ನಿಗಮ, ಮಂಡಳಿಗಳ ಅಧ್ಯಕ್ಷರ ಆಯ್ಕೆ ವಿಚಾರ:ಶಕುಂತಳಾ ಶೆಟ್ಟಿ, ಎಂ.ಬಿ.ವಿಶ್ವನಾಥ ರೈ, ಡಾ.ರಾಜಾರಾಮ್ ಪ್ರತಿಕ್ರಿಯೆ

0

ಪುತ್ತೂರು: ರಾಜ್ಯ ಸರಕಾರ ನಿಗಮ ಮತ್ತು ಮಂಡಳಿಗಳಿಗೆ ಅಧ್ಯಕ್ಷರನ್ನು ನೇಮಕ ಮಾಡುವ ಪ್ರಕ್ರಿಯೆಗೆ ಚಾಲನೆ ನೀಡಲು ಸಿದ್ಧತೆ ನಡೆಸುತ್ತಿದ್ದಂತೆ ಪಕ್ಷದ ಹಲವು ನಾಯಕರು ಪಕ್ಷದ ಪ್ರಮುಖರಿಗೆ ಒತ್ತಡ ಹಾಕಲಾರಂಭಿಸಿದ್ದಾರೆ. ಪುತ್ತೂರಿನಲ್ಲೂ ಹಲವು ಮುಖಂಡರ ಹೆಸರು ನಿಗಮ, ಮಂಡಳಿಗಳ ಸ್ಥಾನಕ್ಕೆ ಕೇಳಿಬರುತ್ತಿರುವ ಕುರಿತು ಅ.26ರ ಸುದ್ದಿಬಿಡುಗಡೆ ಪತ್ರಿಕೆಯಲ್ಲಿ ಪ್ರಕಟಗೊಂಡ ವರದಿಗೆ ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ.ವಿಶ್ವನಾಥ ರೈ ಹಾಗೂ ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ.ರಾಜಾರಾಮ್ ಕೆ.ಬಿ. ಅವರು ಪ್ರತಿಕ್ರಿಯೆ ನೀಡಿದ್ದು ನಿಗಮ, ಮಂಡಳಿಯಲ್ಲಿ ಸ್ಥಾನಕ್ಕಾಗಿ ಯಾರಿಗೂ ಒತ್ತಡ ತಂದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.


ಒತ್ತಡ ಹಾಕಿ ಪಡೆಯುವುದಿಲ್ಲ: ಶಕುಂತಳಾ ಶೆಟ್ಟಿ:
ಪ್ರಭಾವಿ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ನನಗೆ ನೀಡುವಂತೆ ಮುಖ್ಯಮಂತ್ರಿಯವರಿಗೆ ಒತ್ತಡ ಹಾಕಿದ್ದೇನೆ. ಶಕುಂತಳಾ ಶೆಟ್ಟಿಯವರ ದಿಢೀರ್ ಎಂಟ್ರಿ ಶಾಸಕ ಅಶೋಕ್ ಕುಮಾರ್ ರೈಯವರಿಗೆ ಅಚ್ಚರಿ ಮೂಡಿಸಿದೆ ಎಂಬುದು ನನ್ನ ಹಾಗೂ ಶಾಸಕ ಅಶೋಕ್ ಕುಮಾರ್ ರೈಯವರ ಮಧ್ಯೆ ಯಾರೋ ತಾಗಿಸಿ ಹಾಕುವ ಕೆಲಸ ಮಾಡುತ್ತಿದ್ದಾರೆ ಎಂಬುದು ಗೋಚರಿಸುತ್ತಿದೆ. ಇಂತಹ ವಿಚಾರಕ್ಕೆ ನನ್ನ ವಿರೋಧವಿದೆ ಎಂದು ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಪ್ರತಿಕ್ರಿಯಿಸಿದ್ದಾರೆ.


ನಾನು ಸಿಎಂಗೆ ಒತ್ತಡ ಹಾಕಿದ್ದೇನೆ ಎಂದು ಪತ್ರಿಕೆಯವರಿಗೆ ಹೇಳಿದ್ದು ಯಾರು. ಅಲ್ಲದೆ ಪುತ್ತೂರು ಶಾಸಕರಿಗೆ ಅಚ್ಚರಿಕೆಯಾಗಿದೆ ಎಂದೂ ಬರೆಯಲಾಗಿದೆ. ಅಶೋಕ್ ಕುಮಾರ್ ರೈಯವರಿಗೆ ಎಂಎಲ್‌ಎ ಸೀಟು ಸಿಕ್ಕಿದಾಗ ನನಗೆ ಶಾಕ್ ಆಗಬೇಕಾಗಿತ್ತು. ಆದರೆ ನನಗೆ ಆ ರೀತಿ ಆಗಲಿಲ್ಲ. ಈ ಬಗ್ಗೆ ನಾನು ತಲೆಬಿಸಿ ಮಾಡಲಿಲ್ಲ. ನಾನು ನಿಗಮ ಮಂಡಳಿಗೆ ಒತ್ತಡ ಹಾಕುವುದಾದರೆ ಎಂಎಲ್‌ಎ ಸೀಟಿಗೂ ಒತ್ತಡ ಹಾಕುತ್ತಿದ್ದೆ. ನಿಗಮ, ಮಂಡಳಿ ಸ್ಥಾನಕ್ಕಾಗಿ ಒತ್ತಡ ಹಾಕಿ ಪಡೆಯುವುದಿಲ್ಲ. ಅವರು ಕೊಟ್ಟರೆ ಪಡೆದುಕೊಳ್ಳಲು ನಾನು ಈಗಲೂ ತಯಾರಿದ್ದೇನೆ ಎಂದು ಹೇಳಿದ ಶಕುಂತಳಾ ಶೆಟ್ಟಿಯವರು, ಸಿಎಂಗೆ ಒತ್ತಡ ಹಾಕಿದ್ದೇನೆ, ಅಶೋಕ್ ರೈಯವರಿಗೆ ಶಾಕ್ ಆಗಿದೆ ಎಂದು ನನ್ನನ್ನು ಹಾಗೂ ಅಶೋಕ್ ಕುಮಾರ್ ರೈಯವರನ್ನು ತಾಗಿಸಿ ಹಾಕುವ ಕೆಲಸ ಮಾಡುವುದು ಬೇಡ. ನಾನು ಚುನಾವಣೆಯಲ್ಲಿ ಸೋತರೂ ಕಳೆದ ಆರು ವರ್ಷಗಳಿಂದ ದಿನಂಪ್ರತಿ ಪುತ್ತೂರಿಗೆ ಬಂದು ಪುತ್ತೂರು ಕ್ಷೇತ್ರಕ್ಕಾಗಿ ದುಡಿಯುತ್ತಿದ್ದೇನೆ. ಒಂದು ವೇಳೆ ನಿಗಮ, ಮಂಡಳಿಯಲ್ಲಿ ನನಗೆ ಸ್ಥಾನ ಕೊಟ್ಟರೂ ಅಶೋಕ್ ಕುಮಾರ್ ರೈ ಅವರಿಗೆ ಯಾಕೆ ಶಾಕ್ ಆಗುತ್ತದೆ ಎಂಬುದು ನನಗೆ ತಿಳಿಯದಾಗಿದೆ ಎಂದು ಶಕುಂತಳಾ ಶೆಟ್ಟಿ ಅವರು ಪ್ರತಿಕ್ರಿಯಿಸಿದ್ದಾರೆ.


ಯಾವುದೇ ಪ್ರಕ್ರಿಯೆ ನಡೆದಿರುವುದು ಗಮನಕ್ಕೆ ಬಂದಿಲ್ಲ: ಎಂ.ಬಿ.ವಿಶ್ವನಾಥ ರೈ:
ನಿಗಮ, ಮಂಡಳಿಗಳಿಗೆ ಅಧ್ಯಕ್ಷರ ಆಯ್ಕೆಗೆ ಸಂಬಂಽಸಿದಂತೆ ನಮ್ಮ ಕ್ಷೇತ್ರದಲ್ಲಿ ಯಾವುದೇ ಪ್ರಕ್ರಿಯೆ ನಡೆದದ್ದು ನಮ್ಮ ಗಮನಕ್ಕೆ ಬಂದಿಲ್ಲ ಮತ್ತು ಅದಕ್ಕಾಗಿ ಹಕ್ಕೊತ್ತಾಯ ಮಾಡುವ ಹಾಗೂ ಹೈಕಮಾಂಡ್ ಕದತಟ್ಟುವ ಕೆಲಸವೂ ಆಗಿಲ್ಲ ಎಂದು ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ.ವಿಶ್ವನಾಥ ರೈಯವರು ಪ್ರತಿಕ್ರಿಯಿಸಿದ್ದಾರೆ.
ನಿಗಮ, ಮಂಡಳಿಗಳಿಗೆ ಆಯ್ಕೆ ಪ್ರಕ್ರಿಯೆ ನಿಯಮದಂತೆ ನಡೆಯುತ್ತದೆ. ಒಂದು ಪಕ್ಷದ ಸರಕಾರ ಅಽಕಾರಕ್ಕೆ ಬಂದಾಗ ಆ ಪಕ್ಷದ ಪ್ರಮುಖ ನಾಯಕರು ನಿಗಮ, ಮಂಡಳಿಗಳ ಹುದ್ದೆಗೆ ಬೇಡಿಕೆ ಇಡುವುದು ಸ್ವಾಭಾವಿಕ. ಅದರಲ್ಲಿ ಏನೂ ವಿಶೇಷತೆ ಮತ್ತು ತಪ್ಪು ಇಲ್ಲ. ನಮ್ಮ ಕ್ಷೇತ್ರದಲ್ಲಿ ಹಲವಾರು ಪ್ರಮುಖ ಕಾರ್ಯಕರ್ತರು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ನೇಮಕದ ವಿಚಾರದಲ್ಲಿ ಶಾಸಕರನ್ನು ಇಕ್ಕಟ್ಟಿಗೆ ಸಿಲುಕಿಸುವ, ಗೊಂದಲ ಸೃಷ್ಟಿಸುವಂತದ್ದು ಏನೂ ಇಲ್ಲ. ಸರಿಯಾದ ಮಾಹಿತಿ ಇಲ್ಲದ ರಾಜಕೀಯ ವಿಶ್ಲೇಷಣೆ ಗೊಂದಲಕ್ಕೆ ಅವಕಾಶ ಕೊಡುತ್ತದೆ ಎಂಬುದು ನನ್ನ ಭಾವನೆ ಎಂದು ಎಂ.ಬಿ.ವಿಶ್ವನಾಥ ರೈಯವರು ಪ್ರತಿಕ್ರಿಯಿಸಿದ್ದಾರೆ.


ಪಕ್ಷದ ನಿರ್ಧಾರಕ್ಕೆ ಬದ್ಧನಾಗಿರುತ್ತೇನೆ: ಡಾ.ರಾಜಾರಾಮ್ ಕೆ.ಬಿ.:
ನಾನು ಕಳೆದ 22 ವರ್ಷಗಳಿಂದ ಕಾಂಗ್ರೆಸ್ ಪಕ್ಷದ ಸಿದ್ಧಾಂತಗಳಿಗೆ ಬದ್ಧನಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ನಾನೂ ಕೂಡ ಒಬ್ಬ ಆಕಾಂಕ್ಷಿಯಾಗಿದ್ದು, ನಂತರ ಅಶೋಕ್ ಕುಮಾರ್ ರೈಯವರಿಗೆ ಹೈಕಮಾಂಡ್ ಅವಕಾಶ ಕೊಟ್ಟಾಗ ಅವರ ಪರವಾಗಿ ಪ್ರಾಮಾಣಿಕವಾಗಿ ವಿಟ್ಲ-ಉಪ್ಪಿನಂಗಡಿ ಬ್ಲಾಕ್‌ನಲ್ಲಿ ಪಕ್ಷ ಸಂಘಟಿಸಿ ಗೆಲುವಿಗೆ ನಾನು ಮತ್ತು ನನ್ನ ಬ್ಲಾಕ್‌ನ ಹಲವಾರು ಕಾರ್ಯಕರ್ತರು ಕಾರಣರಾಗಿದ್ದಾರೆ. ಈ ಹಿಂದಿನ ಎಲ್ಲಾ ಚುನಾವಣೆಗಳಿಗಿಂತ ಹೆಚ್ಚು ಮತ ವಿಟ್ಲ-ಉಪ್ಪಿನಂಗಡಿ ಬ್ಲಾಕ್‌ನಲ್ಲಿ ಕಾಂಗ್ರೆಸ್‌ಗೆ ಬಂದಿದೆ. ಹಾಗೆಯೇ ಶಾಸಕರಾದ ಅಶೋಕ್ ಕುಮಾರ್ ರೈಯವರೊಂದಿಗೆ ಒಳ್ಳೆಯ ಬಾಂಧವ್ಯದಿಂದಿದ್ದೇವೆ ಮತ್ತು ಅವರಿಗೂ ನಮ್ಮ ಕಾರ್ಯವೈಖರಿ ಬಗ್ಗೆ ಮೆಚ್ಚುಗೆ ಇದೆ. ನಿಗಮ ಮಂಡಳಿಗಳ ಅಧ್ಯಕ್ಷನಾಗಿ ನನಗೆ ಅವಕಾಶ ಲಭಿಸಿದರೆ ಪಕ್ಷಕ್ಕಾಗಿ ಇನ್ನಷ್ಟು ಕೆಲಸ ಮಾಡಲು ಶಕ್ತಿ ಸಿಗುತ್ತದೆ ಎಂದು ಶಾಸಕರಲ್ಲಿ ಮತ್ತು ಪಕ್ಷದ ಪ್ರಮುಖರಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದೇನೆ. ಪಕ್ಷ ತೆಗೊಳ್ಳುವ ನಿರ್ಧಾರಕ್ಕೆ ನಾನು ಬದ್ಧನಾಗಿದ್ದೇನೆ. ಇದರ ಹೊರತಾಗಿ ಪತ್ರಿಕೆಯಲ್ಲಿ ಪ್ರಕಟವಾದ ಹಾಗೆ ನಿಗಮ ಮಂಡಳಿಯ ನಿರ್ದೇಶಕ ಆಗಬೇಕೆಂದು ಹಕ್ಕೊತ್ತಾಯ ಮಾಡಿಲ್ಲ ಎಂದು ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ.ರಾಜಾರಾಮ ಕೆ.ಬಿ. ಪ್ರತಿಕ್ರಿಯೆ ನೀಡಿದ್ದಾರೆ.

LEAVE A REPLY

Please enter your comment!
Please enter your name here