ಮಾದಕ ದ್ರವ್ಯ ಮಾರಾಟ ಸೇವನೆ ಕಂಡು ಬಂದಲ್ಲಿ ಪೊಲೀಸರಿಗೆ ಮಾಹಿತಿ ನೀಡಿ-ಎಸ್ಐ ಧನಂಜಯ ಬಿ.ಕೆ.
ಪುತ್ತೂರು: ಗಾಂಜಾ, ಅಫೀಮು ಸಾಮಾಜಿಕ ಪಿಡುಗು. ಗಾಂಜಾ ಸೇವನೆಯಿಂದ ಇಂದು ಯುವ ಸಮೂಹ ಹಾಳಾಗುತ್ತಿದೆ. ಗಾಂಜಾ ಸೇವನೆ, ಮಾರಾಟ ಕಂಡುಬಂದಲ್ಲಿ ನಮಗೆ ಮಾಹಿತಿ ನೀಡಿ ಎಂದು ಸಂಪ್ಯ ಪೊಲೀಸ್ ಠಾಣೆಯ ಎಸ್ಐ ಧನಂಜಯ ಬಿ.ಕೆ.ರವರು ತಿಳಿಸಿದರು. ಅವರು ಬೆಟ್ಟಂಪಾಡಿ ಗ್ರಾಮ ಪಂಚಾಯತ್ ಸಮುದಾಯ ಭವನದಲ್ಲಿ ನಡೆದ ಇರ್ದೆ-ಬೆಟ್ಟಂಪಾಡಿ ಗ್ರಾ.ಪಂ. ವ್ಯಾಪ್ತಿಯ ಪೊಲೀಸ್ ಜನಸಂಪರ್ಕ ಸಭೆಯಲ್ಲಿ ಸಾರ್ವಜನಿಕರಿಗೆ ಮಾಹಿತಿ ನೀಡಿದರು.
ಗಾಂಜಾ ಮುಂತಾದ ಮಾದಕ ದ್ರವ್ಯಗಳ ಮಾರಾಟ, ಸೇವನೆ ಅಪರಾಧವಾಗಿದೆ. ಇಂದು ಮಾದಕ ದ್ರವ್ಯಗಳ ವ್ಯಸನ ಯುವಜನರಲ್ಲಿ ಹೆಚ್ಚಾಗುತ್ತಿದೆ. ಇದರಿಂದ ದೇಹದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಮಾದಕದ್ರವ್ಯಗಳ ಸೇವನೆಯಿಂದ ಕಿಡ್ನಿ, ಹೃದಯಕ್ಕೆ ತೊಂದರೆಯುಂಟಾಗುತ್ತದೆ. ಎಂದು ಹೇಳಿದರು. ಇರ್ದೆ ಬೆಟ್ಟಂಪಾಡಿ ಗ್ರಾಮದಲ್ಲಿ ಗಾಂಜಾ ಸೇವನೆ ಮಾಡಿರುವ ಬಗ್ಗೆ ಎರಡು ಪ್ರಕರಣ ಪತ್ತೆಹಚ್ಚಲಾಗಿದೆ. ಗಾಂಜಾ ಒದಗಿಸುವವರ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತದೆ. ಮಾದಕ ದ್ರವ್ಯ ಅಮಲು ಪದಾರ್ಥಗಳನ್ನು ಇಟ್ಟುಕೊಳ್ಳುವುದು, ಸೇವನೆ ಹಾಗೂ ಮಾರಾಟ ಮಾಡುವುದು ಕಂಡುಬಂದಲ್ಲಿ ಪೊಲೀಸರಿಗೆ ಮಾಹಿತಿ ಕೊಡಿ. ಮಾಹಿತಿ ನೀಡಿದವರ ಹೆಸರನ್ನು ಗೌಪ್ಯವಾಗಿಡಲಾಗುವುದು ಎಂದು ಹೇಳಿದರು.
ಟ್ರಾಫಿಕ್ ನಿಯಮಗಳನ್ನು ಪಾಲಿಸಿ: ರಸ್ತೆ ಸುರಕ್ಷತಾ ನಿಯಮಗಳ ಬಗ್ಗೆ ಮಾಹಿತಿ ನೀಡಿದ ಅವರು ಸಿಗ್ನಲ್ಗಳನ್ನು ಪಾಲನೆ ಮಾಡಿಕೊಂಡು ವಾಹನ ಚಲಾಯಿಸಬೇಕು. ಹೆಲ್ಮೆಟ್ ಹಾಕದೆ, ಸಿಗ್ನಲ್ ಪಾಲಿಸದೆ ವಾಹನ ಸವಾರಿ ಮಾಡಿದಲ್ಲಿ ಜೀವಕ್ಕೆ ಮಾರಕವಾಗುತ್ತದೆ ಎಂದರು. ಸಂಚಾರಿ ನಿಯಮಗಳನ್ನು ಉಲ್ಲಂಘನೆ ಮಾಡಿದಲ್ಲಿ ದಂಡ ವಿಧಿಸಲಾಗುತ್ತದೆ ಎಂದರು.
ಸೈಬರ್ ಕ್ರೈಮ್ ಮಾಹಿತಿ: ಇತ್ತೀಚಿನ ದಿನಗಳಲ್ಲಿ ಸೈಬರ್ ಕ್ರೈಂ ವಂಚನೆ ಹೆಚ್ಚಾಗಿದೆ. ಅನಾಮಧೇಯ ಕರೆಗೆ ಒಟಿಪಿ ನೀಡಿದರೆ ನಿಮ್ಮ ಅಕೌಂಟ್ನಿಂದ ಹಣ ಕಳೆದುಕೊಳ್ಳಬೇಕಾಗುತ್ತದೆ. ಆದ್ದರಿಂದ ಯಾವುದೇ ಅನಾಮಿಕ ವ್ಯಕ್ತಿ ಬ್ಯಾಂಕ್ ಅಕೌಂಟ್ಗೆ ಸಂಬಂಧಿಸಿ ಕರೆ ಮಾಡಿ ಒಟಿಪಿ ಕೇಳಿದಲ್ಲಿ ಅವರಿಗೆ ಒಟಿಪಿ ನೀಡಬೇಡಿ. ಯಾವುದೇ ಬ್ಯಾಂಕ್ನವರು ನಿಮ್ಮ ಒಟಿಪಿಯನ್ನು ಕೇಳುವುದಿಲ್ಲ ಎಂದರು. ನಿಮ್ಮ ಬ್ಯಾಂಕ್ ಅಕೌಂಟ್ಗೆ ಅಗತ್ಯವಾಗಿ ಕೆವೈಸಿ ಮಾಡಿಕೊಳ್ಳಿ ಎಂದರು. ಸೋಷಿಯಲ್ ಮೀಡಿಯಾವನ್ನು ದುರ್ಬಳಕೆ ಮಾಡಬಾರದು. ಯಾವುದೇ ವ್ಯಕ್ತಿ, ಸಮುದಾಯಗಳಿಗೆ ಸಂಬಂಧಪಟ್ಟಂತೆ ಚಾರಿತ್ರ್ಯಹರಣ, ತೇಜೋವಧೆ ಮಾಡುವಂತಹ ಸಂದೇಶ ಹಾಗೂ ವೀಡಿಯೋಗಳನ್ನು ರವಾನೆ ಮಾಡಬಾರದು. ಮಾಡಿದಲ್ಲಿ ಸೈಬರ್ ಕ್ರೈಮ್ ಅಡಿಯಲ್ಲಿ ಕಾನೂನು ಕ್ರಮ ಜರಗಿಸಲಾಗುವುದು ಎಂದರು. ಪೋಕ್ಸೋ ಕಾಯಿದೆ ಬಗ್ಗೆ ಮಾಹಿತಿ ನೀಡಿದರು.
ಇರ್ದೆ ಬೆಟ್ಟಂಪಾಡಿ ಗ್ರಾಮಕ್ಕೆ ಬೀಟ್ ಪೊಲೀಸ್ ಇಲ್ಲ. ಬೀಟ್ ಪೊಲೀಸ್ ಯಾರೆಂಬುದೇ ಗೊತ್ತಿಲ್ಲ ಎಂದು ಸದಸ್ಯ ಮೊಯಿದುಕುಂಞಿ ಹೇಳಿದರು. ಇದಕ್ಕೆ ಉತ್ತರಿಸಿದ ಎಸ್ಐರವರು ಇರ್ದೆ ಬೆಟ್ಟಂಪಾಡಿ ಗ್ರಾಮಕ್ಕೆ ಬೀಟ್ ಪೊಲೀಸ್ ಆಗಿ ನಿತಿನ್ರವರು ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಸಭೆಗೆ ಪರಿಚಯಿಸಿದರು. ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಮನೆಕಟ್ಟಲು ಹೊಯಿಗೆ ಅವಶ್ಯಕತೆ ಇರುತ್ತದೆ ಇದಕ್ಕೆ ಸ್ಥಳೀಯ ನದಿಯಿಂದ ಪಿಕ್ಅಪ್ ವಾಹನದಲ್ಲಿ ಮರಳು ಸಾಗಾಟ ಮಾಡುವುದಕ್ಕೆ ಅಡ್ಡಿಪಡಿಸಬಾರದು. ಸಾಗಾಟಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಸದಸ್ಯ ಚಂದ್ರಶೇಖರ ರೈ ಬಾಳ್ಯೊಟ್ಟು ಹೇಳಿದರು. ಅಕ್ರಮ ಮರಳು ಸಾಗಾಟ ಮಾಡುವುದು ಅಪರಾಧ. ಮರಳು ಸಾಗಾಟ ಪರವಾನಿಗೆ ಪಡೆದುಕೊಂಡವರು ಮರಳು ಸಾಗಾಟ ಮಾಡಬಹುದು. ಕಾನೂನು ಬಾಹಿರವಾಗಿ ಮರಳು ಸಾಗಾಟ ಮಾಡಬೇಡಿ ಎಂದರು. ಸಣ್ಣ ಪ್ರಮಾಣದ ಮರಳು ಬೇಕಾದಲ್ಲಿ ಪಿಕ್ಅಪ್ನಲ್ಲಿ ತರಬೇಕಾಗುತ್ತದೆ ಇದಕ್ಕೆ ಮಾನವೀಯ ನೆಲೆಯಲ್ಲಿ ಅವಕಾಶ ಮಾಡಿ ಎಂದು ಗ್ರಾಮಸ್ಥರು ವಿನಂತಿಸಿದರು. ಶಾಲಾ ಕಾಲೇಜುಗಳಲ್ಲಿ ಮಾದಕದ್ರವ್ಯಗಳ ಸೇವನೆ ವಿರುದ್ಧ ಮಾಹಿತಿ ನೀಡುವ ಕೆಲಸ ಮಾಡಬೇಕು ಇದರಿಂದ ವಿದ್ಯಾರ್ಥಿಗಳಲ್ಲಿ ಜಾಗೃತಿ ಉಂಟಾಗುತ್ತದೆ ಎಂದು ಸದಸ್ಯ ಪ್ರಕಾಶ್ ರೈ ಹೇಳಿದರು.
ಬೆಟ್ಟಂಪಾಡಿ ನವೋದಯ ಪ್ರೌಢಶಾಲಾ ಮುಖ್ಯಶಿಕ್ಷಕಿ ಪುಷ್ಪಲತಾರವರು ಹೈಸ್ಕೂಲ್ ಮಕ್ಕಳು ತಮ್ಮ ವಯಸ್ಸಿನ ಕಾರಣದಿಂದ ದಾರಿ ತಪ್ಪುತ್ತಿದ್ದಾರೆ. ಈ ಬಗ್ಗೆ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಬೇಕು ಎಂದು ತಿಳಿಸಿದರು. ಇದಕ್ಕೆ ಎಸ್ಐರವರು ಶಾಲಾ ಕಾಲೇಜುಗಳಲ್ಲಿ ಅಪರಾಧ ತಡೆ, ಗಾಂಜಾ ಬಗ್ಗೆ ಮಾಹಿತಿ ನೀಡಲು ಒಪ್ಪಿಗೆ ಸೂಚಿಸಿದರು. ಹಬ್ಬಗಳ ಸಂದರ್ಭಗಳಲ್ಲಿ ಪೊಲೀಸ್ ನಾಕಾಬಂದಿ ಮಾಡುವಾಗ ರಿಯಾಯಿತಿ ನೀಡಬೇಕು ಸಂಚಾರಿ ನಿಯಮಗಳ ಉಲ್ಲಂಘನೆಗೆ ದಂಡ ವಿಧಿಸಬಾರದು ಜನಸ್ನೇಹಿಯಾಗಿರಬೇಕು ಎಂದು ಗ್ರಾಮಸ್ಥರೋರ್ವರು ಹೇಳಿದರು. ಕೆಲವೊಂದು ಸಂದರ್ಭಗಳಲ್ಲಿ ಗುಪ್ತ ಮಾಹಿತಿ ಬಂದಾಗ, ಅಕ್ರಮಗಳು ಕಂಡು ಬಂದಾಗ ನಾಕಾಬಂದಿ ನಡೆಸಬೇಕಾಗುತ್ತದೆ ಎಂದರು. ಎಸ್ಎಸ್ಟಿಗಳ ಸಭೆ ಗ್ರಾಮಮಟ್ಟದಲ್ಲಿ ನಡೆಸಬೇಕು. ಎಸ್ಎಸ್ಟಿ ಕಾಲೋನಿಗಳಿಗೆ ಇಷ್ಟರವರೆಗೆ ನೀವು ಭೇಟಿ ನೀಡಲೇ ಇಲ್ಲ ಎಂದು ಗ್ರಾಮಸ್ಥರೋರ್ವರು ಹೇಳಿದರು. ಇದಕ್ಕೆ ಉತ್ತರಿಸಿದ ಎಸ್ಐರವರು ಶೀಘ್ರದಲ್ಲಿ ಎಸ್ಎಸ್ಟಿಗಳ ಸಭೆ ನಡೆಸುತ್ತೇವೆ. ಕಾಲೋನಿಗಳಿಗೆ ಭೇಟಿ ನೀಡುತ್ತೇವೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಗ್ರಾಮ ಪಂಚಾಯತ್ ಅಧ್ಯಕ್ಷೆ ವಿದ್ಯಾಶ್ರೀ ಮಾತನಾಡಿ ಪೊಲೀಸ್ ಜನಸಂಪರ್ಕ ಸಭೆಗೆ ಜನರಿಂದ ಉತ್ತಮ ಸ್ಪಂದನೆ ಸಿಕ್ಕಿದೆ. ಜನರು ಸಹಕಾರ ನೀಡಿದರೆ ಅಪರಾಧ ಮುಕ್ತ ಗ್ರಾಮ ಮಾಡಬಹುದು. ಜನರು ಮತ್ತು ಪೊಲೀಸರ ನಡುವೆ ಉತ್ತಮ ಬಾಂಧವ್ಯ ಇದ್ದರೆ ಸಮಸ್ಯೆಗಳು ಪರಿಹಾರವಾಗುತ್ತದೆ ಎಂದರು.
ಗ್ರಾಮ ಪಂಚಾಯತ್ ಉಪಾಧ್ಯಕ್ಷ ಮಹೇಶ್ ಕೋರ್ಮಂಡ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಬೀಟ್ ಪೊಲೀಸ್ ನಿತಿನ್, ಗ್ರಾಮ ಪಂಚಾಯತ್ ಸದಸ್ಯರಾದ ಉಮಾವತಿ ಸುಬ್ಬಪ್ಪ ಮಣಿಯಾನಿ, ಪಾವತಿ ಲಿಂಗಪ್ಪ ಗೌಡ, ಮಹಾಲಿಂಗ ನಾಯ್ಕ, ಲಲಿತಾ, ಲಲಿತಾ ಚಿದಾನಂದ, ಸಿಬಂದಿ ಸಂದೀಪ್ ತಲೆಪ್ಪಾಡಿ ಹಾಗೂ ಇರ್ದೆ ಬೆಟ್ಟಂಪಾಡಿ ಗ್ರಾ.ಪಂ. ವ್ಯಾಪ್ತಿಯ ಶಾಲಾ ಶಿಕ್ಷಕರು, ಗ್ರಾಮಸ್ಥರು ಉಪಸ್ಥಿತರಿದ್ದರು. ಅಭಿವೃದ್ಧಿ ಅಧಿಕಾರಿ ಸೌಮ್ಯ ಸ್ವಾಗತಿಸಿ ವಂದಿಸಿದರು.
ಕಳ್ಳತನ ಪ್ರಕರಣ ಹೆಚ್ಚಾಗಿದೆ ಕಡ್ಡಾಯವಾಗಿ ಸಿಸಿಟಿವಿ ಅಳವಡಿಸಿಕೊಳ್ಳಿ
ಇರ್ದೆ ಬೆಟ್ಟಂಪಾಡಿ ಗ್ರಾಮ ವ್ಯಾಪ್ತಿಯಲ್ಲಿರುವ ಮನೆ, ವ್ಯಾಪಾರ ಮಳಿಗೆ ಹಾಗೂ ಪೇಟೆ ಮಧ್ಯ ಭಾಗಗಳಲ್ಲಿ ಸಿಸಿ ಕ್ಯಾಮಾರಾಗಳನ್ನು ಕಡ್ಡಾಯವಾಗಿ ಅಳವಡಿಸಕೊಳ್ಳಬೇಕು ಎಂದು ಎಸ್ಐರವರು ಹೇಳಿದರು. ಇತ್ತೀಚೆಗೆ ಕಳ್ಳತನ ಪ್ರಕರಣಗಳು ಹೆಚ್ಚಾಗಿ ಕಂಡುಬರುತ್ತಿದೆ. ಇಂತಹ ಸಂದರ್ಭದಲ್ಲಿ ಸಿಸಿಟಿವಿ ನೆರವಿಗೆ ಬರುತ್ತದೆ. ಸಿಸಿಟಿವಿ ಫೂಟೇಜ್ನಿಂದ ಕಳ್ಳರ ಪತ್ತೆ ಮಾಡಲು ಸಹಕಾರಿಯಾಗುತ್ತದೆ. ಕ್ಯಾಮಾರಾ ಅಳವಡಿಸುವಾಗ ಉತ್ತಮ ಗುಣಮಟ್ಟದ ಕ್ಯಾಮಾರಾ ಅಳವಡಿಸಿ ಎಂದು ತಿಳಿಸಿದರು.