ಪುತ್ತೂರು: ನಗರಸಭೆಯ ಚರಂಡಿ ಮತ್ತು ರಾಜಕಾಲುವೆ ಹೂಳೆತ್ತುವ ಕಾಮಗಾರಿಗಳಲ್ಲಿ ಅವ್ಯವಹಾರ ನಡೆದಿದೆ ಎಂದು ನೀಡಿದ ದೂರಿಗೆ ಸಂಬಂಧಿಸಿ ಹಿಂದಿನ ಪೌರಾಯುಕ್ತೆ ರೂಪಾ ಶೆಟ್ಟಿ, ಇಂಜಿನಿಯರ್ ದಿವಾಕರ್, ಅಕೌಂಟ್ ಸೂಪರಿಡೆಂಟ್ ಚಂದ್ರರಾಮ ದೇವಾಡಿಗ ಅವರ ವಿರುದ್ಧ ತನಿಖೆ ನಡೆಸಲು ಲೋಕಾಯುಕ್ತ ಆದೇಶ ನೀಡಿದೆ ಎಂದು ನಗರಸಭೆ ಮಾಜಿ ವಿಪಕ್ಷ ನಾಯಕ ಹೆಚ್.ಮಹಮ್ಮದ್ ಆಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ರೂ. 40 ಲಕ್ಷದಲ್ಲಿ ಚರಂಡಿ ಮತ್ತು ರಾಜಕಾಲುವೆ ಹೂಳೆತ್ತುವ ಕುರಿತು ಹಲವು ಕಡೆ ಕಾಮಗಾರಿ ನಡೆದಿಲ್ಲ ಎಂದು ವಾರ್ಡ್ ಸದಸ್ಯರು ಮತ್ತು ಸಾರ್ವಜನಿಕರು ಲಿಖಿತ ದೂರು ನೀಡಿದ್ದರು. ಈ ಕುರಿತು ಬಿಜೆಪಿ ಆಡಳಿತ ತಲೆ ಕೆಡಿಸಿಕೊಳ್ಳದೆ ಅಧಿಕಾರಿಗಳು ನಡೆಸಿರುವ ಅವ್ಯವಹಾರಕ್ಕೆ ಪರೋಕ್ಷ ಬೆಂಬಲ ನೀಡಿತ್ತು. ಈ ಬಗ್ಗೆ ವಿಷಯ ತಿಳಿದ ನಾನು ಮಾಹಿತಿ ಹಕ್ಕಿನ ಮೂಲಕ ಮಾಹಿತಿ ಕಲೆ ಹಾಕಿದಾಗ ಚರಂಡಿ ಹೂಳೆತ್ತುವ ಕಾಮಗಾರಿಗೆ ರೂ.40 ಲಕ್ಷದ ಅಂದಾಜು ಪಟ್ಟಿ ತಯಾರಿಸಿ ಬಿಲ್ಲು ಪಾವತಿಸಲಾಗಿದ್ದು,ವ್ಯಾಪಕ ಅವ್ಯವಹಾರ ನಡೆದಿರುವುದು ತಿಳಿದು ಬಂತು ಎಂದು ಹೇಳಿದ ಮಹಮ್ಮದ್ ಆಲಿ 2018-19ನೇ ಸಾಲಿನಲ್ಲಿ ರಾಜಕಾಲುವೆ ಹೂಲೆತ್ತಲು ರೂ.10ಲಕ್ಷ, 2020-21ನೇ ಸಾಲಿನಲ್ಲಿ ನಗರಸಭೆಯ 31 ವಾರ್ಡ್‌ಗಳ ರಸ್ತೆ ಬದಿಯ ಹೂಳೆತ್ತಲು ರೂ.30ಲಕ್ಷ, ಅನುದಾನ ಮಂಜೂರು ಮಾಡಿ ಕೆಲಸಕಾರ್ಯ ನಡೆದಿದ್ದು, ಈ ಕಾಮಗಾರಿಯು ಕೂಲಿಯಾಳುಗಳ ಮೂಲಕ ನಡೆಸುವುದೆಂದು ಅಂದಾಜುಪಟ್ಟಿ ಸಲ್ಲಿಸಿ, ಕೊನೆಗೆ ಯಂತ್ರೋಪಕರಣ ಮೂಲಕ ಕಾಮಗಾರಿ ನಡೆಸಿ ಲಕ್ಷಾಂತರ ರೂಪಾಯಿ ಹಣ ದುರುಪಯೋಗ ಮಾಡಿ ನಗರಸಭೆಗೆ ನಷ್ಟ ಉಂಟು ಮಾಡಿದ್ದಾರೆ. ಈ ಕುರಿತು ದಾಖಲೆ ಸಹಿತ ಉಪಲೋಕಾಯುಕ್ತರಿಗೆ ನೀಡಿರುವ ದೂರಿನಂತೆ ತನಿಖೆಗಾಗಿ ಪೊಲೀಸ್ ಅಧೀಕ್ಷಕರು ಕರ್ನಾಟಕ ಲೋಕಾಯುಕ್ತ ಮಂಗಳೂರು ಇವರಿಗೆ ಆದೇಶ ಹೊರಡಿಸಿದ್ದರು. ಮಂಗಳೂರು ಲೋಕಾಯುಕ್ತ ಎಸ್.ಪಿ ಯವರು ತನಿಖೆ ಕೈಗೊಂಡಿದ್ದು, ಅಗಸ್ಟ್ 31ಕ್ಕೆ ದೂರುದಾರನಾದ ನಾನು ಮಂಗಳೂರು ಲೋಕಾಯುಕ್ತ ಕಚೇರಿಗೆ ಹಾಜರಾಗಿ ದೂರಿನ ಬಗ್ಗೆ ಹೇಳಿಕೆ ನೀಡಿರುತ್ತೇನೆ. ಈ ಪ್ರಕರಣದ ತನಿಖೆ ಮುಂದುವರೆದು ಅವ್ಯವಹಾರ ನಡೆಸಿರುವ ಬಗ್ಗೆ ಪಕ್ಕಾ ದಾಖಲೆಗಳು ಇರುವುದರಿಂದ ತಪ್ಪಿತಸ್ಥ ಅಧಿಕಾರಿಗಳಿಗೆ ಕಾನೂನಿನ ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಮಹಮ್ಮದ್ ಆಲಿ ಹೇಳಿದ್ದಾರೆ
2018ರಿಂದ ಈ ತನಕ ಪ್ರತಿ ವರ್ಷ ಹೂಳೆತ್ತುವ ಕಾಮಗಾರಿಗಳು ನಡೆಯುತ್ತಿದ್ದು, ಪ್ರತಿ ವರ್ಷ ಗುತ್ತಿಗೆದಾರ ಮುರಳಿಕೃಷ್ಣ ಹಸಂತಡ್ಕ ಅವರಿಗೆ ಈ ಕಾಮಗಾರಿ ಸಿಗಲು ಕಾರಣವೇನು ಎಂಬ ಪ್ರಶ್ನೆ ಮೂಡಿದೆ. ಅಲ್ಲದೆ ಅವರು ಈ ಅವ್ಯವಹಾರದಲ್ಲಿ ಭಾಗಿಯಾಗಿರುವ ಸಾಧ್ಯತೆ ಇದ್ದು ಗುತ್ತಿಗೆದಾರರನ್ನು ಬ್ಲಾಕ್ ಲೀಸ್ಟ್‌ಗೆ ಸೇರಿಸಬೇಕೆಂದು ಆಲಿ ಆಗ್ರಹಿಸಿದ್ದಾರೆ.
ಭ್ರಷ್ಟಾಚಾರದಲ್ಲಿ ಕಾಂಪ್ರೋಮೈಸ್ ಇಲ್ಲ:
ಈ ಬಾರಿ ಮಳೆಗಾಲ ಜುಲೈ ತಿಂಗಳಲ್ಲಿ ಆರಂಭಗೊಂಡಿದ್ದು, ಚರಂಡಿ ಮತ್ತು ರಾಜಕಾಲುವೆಯಲ್ಲಿ ಹೂಳೆತ್ತುವ ಕಾಮಗಾರಿ ಕೆಲವು ಕಡೆ ಮಾತ್ರ ನಡೆದಿದ್ದು ಬೇರೆಲ್ಲಿಯೂ ನಡೆದಿಲ್ಲ. ಆದರೆ ಈಗ ಬಿಲ್ ಪಾವತಿಗೆ ನಗರಸಭೆ ಸದಸ್ಯರ ಸಹಿ ಪಡೆಯುವ ಕೆಲಸ ನಡೆಯುತ್ತಿದೆ ಎಂದು ತಿಳಿದು ಬಂದಿದೆ. ಈಗಾಗಲೇ ಈಗಿನ ಪೌರಾಯುಕ್ತ ಮಧು ಎಸ್ ಮನೋಹರ್ ಅವರಿಗೆ ಚರಂಡಿ ಹೂಳೆತ್ತುವ ಕಾಮಗಾರಿ ಬಿಲ್ ಪಾವತಿಸದಂತೆ ಮನವಿ ಮಾಡಿದ್ದೇನೆ. ಈ ಬಗ್ಗೆ ನಗರಸಭೆ ಸದಸ್ಯರು ಸಹಿ ಹಾಕಿದರೆ ಅವರೇ ಜವಾಬ್ದಾರರು. ಭ್ರಷ್ಟಾಚಾರ ವಿಚಾರದಲ್ಲಿ ಯಾವುದೇ ಕಾಂಪ್ರೋಮೈಸ್ ಇಲ್ಲ. ಈ ವಿಚಾರದಲ್ಲಿ ನಾನು ಪಕ್ಷ, ಜಾತಿ ನೋಡುವುದಿಲ್ಲ ಎಂದು ಹೆಚ್.ಮಹಮ್ಮದ್ ಆಲಿ ತಿಳಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ನಗರಸಭೆ ಮಾಜಿ ಅಧ್ಯಕ್ಷೆ ಜಯಂತಿ ಬಲ್ನಾಡು, ಹಾಲಿ ಸದಸ್ಯ ಮಹಮ್ಮದ್ ರಿಯಾಜ್, ನಗರ ಕಾಂಗ್ರೆಸ್ ಉಪಾಧ್ಯಕ್ಷ ಮಂಜುನಾಥ್, ಮೌರಿಸ್ ಕುಟಿನ್ಹಾ ಉಪಸ್ಥಿತರಿದ್ದರು.