ಪುತ್ತೂರು: ಗುತ್ತಿಗೆದಾರರ ಸಂಘದ ಮಹಾಸಭೆ

0


ಸೀನಿಯಾರಿಟಿ ಮೈಂಟೆನೆನ್ಸ್ ಮಾಡಿದಾಗ ಭ್ರಷ್ಟಾಚಾರ ತಪ್ಪುತ್ತದೆ- ರಾಧಾಕೃಷ್ಣ ನಾಯಕ್

ಪುತ್ತೂರು: ಲಂಚ ಕೊಡುವುದು ನಮ್ಮ ತಪ್ಪು, ತೆಗೆದುಕೊಳ್ಳುವುದು ಅವರ ತಪ್ಪು. ಸೀನಿಯಾರಿಟಿ ಮೈಂಟೆನೆನ್ಸ್ ಮಾಡಿದಾಗ ಭ್ರಷ್ಟಾಚಾರ ತಪ್ಪುತ್ತದೆ. ಆದ್ದರಿಂದ ಈ ಬಗ್ಗೆ ತಾಲೂಕು, ಜಿಲ್ಲೆ ಮತ್ತು ರಾಜ್ಯದಲ್ಲಿ ಗುತ್ತಿಗೆದಾರರು ಒಗ್ಗಟ್ಟಿನಿಂದ ಇರಬೇಕು ಎಂದು ದ.ಕ ಜಿಲ್ಲಾ ಗುತ್ತಿಗೆದಾರರ ಸಂಘದ ಅಧ್ಯಕ್ಷ ಹಾಗೂ ರಾಜ್ಯ ಗುತ್ತಿಗೆದಾರರ ಸಂಘದ ಕಾರ್ಯಾಧ್ಯಕ್ಷರಾಗಿರುವ ರಾಧಾಕೃಷ್ಣ ನಾಯಕ್ ಉಪ್ಪಿನಂಗಡಿ ಅವರು ಹೇಳಿದರು.


ಅ.26ರಂದು ಪುತ್ತೂರು ಬೈಪಾಸ್ ರಸ್ತೆ ಬಳಿಯ ಹೋಟೆಲ್ ಉದಯಗಿರಿಯ ಭಾಗೀರಥಿ ಸಭಾಭವನದಲ್ಲಿ ನಡೆದ ಪಿಡಬ್ಲ್ಯೂಡಿ, ಜಿಲ್ಲಾ ಪಂಚಾಯತ್ ಮತ್ತು ಪುತ್ತೂರು ನಗರಸಭೆ ವ್ಯಾಪ್ತಿಯ ಗುತ್ತಿಗೆದಾರರ ಸಂಘದ ಮಹಾಸಭೆಯನ್ನು ಉದ್ಘಾಟಿಸಿ, ನೂತನ ಪದಾಧಿಕಾರಿಗಳನ್ನು ಘೋಷಣೆ ಮಾಡಿ ಅವರು ಮಾತನಾಡಿದರು. ನಮ್ಮ ಕೆಲಸ ಸರಿಯಾಗಿದ್ದಾಗ ರಾಜಕೀಯದವರು, ಅಧಿಕಾರಿಗಳು ಏನೂ ಮಾಡಲು ಆಗುವುದಿಲ್ಲ. ಆದರೆ ನಮ್ಮ ಸಂಘದ ಒಮ್ಮತವನ್ನು ಯಾವೊಬ್ಬ ಗುತ್ತಿಗೆದಾರ ಕಾರ್ಯರೂಪಕ್ಕೆ ತರದೇ ಇರುವುದು ಬೇಸರದ ಸಂಗತಿ. ಯಾರು ನಮ್ಮನ್ನು ಬೊಟ್ಟು ಮಾಡುತ್ತಾರೋ ಎಂಬ ಭಯದಿಂದ ಬೆಂಗಳೂರಿನ ಮೀಟಿಂಗ್‌ಗೆ ಯಾರೂ ಹಾಜರಾಗುತ್ತಿಲ್ಲ ಎಂದು ಅವರು ಹೇಳಿದರು. ನಮ್ಮ ಸಂಘದಿಂದ ಹಲವು ಜನೋಪಯೋಗಿ ಕಾರ್ಯಚಟುವಟಿಕೆ ಮಾಡಿದ್ದೇವೆ. ಸಾರ್ವಜನಿಕರಿಗೆ ಉಪಯೋಗ ಆಗುವ ರೀತಿಯಲ್ಲಿ ಉಚಿತ ಕ್ಯಾನ್ಸರ್ ಶಿಬಿರ ಮಾಡಿದ್ದೇವೆ. ನಮ್ಮ ಸಮಸ್ಯೆಗಳಿಗೆ ನಮ್ಮ ಸಂಘಟನೆಯೇ ಶಕ್ತಿ. ಹಾಗಾಗಿ ನಾವು ಒಗ್ಗಟ್ಟಿನಿಂದ ಇರಬೇಕು. ಒಂದು ವೇಳೆ ಗುತ್ತಿಗೆದಾರರು ಇಲ್ಲದೇ ಇರುತ್ತಿದ್ದರೆ ಇಂಜಿನಿಯರ್ ಕೂಡಾ ಇರುತ್ತಿರಲಿಲ್ಲ. ಇವತ್ತು ರಾಜ್ಯದಲ್ಲಿ ಎಸ್.ಆರ್ ದರ ಒಂದೇ ಆಗಿದ್ದರೂ ಬಂಟ್ವಾಳ, ಪುತ್ತೂರು ತಾಲೂಕಿನಲ್ಲಿ ಬೇರೆ ಬೇರೆ ಎಸ್ಟಿಮೇಟ್ ಮಾಡಿಸುತ್ತಾರೆ. ಇವೆಲ್ಲ ಕೆಲವೊಂದು ಸಮಸ್ಯೆಗಳಿಗೆ ಮೂಲ ಕಾರಣ ಆಗುತ್ತದೆ. ಈ ನಿಟ್ಟಿನಲ್ಲಿ ನಾವು ಸೀನಿಯಾರಿಟಿ ಮೈಂಟೆನೆನ್ಸ್ ಮಾಡಲು ಒತ್ತಡ ಹಾಕಬೇಕೆಂದು ರಾಧಾಕೃಷ್ಣ ನಾಕ್ ಅವರು ಹೇಳಿದರು.


5 ಲಕ್ಷ ರೂ.ಪರಿಹಾರ:
ಕರ್ತವ್ಯ ನಿರತ ಗುತ್ತಿಗೆದಾರರು ಮರಣ ಪಟ್ಟಲ್ಲಿ ಅವರ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ ನೀಡಲಾಗುವುದು ಎಂದು ದ.ಕ ಜಿಲ್ಲಾ ಗುತ್ತಿಗೆದಾರರ ಸಂಘದ ಅಧ್ಯಕ್ಷ ರಾಧಾಕೃಷ್ಣ ನಾಯಕ್‌ರವರು ತಿಳಿಸಿದ್ದಾರೆ.


ಗುತ್ತಿಗೆದಾರರು ಇವತ್ತು ನಿರುದ್ಯೋಗಿಗಳಾಗಿದ್ದಾರೆ:
ದ.ಕ ಜಿಲ್ಲಾ ಗುತ್ತಿಗೆದಾರರ ಸಂಘದ ಪ್ರಧಾನ ಕಾರ್ಯದರ್ಶಿ ಅಬ್ದುಲ್ ನಾಸಿರ್ ಕೆ.ಕೆ ಅವರು ಮಾತನಾಡಿ, ಇವತ್ತು ಗುತ್ತಿಗೆದಾರರ ಸ್ಥಿತಿ ಬಹಳ ಅಧೋಗತಿಯಾಗಿದೆ. ಪ್ರತಿಯೊಂದಕ್ಕೂ ಪರ್ಸಂಟೇಜ್ ಸಾಮಾನ್ಯ ಆಗಿದೆ. ಟೆಂಡರ್ ಹಾಕುವಾಗಲು, ಎಸ್ಟಿಮೇಟ್ ಮಂಜೂರಾತಿಗೆ, ಟೆಂಡರ್ ಹಾಕಿದವರನ್ನು ಬಿಡಿಸಲು, ಕರಾರು ಪತ್ರ ಮಾಡಲು, ಕೆಲಸ ಮಾಡಿದ ಹಣ ಪಡೆಯಲು ಕೂಡಾ ಇವತ್ತು ಪರ್ಸಂಟೇಜ್ ಕೊಡಬೇಕಾಗಿದೆ. ಇಂತಹ ಸಮಸ್ಯೆಯನ್ನು ಬಹಳಷ್ಟು ಅನುಭವಿಸಿದ್ದೇವೆ. ರಾಜ್ಯಮಟ್ಟದಲ್ಲಿ ಪ್ರತಿಭಟನೆಯನ್ನೂ ಮಾಡಿದ್ದೇವೆ. ಇವತ್ತು ಸರಕಾರ ಬದಲಾಗಿದೆ. ಆದರೆ ಎಲ್ಲಿ ಯಾವ ರೀತಿಯಲ್ಲಿ ಇದು ಕಡಿಮೆ ಆಗಿದೆ ಎಂಬುದು ಗಮನಕ್ಕೆ ಬಂದಿದೆ. ಕಳೆದ ನಾಲ್ಕೈದು ತಿಂಗಳಿನಿಂದ ಇವತ್ತಿನ ತನಕ ಯಾವುದೇ ಟೆಂಡರ್ ಬಂದಿಲ್ಲ. ಇದರಿಂದಾಗಿ ಬಹಳಷ್ಟು ಗುತ್ತಿಗೆದಾರರ ಜೀವನ, ಅವರಿಂದ ಅಲಂಬಿತ ಕಾರ್ಮಿಕರ ಜೀವನ ತೊಂದರೆಗೆ ಒಳಗಾಗಿದೆ. ಸತ್ಯ ಹೇಳಬೇಕಾದರೆ ಗುತ್ತಿಗೆದಾರರಿಗೆ ಯಾರಿಗೂ ಇವತ್ತು ಕೆಲಸವಿಲ್ಲ. ಗುತ್ತಿಗೆದಾರರು ನಿರುದ್ಯೋಗಿಗಳಾಗಿದ್ದಾರೆ. ಇದನ್ನು ಸರಕಾರ ಮನಗಾಣಬೇಕೆಂದರು.


ಸರಕಾರ ಕುರುಡು ಕಾಂಚಾಣವಾಗಿದೆ :
ಜಿಲ್ಲಾ ಗುತ್ತಿಗೆದಾರರ ಸಂಘದ ಕಾರ್ಯದರ್ಶಿ ಬಿ.ಎಸ್. ಸತೀಶ್ ಕುಮಾರ್ ಅವರು ಮಾತನಾಡಿ, ಇವತ್ತು ಗುತ್ತಿಗೆದಾರರಿಗೆ ಒಂದು ಕಡೆ ಜಿಎಸ್‌ಟಿ ಸಮಸ್ಯೆ, ಪೊಲೀಸ್, ಇತರ ಇಲಾಖೆಯ ಸಮಸ್ಯೆಗಳು ಎದುರಾಗುತ್ತಿವೆ. ನಮ್ಮ ಸಂಘಟನೆ ಶಕ್ತಿಯುತವಾಗಿದ್ದರೆ ಈ ಸಮಸ್ಯೆಗಳು ಬರುವುದಿಲ್ಲ. ಈ ನಡುವೆ ಸರಕಾರ ಕುರುಡು ಕಾಂಚಾಣ ಆಗಿದೆ. ನಮ್ಮ ಸಮಸ್ಯೆಗೆ ನ್ಯಾಯಾಲಯದ ಮೂಲಕವೇ ಪರಿಹಾರ ಕಂಡುಕೊಳ್ಳಬೇಕಾಗಿದೆ. ಕೇರಳದಲ್ಲಿರುವ ಕೆಲವೊಂದು ಆದೇಶಗಳು ನಮ್ಮ ರಾಜ್ಯದಲ್ಲಿ ಆಗಿಲ್ಲ. ಹಾಗಾಗಿ ಜಿಲ್ಲಾ, ರಾಜ್ಯ, ತಾಲೂಕು ಸಂಘಟನೆಗಳಿಂದ ಕರೆ ಬಂದಾಗ ಗುತ್ತಿಗೆದಾರರು ಎಲ್ಲವನ್ನು ಬಿಟ್ಟು ಬೆಂಬಲ ಕೊಡಬೇಕೆಂದರು.


ಸದಸ್ಯರ ಪೂರ್ಣ ಸಹಕಾರಕ್ಕೆ ಮನವಿ:
ಗುತ್ತಿಗೆದಾರರ ಸಂಘದ ನೂತನ ಅಧ್ಯಕ್ಷ ಗಿರೀಶ್ ಕುಮಾರ್ ಅವರು ಮಾತನಾಡಿ, ನಮ್ಮೆಲ್ಲಾ ಸಮಸ್ಯೆಗಳಿಗೆ ಪರಿಹಾರವಾಗಿ ಸಂಘಟನೆಯ ಪ್ರಾಮುಖ್ಯತೆ ಇದೆ. ನಾವು ಸಂಘಟನೆಯನ್ನು ಗಟ್ಟಿ ಮಾಡಬೇಕು. ಮುಂದಿನ ದಿನದಲ್ಲಿ ಸಂಘದ ಸದಸ್ಯರು ಪೂರ್ಣ ಸಹಕಾರ ನೀಡುವಂತೆ ಮನವಿ ಮಾಡಿದರು.


ವರ್ಷಾನುಗಟ್ಟಲೆ ಬಾಕಿ ಹಣಕ್ಕೆ ನಿಯೋಗದಿಂದ ಮನವಿ ಮಾಡಬೇಕಾಗಿದೆ:
ಸಲಹಾ ಸೂಚನೆ ವಿಚಾರಕ್ಕೆ ಸಂಬಂಧಿಸಿ ಗುತ್ತಿಗೆದಾರರ ಸಂಘದ ಸದಸ್ಯ ಮುರಳಿಕೃಷ್ಣ ಹಸಂತಡ್ಕ ಅವರು ಮಾತನಾಡಿ, ಗುತ್ತಿಗೆದಾರರ ಸಂಘಟನೆಯನ್ನು ಸಂಘಟಿತವಾಗಿ ಮಾಡುವುದು ಸುಲಭದ ಕೆಲಸವಲ್ಲ. ಯಾವುದೇ ಕಾಮಗಾರಿಯಲ್ಲಿ ಅಪವಾದ ಬರುವುದು ಮೊದಲು ಗುತ್ತಿಗೆದಾರರಿಗೆ. ಹಾಗಾಗಿ ನಾವೆಲ್ಲ ನಮ್ಮೊಳಗೆ ಸಹಕಾರಿ ಮನೋಭಾವನೆ ಬೆಳೆಸಬೇಕೆಂದ ಅವರು ನಮ್ಮ ಅನೇಕ ಕೆಲಸಗಳಿಗೆ ಹಲವು ವರ್ಷಗಳಿಂದ ಹಣ ಬಾಕಿ ಆಗಿದೆ. ಕಾಮಗಾರಿಗೆ ಒಂದು ಕಟ್‌ಅಪ್ ಡೇಟ್ ಕೊಡಬೇಕು. ಈ ಕುರಿತು ಲೋಕೋಪಯೋಗಿ ಇಲಾಖೆ ಸಚಿವರಲ್ಲಿ ನಮ್ಮ ನಿಯೋಗದಿಂದ ಮನವಿ ಮಾಡಬೇಕು. ಇವತ್ತು ಅನೇಕ ಸಭೆ, ಸಮಾರಂಭಗಳಿಗೆ ದೊಡ್ಡ ಪಾಲಿನ ದೇಣಿಗೆ ಗುತ್ತಿಗೆದಾರರದ್ದು ಆಗಿದೆ. ಸ್ಥಳೀಯ ಕಾಮಗಾರಿಗಳಿಗೆ ಹೊರಗಿನವರು ಬರದಂತೆ ನೋಡಬೇಕು. ಬಿಡ್ಡಿಂಗ್‌ನಲ್ಲಿ ಬಿಲೋ ಕನಿಷ್ಠ ಶೇ.15 ಕಡಿಮೆ ಹಾಕಿದರೆ ಅವರಿಗೆ ಟೆಂಡರ್ ಕೊಡಬಾರದು. ನಮ್ಮ ಸಮಸ್ಯೆಗಳ ಕುರಿತು ಕನಿಷ್ಠ ಎರಡು ತಿಂಗಳಿಗೊಮ್ಮೆ ಸಭೆ ಸೇರಬೇಕೆಂದು ಅವರು ಮನವಿ ಮಾಡಿದರು.


ಸಂಘದ ನೂತನ ಉಪಾಧ್ಯಕ್ಷ ರಾಜೇಶ್ ರೈ ಅವರು ಮಾತನಾಡಿ, ನಾನು ವಿದ್ಯುತ್ ಗುತ್ತಿಗೆದಾರನಾಗಿದ್ದು, ನಮ್ಮ ಕೆಲಸಕ್ಕೂ ಇಲ್ಲಿನ ಕೆಲಸಕ್ಕೂ ಭಿನ್ನವಿದೆ ಎಂದು ಹೇಳಿ ನೂತನ ಪದಾಧಿಕಾರಿಗಳಿಗೆ ಶುಭ ಹಾರೈಸಿದರು.


ರೋಹಿತ್, ನಾರಾಯಣ ನಾಯ್ಕ್, ಅನ್ಸಾರ್, ಲೋಕೇಶ್ ರೈ ಅತಿಥಿಗಳನ್ನು ಗೌರವಿಸಿದರು. ಕಾರ್ಯದರ್ಶಿ ಮಂಜುನಾಥ ಶೇಖ ಪ್ರಾರ್ಥಿಸಿ, ವಾರ್ಷಿಕ ವರದಿ ಮಂಡಿಸಿದರು. ಪುತ್ತೂರು ತಾಲೂಕು ಗುತ್ತಿಗೆದಾರರ ಸಂಘದ ನಿಕಟಪೂರ್ವ ಅಧ್ಯಕ್ಷ ಗುರುಪ್ರಸಾದ್ ರೈ ಸ್ವಾಗತಿಸಿ, ಕಾರ್ಯದರ್ಶಿ ಲೋಕೇಶ್ ರೈ ವಂದಿಸಿದರು. ಸ್ನಿಗ್ದಾ ಕಾರ್ಯಕ್ರಮ ನಿರೂಪಿಸಿದರು. ಗತ ವರ್ಷದಲ್ಲಿ ನಿಧನರಾದ ಗುತ್ತಿಗೆದಾರರ ಆತ್ಮಕ್ಕೆ ಚಿರಶಾಂತಿ ಕೋರಿ ಮೌನ ಪ್ರಾರ್ಥನೆಯನ್ನು ಸಭೆಯ ಆರಂಭದಲ್ಲಿ ಸಲ್ಲಿಸಲಾಯಿತು. ಸಭೆಯಲ್ಲಿ ಸುಳ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ರಾಜೇಂದ್ರ ಪ್ರಸಾದ್ ರೈ ಹಾಗೂ ಪುತ್ತೂರು ಗುತ್ತಿಗೆದಾರರ ಸಂಘದ ಸದಸ್ಯರು ಉಪಸ್ಥಿತರಿದ್ದರು.

ಅತ್ಯಂತ ಶುದ್ದ ನೀರು ಮಳೆ ನೀರು
ಸುದ್ದಿ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಡಾ. ಯು.ಪಿ.ಶಿವಾನಂದ ಅವರು ಮಹಾಸಭೆಯ ಕೊನೆಯ ಹಂತದಲ್ಲಿ ಗುತ್ತಿಗೆದಾರರಿಗೆ ಮಳೆ ಕೊಯ್ಲು ಕುರಿತು ಮಾಹಿತಿ ನೀಡಿದರು. ಪ್ರತಿ ಮನೆ ಕಟ್ಟಡ ನಿರ್ಮಾಣ ಮಾಡುವಾಗ ಮಳೆ ಕೊಯ್ಲು ಕಡ್ಡಾಯವಾಗಲಿದೆ. ಆಗ ಅದನ್ನು ಉಪಯೋಗ ಆಗುವ ರೀತಿಯಲ್ಲಿ ಮಾಡಿ. ಯಾಕೆಂದರೆ ಅತ್ಯಂತ ಶುದ್ದ ನೀರು ಮಳೆ ನೀರು. ಕನಿಷ್ಠ 6 ತಿಂಗಳು ಮಳೆ ನೀರು ಉಪಯೋಗಿಸಿ. ಮಳೆ ನೀರನ್ನು ಪಿಲ್ಟರ್ ಮೂಲಕ ಪಡೆದು ಸಣ್ಣ ಸ್ಟೋರೇಜ್ ಮಾಡಿಕೊಳ್ಳಿ ಎಂದ ಅವರು 1 ಎಕ್ರೆ ಭೂಮಿಯಲ್ಲಿ ಸುಮಾರು 1.8 ಲಕ್ಷ ಕೋಟಿ ಲೀಟರ್ ನೀರು ಬೀಳುತ್ತದೆ. ಮಳೆ ನೀರು ಸಂಗ್ರಹಿಸುವ ಮೂಲಕ ನೀರನ್ನು ಸರಿಯಾದ ರೀತಿಯಲ್ಲಿ ಸದ್ಬಳಕೆ ಮಾಡುವಂತೆ ಮನವಿ ಮಾಡಿದರು. ಗುತ್ತಿಗೆದಾರರು ತಮ್ಮ ಸಮಸ್ಯೆಗಳನ್ನು, ಬೇಡಿಕೆಗಳನ್ನು ನೀಡಿದಲ್ಲಿ ಅದನ್ನು ಉಚಿತವಾಗಿ ಪ್ರತಿಕೆಯಲ್ಲಿ ಪ್ರಕಟಿಸಲಾಗುವುದು. ಸುದ್ದಿ ಚಾನೆಲ್‌ನಲ್ಲಿ ಕುಳಿತು ಸಾರ್ವಜನಿಕರೊಂದಿಗೆ ಹಾಗೂ ಅಽಕಾರಿಗಳೊಂದಿಗೆ ಸಂವಾದ ನಡೆಸಬಹುದು ಎಂದು ಹೇಳಿದರು.

ನೂತನ ಪದಾಧಿಕಾರಿಗಳ ಘೋಷಣೆ
ತಾಲೂಕು ಗುತ್ತಿಗೆದಾರರ ಸಂಘದ 2023-24ನೇ ಸಾಲಿನ ನೂತನ ಪದಾಧಿಕಾರಿಗಳ ಘೋಷಣೆಯನ್ನು ಜಿಲ್ಲಾ ಗುತ್ತಿಗೆದಾರರ ಸಂಘದ ಅಧ್ಯಕ್ಷ ಹಾಗೂ ರಾಜ್ಯ ಗುತ್ತಿಗೆದಾರರ ಸಂಘದ ಕಾರ್ಯಾಧ್ಯಕ್ಷರಾಗಿರುವ ರಾಧಾಕೃಷ್ಣ ನಾಕ್ ಮಾಡಿದರು. ಗೌರವಾಧ್ಯಕ್ಷರಾಗಿ ನಿಕಟಪೂರ್ವ ಅಧ್ಯಕ್ಷ ಗುರುಪ್ರಸಾದ್ ರೈ, ಅಧ್ಯಕ್ಷರಾಗಿ ಗಿರೀಶ್ ಕೆ.ಎಸ್, ಕಾರ್ಯದರ್ಶಿಯಾಗಿ ಲೋಕೇಶ್ ಅಮೈ, ಜೊತೆ ಕಾರ್ಯದರ್ಶಿಯಾಗಿ ಮೊಹಮ್ಮದ್ ರಫೀಕ್, ಉಪಾಧ್ಯಕ್ಷರಾಗಿ ಮಂಜುನಾಥ್ ಶೇಖ, ಕೃಷ್ಣಪ್ರಸಾದ್ ಶೆಟ್ಟಿ, ರಾಜೇಶ್ ಶೆಟ್ಟಿ, ಖಜಾಂಚಿಯಾಗಿ ಉಸ್ಮಾನ್ ಚೆನ್ನಾವರ, ಸದಸ್ಯರಾಗಿ ಯೋಗೀಶ್ ಪೂಜಾರಿ, ಜಯರಾಮ ಎ.ಎಲ್, ಅಸಿಕುದ್ದೀನ್ ಅಖ್ತರ್, ನಾರಾಯಣ ನಾಯ್ಕ್, ಲೋಹಿತ್ ಬಂಗೇರ, ರಾಕೇಶ್ ನಾಕ್, ಪುನೀತ್ ಕುಲಾಲ್, ಅಕ್ಷಯ್ ಕುಮಾರ್, ಅತುಲ್ ರೈ, ಅವಿನಾಶ್ ಬಿಳಿನೆಲೆ ಅವರನ್ನು ಆಯ್ಕೆ ಮಾಡಲಾಯಿತು.

ಜೇಷ್ಠತೆಯನ್ನು ಪಾಲಿಸಿದಾಗ ಪರ್ಸಂಟೇಜ್ ನಿಲ್ಲುತ್ತದೆ
ಇವತ್ತು ಎಕ್ಸಿಕ್ಯೂಟಿವ್ ಇಂಜಿನಿಯರ್ ಜೇಷ್ಟತೆಯನ್ನು ಪಾಲನೆ ಮಾಡುತ್ತಿಲ್ಲ. ಈ ಕುರಿತು ಬಾಕಿ ಬಿಲ್‌ಗಳನ್ನು ಕ್ಲೀನ್ ಮಾಡಲು ಮನವಿ ಕೊಟ್ಟಿದ್ದೇವೆ. ಸೀನಿಯಾರಿಟಿ ಬಿಟ್ಟು ಪೇಮೆಂಟ್ ಮಾಡಬಾರದು ಎಂದು ಹೇಳಿದ್ದೇವೆ. ಜೇಷ್ಠತೆ ಪಾಲಿಸಿದಾಗ ಪರ್ಸಂಟೇಜ್ ನಿಲ್ಲುತ್ತದೆ. ಮೊದಲು ಕೆಲಸ ಮಾಡಿದವನಿಗೆ ಮೊದಲು ಪೇಮೆಂಟ್ ಆಗಬೇಕು. ಆದರೆ ಅದು ಆಗುತ್ತಿಲ್ಲ. ಒಂದರ್ಥದಲ್ಲಿ ಭ್ರಷ್ಟಾಚಾರಕ್ಕೆ ಮೂಲ ಕಾರಣ ನಾವೇ ಆಗಿದ್ದೇವೆ. ನಮ್ಮ ತರಾತುರಿಗಳು ನಮ್ಮನ್ನು ಭ್ರಷ್ಟಾಚಾರಕ್ಕೆ ದೂಡುತ್ತದೆ.
ಅಬ್ದುಲ್ ನಾಸಿರ್ ಕೆ.ಕೆ

LEAVE A REPLY

Please enter your comment!
Please enter your name here