ಪುತ್ತೂರು:6 ವರ್ಷಗಳ ಹಿಂದೆ ನೆಹರುನಗರದಲ್ಲಿ ದೂರು ಅರ್ಜಿ ತನಿಖೆ ನಡೆಸುತ್ತಿದ್ದ ಸಂದರ್ಭ ಎಸ್.ಐ. ಅವರ ಕೈಗೆ ಕಚ್ಚಿ, ಸಿಬ್ಬಂದಿಗಳನ್ನು ದೂಡಿ ಹಾಕಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದ ಪ್ರಕರಣದ ಆರೋಪಿ ದಂಪತಿಯನ್ನು ಪುತ್ತೂರು ನ್ಯಾಯಾಲಯ ದೋಷಮುಕ್ತಗೊಳಿಸಿ ತೀರ್ಪು ನೀಡಿದೆ.
ಗಣೇಶ್ ಎಂಬವರು ನೀಡಿದ್ದ ದೂರು ಅರ್ಜಿಯ ಕುರಿತು ವಿಚಾರಣೆ ನಡೆಸಲೆಂದು 2017ರ ಡಿ.23ರಂದು ಆಗಿನ ಎಸ್.ಐ ಅಜೇಯ್ ಅವರು ಸಿಬ್ಬಂದಿಗಳೊಂದಿಗೆ ನೆಹರೂನಗರದಲ್ಲಿರುವ ಆರೋಪಿ ಪ್ರವೀಣ್ ಎಂಬವರ ಮನೆಗೆ ಹೋಗಿದ್ದರು.ವಿಚಾರಣೆ ಸಂದರ್ಭ ಆರೋಪಿ ಪ್ರವೀಣ್ ಮತ್ತು ಅವರ ಪತ್ನಿ ಶೋಭಾ ಅವರು ಮನೆಯಿಂದ ಹೊರಗೆ ಬಂದು ಪೊಲೀಸರಿಗೆ ಅವಾಚ್ಯವಾಗಿ ನಿಂದಿಸಿದ್ದರಲ್ಲದೆ ಪ್ರವೀಣ್ ಅವರು ಎಸ್.ಐ ಅವರ ಕೈಗೆ ಕಚ್ಚಿ, ಸಿಬ್ಬಂದಿಗಳನ್ನು ದೂಡಿಹಾಕಿ ಪರಾರಿಯಾಗಿದ್ದರು ಎನ್ನಲಾಗಿದೆ.
ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಬಗ್ಗೆ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಲಾಗಿತ್ತು.ವಿಚಾರಣೆ ನಡೆಸಿದ ನ್ಯಾಯಾಲಯ ಆರೋಪಿ ದಂಪತಿಯನ್ನು ಖುಲಾಸೆಗೊಳಿಸಿದೆ. ಆರೋಪಿಗಳ ಪರ ವಕೀಲರಾದ ಮಾಧವ ಪೂಜಾರಿ, ರಾಕೇಶ್ ಬಲ್ನಾಡ್, ನಿಶಾ ಕುಮಾರಿ ವಾದಿಸಿದ್ದರು.