ಷಕರ ನೇಮಕಾತಿ ವಿಚಾರದಲ್ಲಿ ನ್ಯಾಯಾಲಯದ ತಡೆಯಾಜ್ಞೆ ಇದ್ದ ಕಾರಣ ಕಳೆದ ಕೆಲವು ವರ್ಷಗಳಿಂದ ಸರಕಾರಿ ಪ್ರಾಥಮಿಕ ಶಾಲೆಗಳಿಗೆ ಅತಿಥಿ ಶಿಕ್ಷಕರನ್ನು ನೇಮಕ ಮಾಡಲಾಗುತ್ತಿತ್ತು. ಶಿಕ್ಷಕರ ನೇಮಕಾತಿ ವಿಚಾರದಲ್ಲಿದ್ದ ತಡೆಯಾಜ್ಞೆಯನ್ನು ನ್ಯಾಯಾಲಯ ತೆರವು ಮಾಡಿದ್ದರಿಂದ ದ ಕ ಹಾಗೂ ಪುತ್ತೂರು ತಾಲೂಕಿನ ವಿವಿಧ ಶಾಲೆಗಳಿಗೆ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ನಡೆಯಲಿದೆ. ಶಿಕ್ಷಕರ ನೇಮಕಾತಿ ವಿಚಾರಕ್ಕೆ ಸಂಬಂಧಿಸಿದಂತೆ ಮತ್ತು ನ್ಯಾಯಾಲಯದ ತಡೆಯಾಜ್ಞೆ ವಿಚಾರವನ್ನು ಪುತ್ತೂರು ಶಾಸಕರಾದ ಅಶೋಕ್ ರೈ ಸರಕಾರದ ಗಮನಕ್ಕೆ ತಂದಿದ್ದರು. ಶಿಕ್ಷಕರ ಕೊರತೆಯಿಂದ ಸರಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣವನ್ನು ನೀಡಲು ಸಾಧ್ಯವಾಗುತ್ತಿಲ್ಲ ಇದರಿಂದ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ ಸರಕಾರ ನೇಮಕಾತಿ ವಿಚಾರದಲ್ಲಿ ಮಧ್ಯ ಪ್ರವೇಶ ಮಾಡುವಂತೆ ಮನವಿಯನ್ನು ಮಾಡಿದ್ದರು.
ವಿಷಯವಾರು ಶಿಕ್ಷಕರ ನೇಮಕ
ಪ್ರತೀ ಶಾಲೆಗಳಲ್ಲಿ ವಿಷಯವಾರು ಶಿಕ್ಷಕರ ನೇಮಕಾತಿಯಾಗಲಿದೆ. ಇಷ್ಟು ವರ್ಷಗಳಲ್ಲಿ ಸರಕಾರಿ ಶಾಲೆಗಳಲ್ಲಿ ವಿಷಯವಾರು ಶಿಕ್ಷಕರ ನೇಮಕಾತಿ ನಡೆದಿರಲಿಲ್ಲ. ಒಬ್ಬರೇ ಶಿಕ್ಷಕರು ಎರಡರಿಂದ ಮೂರು ವಿಷಯಗಳ ಬಗ್ಗೆ ಮಕ್ಕಳಿಗೆ ಪಾಠ ಮಾಡುತ್ತಿದ್ದರು. ಇದೇ ಮೊದಲ ಬಾರಿಗೆ ಸರಕಾರಿ ಶಾಲೆಗಳಲ್ಲಿ ವಿಷಯವಾರು ಶಿಕ್ಷಕರ ನೇಮಕಾತಿ ನಡೆಯುತ್ತಿದ್ದು ಇದರಿಂದ ಮುಂದಿನ ದಿನಗಳಲ್ಲಿ ಸರಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ದೊರೆಯಲಿದೆ.
ಗ್ರಾಮೀಣ ಭಾಗದ ಶಿಕ್ಷಕರು ಪಟ್ಟಣಕ್ಕೆ
ನೂತನವಾಗಿ ನೇಮಕಗೊಂಡ ಎಲ್ಲಾ ಶಿಕ್ಷಕರು ಗ್ರಾಮೀಣ ಭಾಗದ ಶಾಲೆಗೆ ನಿಯುಕ್ತಿಗೊಳ್ಳಲಿದ್ದಾರೆ. ಹೊಸ ಶಿಕ್ಷಕರು ಗ್ರಾಮೀಣ ಮಕ್ಕಳಿಗೆ ಪಾಠ ಮಾಡುವ ಮೂಲಕ ತಮ್ಮ ವೃತ್ತಿ ಆರಂಭಿಸಲಿದ್ದು ಗ್ರಾಮೀಣ ಭಾಗದ ಶಾಲೆಯಲ್ಲಿದ್ದ ಹಿರಿಯ ಶಿಕ್ಷಕರನ್ನು ಪಟ್ಟಣದ ಶಾಲೆಗೆ ನಿಯುಕ್ತಿಗೊಳಿಸಲಾಗುವುದು ಎಂದು ಪುತ್ತೂರು ಶಾಸಕರಾದ ಅಶೋಕ್ ರೈ ತಿಳಿಸಿದ್ದು ಈ ವಿಚಾರದ ಬಗ್ಗೆ ಶಿಕ್ಷಣ ಸಚಿವಾಲಯದ ಗಮನಕ್ಕೆ ತಂದಿದ್ದಾರೆ. ನೇಮಕಾತಿ ಕೌನ್ಸಿಲಿಂಗ್ ಪ್ರಕ್ರಿಯೆ ಆರಂಭಗೊಂಡಿದ್ದು , ಪುತ್ತೂರು ತಾಲೂಕಿಗೆ 66 ಶಿಕ್ಷಕರನ್ನು ಈಗಾಗಲೇ ನಿಯುಕ್ತಿಗೊಳಿಸಿ ಆದೇಶ ಮಾಡಲಾಗಿದೆ ಎಂದು ಶಾಸಕರು ತಿಳಿಸಿದ್ದಾರೆ.
ಎರಡು ದಿನದಲ್ಲಿ ನೇಮಕಾತಿ ಆದೇಶ
ಸ್ಥಳ ಆಯ್ಕೆಗೊಂಡ ಬೇರೆ ಜಿಲ್ಲೆಗಳ ಅಭ್ಯರ್ಥಿಗಳಿಗೆ ನೇಮಕಾತಿ ಆದೇಶವನ್ನು ನೀಡಲಾಗಿದ್ದು ದ ಕ ಜಿಲ್ಲೆಯ ಶಿಕ್ಷಕರಿಗೆ ಯಾವುದೇ ನೇಮಕಾತಿ ಆದೇಶದ ಪ್ರತಿಯನ್ನು ನೀಡಿಲ್ಲ ಎಂದು ಸುಮಾರು 80 ಶಿಕ್ಷಕರು ಶಾಸಕರಾದ ಅಶೋಕ್ ರೈಯವರಿಗೆ ವ್ಯಾಟ್ಸಪ್ ಮೂಲಕ ಮನವಿಯನ್ನು ಮಾಡಿದ್ದು , ಮನವಿಗೆ ಪ್ರತಿಕ್ರಿಯೆ ನೀಡಿದ ಶಾಸಕರು ಎರಡು ದಿನೊಳಗಾಗಿ ಜಿಲ್ಲಾ ಡಿಡಿಪಿಐಯವರು ನೇಮಕಾತಿ ಪ್ರತಿಯನ್ನು ನೀಡಲಿದ್ದಾರೆ. ಈ ವಿಚಾರದಲ್ಲಿ ಭಯ, ಗೊಂದಲ ಮತ್ತು ಆತಂಕ ಬೇಡ ಎಂದು ನೂತನವಾಗಿ ಆಯ್ಕೆಗೊಂಡ ಶಿಕ್ಷಕರಲ್ಲಿ ವಿನಂತಿಸಿದ್ದಾರೆ.
ಶಿಕ್ಷಕರ ನೇಮಕಾತಿಯಲ್ಲಿದ್ದ ಸಮಸ್ಯೆ ನಿವಾರಣೆಯಾಗಿದೆ. ಇದು ಅತ್ಯಂತ ಸಂತೋಷದ ವಿಚಾರವಾಗಿದೆ . ಪುತ್ತೂರು ಸೇರಿದಂತೆ ದ ಕ ಜಿಲ್ಲೆಯ ಖಾಲಿ ಇರುವ ಎಲ್ಲಾ ಶಿಕ್ಷಕ ಹುದ್ದೆ ಭರ್ತಿಯಾಗಲಿದ್ದು ಮೊದಲ ನೇಮಕಾತಿಯಲ್ಲಿ ದ ಕ ಜಿಲ್ಲೆಗೆ 546 ಶಿಕ್ಷಕರನ್ನು ನಿಯುಕ್ತಿಗೊಳಿಸಲಾಗಿದೆ. ಪುತ್ತೂರಿಗೆ 131 ಶಿಕ್ಷಕರನ್ನು ನೇಮಕಮಾಡಲಾಗಿದೆ. ವಿಷಯವಾರು ಶಿಕ್ಷಕರ ನೇಮಕಾತಿಯಿಂದ ಸರಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ದೊರೆಯಲಿದೆ. ಬಡವರ ಮಕ್ಕಳೂ ಮುಂದಿನ ದಿನಗಳಲ್ಲಿ ಸರಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣವನ್ನು ಹೊಂದಲಿದ್ದಾರೆ ಮತ್ತು ಸರಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆಯೂ ವೃದ್ದಿಸಲು ಇದು ಕಾರಣವಾಗಲಿದೆ. ಆಯ್ಕೆಗೊಂಡ ಎಲ್ಲಾ ಶಿಕ್ಷಕರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತಿದ್ದೇನೆ
ಅಶೋಕ್ ರೈ, ಶಾಸಕರು ಪುತ್ತೂರು