ಕಾವು: ಎಲ್‌ಕೆಜಿ ತರಗತಿಯ ಗೋಡೆಗಳಲ್ಲಿ ಬಣ್ಣದ ಆಂಗ್ಲ ಆಕ್ಷರಗಳ ವರ್ಣಮಾಲೆ…

0

ಲಿಯೋಕ್ಲಬ್‌ನಿಂದ ಮಹತ್ತರ ಕೊಡುಗೆ; ಮಕ್ಕಳ ಕಲಿಕೆಗೆ ಕ್ಲಬ್ ಪ್ರೋತ್ಸಾಹ

ಪುತ್ತೂರು: ಎ ಬಿ ಸಿ ಡಿ ಹೀಗೇ ಝಡ್ ತನಕ ಇಂಗ್ಲೀಷ್ ಅಕ್ಷರಗಳು ತರಗತಿಯ ಗೋಡೆಗಳಲ್ಲಿ ಬಣ್ಣ ಬಣ್ಣಗಳಿಂದ ಬರೆಯಲಾಗಿದೆ, ಜೊತೆಗೆ ಅಕ್ಷರ ಓದಲು ಕಲಿಯುವಂತೆ ಸಹಕಾರಿಯಾಗಲು ಹೊಂದಿಕೊಂಡಿರುವ ಚಿತ್ರಗಳು, ಗೋಡೆಗಳಲ್ಲಿರುವ ಅಕ್ಷರವನ್ನು ನೋಡಿ ಪುಸ್ತಕದಲ್ಲಿ ಬರೆಯುವ ಅಬ್ಯಾಸ ಮಾಡಿಕೊಳ್ಳುವ ಹಾಲುಗಲ್ಲದ ಪುಟ್ಟ ಮಕ್ಕಳು. ಇದು ಕಂಡು ಬಂದಿದ್ದು ಕಾವು ಸರಕಾರಿ ಎಲ್‌ಕೆಜೆ ಯುಕೆಜಿ ತರಗತಿ ಕೊಠಡಿಯಲ್ಲಿ. ಮಕ್ಕಳ ಕಲಿಕೆಗೆ ನೆರವಾಗಲೆಂದು ಇಂಗ್ಲೀಷ್ ಅಕ್ಷರಗಳನ್ನು ಗೋಡೆಗಳಲ್ಲಿ ಜೋಡಿಸಿದ್ದು ಲಿಯೋ ಕ್ಲಬ್ ತಂಡ, ಲಯನ್ಸ್ ಕ್ಲಬ್ ನ ಸಹಬಾಗಿತ್ವದಲ್ಲಿ ಸಮಾಜ ಸೇವೆಯಲ್ಲಿ ತೊಡಗಿಕೊಂಡಿರುವ ಲಿಯೋ ಕ್ಲಬ್ ಶೈಕ್ಷಣಿಕ ಕ್ಷೇತ್ರದಲ್ಲಿ ತನ್ನ ಛಾಪನ್ನು ಮೂಡಿಸಿದೆ.
ಕಾವು ಸರಕಾರಿ ಪ್ರಾಥಮಿಕ ಶಾಲೆಯನ್ನು ಕಾವು ಹೇಮನಾಥ ಶೆಟ್ಟಿಯವರು ದತ್ತು ತೆಗೆದುಕೊಂಡಿದ್ದು, ಇಲ್ಲಿ ಆಂಗ್ಲ ಮಾಧ್ಯಮ ಎಲ್‌ಕೆಜಿ ಯುಕೆಜಿ ತರಗತಿಯನ್ನು ಪ್ರಾರಂಭ ಮಾಡಲಾಗಿದೆ. ಸರಕಾರ ಕೆಪಿಎಸ್ ಸ್ಕೂಲ್‌ಗಳಲ್ಲಿ ಆಂಗ್ಲ ಮಾದ್ಯಮ ತರಗತಿ ಆರಂಭ ಮಾಡುವ ಮೊದಲೇ ಕಾವು ಸರಕಾರಿ ಶಾಲೆಯಲ್ಲಿ ಇಂಗ್ಲೀಷ್ ಕ್ರಾಂತಿಯನ್ನು ಪ್ರಾರಂಭಿಸಲಾಗಿತ್ತು. ಮಕ್ಕಳ ಸಂಖ್ಯೆಯೂ ಗಣನೀಯವಾಗಿದೆ.

ಕಲಿಕೆಗೆ ಸಹಕಾರಿ
ತರಗತಿಯ ಕೊಠಡಿಯ ಗೋಡೆಗಳಲ್ಲಿ ಇಂಗ್ಲೀಷ್ ಅಕ್ಷರಮಾಲೆಯನ್ನು ಚಿತ್ರ ಸಹಿತ ಬರೆದಿರುವ ಕಾರಣ ಮಕ್ಕಳಿಗೆ ಅಕ್ಷರದ ಪರಿಚಯ ಮತ್ತು ಅಕ್ಷರವನ್ನು ಬರೆಯುವ ವಿಧಾನವನ್ನು ಸುಲಭದಲ್ಲಿ ಮನನ ಮಾಡಬಹುದಾಗಿದೆ. ಸಾಧಾರಣವಾಗಿ ಶಾಲೆಯ ಗೋಡೆಗಳಲ್ಲಿ ಪಕ್ಷಿ, ಪರಿಸರ ಸೇರಿದಂತೆ ಇತರೆ ಬಣ್ಣ ಬಣ್ಣದ ಚಿತ್ರಗಳನ್ನು ಬಿಡಿಸಲಾಗುತ್ತದೆ. ಕಾವು ಶಾಲೆಯಲ್ಲಿ ಲಿಯೋ ಕ್ಲಬ್ ಮಕ್ಕಳ ಶಿಕ್ಷಣಕ್ಕೆ ನೆರವು ಆಗುವ ರೀತಿಯಲ್ಲಿ ಚಿತ್ರಗಳನ್ನು , ಅಕ್ಷರಗಳನ್ನು ಬರೆದಿರುವುದು ಮಕ್ಕಳ ಪೋಷಕರಲ್ಲೂ ಸಂತಸಕ್ಕೆ ಕಾರಣವಾಗಿದೆ. ಕಳೆದ 20 ದಿನಗಳ ಹಿಂದೆ ಈ ಚಿತ್ರಗಳನ್ನು ಬಿಡಿಸಲಾಗಿದ್ದು ಆ ಬಳಿಕ ಮಕ್ಕಳ ಕಲಿಕಾ ಉತ್ಸಾಹವೂ ಇಮ್ಮಡಿಗೊಂಡಿದೆ ಮತ್ತು ಅಕ್ಷರ ಜ್ಞಾನವೂ ಮಕ್ಕಳಲ್ಲಿ ವೃದ್ದಿಯಾಗಿದೆ ಎನ್ನುತ್ತಾರೆ ಪೋಷಕರು.

ಆದೃತಿ ಯೋಜನೆಯಡಿ ನಾಲ್ಕು ಜಿಲ್ಲೆಗಳಲ್ಲಿ ಸೇವೆ
ಲಿಯೋ ಕ್ಲಬ್ ಇದರ ಆದೃತಿ ಯೋಜನೆಯಡಿ ಕ್ಲಬ್ ವ್ಯಾಪ್ತಿಯ ಹಾಸನ , ಚಿಕ್ಕಮಗಳೂರು, ಮಡಿಕೇರಿ ಮತ್ತು ದ ಕ ಜಿಲ್ಲೆಯ ಆಯ್ದ 15 ಸರಕಾರಿ ಪೂರ್ವ ಪ್ರಾಥಮಿಕ ಶಾಲೆಗಳಲ್ಲಿ ಇದೇ ಸೇವೆ ನಡೆಯಲಿದೆ. ದ ಕ ಜಿಲ್ಲೆಯ ಕಿನ್ನಿಗೋಳಿ ಕರೆಕಾಡು, ಹಳೆಯಂಗಡಿ ಕೊಳ್ನಾಡಿ ಮುಚ್ಚಿ, ಮೂಡಬಿದ್ರೆ ಮಚ್ಚೂರು ಶಾಲೆ ಹಾಗೂ ಮಂಗಳೂರು ನಗರ ವ್ಯಾಪ್ತಿಯ ಸರಕಾರಿ ಶಾಲೆಗಳಲ್ಲಿ ವರ್ಣಮಾಲೆ ಅಕ್ಷರ ಜೋಡನಾ ಕಾರ್ಯಕ್ಕೆ ಆಯ್ಕೆಗೊಂಡಿದೆ. ಲಿಯೋ ಕ್ಲಬ್ ವತಿಯಿಂದ ಆರೋಗ್ಯ ಮೇಳ, ಉದ್ಯೋಗ ಮೇಳ, ವಿಕಲಚೇತನರ ಜೊತೆ ಸಹಭೋಜನೆ, ವ್ಯಕ್ತಿತ್ವ ವಿಕಸನ ಸಮಾವೇಶ, ಸೇರಿದಂತೆ ಇನ್ನಿತರ ಸಮಾಜಸೇವಾ ಕಾರ್ಯಗಳು ನಿರಂತರವಾಗಿ ನಡೆಯುತ್ತಿದ್ದು ಕ್ಲಬ್‌ನ ಹಿರಿಮೆಯನ್ನು ಹೆಚ್ಚಿಸಿದೆ.

ಲಿಯೋ ಕ್ಲಬ್ ಸಂಸ್ಥೆ ಈ ಸೇವೆ ಇನ್ನೊಬ್ಬರಿಗೆ ಉತ್ತೇಜನ ನೀಡುವ ಕಾರ್ಯವಾಗಿದೆ. ಸರಕಾರಿ ಶಾಲೆಗಳಲ್ಲಿ ಕಲಿಯುತ್ತಿರುವ ಬಡ ಗ್ರಾಮೀಣ ಮಕ್ಕಳ ಕಲಿಕೆಗೆ ಸಹಾಯ ಮಾಡುವ ಉದ್ದೇಶದಿಂದ ಈ ವರ್ಣ ಮಾಲೆಯನ್ನು ರಚಿಸಿದ್ದು ಇದಕ್ಕಾಗಿ ನಾನು ಅವರಿಗೆ ಅಭಿನಂದನೆಯನ್ನು ಸಲ್ಲಿಸುತ್ತೇನೆ. ಇದೇ ಸೇವೆಯನ್ನು ಕ್ಲಬ್ ವ್ಯಾಪ್ತಿಯ ನಾಲ್ಕು ಜಿಲ್ಲೆಗಳಲ್ಲಿ ಮುಂದುವರೆಸಲಿದ್ದಾರೆ. ಸಂಸ್ಥೆಯ ಮೂಲಕ ಶಿಕ್ಷಣ, ಆರೋಗ್ಯಕ್ಕೆ ಹೆಚ್ಚಿನ ಒತ್ತು ನೀಡುವ ಮೂಲಕ ಮುಂದಿನ ಯುವ ಸಮೂಹವಕ್ಕೆ ಸಮಾಜ ಸೇವಾ ಮನೋಭಾವ ಬೆಳೆಸುವ ಕೆಲಸ ನಿರಂತರ ಆಗಬೇಕಿದ್ದು ಅದನ್ನು ಲಿಯೋ ಕ್ಲಬ್ ಮೂಲಕ ನಡೆಸಲಾಗುತ್ತಿದೆ.

ಡಾ. ಮೆಲ್ವಿನ್ ಡಿಸೋಜಾ, ಲಯನ್ಸ್ ಜಿಲ್ಲಾ ಗವರ‍್ನರ್

ಲಿಯೋ ಡಿಸ್ಟ್ರಿಕ್ಟ್ 317 ಡಿ ಇದರ ವತಿಯಿಂದ ಕ್ಲಬ್ ವ್ಯಾಪ್ತಿಯ ನಾಲ್ಕು ಜಿಲ್ಲೆಗಳ ಆಯ್ದ ಸರಕಾರಿ ಪೂರ್ವ ಪ್ರಾಥಮಿಕ (ಎಲ್‌ಕೆಜಿ, ಯುಕೆಜಿ) ತರಗತಿ ಗಳಲ್ಲಿ ಮಕ್ಕಳ ಕಲಿಕೆಗೆ ನೆರವಾಗುವುದು ಮತ್ತು ಕಲಿಕಾ ಸಾಮರ್ಥ್ಯ ಹೆಚ್ಚಿಸುವ ಉದ್ದೇಶದಿಂದ ಕೊಠಡಿಗಳಲ್ಲಿ ಆಧುನಿಕತೆಯ ಟಚಪ್‌ನೊಂದಿಗೆ ಅಕ್ಷರ ವರ್ಣ ಮಾಲೆಯನ್ನು ಚಿತ್ರದ ಮೂಲಕ ಬರೆಯಲಾಗಿದೆ. ಪ್ರಸಿದ್ದ ಆರ್ಟಿಸ್ಟ್ ಮೂಲಕ ಈ ವರ್ಣ ಮಾಲೆಯನ್ನು ರಚಿಸಲಾಗಿದೆ. ಲಿಯೋ ಕ್ಲಬ್ ಸದಸ್ಯರ ಸಹಕಾರದಿಂದ ಚಿತ್ರಕ್ಕೆ ಬಣ್ಣ ಕೊಡುವ ಕಾರ್ಯವನ್ನು ಮಾಡಲಾಗಿದೆ. ಕ್ಲಬ್ ವತಿಯಿಂದ ಮಕ್ಕಳ ಕಲಿಕಾ ವ್ಯವಸ್ಥೆಗೆ ಒತ್ತು ನೀಡುವ ಉದ್ದೇಶವೂ ಇದರ ಹಿಂದೆ ಇದ್ದು , ಕ್ಲಬ್ ವ್ಯಾಪ್ತಿಯ ದ ಕ, ಚಿಕ್ಕಮಗಳೂರು, ಹಾಸನ ಮತ್ತು ಕೊಡಗು ಜಿಲ್ಲೆಗಳಲ್ಲಿ ಈ ಸೇವೆಯನ್ನು ನಡೆಸಲಾಗುವುದು. ಕ್ಲಬ್ ಯೋಜನೆಗೆ ಪೋಷಕರಿಂದ ಮತ್ತು ಸಾರ್ವಜನಿಕರಿಂದ ಅಭಿನಂದನೆಗಳು ವ್ಯಕ್ತವಾಗಿದೆ, ಸಮಾಜ ಸೇವೆ ಇನ್ನೂ ಮುಂದುವರೆಯಲಿದೆ.

ಡಾ. ರಂಜಿತಾ ಎಚ್ ಶೆಟ್ಟಿ
ಜಿಲ್ಲಾಧ್ಯಕ್ಷರು ಲಿಯೋ ಕ್ಲಬ್ 317ಡಿ

ಕಲಿಕೆಗೆ ತುಂಬಾ ಸಹಕಾರಿಯಾಗಿದೆ
ತರಗತಿಯ ಗೋಡೆಗಳಲ್ಲಿ ಇಂಗ್ಲೀಷ್ ವರ್ಣಮಾಲೆಯನ್ನು ಚಿತ್ರ ಸಹಿತ ಬರೆದಿರುವುದು ನಮಗೆ ತುಂಬಾ ಸಹಕಾರಿಯಾಗಿದೆ. ಮಕ್ಕಳಿಗೆ ಅಕ್ಷರದ ಪರಿಚಯ ಮಾಡಿಸಲು ಮತ್ತು ಬರೆಯವುದು ಮತ್ತು ಓದುವುದನ್ನು ಕಲಿಸಲು ಇದು ಪ್ರಯೋಜನಕಾರಿಯಾಗಿದ್ದು ಇತರ ಕಡೆಗೂ ಇದು ವಿಸ್ತರಣೆಯಾಗಬೇಕಿದೆ.
ವಂದಿತಾ, ಕಾವು ಶಾಲೆ ಶಿಕ್ಷಕಿ

LEAVE A REPLY

Please enter your comment!
Please enter your name here